ಶ್ರೀ ಶಂಕರಮಠದ ಶಾರದಾಂಬೆಗೆ ಏಳನೇ ವರ್ಷದ ಸಂಭ್ರಮ. ಧಾರ್ಮಿಕತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ ಬದ್ಧ: ನಾರಾಯಣರಾವ್ ವೈದ್ಯ.

ಗಂಗಾವತಿ: ನಗರದ ಶಾರದಾ ನಗರದಲ್ಲಿರುವ ಶ್ರೀ ಶಂಕರಮಠ ಹಾಗೂ ಶ್ರೀ ಶಾರದಾದೇವಿಯ 7ನೇ ವರ್ಷದ ಪ್ರತಿಷ್ಠಾಪನಾ ದಿನಾಚರಣೆಯನ್ನು ಮಾರ್ಚ್-10‌ ಸೋಮವಾರದಂದು ಶ್ರದ್ಧೆ ಭಕ್ತಿಯಿಂದ ಆಚರಿಸಲಾಯಿತು.

ಅಂದು ಬೆಳಿಗ್ಗೆ ಶ್ರೀ ಶಾರದಾದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು. ಶಾರದ ಶಂಕರ ಭಕ್ತ ಮಂಡಳಿ, ವಿಜಯಧ್ವಜ ಭಜನಾ ಮಂಡಳಿ, ಸೌಂದರ್ಯ ಲಹರಿ ಭಗಿನಿಯರ ಬಳಗ ಸೇರಿದಂತೆ ಇತರೆ ಭಜನಾ ಮಂಡಳಿಯ ಸದಸ್ಯರುಗಳಿಂದ ಲಲಿತಾ ಸಹಸ್ರನಾಮ ಪಾರಾಯಣ, ಕುಂಕುಮಾರ್ಚನೆ, ಅಷ್ಟೋತ್ತರ ಪಾರಾಯಣ, ಭಜನೆ ಸೇರಿದಂತೆ ಇತರೆ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಬಳಿಕ ಜರುಗಿದ ಧರ್ಮಸಭೆಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಡೆಸುವುದರ ಮೂಲಕ ಐದು ಜನ ಮಹಿಳೆಯರಿಗೆ ಶ್ರೀಮಠದಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಬಳಿಕ ಸಮಾರಂಭವನ್ನು ಉದ್ದೇಶಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಮಾತನಾಡಿ ಶೃಂಗೇರಿಯ ಉಭಯ ಜಗದ್ಗುರುಗಳಿಂದ ಪ್ರತಿಷ್ಠಾಪನೆಗೊಂಡ ಶ್ರೀ ಶಾರದಾಂಬ ದೇವಿಗೆ ಸರ್ವ ಸಮಾಜ ಬಾಂಧವರ ಸಹಕಾರದಿಂದ ಧಾರ್ಮಿಕತೆ ಹಾಗೂ ಸಮಾಜದಲ್ಲಿನ ಕಾರ್ಯಗಳನ್ನು ಮುನ್ನಡೆಸಿಕೊಂಡು ಬರಲಾಗುತ್ತಿದೆ. ಶೃಂಗೇರಿಯ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಮಹೋತ್ಸವ ಸಂಭ್ರಮದ ಆಡಿಯಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಹಂತ ಹಂತವಾಗಿ ನಡೆಸಲಾಗುವುದೆಂದು ತಿಳಿಸಿದ ಅವರು, ಸುಖಿ ಸಮಾಜ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಗುಣಮಟ್ಟದ ಶಿಕ್ಷಣ, ಸಂಸ್ಕಾರ ಹಾಗೂ ಸನಾತನ ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಮುಂದಾಗಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರು ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.

Leave a Reply