ರಂಗಗೀತೆ ಮತ್ತು ಜನಪದ ಗೀತೆಗಳ ಕಾರ್ಯಕ್ರಮ
ಗಂಗಾವತಿ: ರಂಗಗೀತೆಗಳು ಹಾಗೂ ಜನಪದ ಗೀತೆಗಳು ಕನ್ನಡ ನಾಟಕ ರಂಗ ಮತ್ತು ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸುವುದರ ಜೊತೆಗೆ ಅದರ ಸೊಬಗನ್ನೂ ವೃದ್ಧಿಸಿವೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಕೆ. ನಿಂಗಜ್ಜ ಹೇಳಿದರು.
ಅವರು ನಗರದ ಕನ್ನಡ ಜಾಗೃತಿ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜಕತ್ವದಲ್ಲಿ ರಂಗಭೂಮಿ ಕಲಾವಿದೆ ಜಿ. ವಂದನಾ ಅವರಿಂದ ಆಯೋಜಿಸಿದ್ದ ರಂಗಗೀತೆ ಮತ್ತು ಜನಪದ ಗೀತೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸಂಗೀತ, ನಾಟಕ ಹಾಗೂ ವಿವಿಧ ಕಲಾ ಕ್ಷೇತ್ರಗಳ ಕಲಾವಿದರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ಕಲಾವಿದರಿಗೆ ಇನ್ನಷ್ಟು ಅವಕಾಶಗಳು ದೊರೆಯುವಂತೆ ಯೋಜನೆಗಳನ್ನು ರೂಪಿಸಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹಿರಿಯ ಪತ್ರಕರ್ತ ಸುದರ್ಶನ್ ವೈದ್ಯ ಮಾತನಾಡಿ. ಹಿಂದೆ ಕಲಾವಿದರಿಗೆ ರಾಜ ಮಹಾರಾಜರು ಆಶ್ರಯ ನೀಡುತ್ತಿದ್ದರು ಪ್ರಸ್ತುತ ದಿನಗಳಲ್ಲಿ ಕಲೆಯನ್ನೇ ನಂಬಿದ ಕಲಾವಿದರುಗಳಿಗೆ ಸರ್ಕಾರದ ನೆರವು ಸಿಗದೇ ಸಂಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಬಳಿಕ ರಂಗಭೂಮಿ ಕಲಾವಿದೆ ಜಿ. ವಂದನಾ ಅವರು ರಂಗಗೀತೆಗಳು ಹಾಗೂ ಜನಪದ ಗೀತೆಗಳನ್ನು ಹಾಡಿ ನೆರೆದಿದ್ದ ಪ್ರೇಕ್ಷಕರನ್ನು ರಂಜಿಸಿದರು.
ಕಾರ್ಯಕ್ರಮದಲ್ಲಿ ಉಡಮಕಲ್ ಗಡ್ಡಿಯ ಅಪ್ಪಾಜಿ ಶರಣಬಸವ ದೇವರು, ರೇವಣ ಸಿದ್ದಯ್ಯ ತಾತನವರು, ಅಮರೇಶಪ್ಪ ಇಂಗಳಗಿ, ಸಾಹಿತಿ ಶರಣಪ್ಪ ಮೆಟ್ರಿ, ವಿಜಯಲಕ್ಷ್ಮೀ ಹಿರೇಮಠ,, ಬಿಜೆಪಿ ಮುಖಂಡರಾದ ಸೌಭಾಗ್ಯ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. https://aratt.ai/@vishwaroopa_news_blog





