ಅನ್ನದಾತ ರೈತರಿಗೆ ಸರ್ಕಾರ ವಿಶೇಷ ಯೋಜನೆಗಳು ರೂಪಿಸಬೇಕು: ನೇತ್ರಾಜ್ ಗುರುವಿನಮಠ

ಗಂಗಾವತಿ: ರೈತ ದಿನಾಚರಣೆ ಭಾರತದ ಆಧಾರಸ್ತಂಭಗಳನ್ನು ಗೌರವಿಸುವ ದಿನ. ಭಾರತದ ರೈತರು ದೇಶದ ಆಹಾರ ಭದ್ರತೆಗೆ ಬಹಳ ಮುಖ್ಯ. ಅವರ ಕಠಿಣ ಪರಿಶ್ರಮದಿಂದಲೇ ನಾವು ಪ್ರತಿದಿನ ಆಹಾರ ಸೇವಿಸುತ್ತೇವೆ. ಅವರ ಕೊಡುಗೆಯನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್-೨೩ ರಂದು ರಾಷ್ಟ್ರೀಯ ರೈತ ದಿನವನ್ನು ಆಚರಿಸಲಾಗುತ್ತದೆ. ರೈತ ದಿನಾಚರಣೆ ಎಂದರೆ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ಭಾರತದ ೫ನೇ ಪ್ರಧಾನ ಮಂತ್ರಿಯಾಗಿದ್ದ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವನ್ನು ರೈತ ದಿನವಾಗಿ ಆಚರಿಸಲಾಗುತ್ತದೆ. ಅವರು ರೈತರ ಹಿತದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ದೇಶಕ್ಕೆ ಅನ್ನ ನೀಡುವ ರೈತ, ಪ್ರಸ್ತುತ ದಿನಮಾನಗಳಲ್ಲಿ ಬೆಂಬಲ ಬೆಲೆ ಇಲ್ಲದೆ, ಸಂಕಷ್ಟದಲ್ಲಿದ್ದು, ಆಹಾರ ಭದ್ರತೆ ಕಲ್ಪಿಸುವ ರೈತಾಪಿ ವರ್ಗಕ್ಕೆ ಸರ್ಕಾರ ವಿಶೇಷ ಯೋಜನೆಗಳನ್ನು ರೂಪಿಸುವುದರ ಮೂಲಕ ರೈತರ ಹಿತ ಕಾಪಾಡಬೇಕಿದೆ ಎಂದು ನೇತ್ರಾಜ್ ಗುರುವಿನಮಠ ಹೇಳಿದರು.

ಅವರು ಸೋಮವಾರದಂದು ಜಯನಗರದ ಮಹಾನ್ ಕಿಡ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ರಾಷ್ಟ್ರೀಯ ರೈತರ ದಿನಾಚರಣೆಯ ಸಾಧಕ ರೈತರ ಸನ್ಮಾನ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು. ದಿನಂಪ್ರತಿ ಸೇವಿಸುವ ಆಹಾರದ ಉತ್ಪಾದನೆಯಲ್ಲಿ ಸಾವಿರಾರು ಕೈಗಳ ಶ್ರಮವಿದೆ. ಅಲ್ಲಿ ಇಲ್ಲಿ ಸಾಲ ಮಾಡಿ ಬೆಳೆ ಕೈಗೆ ಬರುವ ಸಂದರ್ಭದಲ್ಲಿಯೇ ಅತಿವೃಷ್ಟಿ ಇಲ್ಲವೇ ಅನಾವೃಷ್ಟಿಯಿಂದ ಬೆಳೆ ನಷ್ಟಗೊಂಡು ಕೊನೆಗೆ ಆತ್ಮಹತ್ಯೆಯಂತಹ ದಾರಿ ಹಿಡಿಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಇನ್ನೋರ್ವ ರೈತ ಮುಖಂಡ ಜೋಗದ ನಾರಾಯಣಪ್ಪ ನಾಯಕ ಮಾತನಾಡಿ ಗೋ ಹತ್ಯೆ ನಿಷೇಧ ಕಾಯ್ದೆ ಒಂದೆಡೆ ವರ ಆದರೆ ಮತ್ತೊಂದೆಡೆ ಶಾಪವಾಗಿದೆ. ವಯಸ್ಸಾದ ಹಸುಗಳಿಗೆ ಸಮರ್ಪಕವಾಗಿ ಮೇವು ನೀರು ಇಲ್ಲದೆ ಗೋ ಶಾಲೆಗಳಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ. ಇದಕ್ಕೆ ಸರ್ಕಾರ ಯಾವುದೇ ಪರಿಹಾರ ಸಹ ನೀಡದೇ ಇರುವುದು ರೈತರಿಗೆ ಶಾಪವಾಗಿ ಪರಿಣಮಿಸಿದೆ ಎಂದು ತಿಳಿಸಿದ ಅವರು ರೈತಾಪಿ ವರ್ಗದ ಸರ್ವತೋಮುಖ ಅಭಿವೃದ್ಧಿಗೆ, ಸರ್ಕಾರ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ, ಸಮರ್ಪಕವಾಗಿ ರಸಗೊಬ್ಬರ ವಿತರಣೆ, ಬೆಳೆ ನಷ್ಟದ ಸಂದರ್ಭದಲ್ಲಿ ಸಮರ್ಪಕವಾದ ಪರಿಹಾರ ಧನ ವಿತರಣೆ ಕಲ್ಪಿಸಲು ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸ್ವಾವಲಂಬಿ ರೈತರಾದ ರಮೇಶ್ ಸಾಲಿಗನೂರ್, ಶಿವರಾಜ ಸಾಲಿಗನೂರ್, ಜೋಗದ ನಾರಾಯಣಪ್ಪ ನಾಯಕ, ದುರ್ಗಪ್ಪ ಮಳ್ಳಿಕೇರಿ, ಸುರೇಶ್ ಮುರುಡಿ, ಈರಪ್ಪ ಗಾಡಿಮನೆ, ಹುಲುಗಪ್ಪ ಚೌಡಕಿ, ಮುಕುಂದ, ಚಿಕ್ಕಬೆಳಕಲ್ ದೊಡ್ಡಯ್ಯ ಶಾಸ್ತ್ರೀಮಠ, ಹನುಮಂತಪ್ಪ ಸಾಲಿಗನೂರು ಸೇರಿದಂತೆ ಇತರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಮಾರಂಭಕ್ಕೂ ಮುನ್ನ ನಾಡಗೀತೆ ಹಾಗೂ ರೈತ ಗೀತೆಯನ್ನು ಹಾಡಲಾಯಿತು. ಈ ಸಂದರ್ಭದಲ್ಲಿ ಶಾಲೆ ಮುಖ್ಯಗುರುಗಳಾದ ಶ್ರೀಮತಿ ಸವಿತಾ ಗುರುವಿನಮಠ ಸೇರಿದಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ದೇಶದ ಆಹಾರ ಭದ್ರತೆಗೆ ರೈತರ ಕೊಡುಗೆ ಅನನ್ಯವಾಗಿದೆ: ಶ್ರೀಧರ್ ಕೇಸರಹಟ್ಟಿ

ಗಂಗಾವತಿ: ಪ್ರಸ್ತುತ ವೈಜ್ಞಾನಿಕ ಯುಗದಲ್ಲಿ ಸಾಕಷ್ಟು ಅಭಿವೃದ್ಧಿಪಥದಲ್ಲಿ ಮುಂದೆ ಸಾಗಿದ್ದರೂ ಸಹ. ಪ್ರಮುಖವಾಗಿ ಜನತೆಗೆ ಅಗತ್ಯ ಇರುವ ಆಹಾರಕ್ಕೆ ಸಂಬಂಧಿಸಿದಂತೆ, ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತಾಪಿ ವರ್ಗ ಅವರ ಸೇವೆ ಅನನ್ಯವಾಗಿದೆ ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಮಾಜಿ ಸದಸ್ಯ ಶ್ರೀಧರ್ ಕೇಸರಹಟ್ಟಿ ಹೇಳಿದರು.

ಅವರು ಶ್ರೀರಾಮನಗರದ ಶ್ರೀಮತಿ ಪರಿಮಳಬಾಯಿ ನಾರಾಯಣರಾವ್ ಅಪ್ಸಾನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ಸೋಮವಾರದಂದು ಜರುಗಿದ ರಾಷ್ಟ್ರೀಯ ರೈತರ ದಿನಾಚರಣೆ ಹಾಗೂ ಸಾಧಕ ರೈತರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ದೇಶವಾಸಿಗಳಿಗೆ ಹೊಟ್ಟೆ ತುಂಬಿಸುವುದು ಯಂತ್ರಗಳು ಅಲ್ಲ ಎಂಬ ಸ್ಪಷ್ಟವಾದ ಸಂದೇಶವನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ರೈತರ ಕೃಷಿ ಬೆಳವಣಿಗೆಯಿಂದಾಗಿ ದೇಶ ಹಸಿವು ಮುಕ್ತವಾಗಲು ಸಾಧ್ಯವಾಗುತ್ತದೆ. ಅಂತಹ ರೈತರ ಕೃಷಿ ಕಾರ್ಯಚಟುವಟಿಕೆಗಳಿಗೆ ಸರ್ಕಾರಗಳು ಹಾಗೂ ಪ್ರತಿಯೊಬ್ಬರು ಸ್ಮರಿಸಲೇಬೇಕಾದ ಅವಶ್ಯಕತೆ ಇದೆ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಸಮಾರಂಭ ಕುರಿತು ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ಅಪಾರ ಸಂಖ್ಯೆಯ ರೈತರು ಬೃಹತ್ ಮೆರವಣಿಗೆಯನ್ನು ನಡೆಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಗಂಗಾವತಿ ಕೆವಿಕೆ ಸಂಸ್ಥೆಯ ಸಂತೋಷ್ ಎಲ್.ಆರ್.ಸಿ ಅಧಿಕಾರಿ ಹಿರೇಮಠ್, ರೈತ ಮುಖಂಡ ಸಿದ್ದನಗೌಡ ಸೇರಿದಂತೆ ಇತರರು ಕೃಷಿಯ ತಮ್ಮ ಜೀವನದ ಉಸಿರಾಗಿಸಿಕೊಂಡ ರೈತರು ಆದ ಕುಸುಮ ರವಿ, ಕೃಷಿ ಉಪಕರಣಗಳ ತಯಾರಕರು ಸುಬ್ರಮಣ್ಯ ಬಸಾಪಟ್ಟಣ, ಸಿದ್ದನಗೌಡ, ರಮೇಶ್ ಕಲ್ಗುಡಿ, ಸತ್ಯನಾರಾಯಣ ಕೋಟೆಕ್ಯಾಂಪ್, ವೈ ಸತ್ಯನಾರಾಯಣ ಮುಸ್ಟೂರು ಡಗ್ಗಿ ಕ್ಯಾಂಪ್ ಶ್ರೀಧರ ಕೆಸರಹಟ್ಟಿ, ನರೇಶ್ ಮಲಕನಮರಡಿ ಅಣ್ಣಾರಾವ್. ನಾಗೇಶ್ ರಾವ್ ಹಾಗೂ ರಾಜಪ್ಪ ರೈತರನ್ನು ವೇದಿಕೆಯಲ್ಲಿನ ಗಣ್ಯರು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು.

ಐರಣಿ ಮಠದ ತುಂಗಭದ್ರಾ ದಡದಲ್ಲಿ ಎರಡನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಜಾಲನೆ

ರಾಣಿಬೆನ್ನೂರು ತಾಲ್ಲೂಕಿನ ಐರಣಿ ಮಠದ ಸನ್ನಿಧಿಯಲ್ಲಿ ನಿರ್ಮಲ ತುಂಗಭದ್ರ ಅಭಿಯಾನದ ಎರಡನೇ ಹಂತದ ಪಾದಯಾತ್ರೆಯನ್ನು ವೀರಾಪುರ ಹಿರೇಮಠದ ಡಾ. ಮರುಳಸಿದ್ದ ಪಂಡಿತಾರಾಧ್ಯ ಮಹಾಸ್ವಾಮಿಗಳು, ಐರಾವತ ಐರಣಿ ಮಠದ ಶ್ರೀ ಮಾಧವಾನಂದ ಸ್ವಾಮೀಜಿ, ಪ್ರಧಾನ ಸಂಘಟಕರಾದ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ ನವದೆಹಲಿ ರಾಷ್ಟ್ರೀಯ ಸಂಚಾಲಕರಾದ ಶ್ರೀ ಬಸವರಾಜ್ ಪಾಟೀಲ್ ವೀರಾಪುರ, ಸಾಮಾಜಿಕ ಕಾರ್ಯಕರ್ತರು ಹಾಗೂ ಚನ್ನಗಿರಿ ಮಾಜಿ ಶಾಸಕರಾದ ಮಹಿಮಾ ಪಾಟೀಲ್, ಖ್ಯಾತ ಆರ್ಥಿಕ ತಜ್ಞರು ಹಾಗೂ ಪರಿಸರ ಪ್ರೇಮಿಗಳಾದ ಪ್ರೊ. ಬಿ.ಎನ್. ಕುಮಾರಸ್ವಾಮಿ, ಐ.ಐ.ಟಿ ಧಾರವಾಡದ ಪ್ರೊ. ಎಲ್.ಕೆ. ಶ್ರೀಪತಿ ಇವರು ತುಂಗಭದ್ರಾ ನದಿಗೆ ಪೂಜೆ ಸಲ್ಲಿಸುವ ಮುಖಾಂತರ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಸಂಘಟಕರಾದ ಬಾಲಕೃಷ್ಣ ನಾಯ್ಡು, ಮಾದವನ್ ಗೋ ಸಿರಿ, ಗೋವರ್ದನ್, ಗಂಗಾವತಿಯ ಡಾ|| ಶಿವಕುಮಾರ ಮಾಲಿಪಾಟೀಲ್, ಪ್ರಹ್ಲಾದ್ ಕುಲಕರ್ಣಿ, ಮಂಜುನಾಥ ಸಿರಿಗೇರಿ ಹಾಗೂ ಶಿವಮೊಗ್ಗ, ಹರಿಹರ, ಬೆಂಗಳೂರು, ದಾವಣಗೆರೆಯ ಹಲವಾರು ಪರಿಸರ ಪ್ರೇಮಿಗಳು, ಗಣ್ಯರು ಉಪಸ್ಥಿತರಿದ್ದರು.