ರಂಗಗೀತೆ ಭರತನಾಟ್ಯ ಜಾನಪದ ಗೀತೆ ಮತ್ತು ಶೋಭಾನೆ ಪದ ಕಾರ್ಯಕ್ರಮ
ಹಾಸನ: ಹಾಸನದಲ್ಲಿ ಪೌರಾಣಿಕ ರಂಗಭೂಮಿ ನಗರ ಹಾಗೂ ಸುತ್ತಮುತ್ತಲ ಗ್ರಾಮಗಳ ಹಿರಿಯ ನಾಗರೀಕರು, ಕಲಾಪ್ರೇಮಿಗಳಿಗೆ ಸ್ಥಳೀಯ ನಾಟಕ ತಂಡಗಳು ಕಾಲಕಾಲಕ್ಕೆ ಪೌರಾಣಿಕ ನಾಟಕ ಪ್ರದರ್ಶಿಸಿ ಮನರಂಜನೆ ಒದಗಿಸಿ ಮನಸ್ಸಿಗೆ ಉಲ್ಲಾಸ ನೀಡುತ್ತಿವೆ. ನಾಟಕ ಒಂದು ಜೀವಂತ ಕಲೆ. ಟಿವಿ ಪ್ರಭಾವದ ನಡುವೆಯೂ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಶಕ್ತಿ ರಂಗಕಲೆಗಿದೆ ಎಂದು ಸಾಹಿತಿ ನಾಟಕಕಾರರು ಗೊರೂರು ಅನಂತರಾಜು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಸನ ಅನುದಾನದ ಅಡಿಯಲ್ಲಿ ಹಾಸನ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಾಸನ ಜಿಲ್ಲಾ ಕಲಾವಿದರ ಹಿತರಕ್ಷಣಾ
ಸಮಿತಿಯಿಂದ ಶುಕ್ರವಾರ ನಡೆದ ರಂಗಗೀತೆ ಭರತನಾಟ್ಯ ಜಾನಪದ ಗೀತೆ ಮತ್ತು ಶೋಭಾನೆ ಪದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಹಾಸನದಲ್ಲಿ ಕೆಲವು ವರ್ಷಗಳ ಹಿಂದೆ ರಂಗಸಂಗೀತ ಸಮ್ಮೇಳನ ರಂಗಸಂಗೀತ ಪರಿಷತ್ತಿನಿಂದ ಅತ್ಯಂತ ಯಶಸ್ವಿಯಾಗಿ ನಡೆದಿತ್ತು. ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿಯಲ್ಲಿ 300ಕ್ಕೂ ಕಲಾವಿದ ಸದಸ್ಯರಿದ್ದಾರೆ. ಈ ಹಿಂದೆ ನಡೆದ ಮಾದರಿಯಲ್ಲಿ ಈಗಿನ ಅಧ್ಯಕ್ಷರ ಅವಧಿಯಲ್ಲಿ ರಂಗ ಸಂಗೀತ ಸಮ್ಮೇಳನವು ನಡೆಯಲೆಂದು ಗೊರೂರು ಅನಂತರಾಜು ಆಶಿಸಿದರು.
ಪ್ರಾಸ್ತಾವಿಕ ನುಡಿಯಲ್ಲಿ ಕವಿ ಎನ್. ಎಲ್. ಚನ್ನೇಗೌಡ್ರು ಮಾತನಾಡಿ ಸಂಘಟನೆ ಕಟ್ಟುವುದು ಹಾಗೂ ಉಳಿಸಿಕೊಂಡು ಹೋಗುವುದು ಬಹು ಕಷ್ಟ. ಪ್ರಾಮಾಣಿಕತೆ ಇದ್ದಲ್ಲಿ ಸಂಘವು ಉಳಿದುಕೊಳ್ಳಲು ಸಾಧ್ಯ. ಕಲೆ ಎಲ್ಲರನ್ನೂ ಆಕರ್ಷಿಸುತ್ತದೆ. ಕೆಲವರನ್ನು ಮಾತ್ರ ಅಪ್ಪಿಕೊಳ್ಳುತ್ತದೆ ಎಂದರು. ಕಲಾವಿದರು ದರ್ಶನ್ ವೆಂಕಟೇಶ್ ಮಾತನಾಡಿ ಸಾಹಿತ್ಯ ಸೋಫಾನದ ಪ್ರಥಮ ಮೆಟ್ಟಿಲು ನಾಟಕ. ಸಮಾಜದ ಓರೇ ಕೋರೆಗಳನ್ನು ತಿದ್ದುವಲ್ಲಿ ನಾಟಕ ತನ್ನದೇ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಅಧ್ಯಕ್ಷರು ರವಿ ಬಿದರೆ ಮಾತನಾಡಿ ತಮ್ಮ ಅವಧಿಯಲ್ಲಿ ಸರ್ಕಾರದ ಆರ್ಥಿಕ ನೆರವು ಪಡೆದು ರಂಗ ಸಂಗೀತ ಸಮ್ಮೇಳನ ನಡೆಸಲು ಪ್ರಯತ್ನ ನಡೆಸುವುದಾಗಿ ಭರವಸೆ ನೀಡಿದರು.
ಪೌರಾಣಿಕ ನಾಟಕ ನಿರ್ದೇಶಕರುಗಳಾದ ಎ.ಸಿ.ರಾಜು, ಎಂ ಮಹದೇವ್, ಪಾಲಾಕ್ಷಾಚಾರ್, ವೀರಭದ್ರಾಚಾರ್, ಹಿರಿಯ ನಟರು ಪೋಲೀಸ್ ನಂಜಪ್ಪ, ತಬಲ ಕೃಷ್ಣಪ್ಪ, ಸೀನ್ಸ್ ಲಕ್ಷ್ಮಣ್ ಕಲಾವಿದೆ ಲಕ್ಷ್ಮಮ್ಮ ಮೆಳಗೋಡು ರನ್ನು ಸನ್ಮಾನಿಸಲಾಯಿತು. ಕಲಾವಿದರು ಗ್ಯಾರಂಟಿ ರಾಮಣ್ಣ, ತೇಜೂರು ಸೋಮಣ್ಣ, ಎಚ್.ಎಲ್. ಶಶಿಕಾಂತ್, ಪ್ರಕಾಶ್ ತಟ್ಟೇಕೆರೆ, ನಾಗರಾಜ್ ಸಿ.ಜಿ. ಪ್ರಭಾಕರ್, ರಮೇಶ್ ಗೌಡಪ್ಪ . ಪೊಲೀಸ್ ರಂಗಸ್ವಾಮಿ, ಸಂಘದ ಪದಾಧಿಕಾರಿಗಳು, ನಿರ್ದೇಶಕರು ಇದ್ದರು. ಸಾವಿತ್ರಿ ಗಂಗಾಧರ್ ಪ್ರಾರ್ಥಿಸಿದರು. ನಟ ಪ್ರದೀಪ್ ಗವೇನಹಳ್ಳಿ ಕಾರ್ಯಕ್ರಮ ನಿರೂಪಿಸಿದರು. ನಟ ನಾಗಮೋಹನ್ ವಂದಿಸಿದರು. https://aratt.ai/@vishwaroopa_news_blog






