
ಕಲ್ಮಠದ ಲಿಂಗೈಕ್ಯ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವಕ್ಕೆ ಚಾಲನೆ
ಆತ್ಮಸಾಕ್ಷಾತ್ಕಾರಕ್ಕೆ ಪುರಾಣ ಶ್ರವಣ ಅಗತ್ಯ: ಶ್ರೀ ಭುವನೇಶ್ವರಯ್ಯ ತಾತ
ಗಂಗಾವತಿ: ಕಲಿಯುಗದಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವ ಇಂದಿನ ಸಂಕಷ್ಟದ ಪರಿಸ್ಥಿತಿಯಲ್ಲಿ ಮಹಾನ್ ಸಂತರು ಹಾಗೂ ಗುರುಪರಂಪರೆಯ ದೈವತ್ವವನ್ನು ಸಾರುವ ಪುರಾಣ ಕಥೆಗಳನ್ನು ಶ್ರವಣ ಮಾಡುವ ಮೂಲಕ ಆತ್ಮಸಾಕ್ಷಾತ್ಕಾರವನ್ನು ಹೊಂದುವ ಅಗತ್ಯವಿದೆ ಎಂದು ಸುಳೇಕಲ್ ಬೃಹನ್ಮಠದ ಶ್ರೀ ಭುವನೇಶ್ವರಯ್ಯ ತಾತ ಹೇಳಿದರು.
ಅವರು ನಗರದ ಕಲ್ಮಠ ಪುರಾಣ ಮಂಟಪದಲ್ಲಿ ಜುಲೈ 27 ಸೋಮವಾರ ಆಯೋಜಿಸಿದ್ದ ಲಿಂಗೈಕ್ಯ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳವರ 105ನೇ ಸ್ಮರಣೋತ್ಸವ, ಶ್ರೀ ಚನ್ನಬಸವ ಶಿವಯೋಗಿಗಳವರ ಪುರಾಣ ಪ್ರವಚನ ಹಾಗೂ ಶರಣ ಸಂಸ್ಕೃತಿ ಉತ್ಸವವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ವೀರಶೈವ ಮಠಗಳ ಪರಂಪರೆಯಲ್ಲಿ ಹಾನಗಲ್ ಕುಮಾರ ಮಹಾಶಿವಯೋಗಿಗಳವರ ದಿವ್ಯದೃಷ್ಟಿಯ ಫಲವಾಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳು ಹಾಗೂ ತ್ರಿಭಾಷಾ ಕವಿ ಡಾ. ಪುಟ್ಟರಾಜ ಕವಿ ಗವಾಯಿಗಳು ಗಂಗಾವತಿಯ ಕಲ್ಮಠಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯನ್ನು ಅವಲೋಕಿಸಿದಾಗ ಕಲ್ಮಠದ ಶ್ರೀಮಂತ ಇತಿಹಾಸ ಮತ್ತು ಭವ್ಯ ಪರಂಪರೆಯನ್ನು ಅರಿತುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಕಂಪ್ಲಿ ಕಲ್ಮಠದ ಅಭಿನವ ಪ್ರಭು ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಕಂಪ್ಲಿ ಕಲ್ಮಠ ಮತ್ತು ಗಂಗಾವತಿ ಕಲ್ಮಠಗಳ ನಡುವೆ ಅವಿನಾಭಾವ ಸಂಬಂಧವಿದೆ. ಪ್ರಸ್ತುತ ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳ ನೇತೃತ್ವದಲ್ಲಿ ಜ್ಞಾನದಾಸೋಹ, ಅನ್ನದಾಸೋಹ ಹಾಗೂ ಸಂಗೀತ ಶಾಲೆಯ ಮೂಲಕ ಸಮಾಜಮುಖಿ ಸೇವಾ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಂಡಿತ್ ಶಿವರಾಜ್ ಶಾಸ್ತ್ರಿ ಅವರಿಂದ ಪುರಾಣ ಪ್ರವಚನ ನಡೆಯಿತು. ಕಾರ್ಯಕ್ರಮದಲ್ಲಿ ರೇವಣಸಿದ್ದಯ್ಯ ತಾತ, ಡಾ. ಶರಣಬಸಪ್ಪ ಕೋಲ್ಕಾರ್, ಶರಣೇಗೌಡ ಮಾಲಿ ಪಾಟೀಲ್, ದುರ್ಗಪ್ಪ ದಳಪತಿ ಸೇರಿದಂತೆ ಹಲವಾರು ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಕಲ್ಮಠದ ಡಾ. ಕೊಟ್ಟೂರು ಮಹಾಸ್ವಾಮಿಗಳು ವಹಿಸಿದ್ದರು. https://aratt.ai/@vishwaroopa_news_blog
