ಜ್ಞಾನವಂತರಾಗಿ ಕೌಶಲ್ಯವಾಗಿರಿ: ಕವಿತಾ ಮಿಶ್ರ

ಗಂಗಾವತಿ: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಯಶಸ್ವಿಯಾಗಿ ಜೀವನ ನಡೆಸಬೇಕಾದರೆ ಕಾಲೇಜು ಹಂತದಲ್ಲಿ ಜ್ಞಾನವನ್ನು ಕೌಶಲ್ಯಗಳನ್ನು ಸಂಪಾದಿಸಬೇಕಾದ ಅವಶ್ಯಕತೆ ಇದೆ ಎಂದು ಕವಿತಾಳದ ಪ್ರಗತಿಪರ ಕೃಷಿ ಸಾಧಕಿಯಾದ ಕವಿತಾ ಮಿಶ್ರ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.

ಅವರು ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ೧೨ನೇ ವಾರ್ಷಿಕೋತ್ಸವ ಮತ್ತು ರ‍್ಯಾಂಕ್ ಪಡೆದ ಸಾಧಕಿಯರನ್ನ ಸನ್ಮಾನಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಐಟಿ-ಬಿಟಿ ಉದ್ಯೋಗಗಳಿಗಿಂತ ಕೃಷಿ ವೃತ್ತಿಯು ಅತ್ಯಂತ ಮಹತ್ವವಾದದ್ದು ಮತ್ತು ಬೆಲೆಯುತವಾದದ್ದು, ಏಕೆಂದರೆ ಮುಂದಿನ ದಿನಮಾನಗಳಲ್ಲಿ ಒಂದೇ ಒಂದು ಎಕರೆ ಕೃಷಿ ಭೂಮಿ ಇರುವ ರೈತನೇ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿರುತ್ತಾನೆ ಎಂದು ತಿಳಿಸಿದರು. ಇಂದಿನ ಮಹಿಳೆ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಸಾಧಿಸುವ ಕಡೆ ಗಮನ ಹರಿಸಬೇಕಾಗಿದೆ. ಮುಖ್ಯವಾಗಿ ಇಂದಿನ ಯುವತಿಯರಲ್ಲಿ ಬುದ್ಧಿವಂತಿಕೆ ಜೊತೆಗೆ ತಾಳ್ಮೆ, ಆತ್ಮವಿಶ್ವಾಸ ಸಾಧಿಸುವ ಛಲ ಕುಟುಂಬದ ಜೊತೆ ಹೊಂದಾಣಿಕೆ, ಸಹಕಾರ, ಸಂಸ್ಕಾರಗಳ ಗುಚ್ಛವಾಗಿ ಮುಂದೆ ಸಾಗಬೇಕು, ಅದರಿಂದ ಪರಿಪೂರ್ಣ ಬದುಕಿನ ಅನಾವರಣವಾಗಲಿದೆ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಹೇಮಂತರಾಜ್ ಕಲ್ಮಿಂಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಾಧನೆಯನ್ನು ಪ್ರಶಂಶಿಸಿದರು.
ಉಪಾಧ್ಯಕ್ಷರಾದ ಡಾ. ಎಂ.ಆರ್ ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳಲ್ಲಿ ನಿಯಮಿತ ಅವಧಿಯಲ್ಲಿ ಸಂಸ್ಥೆಯ ಅಮೋಘ ಸಾಧನೆಗೆ ವಿದ್ಯಾರ್ಥಿನಿಯರು ಕಾರಣರಾಗಿದ್ದಾರೆ. ೯ ವರ್ಷದಲ್ಲಿ ಆರು ಚಿನ್ನದ ಪದಕ, ೨೪ ರ‍್ಯಾಂಕುಗಳನ್ನು ಗಳಿಸಿದ್ದು ಕಲ್ಯಾಣ ಕರ್ನಾಟಕದಲ್ಲಿ ವಿಶಿಷ್ಟ ಸಾಧನೆಗೈದಿದೆ ಎಂದರು.

ಡಾ. ಅಮಿತ್ ಕುಮಾರ್ ರೆಡ್ಡಿಯವರು ಉಪನ್ಯಾಸಕರಿಗೆ ಅವರ ಪರಿಶ್ರಮವನ್ನು ಪ್ರಶಂಶಿಸಿ, ಸನ್ಮಾನ ಕಾರ್ಯಕ್ರಮ ನೆರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ಮಾತನಾಡಿ, ಪ್ರತಿವರ್ಷ ಉನ್ನತ ಸಾಧನೆಗೈದ ವಿದ್ಯಾರ್ಥಿನಿಯರಿಗೆ ಅಭಿನಂದಿಸಿ, ಮುಂದಿನ ಜೀವನ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಪ್ರಾಚಾರ್ಯರಾದ ಬಸಪ್ಪ ಸಿರಿಗೇರಿ ರ‍್ಯಾಂಕ್ ಸಾಧಕಿಯರಾದ ಬಿ.ಕಾಂ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಮತ್ತು ಚಿನ್ನದ ಪದಕ ಪಡೆದ ಜೇಬಾ, ೫ನೇ ರ‍್ಯಾಂಕ್ ಪಡೆದ ಅಕ್ಷತಾ, ೬ನೇ ರ‍್ಯಾಂಕ್ ಪಡೆದ ಜಯಶ್ರೀ, ಅದೇರಿತಿ ಬಿ.ಎ ಪದವಿಯಲ್ಲಿ ಕುಮಾರಿ ಸುಭದ್ರಾ ಇವರು ಐಚ್ಛಿಕ ಕನ್ನಡ ವಿಷಯದಲ್ಲಿ ಚಿನ್ನದ ಪದಕ ಮತ್ತು ೬ನೇ ರ‍್ಯಾಂಕ್, ಕುಮಾರಿ ಉಮಾ ಇವರು ೪ನೇ ರ‍್ಯಾಂಕ್, ಕುಮಾರಿ ಹನುಮಂತಿ ೫ನೇ ರ‍್ಯಾಂಕ್, ಕುಮಾರಿ ಅನಿತಾ ಕೋರಿ ೧೦ನೇ ರ‍್ಯಾಂಕ್ ಗಳಿಸಿದ ಈ ಎಲ್ಲಾ ವಿದ್ಯಾರ್ಥಿನಿಯರಿಗೆ ಸನ್ಮಾನ ಕಾರ್ಯ ನೆರವೇರಿಸಿಕೊಟ್ಟು, ವಿದ್ಯಾರ್ಥಿನಿಯರ ಸಾಧನೆ ಹಾಗೂ ಪಾಲಕರ ಸಹಕಾರ, ಪ್ರಾಧ್ಯಾಪಕರ ಶ್ರಮವನ್ನ ಸ್ಮರಿಸಿದರು.

ಈ ಸಂದರ್ಭದಲ್ಲಿ ಶಂಕರಲಿAಗಪ್ಪ ಕೊಪ್ಪದ್ ರವರು ಮುಖ್ಯ ಅತಿಥಿಗಳಾಗಿ ಹಿತನುಡಿಗಳನ್ನು ನುಡಿದರು. ವಿಶೇಷವಾಗಿ ಈ ಸಾಧನೆಯನ್ನು ಇತಿಹಾಸ ಪ್ರಾಧ್ಯಾಪಕರಾದ ದಿವಂಗತ ಪಂಡರಿನಾಥ್ ಅಗ್ನಿಹೋತ್ರಿ ಅವರಿಗೆ ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪಂಪಾಪತಿ, ಪವಿತ್ರ ಬಸವರಾಜ್ ಹಾಗೂ ಎಲ್ಲಾ ಪ್ರಾಧ್ಯಾಪಕ ವೃಂದದವರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಉಪನ್ಯಾಸಕರು ಶಿವಶರಣರವರು ನಿರೂಪಿಸಿದರೆ, ಶ್ರೀಮತಿ ಆಶಾ ಸ್ವಾಗತಿಸಿ, ಅಧ್ಯಾಪಕರಾದ ಚನ್ನಬಸವ ವಂದಿಸಿದರು.

ವಿಲಕ್ಷಣ ನಗೆಯ ಶುಕುನಿ ಪಾತ್ರದಾರಿ ಡಿ.ವಿ.ನಾಗಮೋಹನ್

ಪೌರಾಣಿಕ ನಾಟಕ ಕುರುಕ್ಷೇತ್ರದಲ್ಲಿ ಬರುವ ಒಂದು ವಿಲಕ್ಷಣ ಪಾತ್ರ ಶಕುನಿ. ಈ ನಾಟಕದಲ್ಲಿ ಎಲ್ಲಾ ಪಾತ್ರಗಳಿಗೂ ರಂಗಗೀತೆಗಳನ್ನು ಅಳವಡಿಸಿ ರಂಗ ನಿರ್ದೇಶಕರು ಪಾತ್ರಗಳನ್ನು, ಪಾತ್ರದಾರಿ ಹೊಸಬರಾಗಿದ್ದರೂ ಹೇಗೋ ಸರಿದೂಗಿಸಿ ಹಾಡಿನ ಮರೆಯಲ್ಲಿ ಗೆರೆ ದಾಟಿಸಿಬಿಡುತ್ತಾರೆ. ಆದರೆ ಶಕುನಿ ಪಾತ್ರಕ್ಕೆ ವಿಶಿಷ್ಟತೆ ಇದೆ. ಹಾಡು ಅಷ್ಟಿಲ್ಲ. ಆದರೆ ಈ ಪಾತ್ರಕ್ಕೆ ಅಭಿನಯವೇ ಪ್ರಧಾನ. ಅಂತೆಯೇ ಮಾತು, ತಂತ್ರ, ಕುತಂತ್ರ ಹೆಣೆಯುತ್ತಲೇ ಶತ್ರು ದುರ್ಯೋಧನನ ಜೊತೆಗಿದ್ದೆ ಬೆನ್ನಿಗೆ ಗುನ್ನಾ ಇಡುವ ವಿಲನ್ ಕ್ಯಾರಕ್ಟರ್. ತನ್ನ ಸಹೋದರರ ಸಾವಿಗೆ ಕಾರಣನಾದ ಪ್ರಬಲ ದೊರೆಗೆ ಜೊತೆಗಿದ್ದೆ ಮಕಾಡೆ ಮಲಗಿಸುವ ಚಾಣಾಕ್ಷ ನಡೆ, ಕುಹಕ ಮಾತು, ಸೇಡಿನ ಜ್ಞಾಲೆ ಒಡಲಲ್ಲಿ ಇದ್ದರೂ ಬೂದಿ ಮುಚ್ಚಿದ ಕೆಂಡವಾಗಿ ನಗುವ ನಟನೆ, ಬೆನ್ನ ಹಿಂದಿನ ವ್ಯಂಗ್ಯ ನಗೆ, ಸೇಡಿನ ಜ್ವಾಲೆಯ ವಿಕಟ ನಗೆ, ಮಾತಿನ ಮೋಡಿಯ ಕಪಟಿ ಅಭಿನಯ ಇವೆಲ್ಲವೂ ಈ ಪಾತ್ರದಲ್ಲಿ ಅಡಕವಾಗಿದೆ. ಹೀಗಾಗಿ ಎ೦ಟು ಗಂಟೆಯ ನಾಟಕದಲ್ಲಿ ಈ ಪಾತ್ರವೂ ವೈಶಿಷ್ಟಪೂರ್ಣವಾಗಿ ತನ್ನದೇ ಸ್ಥಾನಮಾನ ಹೊಂದಿದೆ. ಇಂತಹ ಒಂದು ಪಾತ್ರವನ್ನು ನಿವ೯ಹಿಸುವಲ್ಲಿ ತಮ್ಮದೇ ಶ್ರಮದಿಂದ ತಕ್ಕಮಟ್ಟಿಗೆ ಯಶಸ್ಸು ಕಂಡವರು ನಾಗಮೋಹನ್. ಶಕುನಿಯಾಗಿ 40 ಬಾರಿ ನಟಿಸಿರುವರು ಈ ಪಾತ್ರಕ್ಕೆ ಆನಂದ ಮಹಾದಾನಂದ ಪ್ರಿಯ ಶಕುನಿಗೆ ಮಹಾದನಂದ.. ಎಂಬ ಸಂದರ್ಭೋಚಿತ ರಂಗಗೀತೆಯನ್ನು ರಚಿಸಿ ಅಳವಡಿಸಿದವರು ತುಮಕೂರು ಕಡೆಯ ರಂಗ ನಿರ್ದೇಶಕರು. ನಿಜಕ್ಕೂ ಈ ಹಾಡು ಈ ಪಾತ್ರಕ್ಕೆ ಜೀವ ಕಳೆ ತುಂಬಿದೆ.

ಇರಲಿ ಈ ಮೋಹನ ಇವತ್ತಿನ ಕಲಾವಿದರಲ್ಲ, ಇವರನ್ನು ಹತ್ತಾರು ವರ್ಷಗಳಿಂದ ಬಲ್ಲೆನಾದರೊ, ಇವರ ರಂಗ ಚಟುವಟಿಕೆ ಗಮನಿಸಿದ್ದೇನೆ ಆದರೂ ಯಾಕೋ ಈ ಮೋಹನ ನನ್ನ ಬರಹಕ್ಕೆ ಸಿಕ್ಕದೆ ಮೋಹಿನಿ ಆಟ ಆಡುತ್ತಾ ತಪ್ಪಿಸಿಕೊಂಡು ಬ೦ದಿದ್ದರು. ಬೆಂಗಳೂರಿನ ನಾಗರಬಾವಿಯಲ್ಲಿದ್ದೆ. ಬಿಟ್ಟಗೌಡನಹಳ್ಳಿ ರಮೇಶ್ ಗೌಡರು ತಮ್ಮಳ್ಳಿಯಲ್ಲಿ ಮನೆಯ ಮಂದೆಯೇ ಸೀನರಿ ಹಾಕಿಸಿ ನಾಟಕ ಮಾಡಿಸುತ್ತಿದ್ದರು. ಇಲ್ಲಿಂದಲೇ ಮಾತನಾಡಿಸಿ ಅವರ ರ೦ ಸೇವೆ ಕುರಿತಾಗಿ ಬರೆದಿದ್ದೆ. ರಂಗಭೂಮಿ ನಶಿಸುತ್ತಿರುವ ಇಂದಿನ ದಿನಗಳಲ್ಲಿ ರಂಗಭೂಮಿಯನ್ನು ಪೋಷಿಸುವ ಕಲಾವಿದರು ಬೇಕು. ಈ ದಿಶೆಯಲ್ಲಿ ಮೋಹನ್ ರವರದು ಗಮನಾರ್ಹ ಪಾತ್ರವಿದೆ. ಈ ಪಾತ್ರದಾರಿಯನ್ನು ಫೋನ್‌ನಲ್ಲಿ ಮಾತನಾಡಿಸಿದೆ.

ಮೋಹನ್, ನಾನು ಈವರೆವಿಗೂ ನೂರಾರು ಕಲಾವಿದರ ಕುರಿತಾಗಿ ಬರೆದಿರುವೆನಷ್ಟೇ. ಇದು ನಿಮಗೂ ಗೊತ್ತು. ಆದರೂ ನೀವೇಕೆ ನನ್ನ ಬರಹಕ್ಕೆ ಸಿಗುತ್ತಿಲ್ಲ. “ಸರಿ ಸಾರ್, ಇವತ್ತು ಶನಿವಾರ. ನನಗೆ ಯಾವುದೇ ಪಂಕ್ಷನ್ ಇಲ್ಲ.
(ಇವರು ಅಡಿಗೆ ಕಂಟ್ರಾಕ್ಸರ್. ಅಡಿಗೆ ಮಾಡಿ ಬಡಿಸುವ ಬಾಣಸಿಗ. ಎಷ್ಟೋ ನಾಟಕ ಕಾರ್ಯಕ್ರಮಗಳಿಗೆ ಅನ್ನದಾನ ಮಾಡಿದ ಪುಣ್ಯಾತ್ಮ) ಬನ್ನಿ ಸಾರ್ ಮಾತನಾಡೋಣ ಎಂದರು. ಇಲ್ಲಾ ನಾನು ಬೆಂಗಳೂರಿನಲ್ಲಿದ್ದೇನೆ. ಸಮಯ ವ್ಯರ್ಥ ಮಾಡದೇ ನಮ್ಮ ರಂಗ ಸೇವೆ ಕುರಿತಾಗಿ ಮಾಹಿತಿ ಹೇಳಿ ಎಂದೆ. “ಸರಿ, ಬರಕ್ಕೂಳ್ಳಿ ಎಂದರು. ನನ್ನ ಹೆಸರು ಡಿ.ವಿ. ನಾಗಮೋಹನ್. ತಂದೆ ಹೆಸರು ಡಿ.ಕೆ. ವಿಶ್ವೇಶ್ವರಯ್ಯ. ತಾಯಿ ಸರೋಜಮ್ಮ. ನಮ್ಮ ಊರು ದಿಂಡಗೂರು. ಚನ್ನರಾಯಪಟ್ಟಣ ತಾಲೂಕಿನ ಗ್ರಾಮ. ನಾನು 18 ವರ್ಷದ ಬಾಲಕನಾಗಿದ್ದಾಗಲೇ ರಂಗಭೂಮಿ ಪ್ರವೇಶ ಮಾಡಿದೆ. ಮೊದಲನೇ ಪಾತ್ರ ಉತ್ತರೆ. 2ನೇ ಯದು ರುಕ್ಮಿಣಿ, ನಂತರ ನಾಗರಾಣಿ..ಹೀಗೆ ಆರಂಭದಲ್ಲಿ ಸ್ತ್ರೀ ಪಾತ್ರವೇ ಸಿಕ್ಕವು. ನಾಚಿಕೊಳ್ಳದೇ ಪಕ್ಕ ನಿಭಾಯಿಸಿದೆ. ಆ ನಂತರ ಶಕುನಿ, ದುರ್ಯೋಧನ, ಭೀಮ, ದುಶ್ಯಾಸನ, ಅರ್ಜುನ ಇನ್ನೂ ಅನೇಕ ಕುರುಕ್ಷೇತ್ರ ನಾಟಕದ ಪಾತ್ರಗಳನ್ನೆಲ್ಲ ಮಾಡಿದೆ. ಸುಮಾರು ನೂರಕ್ಕಿಂತಲೂ ಹೆಚ್ಚು ಬಾರಿ ಅಭಿನಯಿಸಿರುತ್ತೇನೆ. ಕಲಾರಂಗದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಅನೇಕ ಸಂಘ ಸಂಸ್ಥೆಗಳಿಗೆ ಮಾರ್ಗದರ್ಶಕನಾಗಿದ್ದೇನೆ. ಹಾಸನ ಜಿಲ್ಲಾ ಕಲಾವಿದರ ಹಿತ ರಕ್ಷಣಾ ಸಮಿತಿ ಕಾರ್ಯಧ್ಯಕ್ಷನಾಗಿ, ಅನ್ನಪೂರ್ಣೇಶ್ವರಿ ಕಲಾ ಸಂಘದ ಅಧ್ಯಕ್ಷನಾಗಿದ್ದೇನೆ. ಕರ್ನಾಟಕ ರಕ್ಷಣಾ ವೇದಿಕೆಯ ಸಾಂಸ್ಕೃತಿಕ ಘಟಕದ ಅಧ್ಯಕ್ಷ. ಇನ್ನೂ ಅನೇಕ ಸಂಘ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಸಮಾಜ ಸೇವೆಯಲ್ಲಿ ಕ್ರಿಯಾಶೀಲನು.

ಹೌದು, ಮೋಹನ್ ಹಾಸನದ ಪೌರಾಣಿಕ ಮತ್ತು ಸಾಮಾಜಿಕ ನಾಟಕಗಳಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಾ ಬಂದಿದ್ದಾರೆ. ಹಾಸನದ ಕಲಾಭವನದಲ್ಲಿ ಕೇವಲ ಕುರುಕ್ಷೇತ್ರ ರಾಮಾಯಣ ನಾಟಕಗಳೇ ಪ್ರಧಾನವಾಗಿ ಪ್ರದರ್ಶಿತವಾಗುತ್ತಿರುವಲ್ಲಿ ಬೇರೆ ಬೇರೆ ಪೌರಾಣಿಕ ನಾಟಕಗಳನ್ನು ರಂಗದ ಮೇಲೆ ತರುವಲ್ಲಿ ಚಿಂತಿಸಿ ಪ್ರಯತ್ನಿಸಿದ್ದಾರೆ. ರತಿ ಕಲ್ಯಾಣ, ಕೌಂಡಿಲಕನ ವಧೆ, ರಾಜಾಸುಯಾಗ, ಭಕ್ತ ಪ್ರಹ್ಲಾದ, ಭಕ್ತ ಮಾಂಧಾತ, ಸತ್ಯಮಾರ್ತಿ, ತ್ರಿಜನ್ಮ ಮೋಕ್ಷ, ಮೂರೂವರೆ ವಜ್ರ, ವೀರ ಅಭಿಮನ್ಯು ಹೀಗೆ ಪೌರಾಣಿಕ ನಾಟಕಗಳನ್ನು ಅಡಿಸಿದ್ದಾರೆ. ರತ್ನ ಮಾಂಗಲ್ಯ ಸಾಮಾಜಿಕ ನಾಟಕದ ಹಾಸ್ಯ ಪಾತ್ರದ ಅಭಿನಯದಲ್ಲಿ ಗಮನ ಸೆಳೆದಿದ್ದಾರೆ.. ಗೌಡ್ರು ಗದ್ಲ ನಾಟಕದಲ್ಲಿ ಮತ್ತು ಮೊನ್ನೆ ಸತಿ ಸಂಸಾರದ ಜ್ಯೋತಿ ಸಾಮಾಜಿಕ ನಾಟಕದಲ್ಲಿ ನಟಿಸಿದ್ದಾರೆ. ಕೃಷ್ಣ-5 ಬಾರಿ, ದುರ್ಯೋಧನ -2 ಬಾರಿ ಅಷ್ಟೇ ಅಲ್ಲಾ ಹತ್ತಾರು ನಾಟಕಗಳಲ್ಲಿ ಬಹುಮುಖಿ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ..ಹಾಸನದ ಕಲಾಭವನದಲ್ಲಿ ಐದು ಹತ್ತು ದಿನಗಳ ಪೌರಾಣಿಕ ನಾಟಕೋತ್ಸವ ಸಂಘಟಿಸಿದ್ದಾರೆ. ಅಂದ್ದಾಗೆ ಅನಂತರಾಜು ಮತ್ತೆ ಜುಲೈ ತಿಂಗಳಲ್ಲಿ ಐದು ದಿನಗಳ ಪೌರಾಣಿಕ ನಾಟಕೋತ್ಸವ ಆಯೋಜಿಸುತ್ತಿದ್ದೇನೆ ಎಂದರು. ಮೋಹನ್, ನಿಮ್ಮಂತಹ ರಂಗ ಸಂಘಟಕರು ಜಿಲ್ಲಾ ರಂಗಭೂಮಿಗೆ ಅವಶ್ಯ ಇದೆ. ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ ಶುಭಾಶಯಗಳು ಎ೦ದೆ.

ಗೊರೂರು ಅನಂತರಾಜು,
ಹಾಸನ
9449462879