ಗಂಗಾವತಿ: ಮನದ ಅಂಧಕಾರವನ್ನು ತೊಡೆದುಹಾಕುವಲ್ಲಿ ಕಾರ್ತಿಕ ದೀಪೋತ್ಸವ ಅತ್ಯಂತ ಮಹತ್ವದಾಯಕವಾಗಿದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಶುಕ್ರವಾರದಂದು ಶ್ರೀ ಶಾರದಾಂಬ ದೇಗುಲದಲ್ಲಿ ಕಾರ್ತಿಕ ದೀಪೋತ್ಸವ ಸಂಭ್ರಮವನ್ನು ಉದ್ದೇ
ಶಿಸಿ ಮಾತನಾಡಿದರು. ಕತ್ತಲು ಎಂಬುವುದು ಅಜ್ಞಾನದ ಸಂಕೇತವಾಗಿತ್ತು. ಅಂತಹ ಅಜ್ಞಾನವನ್ನು ದೀಪ ಹಚ್ಚುವುದರ ಮೂಲಕ ಬೆಳಕು ನೀಡುವ ಕಾರ್ಯ ಕಾರ್ತಿಕೋತ್ಸವದ ಉದ್ದೇಶವಾಗಿದೆ. ಕಳೆದ ೮ ವರ್ಷಗಳಿಂದ ಶೃಂಗೇರಿಯ ಉಭಯ ಜಗದ್ಗುರುಗಳ ಅನುಗ್ರಹದ ಮೇರೆಗೆ ವಿವಿಧ ಸಮಾಜದ ಹಾಗೂ ವಿವಿಧ ಭಜನಾ ಮಂಡಳಿಗಳ ಮಹಿಳೆಯರಿಂದ ಶಂಕರ ಮಠದಲ್ಲಿ ಅರ್ಥಪೂರ್ಣವಾಗಿ ಆಚರಿಸುತ್ತ ಬರಲಾಗಿದೆ. ಪ್ರಸ್ತುತ ದಿನಗಳಲ್ಲಿ ಜೀವನದ ಮೌಲ್ಯ ಕುಸಿಯುತ್ತಿದೆ, ಪ್ರೀತಿ ವಿಶ್ವಾಸ, ನಾವು ನಮ್ಮವರು ಎಂಬ ಭಾವನೆ ಬೆಳೆಸಿಕೊಳ್ಳಬೇಕಾದ ಅವಶ್ಯಕತೆ ಇದೆ. ಧಾರ್ಮಿಕ ಆಚರಣೆಯ ಮೂಲಕ, ಗುಣಮಟ್ಟದ ಸಂಸ್ಕಾರ ಬೆಳೆಸಿಕೊಳ್ಳುವುದರ ಮೂಲಕ ಭಾರತದ ಭವ್ಯ ಪರಂಪರೆ ಸಂಸ್ಕೃತಿ ಉಳಿಸಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಧಾರ್ಮಿಕ ಸಮಾರಂಭದ ನೇತೃತ್ವವನ್ನು ವಹಿಸಿದ ಭೀಮಭಟ್ ಬಸಾಪಟ್ಟಣ ಮಾತನಾಡಿ ಕಾರ್ತಿಕ ಮಾಸದ ದೀಪೋತ್ಸವಕ್ಕೆ ಸಂಪ್ರದಾಯ ಸೇರಿದಂತೆ ವೈಜ್ಞಾನಿಕ ಹಿನ್ನೆಲೆ ಇದೆ. ಕಾರ್ತಿಕ ಮಾಸ ಕತ್ತಲೆಯಿಂದ ಕೂಡಿದ್ದು ಪ್ರಕೃತಿ ದತ್ತವಾದ ಚಳಿ ಹೊಂದಿದೆ. ಮನುಷ್ಯನಲ್ಲಿ ಇರುವ ಅಜ್ಞಾನ ಅಂಧಕಾರವನ್ನು ಹೊಡೆದೋಡಿಸಿ ಸುಜ್ಞಾನದ ಬೆಳಕನ್ನು ಶ್ರೀ ಶಾರದಾಂಬೆ ದೇವಿಗೆ ಸಮರ್ಪಿಸುವ ಸಂಕಲ್ಪ ಹೊಂದಲಾಗಿದೆ ಎಂದು ಆಚರಣೆಯ ಸಮಗ್ರ ಮಾಹಿತಿಯನ್ನು ಹೇಳಿದರು.
ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್ ದಂಪತಿಗಳು ಸೇರಿದಂತೆ ಶಾರದಾ ಶಂಕರ ಭಕ್ತ ಮಂಡಳಿ, ಇತರರು ಏಕಕಾಲಕ್ಕೆ ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ಮಹಾಸಂಕಲ್ಪ ಭಜನೆ ಮಹಾ ಮಂಗಳಾರತಿ, ಮತ್ತಿತರ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.
ಈ ಸಂದರ್ಭದಲ್ಲಿ ಭೀಮಶಂಕರ್ ಹೊಸಳ್ಳಿ, ಶೇಷಗಿರಿ ಗಡಾದ್, ವೇಣುಗೋಪಾಲ್ ಶ್ರೀಧರ್, ನಾಗೇಶ್ ಸೇರಿದಂತೆ ವಿವಿಧ ಸಮಾಜದ ಮುಖಂಡರು ಯುವಕರು ಮಹಿಳೆಯರು ಮಕ್ಕಳು ದೀಪೋತ್ಸವ ಬೆಳಗಿ ಸಂಭ್ರಮಿಸಿದರು. https://aratt.ai/@vishwaroopa_news_blog
