ಅಕ್ಟೋಬರ್ 2, 2026

ಗಂಗಾವತಿ ಸಂಕಲ್ಪ ಕಾಲೇಜಿನಲ್ಲಿ ಬ್ಯೂಟಿಷಿಯನ್ ತರಬೇತಿ

ಗಂಗಾವತಿ ಸಂಕಲ್ಪ ಮಹಿಳಾ ಕಾಲೇಜಿನಲ್ಲಿ ಬ್ಯೂಟಿಷಿಯನ್ ತರಬೇತಿ ಉದ್ಘಾಟನೆ ಮತ್ತು ಉಚಿತ ಕಿಟ್ ವಿತರಣೆ
ಗಂಗಾವತಿಯ ಸಂಕಲ್ಪ ಮಹಿಳಾ ಕಾಲೇಜಿನಲ್ಲಿ ಇಂಟೆಲ್ ಸಹಯೋಗದ ಬ್ಯೂಟಿಷಿಯನ್ ತರಬೇತಿ ಕಾರ್ಯಕ್ರಮದಲ್ಲಿ ಉಚಿತ ಕಿಟ್ ವಿತರಣೆ

ಗಂಗಾವತಿ: ಸಂಕಲ್ಪ ಮಹಿಳಾ ಕಾಲೇಜು ಬ್ಯೂಟಿಷಿಯನ್ ತರಬೇತಿ ಕಾರ್ಯಕ್ರಮದಲ್ಲಿ ಶಿಕ್ಷಣದ ಜೊತೆಗೆ ವೃತ್ತಿಪರ ಕೌಶಲ್ಯಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸಂಕಲ್ಪ ಮಹಿಳಾ ಕಾಲೇಜು ಬ್ಯೂಟಿಷಿಯನ್ ತರಬೇತಿಯಲ್ಲಿ ಸಂಕಲ್ಪ ಎಜುಕೇಶನ್ ಟ್ರಸ್ಟ್ ನ ಕಾರ್ಯಾಧ್ಯಕ್ಷರಾದ ನಾಗರಾಜ್ ಎಸ್. ಗುತ್ತೇದಾರ್ ಅವರು ಹೇಳಿದರು.

ಅವರು ನಗರದ ಪ್ರತಿಷ್ಠಿತ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ಇಂಟೆಲ್+ ರಿಚ್ ಮಚ್ ಹೈಯರ್ ಫೌಂಡೇಶನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಮೂರು ತಿಂಗಳ ಉಚಿತ ಬ್ಯೂಟಿಷಿಯನ್ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬ್ಯೂಟಿಷಿಯನ್ ಕ್ಷೇತ್ರದಲ್ಲಿ ಉದ್ಯೋಗಕ್ಕೆ ವಿಫುಲ ಅವಕಾಶ

ಇಂದಿನ ದಿನಗಳಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವವಿದೆಯೋ, ಅಷ್ಟೇ ಮಹತ್ವ ಕೌಶಲ್ಯಾಭಿವೃದ್ಧಿಗೂ ಇದೆ. ಅದರಲ್ಲೂ ಬ್ಯೂಟಿಷಿಯನ್ ಕ್ಷೇತ್ರವು ದಿನದಿಂದ ದಿನಕ್ಕೆ ಬೆಳೆಯುತ್ತಿರುವ ಉದ್ಯಮವಾಗಿದೆ. ನಗರ ಪ್ರದೇಶ ಮಾತ್ರವಲ್ಲದೆ ಗ್ರಾಮೀಣ ಭಾಗದಲ್ಲಿಯೂ ಬ್ಯೂಟಿ ಪಾರ್ಲರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಮಹಿಳೆಯರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗ ಎರಡಕ್ಕೂ ಉತ್ತಮ ಅವಕಾಶವಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿನಿಯರು ಮತ್ತು ಸುತ್ತಮುತ್ತಲಿನ ಮಹಿಳೆಯರು ಈ ಉಚಿತ ತರಬೇತಿಯ ಸಂಪೂರ್ಣ ಸದುಪಯೋಗ ಪಡೆದುಕೊಂಡು ತಮ್ಮ ಕಾಲ ಮೇಲೆ ತಾವೇ ನಿಲ್ಲಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿದ್ದ ಸಂಕಲ್ಪ ಎಜುಕೇಶನ್ ಟ್ರಸ್ಟ್ ನ ಉಪಾಧ್ಯಕ್ಷರಾದ ಡಾ. ಎಂ.ಆರ್. ಮಂಜುಸ್ವಾಮಿ ಅವರು ಮಾತನಾಡಿ, ಇಂತಹ ಕೌಶಲ್ಯ ತರಬೇತಿಗಳು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಹಿಳೆ ಸ್ವಾವಲಂಬಿಯಾದರೆ ಅವಳ ಇಡೀ ಕುಟುಂಬವೇ ಸಬಲವಾಗುತ್ತದೆ. ಆದ್ದರಿಂದ ಈ ತರಬೇತಿ ಪಡೆದ ನಂತರ ಕೇವಲ ಉದ್ಯೋಗಕ್ಕೆ ಸೀಮಿತವಾಗದೆ, ಸ್ವಂತ ಉದ್ಯಮ ಆರಂಭಿಸಿ ಇನ್ನೂ ನಾಲ್ಕು ಜನ ಮಹಿಳೆಯರಿಗೆ ಉದ್ಯೋಗ ನೀಡುವಂತಾಗಬೇಕು ಎಂದರು.

ಸಂಕಲ್ಪ ಮಹಿಳಾ ಮಹಾವಿದ್ಯಾಲಯದ ನಿರ್ದೇಶಕರಾದ ಡಾ. ಅಮಿತ್ ಕುಮಾರ ರೆಡ್ಡಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಪದವಿ ಇದ್ದರೆ ಸಾಲದು. ಪದವಿಯ ಜೊತೆಗೆ ಒಂದು ವೃತ್ತಿಪರ ಕೌಶಲ್ಯ ಅಥವಾ ನೈಪುಣ್ಯತೆ ಇದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ. ಈ ನಿಟ್ಟಿನಲ್ಲಿ ನಮ್ಮ ಕಾಲೇಜು ನಿರಂತರವಾಗಿ ವಿದ್ಯಾರ್ಥಿನಿಯರಿಗೆ ವಿವಿಧ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯರಾದ ಬಸಪ್ಪ ಸಿರಿಗೇರಿ ಅವರು ಮಾತನಾಡಿ, ಸಂಕಲ್ಪ ಸಂಸ್ಥೆಯು ವಿದ್ಯಾರ್ಥಿನಿಯರ ಶೈಕ್ಷಣಿಕ ಪ್ರಗತಿಯ ಜೊತೆಗೆ ಸರ್ವತೋಮುಖ ಬೆಳವಣಿಗೆಗೆ ಹೆಚ್ಚು ಒತ್ತು ನೀಡುತ್ತಿದೆ. ಮಹಿಳಾ ಸಬಲೀಕರಣವೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ಸಂಕಲ್ಪ ಮಹಿಳಾ ಕಾಲೇಜು ಬ್ಯೂಟಿಷಿಯನ್ ತರಬೇತಿ: ಉಚಿತ ಬ್ಯೂಟಿಷಿಯನ್ ಕಿಟ್ ವಿತರಣೆ

ತರಬೇತುದಾರರಾದ ಶ್ರೀಮತಿ ಪವಿತ್ರ ಅವರು ಈ ಬ್ಯೂಟಿಷಿಯನ್‌ ತರಬೇತಿಯ ರೂಪುರೇಷೆಗಳ ಕುರಿತು ವಿವರಿಸಿದರು. ಮೂರು ತಿಂಗಳ ಅವಧಿಯಲ್ಲಿ ಬ್ಯೂಟಿಷಿಯನ್ ಕೋರ್ಸ್‌ನ ಮೂಲಭೂತ ಅಂಶಗಳು, ಆಧುನಿಕ ತಂತ್ರಜ್ಞಾನಗಳು ಮತ್ತು ಸ್ವಯಂ ಉದ್ಯೋಗಕ್ಕೆ ಬೇಕಾದ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಅಂತ್ಯದಲ್ಲಿ ಎಲ್ಲಾ ತರಬೇತಿ ಆಕಾಂಕ್ಷಿಗಳಿಗೆ ಉಚಿತವಾಗಿ ಬ್ಯೂಟಿಷಿಯನ್ ಕಿಟ್‌ಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ನಾಗರಾಜ ಎಚ್., ಶ್ರೀಮತಿ ಆಶಾ, ಬಸವನಗೌಡ, ವಿಶ್ವನಾಥ ಹಕ್ಕಂಡಿ, ಬಸವರಾಜ ಯಣ್ಣಿಗೊಂಡ್ರು, ಶ್ರೀಮತಿ ವಿದ್ಯಾ, ರಾಹುಲ್ ನಾಜರೇ, ವಿದ್ಯಾರ್ಥಿನಿ ಪ್ರತಿನಿಧಿಗಳಾದ ಕುಮಾರಿ ಸಾಲೇಹ, ಕುಮಾರಿ ಪಾರ್ವತಿ ಉಪಸ್ಥಿತರಿದ್ದರು.

ಈ ಕಾರ್ಯಕ್ರಮವನ್ನು ಅಧ್ಯಾಪಕ ರಮೇಶ್  ನಿರೂಪಿಸಿದರೆ, ಶಿವಶರಣಪ್ಪ ಸ್ವಾಗತಿಸಿದರು ಮತ್ತು ಶಂಕರ ವರದಾಪುರ ಅವರು ವಂದನಾರ್ಪಣೆ ಮಾಡಿದರು. https://aratt.ai/@vishwaroopa_news_blog

Leave a Reply

Optimized by Optimole

Discover more from VISHWAROOPA NEWS BLOG

Subscribe now to keep reading and get access to the full archive.

Continue reading