ಗಂಗಾವತಿ: ಕೊಪ್ಪಳ ನಗರದ ಸಾಹಿತ್ಯ ಭವನದಲ್ಲಿ ನವಂಬರ್-೯ ಭಾನುವಾರದಂದು ಹಿರಿಯ ಸಾಹಿತಿಗಳಾದ ವೀರಣ್ಣ ವಾಲಿಯವರ ಸರ್ವಾಧ್ಯಕ್ಷತೆಯಲ್ಲಿ ಕೊಪ್ಪಳ ಜಿಲ್ಲಾ ೧೧ನೇ ಚುಟುಕು ಸಾಹಿತ್ಯ ಸಮ್ಮೇಳನ ಜರುಗಲಿದೆ ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ತಿಳಿಸಿದರು.
ಈ ಸಮ್ಮೇಳನವು ಸದರಿ ದಿನದಂದು ಬೆಳಗ್ಗೆ ೧೦ ರಿಂದ ರಾತ್ರಿ ೧೦ ರವರೆಗೆ ಜರುಗಲಿದ್ದು, ಇದರ ದಿವ್ಯಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಕುಕನೂರು ಶಾಖಾಮಠದ ಡಾ. ಮಹಾದೇವ ಮಹಾಸ್ವಾಮಿಗಳು, ಗಜೇಂದ್ರಗಡ ಕಾಲಜ್ಞಾನಮಠದ ಶ್ರೀ ಶರಣಬಸವೇಶ್ವರ ಮಹಾಸ್ವಾಮಿಗಳು ವಹಿಸಲಿದ್ದು, ಉದ್ಘಾಟನೆಯನ್ನು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಜ ತಂಗಡಗಿಯವರು ಮಾಡಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ. ಎಂ.ಜಿ.ಆರ್. ಅರಸ್ ವಹಿಸಲಿದ್ದಾರೆ.
ಈ ಸಮ್ಮೇಳನದ ಗೋಷ್ಠಿ-೧ ರಲ್ಲಿ ಚುಟುಕು ಸಾಹಿತ್ಯ ವೈಶಿಷ್ಟ್ಯತೆ ಮತ್ತು ಅವಲೋಕನ ಮತ್ತು ಗೋಷ್ಠಿ-೨ ರಲ್ಲಿ ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಸವಾಲುಗಳು : ಒಂದು ಚಿಂತನೆ ಕುರಿತು ಉಪನ್ಯಾಸ ನಡೆಯಲಿದೆ.
ಈ ಸಮ್ಮೇಳನದ ಆಯೋಜನೆಯನ್ನು ಕೊಪ್ಪಳ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ ಹಾಗೂ ಕಾರ್ಯಕಾರಿ ಮಂಡಳಿಯವರು ಮಾಡಿದ್ದು, ಸಮ್ಮೇಳನದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಕವಿಗಳು ಹಾಗೂ ಕವಯಿತ್ರಿಗಳು ಪಾಲ್ಗೊಳ್ಳಲಿದ್ದು, ಕವಿಗೋಷ್ಠಿಗಳು, ವಿವಿಧ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
ಈ ಚುಟುಕು ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿರುವ ವೀರಣ್ಣ ವಾಲಿಯವರು ಮೂಲತಃ ಯಲಬುರ್ಗಾ ತಾಲೂಕಿನ ಕರಮುಡಿಯವರು. ಇವರು “ಆಶಾಡ ವಿಭೂತಿಗಳು”. “ಮೌನ ನಿನಾದ”. “ನಮ್ಮ ನೆಲ ನಮ್ಮ ಜನ”. “ಲೇಖನ ಮಾಲೆ” ಸೇರಿದಂತೆ ಅನೇಕ ಕೃತಿಗಳನ್ನು ಸಾಹಿತ್ಯ ಚಂಪಾದಿತ ಚುಟುಕುಗಳನ್ನು ಪ್ರಕಟಿಸಿದ್ದು, ಹಲವಾರು ಲೇಖನಗಳನ್ನು ಪತ್ರಿಕೆಗಳಿಗೆ ಬರೆಯುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಈ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು, ಸಾಹಿತ್ಯಾಸಕ್ತರು ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಗಂಗಾವತಿ ಚುಟುಕು ಸಾಹಿತ್ಯ ಪರಿಷತ್ತು ಕೋರಿದೆ ಎಂದು ತಿಳಿಸಿದರು. https://aratt.ai/@vishwaroopa_news_blog
