ಹನಿಗವನಗಳ ರಸಪಾಕ ಹಾಸ್ಯ ಸವಿ

ಇತ್ತೀಚಿಗೆ ಹನಿಗವಿಗಳ ಮತ್ತು ಹನಿಗವಿತೆಗಳ ಬೆಳೆ ಹುಲುಸಾಗಿದೆ. ಇದಕ್ಕೆ ಸಮೂಹ ಮಾಧ್ಯಮಗಳ ಕಾಣಿಕೆ ಅಪಾರ. ಒಂದು ಅಂಶ ಗಮನಿಸಬೇಕು. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯವಲ್ಲ ಮತ್ತು ಸಮೂಹ ಮಾಧ್ಯಮ ಕೇವಲ ಸಾಹಿತ್ಯಕ್ಕಾಗಿ ಇರುವುದಿಲ್ಲ. ಅದರ ಮುಖ್ಯ ಗುರಿ ಮಾಹಿತಿ ಒದಗಣಿ, ಶಿಕ್ಷಣ ಪ್ರಸಾರ ಮತ್ತು ಮನರಂಜನೆ. ಸಾಹಿತ್ಯ ಅದರ ಒಂದು ಉಪ ಭಾಗ ಮಾತ್ರ. ಸಮೂಹ ಮಾಧ್ಯಮದಲ್ಲಿ ಬರುವುದೆಲ್ಲ ಸಾಹಿತ್ಯ ಎಂದು ಭಾವಿಸುತ್ತ ಅದರ ಅವಶ್ಯಕತೆಗಳನ್ನು ಪೂರೈಸಲು ಧಾವಂತಪಟ್ಟರೆ ಖಂಡಿತವಾಗಿ ಸಾಹಿತ್ಯದ ಉದ್ಧಾರವಾಗುವುದಿಲ್ಲ. ಹಾಗಾಗಿ ಇವತ್ತು ಬರವಣಿಗೆ ಎಂದರೆ ತೀರ ಸರಳ ಮತ್ತು ಸುಲಭ ಎಂದು ಭಾವಿಸಿಕೊಂಡAತೆ ಕಾಣುತ್ತದೆ.

ಹುಲುಸು ಬೆಳೆಯೇನೋ ಇದೆ. ಆದರೆ ಕಳೆ ಅಧಿಕ ಪ್ರಮಾಣದಲ್ಲಿದೆ ಎಂಬುದು ಹನಿಗವಿತೆಗಳ ಪ್ರಕಾರಕ್ಕೆ ಒಪ್ಪುವ ಮಾತು. ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳ ಪೂರೈಕೆ ಕಡಿಮೆಯಾಗಿರುವುದರಿಂದ ಯಾವುದೇ ಗದ್ಯ ಸಾಲನ್ನು ಹನಿಗವಿತೆಯಂತೆ ತುಂಡರಿಸಿ ಬರೆದು ಕಳಿಸಿದರೆ ಅಚ್ಚಾಗುತ್ತದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಇವತ್ತಿನ ಬಹುತೇಕ ಹನಿಗವಿತೆಗಳು ನೀರಸವಾದ ಹೇಳಿಕೆ ಅಥವಾ ಶೀರ್ಷಿಕೆಯ ವಿಸ್ತರಣೆಯಂತೆ ಕಾಣುತ್ತದೆ. ಇದು ನಿರಾಶಾದಾಯಕವಾದ ವಿಷಯ.

ಹನಿಗವಿಗಳ ಸಂಖೈ ಐನೂರನ್ನು ಮೀರುತ್ತದೆ ಎಂದು ಮೂರು ದಶಕಗಳ ಹಿಂದೆ ಮುಕ್ತಕ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದ ವಿದ್ವಾಂಸರೊಬ್ಬರು ಸೂಚಿಸಿದ್ದಾರೆ. ಅಂದರೆ ಈಗ ಹನಿಗವಿಗಳ ಸಂಖ್ಯೆ ಸಾವಿರ ಎರಡು ಸಾವಿರ ಮೂರು ಸಾವಿರವೇ ದಾಟಿರಬೇಕು. ಚುಟುಕು ಸಾಹಿತ್ಯ ಪರಿಷತ್ತು ಜನ್ಮ ತಾಳಿರುವುದೇ ಅಲ್ಲದೆ ಜಿಲ್ಲೆ, ತಾಲ್ಲೂಕು, ಹೋಬಳಿ ಘಟಕಗಳಾಗಿ ಟಿಸಿಲೊಡೆದು ಬೆಳೆಯುತ್ತಿದೆ. ಇದೊಂದು ಶುಭಸೂಚನೆ. ಚುಟುಕ ಬರೆಯುವವರಿಗೆ ಮಾರ್ಗದರ್ಶನವೂ ಮಾದರಿಯೂ ಒದಗಿ ಬರಬಹುದು.

ಹನಿಗವಿತೆ ಬರೆಯುವವರಿಗೆ ಹಾಸ್ಯ ಪ್ರವೃತ್ತಿಯ ಜೊತೆಗೆ ಒಂದು ವಿಚಿಕಿತ್ಸಕ ದೃಷ್ಟಿಕೋನ ಇರಬೇಕು. ವಿಷವಾಗದ ಮೊನೆಯಲ್ಲಿ ಲೇವಡಿಯೂ ಮಿಳಿತವಾಗಿರಬೇಕು. ಗೊರೂರು ಅನಂತರಾಜು ಅವರ ಹಾಸ್ಯ ಸವಿ ಹನಿಗವಿತೆಗಳ ಸಂಕಲನದಲ್ಲಿ ಶೀರ್ಷಿಕೆಯೇ ಹೇಳುವ ಹಾಗೆ ಹಾಸ್ಯಕ್ಕೆ ಹೆಚ್ಚಿನ ಪ್ರಾಧಾನ್ಯ ಸಿಕ್ಕಿದೆ. ಹಾಸ್ಯವು ಒಂದು ಪ್ರಮುಖ ರಸ ಮತ್ತು ಈ ಅವಸರದ ಯಂತ್ರ ಯುಗದಲ್ಲಿ ಜನರಿಂದ ಮಾಯವಾಗುತ್ತಿರುವ ಪ್ರವೃತ್ತಿಗಳಲ್ಲೊಂದು. ಹಾಸ್ಯಕ್ಕೆ ಹೆಚ್ಚಿನ ಒತ್ತುಕೊಟ್ಟು ನಗುವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಸುಗಮವಾದೀತು. ಗೊರೂರರು (ರಾಮಸ್ವಾಮಿ ಅಯ್ಯಂಗಾರ್) ಹುಟ್ಟಿದ ಊರಿನಲ್ಲೇ ಹಾಸ್ಯಕ್ಕೆ ಮಣೆ ಹಾಕಿದ ಇನ್ನೊಬ್ಬ ಗೊರೂರು (ಅನಂತರಾಜು) ಬೆಳಕಿಗೆ ಬಂದು ಪ್ರಕಾಶಿಸುತ್ತಿರುವುದು ಸಂತೋಷದ ಸಂಗತಿ. ಹಾಸ್ಯ, ವಿಡಂಬನೆ, ಕಟಕಿ, ಚಾಟು, ವಿನೋದ, ಕಾಕು, ವ್ಯಂಗ್ಯ, ಮಿಂಚಿಕೆ ಮೊದಲಾದವುಗಳು ಪ್ರಮುಖ ಲಕ್ಷಣವಾಗುಳ್ಳ ಹನಿಗವನಗಳು ಓದುಗನಿಗೆ ಶಾಕ್ ನೀಡುತ್ತವೆ.! ಗುಂಡು ಸೂಜಿಯಂತೆ ಚುಚ್ಚುತ್ತವೆ. ಅಂತಹ ಕೆಲವು ಹನಿಗವನಗಳನ್ನು ಇಲ್ಲಿ ನೋಡಬಹುದು.
ಹೆಣ ಹೊರುವುದಕ್ಕೆ ನಾಲ್ಕು ಜನ ಬೇಕು
ಹಣ ಹೊಡೆಯುವುದಕ್ಕೆ ಎಷ್ಟು ಜನ ಬೇಕು.?

ಎಂದು ಕೇಳುವಾಗಿನ ಕಟುವಾಸ್ತವ ಎದೆ ತಟ್ಟುತ್ತದೆ. ಹಾಗೆಯೇ

ಬೇಡ ಸಾರ್ ಡೌರಿ
ಮಗಳಿಗಿದ್ದರೆ ಸಾಕು ನೌಕರಿ

ಎಂದಾಗ ಮತ್ತು

ನಮ್ಮೂರ ಗೌರಿಯ ಮದುವೆ
ನಡೆದದ್ದು ಡೌರಿ ಕೊಟ್ಟ ಮೇಲೆ
ಎಂಬಲ್ಲಿನ ಬದಲಾಗಿರುವ ಸಾಮಾಜಿಕ ಸ್ಥಿತಿಗತಿಯ ಚಿತ್ರಣ ಬೆಚ್ಚಿ ಬೀಳುವಂತೆ ಮಾಡುತ್ತದೆ.
ಪ್ರೇಮ ಪತ್ರವನ್ನು
ಸಂಪಾದಕರ ಮಗಳಿಗೆ
ಕಳಿಸಿದರೆ
ಅಲ್ಲಿಂದಲೂ ಬರಬೇಕೆ
ವಿಷಾದ ಪತ್ರ
ಎಂಬಲ್ಲಿನ ತೆಳು ಹಾಸ್ಯದ ಲೇಪ ಮುಗಳ್ನಗು ಬರಿಸುತ್ತದೆ.

ಗೊರೂರು ಅನಂತರಾಜು ಸಮಾಜವನ್ನು ಚೆನ್ನಾಗಿ ನಿರುಕಿಸಿ ನೋಡಬಲ್ಲ ಸಾಮರ್ಥ್ಯವುಳ್ಳ ಮನುಷ್ಯ. ಇಂತಹ ಹನಿಗಳಲ್ಲಿ ಅವರು ವಿರಮಿಸಬಾರದು. ಕಾವ್ಯೋದ್ಯಮದಲ್ಲಿ ಮುಂದೆ ಸಾಗಿ ಸಾರವತ್ತಾದ ಅರ್ಥವಂತಿಕೆಯನ್ನು ಹಿಡಿಯುವಂತಾಗಲಿ ಎಂದು ಕಾವ್ಯ ಪ್ರೇಮಿಗಳೆಲ್ಲ ಬಯಸಬೇಕಾಗಿದೆ. ಅಂತಹ ಯಶಸ್ಸು ಅವರಿಗೆ ಪ್ರಾಪ್ತವಾಗಲಿ.

ವಸಂತಕುಮಾರ್ ಪೆರ್ಲ

ಶಿವಮೊಗ್ಗದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮ

ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ, ಈ ಸಂಘವು ರಾಜ್ಯದ ೩೦ ಜಿಲ್ಲೆಗಳಲ್ಲಿ ಜಿಲ್ಲಾ ಘಟಕ ಸ್ಥಾಪನೆ ಮಾಡಿದ್ದು ಜಿಲ್ಲಾ ಅಧ್ಯಕ್ಷರ ನೇಮಕ ಮಾಡಲಾಗಿದೆ. ಪ್ರತಿ ವರ್ಷ ಕನ್ನಡ ನುಡಿ ವೈಭವ ಕಾರ್ಯಕ್ರಮ ಜೊತೆಗೆ ಹಲವಾರು ವಿಶೇಷ ವಿನೂತನ ಕಾರ್ಯಕ್ರಮ ಆಯೋಜನೆ ಮಾಡುತ್ತಾ ಕನ್ನಡ ನಾಡು ನುಡಿ ಸೇವೆ ಮಾಡುತ್ತಾ ಬಂದಿದೆ. ಅಂತೆಯೇ ಮಾರ್ಚ್ ೧೬ ರಂದು ಭಾನುವಾರ ಮುಂಜಾನೆ ೧೦.೦೦‌ ಗಂಟೆಗೆ ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ರಾಷ್ಟ್ರಮಟ್ಟದ ಕನ್ನಡ ನುಡಿ ವೈಭವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ, ಗಾಯನ ಕ್ಷೇತ್ರದಲ್ಲಿ ಹಾಗೂ ಸೇವಾ ಕ್ಷೇತ್ರದಲ್ಲಿ ಮತ್ತು ಕಾವ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ರಾಷ್ಟ್ರಮಟ್ಟದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ. ಸುಮಾರು ಎರಡು ನೂರು ಜನಗಳಿಗೆ ಸನ್ಮಾನ ನಡೆಸುವ ಕಾರ್ಯಕ್ರಮ ಹಾಗೂ ಐದು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ಇರುತ್ತದೆ.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿವಮೊಗ್ಗದ ಹಿರಿಯ ಸಾಹಿತಿಗಳಾದ ಡಾ. ಹಸೀನರವರು ನೆರವೇರಿಸಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷರಾದ ರಾಮು ಎನ್ ರಾಥೋಡ್ ವಹಿಸಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರಾದ ಚಂದ್ರಶೇಖರ್ ಹಡಪದರವರು ಹಾಗೂ ಕೃತಿ ಲೋಕಾರ್ಪಣೆಯನ್ನು ಬರಹಗಾರರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಮಧು ನಾಯ್ಕ ಲಂಬಾಣಿ ರವರು ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಘದ ಗೌರವ ಅಧ್ಯಕ್ಷರಾದ ಸಾಹಿತಿ ಗೊರೂರು ಅನಂತರಾಜು ಹಾಗೂ ಗೋಪಾಲ ನಾಯಕ್ ವಾಯ್ಸ್ ಆಫ್ ಬಂಜಾರ ಇವರು ವಹಿಸಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಸುಮಾರು 35 ಜನ ಗಾಯಕರಿಂದ ನಾಡಗೀತೆ ಹಾಗೂ ರೈತ ಗೀತೆ ನೆರವೇರಿಸಲಾಗುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶಿವಮೊಗ್ಗ ಘಟಕದಿಂದ ಪ್ರಾಯೋಜಿತ ಕಾರ್ಯಕ್ರಮಗಳು ಜರುಗುತ್ತವೆ.

ವಿದ್ಯಾರ್ಥಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸಿದ್ದರಾಮಸ್ವಾಮಿ

ಗಂಗಾವತಿ: ತಾಲೂಕಿನ ಎಂ.ಎಸ್.ಎಂ.ಎಸ್ ಮಹಾವಿದ್ಯಾಲಯದಲ್ಲಿ ಶಿಕ್ಷಣಪ್ರೇಮಿ, ಹಿರಿಯ ರಾಜಕಾರಣಿ ಹೆಚ್.ಎಂ. ಸಿದ್ದರಾಮಸ್ವಾಮಿ ತಮ್ಮ ೭೦ನೇ ವರ್ಷದ ಹುಟ್ಟು ಹಬ್ಬವನ್ನು ತಮ್ಮದೇ ಪ್ರೌಢಶಾಲೆ ಮತ್ತು ಕಾನೂನು ಪದವಿ ಕಾಲೇಜು, ಡಿಗ್ರಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸರಳವಾಗಿ ಮತ್ತು ಸಂಭ್ರಮದೊಂದಿಗೆ ಆಚರಿಸಿಕೊಂಡರು.

ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಶಿಕ್ಷಕ, ಶಿಕ್ಷಕಿಯರು, ಉಪನ್ಯಾಸಕರು, ಪ್ರಾಂಶುಪಾಲರು, ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸಿದ್ದರಾಮಸ್ವಾಮಿಯವರ ಬಗ್ಗೆ ಸರಳವಾಗಿ ಮತ್ತು ಅರ್ಥಗರ್ಭಿತವಾಗಿ ಅವರು ನಡೆದುಕೊಳ್ಳುವ ರೀತಿ-ನೀತಿಗಳ ಬಗ್ಗೆ ಕೊಂಡಾಡಿದರು.
ಸಿದ್ದರಾಮ ಸ್ವಾಮಿಯವರು ಈ ಮಟ್ಟಕ್ಕೆ ಬೆಳೆಯಬೇಕೆಂದರೆ ಹಲವಾರು ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿನಿಂತು ಸಾಧನೆಯನ್ನು ಮಾಡಿದ್ದಾರೆ. ಇದು ಹಾಗೆ ಸುಮ್ಮನೆ ಒಲಿಯುವಂತದ್ದು ಅಲ್ಲ, ಇದರ ಹಿಂದೆ ಸ್ವಾಮಿಯವರ ಅಪಾರ ಶ್ರಮವಿದೆ ಎಂದು ಶಿಕ್ಷಕ ವರ್ಗ ತಮ್ಮ ಅನಿಸಿಕೆಯನ್ನು ಹೇಳಿದರು.
ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ಮತ್ತು ಅದನ್ನು ಮುನ್ನಡೆಸುವುದು ಅಷ್ಟೊಂದು ಸುಲಭದ ವಿಷಯವಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ಕೆಲಸ ನಿರ್ವಹಿಸುವ ಉಪನ್ಯಾಸಕರು ಸಿದ್ದರಾಮಸ್ವಾಮಿಯವರ ಬಗ್ಗೆ ಮಾತನಾಡುತ್ತಾ ನಮ್ಮಲ್ಲಿರುವ ಎಲ್ಲ ಶಿಕ್ಷಕ ವೃಂದವನ್ನು ಅವರು ಯಾವತ್ತೂ ಕೆಲಸಗಾರರು, ದುಡಿಯುವವರು ಎಂದು ಭೇದ ಭಾವವಿಲ್ಲದೆ ತಮ್ಮ ಕುಟುಂಬ ಸದಸ್ಯರೆಂಬಂತೆ ನಮ್ಮನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಎಂದು ಗುಣಗಾನ ಮಾಡಿದರು. ಸರಳ ಮತ್ತು ಸಜ್ಜನಿಕೆ ವ್ಯಕ್ತಿಯಾಗಿರುವ ಸಿದ್ದರಾಮಸ್ವಾಮಿ ಅವರು ಇನ್ನೂ ನೂರು ವರ್ಷ ಬಾಳಿ ಬದುಕಲಿ ಎಂದು ಎಲ್ಲರೂ ಶುಭ ಹಾರೈಸಿದರು.

ಸಿದ್ದರಾಮಸ್ವಾಮಿಯವರ ಹುಟ್ಟು ಹಬ್ಬದ ಸವಿ ನೆನಪಿಗಾಗಿ ಕಾಲೇಜ್ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಹಲವಾರು ಸ್ಪೋರ್ಟ್ಸ್ ಗಳನ್ನು ನಡೆಸಿದರು. ಪ್ರಥಮ, ದ್ವಿತೀಯ, ತೃತೀಯ ಎಂಬAತೆ ವಿಜೇತರಿಗೆ ಬಹುಮಾನವನ್ನು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಪಾರ್ವತಮ್ಮ, ಕಾಲೇಜ್ ಆಡಳಿತ ಅಧಿಕಾರಿಗಳಾದ ಬಸವರಾಜಸ್ವಾಮಿ, ವಿರೂಪಾಕ್ಷಯ್ಯ ಸ್ವಾಮಿ, ಪ್ರಾಂಶುಪಾಲರು, ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕ ವರ್ಗ, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಅವರಿಗೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಂದ ಸನ್ಮಾನ

ಗಂಗಾವತಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ವಿಶೇಷ ಪ್ರಶಸ್ತಿಗೆ ಗಂಗಾವತಿಯ ಹಿರಿಯ ಪತ್ರಕರ್ತ ವೀರಾಪುರ ಕೃಷ್ಣ ಅವರು ಭಾಜನರಾಗಿರುವುದು ತುಂಬಾ ಸಂತಸದ ವಿಷಯ ಎಂದು ತಿಳಿಸಿ ಇವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಗೌರವಯುತವಾಗಿ ಇಂದು ಸನ್ಮಾನಿಸಿದರು.

ವೀರಾಪುರ ಕೃಷ್ಣ ಅವರು ಒಬ್ಬ ಪತ್ರಕರ್ತರಾಗಿ ಸಮಾಜದಲ್ಲಿ ನಡೆಯುವ ಶೋಷಣೆಗಳ ಕುರಿತಾಗಿ, ದೌರ್ಜನ್ಯಗಳ ಕುರಿತಾಗಿ ವರದಿ ಮಾಡುವ ಮೂಲಕ ಹಾಗೂ ತಮ್ಮನ್ನು ತಾವು ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದಕ್ಕೆ ಈ ಪ್ರಶಸ್ತಿ ಅವರಿಗೆ ಲಭಿಸಿರುವುದು ಸ್ತುತ್ಯಾರ್ಹವಾಗಿದೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಕರ್ನಾಟಕ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಳ್ಳಾರಿ ರಾಮಣ್ಣ ನಾಯಕ, ವೀರ ಕನ್ನಡಿಗರ ಕರವೇ ಸಂಸ್ಥಾಪಕ ರಾಜ್ಯಧ್ಯಕ್ಷ ಅರ್ಜುನ್ ನಾಯಕ, ಧೀರ ಕನ್ನಡಿಗರ ಕರವೇ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿರುಪಾಕ್ಷಿಗೌಡ ನಾಯಕ, ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಜನಹಿತ ಕರವೇ ರಾಜ್ಯಾಧ್ಯಕ್ಷ ರಮೇಶ ಕೋಟಿ, ಕನ್ನಡ ಒಕ್ಕೂಟ ಕರ್ನಾಟಕ ರಾಜ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಪೀರ ಮಹಮ್ಮದ್, ಕರವೇ ನಾರಾಯಣಗೌಡರ ಬಣ ತಾಲೂಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕನ್ನಡ ಯುವಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಡಿ ಅಲಿ, ಕಿಷ್ಕಿಂದ ಕಲ್ಯಾಣ ಕರವೇ ರಾಜ್ಯಾಧ್ಯಕ್ಷ ದೇವಣ್ಣ ಸಂಗಾಪುರ, ಸಮಗ್ರ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಬಾಬುಗೌಡ, ಕಲ್ಯಾಣ ಕರ್ನಾಟಕ ಯುವಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಶಫಿ ಬಿಸ್ತಿ, ಕರವೇ ಶಿವರಾಮಗೌಡರ ಬಣದ ತಾಲೂಕ ಅಧ್ಯಕ್ಷ ಯಮನೂರ ಭಟ್, ಶಿವರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಖಾದರ ಭಾಷಾ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ, ಡಿ.ಎಸ್.ಸ್. ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ ಬರಗೂರು ಸೇರಿದಂತೆ ಮತ್ತಿತರರು ಇದ್ದರು.

ಕೊಪ್ಪಳ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಲಿಂಗಾರೆಡ್ಡಿ ಆಲೂರುರವರಿಗೆ ಕನ್ನಡಪರ ಹಾಗೂ ವಿವಿಧ ಸಂಘಟನೆಗಳಿಂದ ಸನ್ಮಾನ

ಗಂಗಾವತಿ: ಕೊಪ್ಪಳ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಸಾಹಿತಿಗಳಾದ ಶ್ರೀ ಲಿಂಗಾರೆಡ್ಡಿ ಆಲೂರ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಇಂದು ರವರಿಗೆ ಕನ್ನಡಪರ ಸಂಘಟನೆಗಳ ಮುಖಂಡರು ಗೌರವಯುತವಾಗಿ ಸನ್ಮಾನಿಸಿದರು.

ಲಿಂಗಾರೆಡ್ಡಿ ಆಲೂರುರವರು ಹಿರಿಯ ಸಾಹಿತಿಗಳಾಗಿ, ಕೃಷಿ ಪತ್ರಿಕೆಯ ವರದಿಗಾರಾಗಿ, ವೃತ್ತಿಯಲ್ಲಿ ಶಿಕ್ಷಕರಾಗಿ ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದು, ಇವರ ಸರ್ವಾಧ್ಯಕ್ಷತೆಯಲ್ಲಿ ಜಿಲ್ಲಾ ಸಮ್ಮೇಳನ ನಡೆಯುತ್ತಿರುವುದು ಸ್ತುತ್ಯಾರ್ಹವಾಗಿದೆ. ಇವರಿಗೆ ರೆಡ್ಡಿ ಸಮಾಜದ ಯುವಘಟಕದಿಂದ ಸನ್ಮಾನಿಸಿ ಗೌರವಿಸಲಾಗಿದೆ ಎಂದು ಹಲವರು ಮುಖಂಡರು ತಿಳಿಸಿದರು.

ಈ ಸಂದರ್ಭದಲ್ಲಿ ಕನ್ನಡಸೇನೆ ಕರ್ನಾಟಕ ಸಂಘಟನೆಯ ಉತ್ತರ ಕರ್ನಾಟಕ ಅಧ್ಯಕ್ಷರು ಹಾಗೂ ಕೊಪ್ಪಳ ಜಿಲ್ಲಾಧ್ಯಕ್ಷರಾದ ಚನ್ನಬಸವ ಜೇಕಿನ್, ಜಯಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಬಳ್ಳಾರಿ ರಾಮಣ್ಣ ನಾಯಕ, ವೀರ ಕನ್ನಡಿಗರ ಕರವೇ ಸಂಸ್ಥಾಪಕ ರಾಜ್ಯಧ್ಯಕ್ಷ ಅರ್ಜುನ್ ನಾಯಕ, ಧೀರ ಕನ್ನಡಿಗರ ಕರವೇ ಸಂಸ್ಥಾಪಕ ರಾಜ್ಯಾಧ್ಯಕ್ಷ ವಿರುಪಾಕ್ಷಿಗೌಡ ನಾಯಕ, ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ, ಜನಹಿತ ಕರವೇ ರಾಜ್ಯಾಧ್ಯಕ್ಷ ರಮೇಶ ಕೋಟಿ, ಕನ್ನಡ ಒಕ್ಕೂಟ ಕರ್ನಾಟಕ ರಾಜ್ಯ ಸಂಘಟನೆಯ ಜಿಲ್ಲಾಧ್ಯಕ್ಷ ಪೀರ ಮಹಮ್ಮದ್, ಕರವೇ ನಾರಾಯಣಗೌಡರ ಬಣ ತಾಲೂಕ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ, ಕನ್ನಡ ಯುವಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಎಂ.ಡಿ ಅಲಿ, ಕಿಷ್ಕಿಂದ ಕಲ್ಯಾಣ ಕರವೇ ರಾಜ್ಯಾಧ್ಯಕ್ಷ ದೇವಣ್ಣ ಸಂಗಾಪುರ, ಸಮಗ್ರ ಕರ್ನಾಟಕ ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ಬಾಬುಗೌಡ, ಕಲ್ಯಾಣ ಕರ್ನಾಟಕ ಯುವಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಶಫಿ ಬಿಸ್ತಿ, ಕರವೇ ಶಿವರಾಮಗೌಡರ ಬಣದ ತಾಲೂಕ ಅಧ್ಯಕ್ಷ ಯಮನೂರ ಭಟ್, ಶಿವರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಖಾದರ ಭಾಷಾ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಶರಣಪ್ಪ ದೊಡ್ಡಮನಿ, ಡಿ.ಎಸ್.ಸ್. ಸಂಘಟನೆಯ ಜಿಲ್ಲಾಧ್ಯಕ್ಷ ಸಿ.ಕೆ ಮರಿಸ್ವಾಮಿ ಬರಗೂರು ಸೇರಿದಂತೆ ಮತ್ತಿತರರು ಇದ್ದರು.

೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮತ್ತು ಸಾಮೂಹಿಕ ವಿವಾಹಗಳು.

ಗಂಗಾವತಿ: ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ೧೩೩ನೇ ಶ್ರೀಗುರು ಬೆಟ್ಟದೇಶ್ವರ ಶ್ರೀಗುರು ಲಿಂಗೇಶ್ವರರ ಜಾತ್ರಾ ಮಹೋತ್ಸವದ ಅಂಗವಾಗಿ ಜೋಡು ರಥೋತ್ಸವ ಮಾರ್ಚ್-೨೨ ಶನಿವಾರ ರಂದು ನಡೆಯಲಿದೆ.

ಮಾರ್ಚ್-೨೧, ೧೩೩ನೇ ಪುಣ್ಯತಿಥಿಯ ಅಂಗವಾಗಿ ಪಲ್ಲಕ್ಕಿ ಉತ್ಸವ ಹಾಗೂ ಫಾಲ್ಗುಣ ಬಹುಳ ಅಷ್ಠಮಿ ಶನಿವಾರ ಮಾರ್ಚ್-೨೨ ರಂದು ಬೆಳಗಿನ ಜಾವ ೫:೩೦ಕ್ಕೆ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ತದನಂತರ ಮಹಾಮಂಗಳಾರತಿ, ೧೧:೧೫ ರಿಂದ ೧೨:೧೫ ರವರೆಗೆ ಸಲ್ಲುವ ಅಭಿಜಿನ್ ಲಗ್ನದ ಶುಭಮುಹೂರ್ತದಲ್ಲಿ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ ೫:೦೦ ಗಂಟೆಗೆ ಶ್ರೀ ಬೆಟ್ಟದೇಶ್ವರ ಹಾಗೂ ಶ್ರೀ ಲಿಂಗೇಶ್ವರರ ಜೋಡು ರಥೋತ್ಸವ ಜರುಗಲಿವೆ.

ಉತ್ಸವದ ಸಾನಿಧ್ಯವನ್ನು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು, ಹೆಬ್ಬಾಳ ಮಠದ ಶ್ರೀ ನಾಗಭೂಷಣ ಶಿವಾಚಾರ್ಯರು, ಕಂಪ್ಲಿ ಕಲ್ಮಠದ ಶ್ರೀ ಮ.ನಿ.ಪ್ರ ಅಭಿನವ ಪ್ರಭು ಮಹಾಸ್ವಾಮಿಗಳು, ಶಾ.ಗ ಹೂವಿನಹಡಗಲಿ ಶ್ರೀ ಮ.ನಿ.ಪ್ರ. ಹಿರೇಶಾಂತವೀರ ಮಹಾಸ್ವಾಮಿಗಳು, ಬೆಳ್ಳಟ್ಟಿ ರಾಮಲಿಂಗೇಶ್ವರ ದಾಸೋಹ ಮಠದ ಶ್ರೀ ಷ.ಬ್ರ. ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾವನೂರಿನ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಸುಳೇಕಲ್ ಬೃಹನ್ಮಠದ ಶ್ರೀಶೀಶ್ರೀ ಭುವನೇಶ್ವರಯ್ಯ ತಾತನವರು, ಉಡುಮಕಲ್ ಹಿರೇಮಠದ ಶ್ರೀ ವೀರಬಸಯ್ಯ ಮಹಾಸ್ವಾಮಿಗಳು ಆಗಮಿಸಲಿದ್ದಾರೆ.

ಮಾರ್ಚ್-೨೩ ರಂದು ರಂದು ಸಾಯಂಕಾಲ ಕಡುಬಿನ ಕಾಳಗ ನಡೆಯಲಿದೆ. ಪ್ರತಿ ವರ್ಷದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಎಂದು ಹಿರೇಬೆಣಕಲ್‌ನ ಭಕ್ತಾದಿಗಳು ವಿನಂತಿಸಿದ್ದಾರೆ

ರೆಡ್ಡಿ ಸಮಾಜದ ಯುವ ಸಂಘದ ನೇತೃತ್ವದಲ್ಲಿ ಸಮ್ಮೇಳನ ಅಧ್ಯಕ್ಷರಿಗೆ ಸನ್ಮಾನ

ಗಂಗಾವತಿ:. ಶಿಕ್ಷಕರಾಗಿ, ವಿಮರ್ಶಕರಾಗಿ, ರಂಗಭೂಮಿ ಕಲಾವಿದನಾಗಿ, ಕೃಷಿ ಪತ್ರಿಕೆಯ ವರದಿಗಾರರಾಗಿ, ಅತ್ಯುತ್ತವಾದ ಜನಪದ ಕಲಾವಿದರಾಗಿ ಹೀಗೆ ಸಮಾಜದ ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ 13ನೆಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡ ಲಿಂಗಾರೆಡ್ಡಿ ಆಲೂರ್ ಅವರಿಗೆ ರೆಡ್ಡಿ ಸಮಾಜದ ಯುವ ಘಟಕದ ನೇತೃತ್ವದಲ್ಲಿ ಮಾರ್ಚ್-12‌ ಬುಧವಾರದಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಪ್ರಸ್ತುತ ಕೆಸರಹಟ್ಟಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಮುಖ್ಯೋಪಾದ್ಯಾಯರಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಾಹಿತಿ ಲಿಂಗಾರೆಡ್ಡಿ ಆಲೂರ್ ಸರ್ ಅವರಿಗೆ ಯುವ ಮುಖಂಡ ಚನ್ನಬಸವ ಜೇಕಿನ್‌ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿ ಮಾತನಾಡಿ 13ನೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮ್ಮೇಳನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು. ಅವರು ಸಲ್ಲಿಸಿದ ಕಲೆ, ಸಾಹಿತ್ಯ, ಕೃಷಿಗೆ ಸಲ್ಲಿಸಿದ ಪ್ರಾಮಾಣಿಕ ಸೇವೆ ಮುಖ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರು ಆಲೂರು ಅವರ ಹೆಸರನ್ನು ಘೋಷಣೆ ಮಾಡಿರುವುದು ರೆಡ್ಡಿ ಸಮಾಜಕ್ಕೆ ಹಾಗೂ ಸಾಹಿತ್ಯ ಆಸಕ್ತರಿಗೆ ಸಂತಸವನ್ನುಂಟು ಮಾಡಿದೆ ಎಂದು ಹೇಳಿದರು.

ಉಮೇಶ ಸಿಂಗನಾಳ, ರವಿ ಚೈತನ್ಯ ರೆಡ್ಡಿ, ವಿಶ್ವನಾಥ್ ಮಾಲಿಪಾಟೀಲ್, ಎರಿಸ್ವಾಮಿ, ಮಹಾಂತೇಶ್ ಗೌಡ, ಅಮರಣ್ಣ, ಜೀವನ್ ಕುಮಾರ್, ಚನ್ನಬಸವ ಹೇರೂರು, ಉಮೇಶ್ ರೆಡ್ಡಿ, ವೀರನಗೌಡ ಕೆಸರಹಟ್ಟಿ, ನವೀನ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ನದಿ ಹಾಗೂ ತೀರ್ಥಕ್ಷೇತ್ರಗಳ ಸುತ್ತಮುತ್ತ ೫೦೦ ಮೀಟರ್ ಸೋಪು, ಶಾಂಪು ಬಳಕೆ ನಿರ್ಬಂಧ ಸ್ವಾಗತಾರ್ಹ: ವಿಷ್ಣುತೀರ್ಥ ಜೋಷಿ

ಗಂಗಾವತಿ: ನದಿ, ತೀರ್ಥಕ್ಷೇತ್ರಗಳಲ್ಲಿ ಅರ್ಧ ಬಳಸಿದ ಶಾಂಪೂ, ಸೋಪು ಇತ್ಯಾದಿ ಬಳಕೆ ಮಾಡುವುದನ್ನು ನಿರ್ಬಂಧಿಸುವ ಮೂಲಕ ನದಿ ನೀರು ಮಲಿನವಾಗದಂತೆ ತಡೆಯಲು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿರುವುದು ಸ್ವಾಗತಾರ್ಹವಾಗಿದೆ ಎಂದು ವಿಷ್ಣುತೀರ್ಥ ಜೋಷಿ ಪ್ರಕಟಣೆಯಲ್ಲಿ ಶ್ಲಾಘಿಸಿದರು.

ಅರಣ್ಯ ಸಚಿವರ ತೀರ್ಮಾನವನ್ನು ಸ್ವಾಗತಿಸಿ ಮಾತನಾಡಿದ ಅವರು, ಕಳೆದ ಸಂಕ್ರಮಣದ ದಿನದಂದು ಹುಬ್ಬಳ್ಳಿಯ ವರದಶ್ರೀ ಫೌಂಡೇಷನ್ ಆಶ್ರಯದಲ್ಲಿ ರಾಜ್ಯಾದ್ಯಂತ ವಿವಿಧ ತೀರ್ಥ, ಪುಣ್ಯಕ್ಷೇತ್ರಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ಜನರಿಗೆ ಕಡಲೆಹಿಟ್ಟಿನ ಮಿಶ್ರಣದ ಪ್ಯಾಕೆಟ್‌ಗಳನ್ನು ಹಂಚುವ ಮೂಲಕ “ವಿಷ ಮುಕ್ತ ಪುಣ್ಯಸ್ನಾನ ಅಭಿಯಾನ” ವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಅದರಂತೆ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ರಾಜಮಾತೆ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಭಾರತಿ ೯೦.೪ ಎಫ್.ಎಂ ನ ನಿಲಯ ನಿರ್ದೇಶಕರಾದ ರಾಘವೇಂದ್ರ ತೂನ ಅವರ ಆಯೋಜಕತ್ವದಲ್ಲಿ ಜಿಲ್ಲೆಯಾದ್ಯಂತ ಹುಲಿಗಿ, ಋಷಿಮುಖ ಪರ್ವತ, ವಿರುಪಾಪುರ ಗಡ್ಡಿ, ಆನೆಗುಂದಿ, ಚಿಂತಾಮಣಿ, ದೇವಘಾಟ್ ಸೇರಿದಂತೆ ವಿವಿಧ ಸ್ಥಾನಘಟ್ಟಗಳಲ್ಲಿ ಅಂದಾಜು ಐವತ್ತು ಸಾವಿರಕ್ಕೂ ಹೆಚ್ಚು ಕಡಲೆಹಿಟ್ಟಿನ ಪೊಟ್ಟಣಗಳನ್ನು ಪರಿಸರ ಪ್ರೇಮಿಗಳು ಹಾಗೂ ಸಮಾನ ಮನಸ್ಕರೊಂದಿಗೆ ಸೇರಿ ಸಾರ್ವಜನಿಕರಿಗೆ ಹಂಚಲಾಗಿತ್ತು. ರಾಜ್ಯಾದ್ಯಂತ ನಡೆದ ಈ ವಿಷಮುಕ್ತ ಪುಣ್ಯ ಸ್ನಾನ ಅಭಿಯಾನಕ್ಕೆ ಸ್ಪಂದಿಸಿದ ಅರಣ್ಯ ಸಚಿವರು ಪುಣ್ಯ ಕ್ಷೇತ್ರಗಳ ನದಿ, ಸರೋವರ, ಕಲ್ಯಾಣಿ ದಂಡೆ, ಸ್ನಾನಘಟ್ಟ ಹಾಗೂ ನದೀಪಾತ್ರದಿಂದ ೫೦೦ ಮೀಟರ್ ಅಂತರದಲ್ಲಿ ಅರ್ಧ ಬಳಸಿದ ಶಾಂಪೂ, ಸೋಪು ಇತ್ಯಾದಿಗಳ ಬಳಸುವುದು ಹಾಗೂ ಎಸೆದು ಹೋಗುವುದನ್ನು ನಿರ್ಬಂಧಿಸಲು ಸೂಚಿಸಿರುವುದು ಅರಣ್ಯ ಸಚಿವ ಈಶ್ವರ ಖಂಡ್ರೆ ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತೆಗೆದುಕೊಂಡ ನಿರ್ಧಾರ ಶ್ಲಾಘನೀಯವಾಗಿದೆ.

ಈ ವೇಳೆ ಜೀವನದಿಗಳ ಸಂರಕ್ಷಣೆಯ ಚಟುವಟಿಕೆಗಳಲ್ಲಿ ನಮಗೆ ಸದಾ ಬೆನ್ನುತಟ್ಟಿ ಪ್ರೋತ್ಸಾಹಿಸಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್. ಶ್ರೀನಾಥ್ ರವರಿಗೆ, ಈ ಕಾರ್ಯದಲ್ಲಿ ಸಲಹೆ ಸಹಕಾರ ನೀಡಿದ ಮುಖಂಡರಾದ ಸಂತೋಷ ಕೆಲೋಜಿ, ನಾಗರಾಜ್ ಗುತ್ತೇದಾರ ಅವರಿಗೂ, ಈ ಕಾರ್ಯದಲ್ಲಿ ಎಲ್ಲರಿಗೂ ವಾಸುದೇವರಾವ್ ನವಲಿ, ಟಿ. ಆಂಜನೇಯ, ಮಹಾಲಿಂಗಪ್ಪ ಬನ್ನಿಕೊಪ್ಪ, ಆರ್ ಕೃಷ್ಣ ಗಂಗಾವತಿ, ಹನುಮೇಶ ಬಾವಿಕಟ್ಟಿ, ಹೊನ್ನಪ್ಪ ನಾಯಕ ಆನೆಗುಂದಿ, ಹನುಮನಹಳ್ಳಿ ಚಂದ್ರಾರೆಡ್ಡಿ, ಎ.ಕೆ. ಮಹೇಶಕುಮಾರ, ಡಾ|| ಶಿವಕುಮಾರ್ ಮಾಲಿಪಾಟೀಲ್ ಹಾಗೂ ಕೈಜೋಡಿಸಿ ಶ್ರಮದಾನ ನೀಡಿದ ಎಲ್ಲರಿಗೂ ಹೃತ್ಪೂರ್ವದ ಧನ್ಯವಾದಗಳನ್ನು ತಿಳಿಸಿದ

ಶ್ರೀ ಶಂಕರಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ ವೈದ್ಯ.

ಗಂಗಾವತಿ: ನಗರದ ಶಾರದಾ ನಗರದಲ್ಲಿರುವ ಶ್ರೀ ಶಂಕರಮಠ ಹಾಗೂ ಶ್ರೀ ಶಾರದಾದೇವಿಯ 7ನೇ ವರ್ಷದ ಪ್ರತಿಷ್ಠಾಪನಾ ದಿನಾಚರಣೆಯನ್ನು ಮಾರ್ಚ್-10‌ ಸೋಮವಾರದಂದು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.

ಅಂದು ಬೆಳಿಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಾರದ ಶಂಕರ ಭಕ್ತ ಮಂಡಳಿ, ವಿಜಯಧ್ವಜ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ ಸೇರಿದಂತೆ ಇತರೆ ಭಜನಾ ಮಂಡಳಿಯ ಸದಸ್ಯರುಗಳಿಂದ ಲಲಿತಾ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ಅಷ್ಟೋತ್ತರ ಪಾರಾಯಣ, ಭಜನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಬಳಿಕ ಜರುಗಿದ ಧರ್ಮಸಭೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಡೆಸುವುದರ ಮೂಲಕ ಐದು ಜನ ಮಹಿಳೆಯರಿಗೆ ಶ್ರೀಮಠದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಸಮಾರಂಭವನ್ನು ಉದ್ದೇಶಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಉಭಯ ಜಗದ್ಗುರುಗಳಿಂದ ಪ್ರತಿಷ್ಠಾಪನೆಗೊಂಡ ಶ್ರೀ ಶಾರದಾಂಬ ದೇವಿಗೆ ಸರ್ವ ಸಮಾಜ ಬಾಂಧವರ ಸಹಕಾರದಿಂದ ಧಾರ್ಮಿಕತೆ ಹಾಗೂ ಸಮಾಜದಲ್ಲಿನ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಶೃಂಗೇರಿಯ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಮಹೋತ್ಸವ ಸಂಭ್ರಮದ ಆಡಿಯಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಹಂತ ಹಂತವಾಗಿ ನಡೆಸಲಾಗುವುದೆಂದು ತಿಳಿಸಿದ ಅವರು, ಸುಖಿ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಗುಣಮಟ್ಟದ ಶಿಕ್ಷಣ, ಸಂಸ್ಕಾರ ಹಾಗೂ ಸನಾತನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

ಗಂಗಾವತಿಯ ರೇಡಿಯೋದಿಂದ ಮಿಷನ್ ಎಸ್.ಎಸ್.ಎಲ್.ಸಿ-೨೫ ರಾಜ್ಯವ್ಯಾಪಿ ಪ್ರಸಾರ ಶ್ಲಾಘನೀಯ : ಗಾಲಿ ಜನಾರ್ಧನರೆಡ್ಡಿ

ಪರೀಕ್ಷೆಯು ಭಯ ನಿರ್ಮಿಸುವುದಕ್ಕಲ್ಲ, ನಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಹೊರಹಾಕಲು ಇರುವ ಅವಕಾಶ

ಗಂಗಾವತಿ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ತೆಗೆದುಕೊಂಡು ನಮ್ಮ ತಾಲೂಕಿಗೆ ಮತ್ತು ತಂದೆ-ತಾಯಿಗಳಿಗೆ ಹಾಗೂ ಗುರುಗಳಿಗೆ ಕೀರ್ತಿ ತರಲು, ಒಳ್ಳೆಯ ಪರಿಶ್ರಮದಿಂದ ಅಭ್ಯಾಸ ಮಾಡಬೇಕು. ಪರೀಕ್ಷೆ ಎನ್ನುವುದು ಭಯದ ವಾತಾವರಣವನ್ನು ನಿರ್ಮಿಸುವುದಲ್ಲ, ನಿಮ್ಮ ಆಂತರ್ಯದಲ್ಲಿರುವ ಶಕ್ತಿಯನ್ನು ಹೊರಹಾಕಲಿಕ್ಕೆ ಇರುವ ಒಂದು ಸುವರ್ಣಾವಕಾಶ ಎಂದು ಶಾಸಕರಾದ ಗಾಲಿ ಜನಾರ್ಧನರೆಡ್ಡಿಯವರು ಹೇಳಿದರು.

ಅವರು ಇಂದು ಮಾರ್ಚ್-೮ ಶನಿವಾರ, ಗಂಗಾವತಿ ಗ್ರಾಮೀಣ ಭಾರತಿ ೯೦.೪ ಎಫ್.ಎಂ. ಸಮುದಾಯ ರೇಡಿಯೋ ಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆ, ಕೆ.ಕೆ.ಆರ್.ಡಿ.ಬಿ., ವರದಶ್ರೀ ಫೌಂಡೇಷನ್ ಹುಬ್ಬಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ವೋದಯ ಸಮೂಹ ಶಿಕ್ಷಣ ಸಂಸ್ಥೆ ಹೊರ್ತಿ, ಹುಬ್ಬಳ್ಳಿಯ ಆರ್ಗ್ಯಾನಿಕ್ ಅರಮನೆ ಅರ್ಪಿಸುವ ಮಿಷನ್ ಎಸ್.ಎಸ್.ಎಲ್.ಸಿ-೨೫ ರೇಡಿಯೋ ಸರಣಿ ಕಾರ್ಯಕ್ರಮದಲ್ಲಿ ಪರೀಕ್ಷಾ ಸ್ಪೂರ್ತಿ ವಿಶೇಷ ಸಂಚಿಕೆಯಲ್ಲಿ ಎಸ್.ಎಸ್.ಎಲ್.ಸಿ ಮಕ್ಕಳನ್ನುದ್ದೇಶಿಸಿ ಮಾತನಾಡಿದರು. ಈ ಕಾರ್ಯಕ್ರಮವು ಗಂಗಾವತಿಯ ಗ್ರಾಮೀಣ ಭಾರತಿ ರೇಡಿಯೋ ಕೇಂದ್ರದಿAದ ರಾಜ್ಯವ್ಯಾಪಿ ಏಕಕಾಲದಲ್ಲಿ ಪ್ರಸಾರವಾಗಿರುವುದು ಶ್ಲಾಘನೀಯ. ಪರೀಕ್ಷೆಯು ನಮ್ಮ ಸಾಮರ್ಥ್ಯವನ್ನು ಹೊರಹಾಕಲು ಇರುವ ಒಂದು ವಿಧಾನ. ಪರೀಕ್ಷೆಯ ಫಲಿತಾಂಶವೇ ಅಂತಿಮವಲ್ಲ. ಗೆದ್ದಾಗ ಖುಷಿಪಡುವುದು, ಸೋತಾಗ ಕುಗ್ಗುವುದು ಜೀವನವಲ್ಲ. ಗೆದ್ದಾಗ ಮುಂದಿನ ಜವಾಬ್ದಾರಿ ಬಗ್ಗೆ ಚಿಂತಿಸಬೇಕು, ಸೋತಾಗ ಹೇಗೆ ನಾನು ಗೆಲ್ಲಲಲ್ಲೆ ಎಂಬುದರ ಬಗ್ಗೆ ಯೋಜನೆಗಳನ್ನು ರೂಪಿಸಿಕೊಳ್ಳಬೇಕು. ಸಮಯ ಎಂಬುದು ಹಣದಂತೆ, ಅದರ ಮಹತ್ವವನ್ನು ಹಣದ ರೂಪದಲ್ಲಿ ಅರ್ಥಮಾಡಿಕೊಳ್ಳುವ ವ್ಯಕ್ತಿಗೆ ಒಳ್ಳೆಯ ಸಮಯಗಳು ಯಾವಾಗಲೂ ಜೊತೆಯಾಗಿ ಇರುತ್ತವೆ. ಡಾ. ಬಿ.ಆರ್ ಅಂಬೇಡ್ಕರ್, ಡಾ. ಅಬ್ದುಲ್ ಕಲಾಂ, ಸಾವಿತ್ರಿ ಬಾಪುಲೆ ಇನ್ನು ಅನೇಕ ಸಾಧನೆ ಮಾಡಿದವರ ಪಟ್ಟಿಯಲ್ಲಿ ಸೇರಬೇಕೆನ್ನುವುದು ನನ್ನ ಮನದಾಳದ ಬಯಕೆಯಾಗಿದೆ. ಮಕ್ಕಳೇ ಇದನ್ನು ಈಡೇರಿಸುತ್ತೀರೆಂದು ನಾನು ಪ್ರಬಲವಾಗಿ ಆಶಿಸುತ್ತೇನೆ ಎಂದು ತಿಳಿಸುತ್ತಾ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಗಂಗಾವತಿ ತಾಲೂಕಿಗೆ ಕೀರ್ತಿ ತರಬೇಕೆಂದು ಮಕ್ಕಳಿಗೆ ಹಾರೈಸಿ, ಈ ವೇಳೆ ಜಿಲ್ಲೆಯಲ್ಲಿಯೇ ಮೊದಲ ರೆಡಿಯೋ ಕೇಂದ್ರವಾದ ಗಂಗಾವತಿ ಗ್ರಾಮೀಣ ಭಾರತಿ ರೇಡಿಯೋ ಕೇಂದ್ರವು ಎಲ್ಲಾ ಜನಸಮುದಾಯಗಳಿಗೆ ಶಿಕ್ಷಣ, ಮಾಹಿತಿ ಮತ್ತು ಮನೋರಂಜನೆ ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತಿದ್ದು, ಈ ರೇಡಿಯೋ ಕೇಂದ್ರಕ್ಕೆ ಶೀಘ್ರದಲ್ಲಿ ಬಳ್ಳಾರಿ ಆಕಾಶವಾಣಿ ಮಾದರಿಯಲ್ಲಿ ಸುಸಜ್ಜಿತ ಸ್ಟುಡಿಯೋ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ಗಂಗಾವತಿ ಗ್ರಾಮೀಣ ಭಾರತಿ ರೇಡಿಯೋ ಕೇಂದ್ರದ ನಿಲಯ ನಿರ್ದೇಶಕರಾದ ರಾಘವೇಂದ್ರ ತೂನಾರವರು, ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಜನಪ್ರಿಯ ಶಾಸಕ ಗಾಲಿ ಜನಾರ್ಧನೆಡ್ಡಿಯವರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ನಟೇಶ್ ಹೆಚ್.ಬಿ., ನಗರಸಭೆ ಸದಸ್ಯೆ ಶ್ರೀಮತಿ ಸುಚೇತಾ ಶಿರಿಗೇರಿ, ಪತ್ರಕರ್ತರಾದ ಕೆ. ನಿಂಗಜ್ಜ ಈ ಎಲ್ಲ ಗಣ್ಯಮಾನ್ಯರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿ, ಈ ಕಾರ್ಯಕ್ರಮ ಕೇಳುತ್ತಿರುವ ರಾಜ್ಯದ ಎಲ್ಲಾ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕ ಬಂಧುಗಳಿಗೆ ಶುಭ ಕೋರಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ಸ್ಪೂರ್ತಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಾಗೆಯೇ ಇಂದು ಸಮಾಜ ವಿಜ್ಞಾನ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ರ‍್ಹಾಳ ಗ್ರಾಮದ ಸ.ಹಿ.ಪ್ರಾ ಶಾಲೆಯ ಶರಣಪ್ಪ ಗೌರಿಪುರ ಇವರು ಸಮಾಜ ವಿಜ್ಞಾನ ಪಾಠವನ್ನು ಬೋಧಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ಮೌಲಾಸಾಬ್, ನಗರಸಭೆ ಸ್ಥಾಯಿ ಸಮಿತಿ ಸದಸ್ಯ ರಮೇಶ ಚೌಡ್ಕಿ, ರೇಡಿಯೋ ಕೇಂದ್ರದ ವ್ಯವಸ್ಥಾಪಕರಾದ ಲಾವಣ್ಯ ಅಂಚಕಟ್ಲು, ದೀಪ ಸಮಾಜ ಸೇವಾ ಕೇಂದ್ರದ ರುಕ್ಮಗೌಡ ಸಂಗಾಪುರ, ವೀರೇಶ್ ಇಲ್ಲೂರ್, ಆರ್.ಕೃಷ್ಣ ಗಂಗಾವತಿ, ಮುಖಂಡರಾದ ಜೋಗದ ದುರುಗಪ್ಪ ನಾಯಕ, ಮನೋಹರ್‌ಗೌಡ ಹೇರೂರ್, ರಾಜೇಶ್ ರೆಡ್ಡಿ, ಪಂಪಣ್ಣ ನಾಯಕ, ಶಿಕ್ಷಣ ಸಂಯೋಜಕರಾದ ರಾಘವೇಂದ್ರ ಪಿ.ಸಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಸಮಾಜ ವಿಜ್ಞಾನ ವಿಷಯದ ಇನ್ನೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಶರಣಪ್ಪ ಕುಂಬಾರ ಅವರು ಭಾಗವಹಿಸಿ ಸಂಪೂರ್ಣ ಕಾರ್ಯಕ್ರಮದ ನಿರೂಪಣೆಗೈಯ್ಯುವ ಮೂಲಕ ಸಮಾಜವಿಜ್ಞಾನ ವಿಷಯದ ಪಾಠ ಬೋಧನೆ ಮಾಡಿದರು.