ದೊಡ್ಡ ದೊಡ್ಡ ಕನಸುಗಳನ್ನು ಕಂಡು, ಅವುಗಳನ್ನು ಸಾಕಾರಗೊಳಿಸಲು ಕಷ್ಟಗಳ ಸಾಗರವನ್ನು ಈಜಿ ಮೇಲೆ ಏರಿದ ಮಹಾನ್ ಕನಸುಗಾರ ಡಾ.ಅಬ್ದುಲ್ ಕಲಾಂ. ಬಡವರಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವರಾಗಿ ಸಾಯುವುದೇ ಮಹಾ ಪಾಪ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಸತತ ಪ್ರಯತ್ನದಿಂದ, ಹೋರಾಟದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಚೇತನ ಅಬ್ದುಲ್ ಕಲಾಂ. ಸೂರ್ಯನಂತೆ ಬೆಳಗಬೇಕೆಂದರೆ ಸೂರ್ಯನಂತೆ ಉರಿಯಬೇಕೆಂಬ ಆದರ್ಶ. ನಂಬಿಕೆಗಳಿಂದ ಕರ್ಮ ಯೋಗಿಯಾಗಿ ಸಾಧಕರಾಗಿ, ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದು ನಿಜಕ್ಕೂ ನಂಬಲು ಅಸಾಧ್ಯವಾದರೂ ಸಾಧ್ಯ ಎನ್ನುವುದನ್ನು ನಾವು ಡಾ. ಅಬ್ದುಲ್ ಕಲಾಮರಿಂದ ನೋಡಿ ಕಲಿಯಬೇಕು. ಅವರ ದೃಷ್ಟಿ ಯಾವಾಗಲು ಆಕಾಶದೆಡಿಗೆ ಇರುತ್ತಿತ್ತು. ಆಕಾಶದಲ್ಲಿ ಹಾರುವ ವಿಮಾನಗಳನ್ನು ನೋಡಿ ತಾವು ಪೈಲೈಟ್ ಆಗಿ ವಿಮಾನದಲ್ಲಿ ಹಾಗೆ ಹಾರಾಡಬೇಕೆನ್ನುವ ಕನಸನ್ನು ಬಾಲ್ಯದಿಂದ ಕಂಡು ಅದನ್ನು ಗುರಿಯಾಗಿ ಇಟ್ಟುಕೊಂಡು ಬೆಳೆದರು. ಕೊನೆಗೆ ಪೈಲೆಟ್ ಆಗದಿದ್ದರೂ ರಾಕೆಟ್ ಗಳನ್ನು ತಯಾರಿಸುವ ಶಕ್ತಿ ಬೆಳೆಸಿಕೊಂಡು ಕೊನೆಗೆ ಜಗತ್ತೇ ಮೆಚ್ಚುವ ಕ್ಷಿಪಣಿ ಜನಕ ಎನ್ನುವ ಬಿರುದು ಗಳಿಸಿ ದೇಶವೇ ಬೆರಗಾಗುವಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತರು. ಯಾವುದೇ ಕಾರ್ಯ ಮಾಡಿದರು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುವುದು ಅವರ ಹುಟ್ಟುಗುಣವಾಗಿತ್ತು.
ಹೀಗಾಗಿ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಸಂಶೋಧಕರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೂ ಎಲ್ಲದರಲ್ಲೂ ಯಶಸ್ವಿಯಾಗಿ ಜನಮನ್ನಣೆ ಗಳಿಸಿದರು. ಅವರಲ್ಲಿನ ಉತ್ಸಾಹ ಚೈತನ್ಯ ಬಾಲ್ಯದಲ್ಲಿ ಇದ್ದಷ್ಟೇ ಅವರ ಇಳಿ ವಯಸ್ಸಿನಲ್ಲಿ ಇದ್ದಿದ್ದು ಆಶ್ಚರ್ಯವನಿಸುತ್ತದೆ. ಯಾವತ್ತೂ ಸುಮ್ಮನೆ ಕುಳಿತವರಲ್ಲ ಅಬ್ದುಲ್ ಕಲಾಂ ಜಿ. ಯಾವುದಾದರೂ ಒಂದು ಕ್ರಿಯೆಯಲ್ಲಿ ನಿರಂತರ ತಮ್ಮನ್ನು ತಾವು ತೊಡಗಿಸಿ ಕೊಂಡವರು. ದೇಶ ಕಂಡ ಅಪರೂಪದಲ್ಲೇ ಅಪರೂಪದ ಸಾಧಕರಲ್ಲಿ ಅಬ್ದುಲ್ ಕಲಾಂ ಒಬ್ಬರು. ತಾವು ನಿರಂತರ ಹೋರಾಟ, ಶ್ರಮದಿಂದ ಮೇಲೆ ಬಂದಂತೆಯೇ ಇತರರನ್ನು ನಿರಂತರ ಸ್ಪೂರ್ತಿದಾಯಕ ಮಾತುಗಳಿಂದ ಬೋಧನೆಯಿಂದ ಮೇಲೆತ್ತಿದವರು.
ಅವರಿಗೆ ಬೋಧನೆ ಎನ್ನುವುದು ಅಚ್ಚುಮೆಚ್ಚಿನ ಕಾರ್ಯವಾಗಿತ್ತು. ಸಮಯ ಸಿಕ್ಕಾಗೆಲ್ಲ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಿದ್ದರು ಹಾಗೂ ತಮ್ಮ ಅನುಭವಗಳನ್ನು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದರು ಹಾಗೂ ಚೈತನ್ಯ ತುಂಬಿ ಸಾಧನೆ ಮಾಡುವಂತೆ ಹುರಿದುಂಬಿಸಿದರು ಅಬ್ದುಲ್ ಕಲಾಂ ಜಿ. ಅವರ ಜೀವನವೇ ಇತರರಿಗೆ ಒಂದು ಪಾಠದಂತೆ ಇತ್ತು. ಅವರ ಜೀವನವೇ ಇತರರಿಗೆ ದಾರಿ ದೀಪವಾಗಿ ಬೆಳಕು ನೀಡುತ್ತಿದೆ ಎಂದರೆ ತಪ್ಪಲ್ಲ. “ಮಾತಿಗಿಂತ ಕೃತಿ ಲೇಸು” ಎನ್ನುವ ಗಾದೆ ಮಾತಿನಂತೆ ನಿರಂತರವಾಗಿ ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಸಾಯುವ ಕ್ಷಣದಲ್ಲೂ ಸಹ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಶರಣರ ಬದುಕನ್ನು ಮರಣದಲ್ಲಿ ನೋಡಿ ಎನ್ನುವಂತೆ ಬದುಕಿನ ಕೊನೆಯ ಕ್ಷಣದವರೆಗೂ ಜೀವನದ ಸಾರ್ಥಕತೆಯನ್ನು ಮೆರೆದವರು ಅಬ್ದುಲ್ ಕಲಾಂ ಜಿ.
ಭಾರತ ರತ್ನವಾಗಿ, ಕ್ಷಿಪಣಿ ಜನಕನಾಗಿ, ರಾಷ್ಟ್ರಪತಿಯಾಗಿ ಎಲ್ಲಕ್ಕಿಂತ ಮೇಲಾಗಿ ಒಬ್ಬ ಆದರ್ಶ ಶಿಕ್ಷಕರಾಗಿ ಅವರು ತೋರಿದ ದಾರಿ ಎಲ್ಲರಿಗೂ ಸ್ಪೂರ್ತಿದಾಯಕ. ದೇಶದ ಬೆಳವಣಿಗೆಗೆ ತಮ್ಮದೇ ಆದ ಅಪರೂಪದ ಕಾಣಿಕೆಯನ್ನು ನೀಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಅಜರಾಮರವಾಗಿ ಉಳಿದ ಕನಸುಗಾರ ಅಬ್ದುಲ್ ಕಲಾಂ ಅವರಿಗೆ ನನ್ನದೊಂದು ಸಲಾಂ
ಲೇಖನ: ಲಕ್ಷ್ಮೀದೇವಿ ಪತ್ತಾರ, ಪ್ರೌಢಶಾಲಾ ಶಿಕ್ಷಕಿ, ಬರಹಗಾರ್ತಿ, ಗಂಗಾವತಿ. ಜಿಲ್ಲಾ: ಕೊಪ್ಪಳ
