ಗಂಗಾವತಿ. ನಗರದ ಅಯ್ಯಪ್ಪಗಿರಿಯಲ್ಲಿರುವ ಶ್ರೀ ಅಯ್ಯಪ್ಪಸ್ವಾಮಿ ದೇವಸ್ಥಾನದ 12ನೆಯ ವಾರ್ಷಿಕೋತ್ಸವದ ಪ್ರಯುಕ್ತ ಫೆಬ್ರುವರಿ-2 ರಿಂದ ಫೆಬ್ರುವರಿ-12 ರವರೆಗೆ ವೈವಿಧ್ಯಮಯ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಸಕಲ ಭಕ್ತಾದಿಗಳು ಭಾಗವಿಸುವಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಜಟ್ಟಿ ವೀರಪ್ರಸಾದ್, ಉಪಾಧ್ಯಕ್ಷರಾದ ದರೋಜಿ ರಂಗಣ್ಣ, ರಾಮ್ ಪ್ರಸಾದ್ ಮಲ್ಲಿಕಾರ್ಜುನ್ ಶ್ರೀರಾಮನಗರ ಸೇರಿದಂತೆ ಇತರರು ಹೇಳಿದರು.
ಅವರು ಶನಿವಾರದಂದು ದೇವಸ್ಥಾನದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಹಂಪಿ ಶ್ರೀ ವಿರೂಪಾಕ್ಷ ಮಹಾಸಂಸ್ಥಾನದ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮೀಜಿಗಳು, ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಅಷ್ಟಾದಕ ಶಾಸ್ತ್ರ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬ್ರಹ್ಮ ಶ್ರೀ ಡಾ. ಎಸ್ ಚಂದ್ರಮೌಳಿ ಗುರುಸ್ವಾಮಿಗಳು, ಶ್ರೀ ವಜ್ರಮುನಿ ಸ್ವಾಮೀಜಿ ಸೇರಿದಂತೆ ನಾಡಿನ ಸಮಸ್ತ ಪೂಜ್ಯ ಗುರುಗಳ ನೇತೃತ್ವದಲ್ಲಿ 251 ಕುಂಭೋತ್ಸವದ ಭವ್ಯ ಮೆರವಣಿಗೆ ಶ್ರೀ ಚನ್ನಬಸವ ತಾತನ ಮಠದಿಂದ ಆರಂಭಗೊಂಡು ಸಕಲ ವಾದ್ಯ ವೈಭವದೊಂದಿಗೆ ದೇವಸ್ಥಾನಕ್ಕೆ ಆಗಮಿಸಲಿದ್ದು, ಈ ಸಂದರ್ಭದಲ್ಲಿ 18 ಮೆಟ್ಟಿಲುಗಳಿಗೆ ಅಯ್ಯಪ್ಪ ಸ್ವಾಮಿಯ ಗರ್ಭಗುಡಿಯ ಮುಂಭಾಗದಲ್ಲಿ ಪಂಚಲೋಹದ ಕವಚ ಅಳವಡಿಸಲಾಗುತ್ತಿದ್ದು, ಮೇಲಿನ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ ಅಂದಾಜು 60 ಲಕ್ಷ ರೂ ವೆಚ್ಚವಾಗುತ್ತಿದ್ದು, ಸಕಲ ಭಕ್ತಾದಿಗಳು ತನು-ಮನ-ಧನ ಗಳಿಂದ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಈಗಾಗಲೇ ದೇವಸ್ಥಾನಕ್ಕೆ ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗುತ್ತಿದ್ದು, 12ನೆಯ ವಾರ್ಷಿಕೋತ್ಸವದ ನಿಮಿತ್ಯವಾಗಿ ಹರೇ ಶ್ರೀನಿವಾಸ ತಂಡದ ಗುರುಗಳಾದ ಶ್ರೀ ಸತೀಶ್ ರಾಮಾನುಜ ಅವರ ನೇತೃತ್ವದಲ್ಲಿ ಭಜನೆ, ಪಾರಾಯಣ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಹಾಗೆಯೇ ರಾಕ್ಷೋಜ್ಞ ಕ್ಷೇತ್ರ ಪಾಲಕ ಹೋಮ ಲಘು ಪೂರ್ಣಾವತಿ ಹವನ, ದೇವತೆಗಳ ಪೂಜಾ, ಉತ್ಸವ ಮೂರ್ತಿಗೆ ಜಲಾಧಿವಾಸ ಪುಷ್ಪಾಧಿವಾಸ ಸೇರಿದಂತೆ ಸಹಿತ ಚಂಡಿ ಹವನ ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಲಿದ್ದು, ದಿನಂಪ್ರತಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ತಾಯಿಬಾಬು, ದೇವಸ್ಥಾನದ ಅರ್ಚಕ ಶಂಕರ್ ಭಟ್ ದಿವಾಕರ್ ಉಪಸ್ಥಿತರಿದ್ದರು. https://aratt.ai/@vishwaroopa_news_blog
