
ಗುರು ಪೂರ್ಣಿಮಾ ಅಂಗವಾಗಿ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ಚಂಡಿ ಹೋಮ: ಗುರುಗಳಿಗೆ ತುಲಾಭಾರ
ಗಂಗಾವತಿ: ಇತಿಹಾಸ ಪ್ರಸಿದ್ಧ ಆನೆಗುಂದಿಯ ಶ್ರೀ ಆದಿಶಕ್ತಿ ದುರ್ಗಾದೇವಿ ದೇವಸ್ಥಾನದಲ್ಲಿ ಗುರು ಪೂರ್ಣಿಮಾ ಅಂಗವಾಗಿ ವಿಶೇಷ ಪೂಜೆ, ಚಂಡಿ ಹೋಮ ಹಾಗೂ ಗುರುಗಳಿಗೆ ಭಕ್ತಿಯ ತುಲಾಭಾರ ಕಾರ್ಯಕ್ರಮಗಳು ಬುಧವಾರ ಭಕ್ತಿಭಾವದಿಂದ ಜರುಗಿದವು.
ಹೊಸಪೇಟೆಯ ಭಕ್ತರಾದ ಕಣ್ಣಿ ಶ್ರೀಕಂಠ ಹಾಗೂ ಕಣ್ಣಿ ಉಮಾದೇವಿ ದಂಪತಿಗಳು ಶ್ರೀ ಆದಿಶಕ್ತಿ ದುರ್ಗಾದೇವಿ ಮಾತೆಗೆ ವಿಶೇಷ ಪೂಜೆ ಸಲ್ಲಿಸಿ, ಚಂಡಿ ಹೋಮವನ್ನು ನೆರವೇರಿಸಿದರು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖ ಅರ್ಚಕರಾದ ವೇದಮೂರ್ತಿ ಬ್ರಹ್ಮಯ್ಯ ಗುರೂಜಿಯವರಿಗೆ ಭಕ್ತಿಪೂರ್ವಕವಾಗಿ ಪಾದಪೂಜೆ ಸಲ್ಲಿಸಿ, ತುಲಾಭಾರ ಕಾರ್ಯಕ್ರಮವನ್ನು ನೆರವೇರಿಸಿದರು.ತಮ್ಮ ಅಚ್ಚುಮೆಚ್ಚಿನ ಗುರುಗಳ ಆಶೀರ್ವಾದ ಮತ್ತು ಅನುಗ್ರಹಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ತುಲಾಭಾರವನ್ನು ಸಮರ್ಪಿಸಿ, ಬಹುದಿನಗಳ ತಮ್ಮ ಸಂಕಲ್ಪವನ್ನು ಈಡೇರಿಸಿಕೊಂಡರು. ಧಾರ್ಮಿಕ ವಿಧಿವಿಧಾನಗಳನ್ನು ವೇದಮೂರ್ತಿ ಬ್ರಹ್ಮಯ್ಯ ಗುರೂಜಿ ಹಾಗೂ ಅವರ ಶಿಷ್ಯವೃಂದದವರು ಅಚ್ಚುಕಟ್ಟಾಗಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಣ್ಣಿ ಶ್ರೀಕಂಠ ಹಾಗೂ ಕಣ್ಣಿ ಉಮಾದೇವಿ, “ನಮ್ಮ ಬಹುದಿನಗಳ ಸಂಕಲ್ಪದಂತೆ ಶ್ರೀ ಆದಿಶಕ್ತಿ ದುರ್ಗಾದೇವಿಯ ಅನುಗ್ರಹ ಹಾಗೂ ವೇದಮೂರ್ತಿ ಬ್ರಹ್ಮಯ್ಯ ಗುರೂಜಿಯವರ ಆಶೀರ್ವಾದದಿಂದ ನಮ್ಮ ಕುಟುಂಬದಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ನೆಲೆಸಿದೆ. ರಾಜಕೀಯ ಕ್ಷೇತ್ರದಲ್ಲಿಯೂ ಮುನ್ನಡೆ ಸಾಧಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಗುರು ಪೂರ್ಣಿಮಾ ಪ್ರಯುಕ್ತ ಚಂಡಿ ಹೋಮ, ಗುರುಗಳ ಪಾದಪೂಜೆ ಹಾಗೂ ತುಲಾಭಾರವನ್ನು ಸಮರ್ಪಿಸುವ ಮೂಲಕ ನಮ್ಮ ಮಹತ್ವದ ಸಂಕಲ್ಪವನ್ನು ಈಡೇರಿಸಿಕೊಂಡಿರುವುದು ಸಂತಸ ತಂದಿದೆ,” ಎಂದು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕಣ್ಣಿ ಕುಟುಂಬಸ್ಥರು ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆ ಮಾಡಿದ್ದರು. ಗುರುಗಳ ಆಶೀರ್ವಾದದೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮವು ಭಕ್ತರಲ್ಲಿ ಸಂಭ್ರಮ ಮತ್ತು ಭಕ್ತಿಭಾವವನ್ನು ಮೂಡಿಸಿತು.
ಹುಣ್ಣಿಮೆಯ ಪ್ರಯುಕ್ತ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಶ್ರೀ ಆದಿಶಕ್ತಿ ದುರ್ಗಾದೇವಿಯ ದರ್ಶನ ಪಡೆದು ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

