೨ನೇ ರಾಜ್ಯ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ವಿದ್ಯಾರ್ಥಿಗಳು ಅಮೋಘ ಸಾಧನೆ.
ಗಂಗಾವತಿ: ರಂಜು ಆರ್ಟ್ಸ್ ಯೋಗ ಟ್ರಸ್ಟ್ ಹಂಪಿ ಮತ್ತು ಆಯುಷ್ ಇಲಾಖೆ ವಿಜಯನಗರ ಜಿಲ್ಲಾ ಸಂಘಟಿತ ೨ನೇ ರಾಜ್ಯ ಮುಕ್ತ ಯೋಗಾಸನ ಚಾಂಪಿಯನ್‌ಶಿಪ್ ಫೆಬ್ರವರಿ-೧೬ ಭಾನುವಾರ ಹಂಪಿಯ ಶಿವರಾಮ ಅವಧೂತ ಮಂಟಪದಲ್ಲಿ ನಡೆಯಿತು.
ಈ ಚಾಂಪಿಯನ್‌ಶಿಪ್‌ನಲ್ಲಿ ಗಂಗಾವತಿಯ ಪ್ರಜ್ವಲ ಯೋಗ ಕೇಂದ್ರದ ೧೪ ಸ್ಪರ್ದಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು ಎಂದು ಯೋಗ ತರಬೇತಿದಾರರಾದ ಎನ್. ಭಾನುಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದರು.
ಅದರಲ್ಲಿ ೮ ವರ್ಷದೊಳಗಿನವರ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸಾನಿಧ್ಯ, ದ್ವಿತೀಯ ಸ್ಥಾನವನ್ನು ಆವಂತಿಕಾ ಪಡೆದರೆ, ಬಾಲಕರ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಹೃತ್ವಿಕ್ ಪಡೆದರು. ಅದೇರೀತಿ ೮ ರಿಂದ ೧೦ ವಯಸ್ಸಿನ ವರ್ಗದ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಿ.
ನಿತಿಕಾ, ದ್ವಿತೀಯ ಸ್ಥಾನವನ್ನು ಶ್ರೇಯಾ ಕುಲಕರ್ಣಿ ಪಡೆದರೆ, ಬಾಲಕರ ವಿಭಾಗದಲ್ಲಿ ನಿತಿನ್ ಎರಡನೇ ಸ್ಥಾನ ಪಡೆದು ಚಾಂಪಿಯನ್ ಆಪ್ ದಿ ಚಾಂಪಿಯನ್ ಆಗಿ ಹಂಪಿ ಕುಮಾರ ಎನ್ನುವ ಪ್ರಶಸ್ತಿ ಪಡೆದರು. ಅದೇರೀತಿ ೧೧ ರಿಂದ ೧೪ ವಯಸ್ಸಿನ ವರ್ಗದಲ್ಲಿ ಪ್ರಥಮ ಸ್ಥಾನವನ್ನು ಕೆ ಪ್ರಬಂಜನ್ ಪಡೆದರು. ಈ ಸ್ಪರ್ಧೆಯಲ್ಲಿ ಇನ್ನಿತರ ವಿದ್ಯಾರ್ಥಿಗಳಾಗಿ ಭಾರ್ಗವಿ, ವಿನಯ್, ಅನುಷಾ, ವಿಶಾಲ್, ನಿಹಾರಿಕಾ, ಎನ್ ಚೇತನ್ ಕೃಷ್ಣಾ ರೆಡ್ಡಿ, ಕೆ ಅನನ್ಯಾ ಭಾಗವಹಿಸಿ ಪ್ರಮಾಣಪತ್ರ ಮತ್ತು ಪದಕ ಪಡೆದರು.
ಈ ವಿದ್ಯಾರ್ಥಿಗಳಿಗೆ ಪ್ರಗತಿ ಕ್ರೀಡಾ ಅಕಾಡೆಮಿಯ ಅಧ್ಯಕ್ಷರಾದ ಅಬ್ದುಲ್ ರಜಾಕ್ ಟೇಲರ್, ನಿರ್ದೇಶಕರಾದ ಜಗನ್ನಾಥ ಆಲಂಪಲ್ಲಿ ಅವರು, ಯೋಗ ತರಬೇತುದಾರರಾದ ಎನ್. ಭಾನುಪ್ರಸಾದ್ ಮತ್ತು ಸಹಕರಿಸಿದ ಪೋಷಕರಿಗೆ ಅಭಿನಂದನೆಗಳನ್ನು ತಿಳಿಸಿದರು.
ಮಹಾತ್ಮ ಗಾಂಧೀಜಿ ಕಂಡ ಗ್ರಾಮಗಳ ಅಭಿವೃದ್ದಿ ಕನಸು ಧರ್ಮಸ್ಥಳ ವಿರೇಂದ್ರ ಹೆಗ್ಡೆಯವರ ಯೋಜನೆಗಳ ಮೂಲಕ ಸಾಕಾರ: ಜೆ. ಚಂದ್ರಶೇಖರ
ಗಂಗಾವತಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ (ರಿ) ಟ್ರಸ್ಟ್ ಗಂಗಾವತಿ ವತಿಯಿಂದ ಫೆಬ್ರವರಿ -16 ರವಿವಾರ ಗಂಗಾವತಿ ನಗರದ ಲಕ್ಷ್ಮೀ ಕ್ಯಾಂಪ್ ನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕೊಪ್ಪಳ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಜೆ ಚಂದ್ರಶೇಖರ್ ರವರು ಉದ್ಘಾಟನೆ ಮಾಡಿ ಮಾತನಾಡಿದ ಅವರು ಗಾಂಧೀಜಿಯವರ ಗ್ರಾಮಗಳ ಅಭಿವೃದ್ದಿಗೆ ಕಂಡ ಕನಸನ್ನು ಪೂಜ್ಯ ಹೆಗ್ಡೆಯವರು ಧರ್ಮಸ್ಥಳ ಯೋಜನೆ ಮೂಲಕ ಸಾಕಾರ ಮಾಡುತಲಿದ್ದಾರೆ, ಬಡವರ ಅಭಿವೃದ್ಧಿಯನ್ನೇ ಮೂಲ ಗುರಿಯಾಗಿಸಿಕೊಂಡಿರುವ ಪೂಜ್ಯರು, ಆರ್ಥಿಕ ಅಭಿವೃದ್ಧಿಗೆ ಮಾರ್ಗದರ್ಶನ ನೀಡಿದ್ದಾರೆ. ಡಾ ಹೇಮಾವತಿ ಅಮ್ಮನವರು ಮಹಿಳೆಯರಿಗೆ ಜ್ಞಾನವಿಕಾಸ ಕಾರ್ಯಕ್ರಮದ ಮೂಲಕ ಶಿಸ್ತು, ಸ್ವಚ್ಛತೆ, ಧ್ಯಾನದಂತ ಕಾರ್ಯಕ್ರಮಗಳ ಮೂಲಕ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಬುನಾದಿಯನ್ನು ಹಾಕುವಂತ ಕೆಲಸ ಮಾಡುತ್ತಿದ್ದಾರೆ. ಇದರ ಸದುಪಯೋಗಪಡಿಸಿಕೊಂಡರೆ ಗ್ರಾಮಗಳ ಅಭಿವೃದ್ಧಿ ಮಾಡಲು ಬೇರೆ ಯಾರೂ ಬರಬೇಕಾಗಿಲ್ಲ, ನಾವೇ ಸಾಕು ಎಂದು ಪ್ರೇರಣಾ ಮಾತುಗಳನ್ನು ಆಡಿದರು.
ಕಾರ್ಯಕ್ರಮದಲ್ಲಿ ಶ್ರೀಮತಿ ರಾಜೇಶ್ವರಿ ಎ, ಯವರು ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಮಹಿಳೆಯರ ಪಾತ್ರ ಎಷ್ಟು ಮುಖ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮತಿ ರಾಜೇಶ್ವರಿ ವಕೀಲರು ಆನೆಗುಂದಿ ವಹಿಸಿಕೊಂಡಿದ್ದರು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಲಿತಾ ನಾರಾಯಣರವರು, ಮಹಾಲಕ್ಷ್ಮಿ ದೇವಸ್ಥಾನದ ಕಾರ್ಯದರ್ಶಿ ಶ್ರೀ ಶಂಕರನಾಗ್ ನರಸಪ್ಪ ಗೌಳಿ ಯವರು, ಶಂಕರನಾಯಕ ರವರು ಸೇರಿದಂತೆ ತಾಲೂಕಿನ ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ ರವರು ತಾಲೂಕಿನ ಸಿಬ್ಬಂದಿಗಳು ಸೇವಾಪ್ರತಿನಿಧಿಗಳು ಸೇರಿದಂತೆ ಜ್ಞಾನವಿಕಾಸ ಕಾರ್ಯಕ್ರಮದ ಸರ್ವ ಸದಸ್ಯರು ಉಪಸ್ಥಿರಿದ್ದರು.
೩೨ ಸಾಧಕರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಶ್ಲಾಘನೀಯ: ಲಲಿತಾ ರಾಣಿ
ಗಂಗಾವತಿ: ವಿವಿಧ ಕ್ಷೇತ್ರಗಳಲ್ಲಿ ೩೨ ಸಾಧಕರನ್ನು ಗುರುತಿಸಿ, ಶ್ರೀ ಕೃಷ್ಣದೇವರಾಯ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡಿರುವುದು ಶ್ಲಾಘನೀಯ ಎಂದು ರಾಜವಂಶಸ್ಥೆ ಲಲಿತಾರಾಣಿ ಶ್ರೀರಂಗದೇವರಾಯಲು ಹೇಳಿದರು.
ಅವರು ಭಾನುವಾರ ನಗರದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಶ್ರೀ ಚನ್ನಬಸವ ಪ್ರಕಾಶನ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಹೊಸಳ್ಳಿಯ ವಿಶ್ವರತ್ನ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ, ರಾಜ್ಯ ಮಟ್ಟದ ಮಹಿಳಾ ಕವನ ಸ್ಪರ್ಧೆಯ ಬಹುಮಾನ ವಿತರಣೆ ಹಾಗೂ ದಿವಂಗತ ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದ ೧೦೮ನೇ ಕವಿಗೋಷ್ಠಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಸಂಘಟಕ ಪರಶುರಾಮ ಪ್ರಿಯ ಅವರು ಕಳೆದ ೨೫ ವರ್ಷಗಳಿಂದ ಅನೇಕ ಸಂಘ, ಸಂಸ್ಥೆಗಳ ಮೂಲಕ ಉತ್ತಮ ಕಾರ್ಯಕ್ರಮ, ಸಮಾರಂಭ ನಡೆಸುತ್ತಾ ಬಂದಿದ್ದಾರೆ. ಇದು ಸಾಮಾನ್ಯ ಕಾರ್ಯವಲ್ಲ. ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡಿ ಪ್ರೋತ್ಸಾಹಿಸಬೇಕು ಎಂದರು.
ಮುಖ್ಯ ಅತಿಥಿ ಬಿಜೆಪಿ ಮುಖಂಡ ವಿರುಪಾಕ್ಷಪ್ಪ ಸಿಂಗನಾಳ ಮಾತನಾಡಿ, ಕಸಾಪ ಭವನ ಇದ್ದೂ ಇಲ್ಲದಂತಾಗಿದೆ. ಕನ್ನಡ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಥಳದ ಕೊರತೆ ಬರಬಾರದು. ಈ ನಿಟ್ಟಿನಲ್ಲಿ ಕಸಾಪ ಪದಾಧಿಕಾರಿಗಳು ಗಮನಹರಿಸಿ ಕಸಾಪ ಭವನ ಸ್ವಚ್ಚತೆ ಕಾಪಾಡಬೇಕು ಎಂದರು.
ಮಾಜಿ ಕಾಡಾ ಅಧ್ಯಕ್ಷ, ರೈತ ಮುಖಂಡ ತಿಪ್ಪೇರುದ್ರಸ್ವಾಮಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಮಯದಲ್ಲಿ ಪತ್ರಕರ್ತರಾದ ಎಸ್.ಎಂ.ಪಟೇಲ್, ರಾಮಮೂರ್ತಿ ನವಲಿ, ಸಿ.ಮಹಾಲಕ್ಷ್ಮೀ, ಡಾ|| ಶಿವಕುಮಾರ ಮಾಲಿಪಾಟೀಲ್, ಬಿ.ಸಿ.ಐಗೋಳ, ಪಂಚಾಕ್ಷರಕುಮಾರ, ಮಾರುತಿ ಐಲಿ, ಚನ್ನಬಸಪ್ಪ ಬಳಗಾರ ಉಡುಪಿ, ಡಾ.ಪ್ರಭುಸ್ವಾಮಿ ಹಾಲೇವಾಡಿಮಠ ಹಾವೇರಿ, ವಿಷ್ಣುತೀರ್ಥ ಜೋಶಿ, ವಿ.ಎಸ್.ಶಿವಪ್ಪಯ್ಯನಮಠ ಯಲಬುರ್ಗಾ ಸೇರಿದಂತೆ ೩೨ ಸಾಧಕರಿಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ನಂತರ ಪತ್ರಕರ್ತ ದಿವಂಗತ ವೇದವ್ಯಾಸರಾವ್ ನವಲಿ ಸ್ಮರಣಾರ್ಥ ಕಾವ್ಯಲೋಕದಿಂದ ನಡೆದ ೧೦೮ನೇ ಕವಿಗೋಷ್ಠಿಯಲ್ಲಿ ಶಾಮೀದ್ ಲಾಠಿ, ಶಶಿಕಲಾ ಕುರುಗೋಡು, ಚಿದಾನಂದ ಕೀರ್ತಿ, ಭೀಮನಗೌಡ ಕೇಸರಹಟ್ಟಿ, ಜಯಶ್ರೀ ಹಕ್ಕಂಡಿ ಮತ್ತಿತರರು ಕವನ ವಾಚಿಸಿದರು.
ನಿವೃತ್ತ ಪ್ರಾಚಾರ್ಯ ಬಸವರಾಜ ಐಗೋಳ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಸಾಪ ತಾಲೂಕು ಅಧ್ಯಕ್ಷ ರುದ್ರೇಶ ಆರ‍್ಹಾಳ, ಗುರುರಾಜ ಬೆಳ್ಳುಬ್ಬಿ, ಪಿ.ಎಂ.ಸುಬ್ರಮಣ್ಯಂ, ಎಂ.ಪರಶುರಾಮ ಪ್ರಿಯ, ಕೃಷ್ಣ ಆಶೀಶ್, ರಗಡಪ್ಪ ಹೊಸಳ್ಳಿ ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮವನ್ನು ಶಿಕ್ಷಕ ಸುಂಕಪ್ಪ ಸ್ವಾಗತಿಸಿ, ಶಿಕ್ಷಕಿ ಜಯಶ್ರೀ ಹಕ್ಕಂಡಿ ನಿರೂಪಿಸಿದರು.
ಐಪಿಎಲ್ ಕ್ರಿಕೆಟ್ ಪ್ರೇಮಿಗಳಿಗೆ ಲೇಟೆಸ್ಟ್ ಅಪ್ಡೇಟ್..!
ಐಪಿಎಲ್ 2025 ಕ್ಕಿಂತ ಮೊದಲು ಡಿಸ್ನಿ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ವಿಲೀನವಾಗಿವೆ. ಎರಡೂ ಪ್ಲಾಟ್‌ಫಾರ್ಮ್ ಈಗ ಜಿಯೋಹಾಟ್‌ಸ್ಟಾರ್ ಎಂಬ ಒಂದೇ ಅಪ್ಲಿಕೇಶನ್ ಆಗಿದೆ. ಅಪ್ಲಿಕೇಶನ್ ಬಳಕೆದಾರರಿಗೆ ಕೆಲವು ನಿಮಿಷಗಳ ಕಾಲ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅನುಮತಿಸುತ್ತದೆ, ಆದರೆ ಮೊಬೈಲ್ ಸಾಧನಗಳಲ್ಲಿ ಪೂರ್ಣ ಪಂದ್ಯಗಳನ್ನು ವೀಕ್ಷಿಸಲು ಚಂದಾದಾರಿಕೆ ಅವಕಾಶ ಕಲ್ಪಿಸಲಾಗಿರುತ್ತದೆ.
ಐಪಿಎಲ್ 2025ರ ಸೀಸನ್ ಮುಂದಿನ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಮೊದಲ ಪಂದ್ಯ ಮಾರ್ಚ್ 22 ರಂದು ಹಾಲಿ ಚಾಂಪಿಯನ್ ಕೆ.ಕೆ.ಆರ್ ಮತ್ತು ಆರ್.ಸಿ.ಬಿ ನಡುವೆ ನಡೆಯಲಿದೆ.
ತಮ್ಮ ಮೊಬೈಲ್ ಸಾಧನಗಳಲ್ಲಿ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸುವ ನಿರೀಕ್ಷೆಯಲ್ಲಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಈಗ ಶಾಕಿಂಗ್ ಸುದ್ದಿಯೊಂದು ಬಂದಿದೆ. ಹೌದು, ಅಷ್ಟಕ್ಕೂ ಈ ಶಾಕಿಂಗ್ ನ್ಯೂಸ್ ಏನಂತೀರಾ? ಹಿಂದಿನ ಸೀಸನ್‌ಗಿಂತ ಭಿನ್ನವಾಗಿ, ಈ ಸೀಸನ್‌ನ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಅಪ್ಲಿಕೇಷನ್‌ಗೆ ಚಂದಾದಾರಿಕೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ಈಗ ಡಿಸ್ನಿ ಹಾಟ್‌ಸ್ಟಾರ್ ಮತ್ತು ಜಿಯೋಸಿನಿಮಾ ವಿಲೀನವಾಗಿದ್ದು, ಎರಡೂ ಪ್ಲಾಟ್‌ಫಾರ್ಮ್‌ಗಳನ್ನು ಸೇರಿ ಜಿಯೋಹಾಟ್‌ಸ್ಟಾರ್ ಆಗಿದೆ. ಈ ಅಪ್ಲಿಕೇಶನ್ ಬಳಕೆದಾರರಿಗೆ ಕೆಲವು ನಿಮಿಷಗಳ ಕಾಲ ಐಪಿಎಲ್ ಪಂದ್ಯಗಳನ್ನು ಉಚಿತವಾಗಿ ವೀಕ್ಷಿಸಲು ಅನುಮತಿಸುತ್ತದೆ, ಆದರೆ ಮೊಬೈಲ್ ಸಾಧನಗಳಲ್ಲಿ ಪೂರ್ಣ ಪಂದ್ಯಗಳನ್ನು ವೀಕ್ಷಿಸಲು ಚಂದಾದಾರಿಕೆ ಅವಕಾಶ ನೀಡಲಾಗಿರುತ್ತದೆ.
ಸೂರ್ಯನಾಯಕನತಾಂಡದಲ್ಲಿ ಪ್ರಥಮ ಬಾರಿಗೆ ಸಂತ ಸೇವಾಲಾಲ್ ರವರ ೨೮೬ನೇ ಜಯಂತಿ ಅದ್ಧೂರಿ ಆಚರಣೆ
ಗಂಗಾವತಿ: ನಗರದ ಹೊರವಲಯದ ಸೂರ್ಯನಾಯಕನತಾಂಡದಲ್ಲಿ ಇದೇ ಪ್ರಥಮ ಬಾರಿಗೆ ಬಂಜಾರ ಸಮಾಜದಿಂದ ಸಂತ ಸೇವಾಲಾಲ್ ರವರ ೨೮೬ನೇ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.
ಜಯಂತಿಯ ನಿಮಿತ್ಯ ಸಂತ ಸೇವಾಲಾಲ್ ಭಾವಚಿತ್ರದೊಂದಿಗೆ ತಾಂಡಾದಲ್ಲಿ ಕುಂಭ ಹೊತ್ತ ಮಹಿಳೆಯರೊಂದಿಗೆ ವಾದ್ಯಮೇಳದೊಂದಿಗೆ ಮೆರವಣಿಗೆ ನಡೆಸಿ ಸಂತ ಸೇವಾಲಾಲ್ ಮತ್ತು ಮರಿಯಮ್ಮ ದೇವಸ್ಥಾನದ ಹತ್ತಿರದಲ್ಲಿರುವ ಬಂಜಾರ ಸಮುದಾಯ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ನಿವೃತ್ತ ಶಿಕ್ಷಕರಾದ ರಾಜಶೇಖರ ಅವರಿಗೆ ಹಾಗೂ ಸ.ಕಿ.ಪ್ರಾ ಶಾಲೆಯ ಮುಖ್ಯಗುರುಗಳಾದ ಮಲ್ಲಿಕಾರ್ಜುನರವರಿಗೆ ಹಾಗೂ ಹಿರಿಯ ಶಿಕ್ಷಕರಾದ ಪ್ರಭಯ್ಯ ಹಿರೇಮಠರವರಿಗೆ ಬಂಜಾರ ಸಮಾಜದಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಜಯಂತಿ ಪಾಲ್ಗೊಂಡ ಎಲ್ಲರಿಗೂ ಅನ್ನಸಂತರ್ಪಣೆ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷ ಬಾಲಾಜಿ ಚವ್ಹಾಣ್, ಎಸ್.ಡಿ.ಎಂ.ಸಿ ಅಧ್ಯಕ್ಷ ಅಮರೇಶ ರಾಠೋಡ್, ಎಸ್.ಡಿ.ಎಂ.ಸಿ ಸದಸ್ಯ ಶಿವಪ್ಪ, ಬಸಾಪಟ್ಟಣ ಗ್ರಾ.ಪಂ ಸದಸ್ಯೆ ಗೌರಮ್ಮ ಶಂಕರ ನಾಯಕ, ಮಾಜಿ ಗ್ರಾ.ಪಂ ಸದಸ್ಯ ಶಂಕರ ನಾಯಕ, ತಾಂಡಾದ ಹಿರಿಯರಾದ ಕಟ್ಟಿಮನಿ ಹನುಮಂತಪ್ಪ ನಾಯಕ, ಸಕ್ರಪ್ಪ ಕಾರಭಾರಿ, ಶಂಕ್ರಪ್ಪ ಡಾವು, ಹನುಮಂತಪ್ಪ ಪೂಜಾರಿ, ನಿವೃತ್ತ ಕಂದಾಯ ಅಧಿಕಾರಿ ಎಸ್.ವಿ ಗೋಪಾಲಕೃಷ್ಣ ಸೇರಿದಂತೆ ತಾಂಡಾದ ಹಿರಿಯ ಮುಖಂಡರು, ಶಿಕ್ಷಕರು ಮತ್ತು ನಿವೃತ್ತ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಟೆಡೆಕ್ಸ್, ಟೆಡ್‌ಟಾಕ್ ಮಾದರಿಯಲ್ಲಿ ಭಾರತದ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮ ಮಹಾನ್ ಕಿಡ್ಸ್ ಶಾಲೆಯಲ್ಲಿ: ನೇತ್ರಾಜ್ ಗುರುವಿನಮಠ
ಗಂಗಾವತಿ: ಫೆಬ್ರವರಿ-15 ಶನಿವಾರ ಗಂಗಾವತಿ ನಗರದ ಪ್ರತಿಷ್ಠಿತ ಶಾಲೆಯಾದ ಮಹಾನ ಕಿಡ್ಸ್ ಶಾಲೆಯಲ್ಲಿ ಮಹಾನ್ ಕಿಡ್ ಟಾಕ್ಸ್ ಎನ್ನುವ ವೇದಿಕೆ ಕಾರ್ಯಕ್ರಮವನ್ನು ನಡೆಸಲಾಯಿತು. ಇದು ಭಾರತದಲ್ಲಿ ಮೊಟ್ಟಮೊದಲ ಶಾಲಾ ವೇದಿಕೆ ಕಾರ್ಯಕ್ರಮವಾಗಿದೆ ಎಂದು ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನಮಠ ಪ್ರಕಟಣೆಯಲ್ಲಿ ತಿಳಿಸಿದರು.
ಶಾಲೆಯಲ್ಲಿ ಈ ವಿನೂತನ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು, ಪ್ರತಿ ಶನಿವಾರ ೨೦ ಮಕ್ಕಳಿಗೆ ಈ ವೇದಿಕೆಯನ್ನು ನೀಡಲಾಗುತ್ತಿದ್ದು, ಮಕ್ಕಳು ಮಾತನಾಡುವ ಮೊದಲು ವಿಷಯವನ್ನು ತಿಳಿದುಕೊಳ್ಳಬೇಕು. ವಿಷಯವನ್ನು ತಿಳಿದುಕೊಳ್ಳಬೇಕಾದರೆ ಪುಸ್ತಕಗಳನ್ನು ಓದಬೇಕು. ಈ ಒಂದು ಕಾರ್ಯಕ್ರಮದಿಂದ ಮಕ್ಕಳ ಕಲಿಕೆ ಇನ್ನು ಉನ್ನತ ಮಟ್ಟಕ್ಕೆ ಏರಲಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪಾಲಕರು, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಟೆಡೆಕ್ಸ್, ಟೆಡ್‌ಟಾಕ್ ಮಾದರಿಯನ್ನು ಹೋಲುವ ಕಾರ್ಯಕ್ರಮ ಇದಾಗಿದ್ದು ಭಾರತದಲ್ಲಿ ಮಹಾನ್ ಕಿಡ್ಸ್ ಶಾಲೆಯಲ್ಲಿ ಇಂಥ ಒಂದು ವಿನೂತನ ಪ್ರಯೋಗವನ್ನು ಮಾಡಲಾಗಿದೆ. ಈ ವೇದಿಕೆಯಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯ ಮಕ್ಕಳು ವಾರಕ್ಕೆ ೨೦ ಮಕ್ಕಳಂತೆ ಮಕ್ಕಳು ತಮಗೆ ಇಷ್ಟ ಇರುವ ವಿಶೇಷ ವಿಷಯವನ್ನು ಎಲ್ಲಾ ಮಕ್ಕಳ ಮತ್ತು ಪಾಲಕರ ಮುಂದೆ ಮಾತನಾಡುತ್ತಾರೆ. ಈ ಕಾರ್ಯಕ್ರಮದಲ್ಲಿ ಮಹಾನ್ ಕಿಡ್ಸ್ ಶಾಲೆಯ ಮಕ್ಕಳು ಬೇರೆ ಬೇರೆ ವಿಷಯಗಳ ಮೇಲೆ ತುಂಬಾ ಕ್ರಿಯಾತ್ಮಕವಾಗಿ ಮಾತನಾಡಿದರು. ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು ಮಕ್ಕಳ ಕಲಿಕೆ ಆತ್ಮವಿಶ್ವಾಸ, ಶಬ್ದಗಳ ಬಳಕೆ, ಹೊಸ ಹೊಸ ವಿಷಯಗಳನ್ನು ಕಲಿಯುವುದು, ಕಲಿತಿರುವುದನ್ನು ಎಲ್ಲರ ಮುಂದೆ ಮಾತನಾಡುವ ಕೌಶಲ್ಯ ಬೆಳೆಸಿಕೊಳ್ಳುತ್ತಾರೆ. ಇಂಥ ವೇದಿಕೆಯನ್ನು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾನ್ ಕಿಡ್ಸ್ ಶಾಲೆಯಲ್ಲಿ ಆಯೋಜಿಸಿದ್ದಕ್ಕಾಗಿ ಪಾಲಕರು ಹರ್ಷ ವ್ಯಕ್ತಪಡಿಸಿ, ನಮ್ಮ ಮಕ್ಕಳಿಗೆ ಈ ಶಾಲೆಯಲ್ಲಿ ಎಲ್ಲಾ ರೀತಿಯ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಪಾಲಕರು ಶ್ಲಾಘಿಸಿದರು.
ಈ ಶನಿವಾರ ಎಂ.ಡಿ ಇರ್ಫಾನ್ ಚೆಸ್ ಕುರಿತು, ಆಲ್ ಫಾಲ್ಸ್ ಸಮಯದ ಕುರಿತು, ಜಿಯಾನ್ ಅಲಿ ಊಟದ ಅಭ್ಯಾಸದ ಕುರಿತು, ಅಭಿಜ್ಞಾ ಯಾಕೆ ನಾವು ಧನ್ಯವಾದಗಳು ಹೇಳಬೇಕು, ಅರ್ಹಾನ್ ಸೌರಮಂಡಲದ ಕುರಿತು, ಅರ್ಫಾನಿ ದಯೆ ಕುರಿತು, ಆಧ್ಯ ಎಸ್.ಹೆಚ್ ನೀರಿನ ಕುರಿತು, ಶಿಫಾ ನಾವು ಬೆಳಗ್ಗೆ ಎದ್ದ ತಕ್ಷಣ ಏನು ಮಾಡುತ್ತಿದ್ದೇವೆ, ಫರ್ಹಾಜ್ ಆರೋಗ್ಯವೇ ಭಾಗ್ಯ, ಸಾಯಿ ತನ್ವಿ ನಾನು ನನ್ನ ಸಾಕುಪ್ರಾಣಿಯಿಂದ ಏನನ್ನು ಕಲಿತಿರುವೆ, ಅನ್ವಿತ ಯಾರನ್ನು ಜಡ್ಜ್ ಮಾಡಬಾರದು, ಕೃತಿಕ ಯುನಿಟಿ ಇಸ್ ಸ್ಟ್ರೆಂಥ್, ಅಂಚಿತ ಸ್ಮಾರ್ಟ್ ವರ್ಕ್, ಶಾಹಿಂ ಹೌ ಪ್ರಾಕ್ಟೀಸ್ ಮೇಟ್ ಮ್ಯಾನ್ ಪರ್ಫೆಕ್ಟ್, ಜಜಾ ಹುಸ್ನ ಎಲ್ಲಾ ಸಂದರ್ಭಗಳಲ್ಲೂ ಹೇಗೆ ಸಂತೋಷವಾಗಿರಬೇಕು, ಸಾತ್ವಿಕ್ ಇನ್ಫೇಶನ್ ಹಣದುಬ್ಬರ, ಕಾರ್ತಿಕ್ ಬಿಟ್ ಕಾಯಿನ್, ತೋಹಿದ ಶಿಕ್ಷಕರ ಕುರಿತು, ಅಲ್ವೇರ ಶಿಕ್ಷಣದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ ಮಕ್ಕಳ ಕಲಿಕೆಗೆ ಮಹಾನ್ ಕಿಡ್ಸ್ ಶಾಲೆ ಎಲ್ಲಾ ರೀತಿಯಿಂದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಪಾಲಕರು ಮಕ್ಕಳಿಗೆ ಸಹಕಾರ ನೀಡಿದ್ದಕ್ಕಾಗಿ ಧನ್ಯವಾದಗಳು ಅರ್ಪಿಸಿದರು.
ಈ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಪೂರ್ಣಿಮಾ, ಮಂಜುನಾಥ್, ಕುಮುದಿನಿ, ದೀಪ, ಸಹನಾ ಶೈಲಜಾ, ಚಂದ್ರಶೇಖರ್ ಕುಂಬಾರ್, ಸಿದ್ದೇಶ್, ತೇಜಸ್ವಿನಿ, ಮುತ್ತ, ಸಲಿನಾ, ಶಾಂತಿ ಸೇರಿದಂತೆ ಪಾಲಕರು ಕೂಡ ಇದ್ದರು.
ಭಾವನೆಗಳ ಜಗತ್ತಿನಲ್ಲಿ ಹೃದಯದ ಕವಿತೆ ಗೊರೂರು ಅನಂತರಾಜು, ಹಾಸನ.
ನಾನು ಸಾಹಿತ್ಯ ಕ್ಷೇತ್ರಕ್ಕೆ ಬಂದು ಬರೆಯಲು ಪ್ರಾರಂಭಿಸಿದ್ದು ೨೦೨೦ರ ಕರೋನ ಸಮಯದಲ್ಲಿ. ಊರು ಹೋಗು ಕಾಡು ಬಾ ಎನ್ನುವ ವಯಸ್ಸಿನಲ್ಲಿ. ನನ್ನ ಹವ್ಯಾಸ ಬಟ್ಟೆ ಹೊಲಿಯುವುದು, ಕರಕುಶಲ ಕಲೆ, ಕೃತಕ ಆಭರಣಗಳ ತಯಾರಿಕೆ ಕ್ರೋಶಾವರ್ಕ್, ನಿಬ್ ಪೈಂಟಿಂಗ್, ಪರ್ಸ್ ವ್ಯಾನಿಟಿ ಬ್ಯಾಗ್ ತಯಾರಿಕೆ, ಸೀರೆ ಕುಚ್ಚು ಹಾಕುವುದು ಕಸೂತಿ ಇವುಗಳನ್ನು ಮನೆಯಲ್ಲಿಯೇ ಕಲಿಸಿ ತರಬೇತಿ ಕೊಡುತ್ತಿದ್ದೆ. ಕೊರೋನ ಮಾರಿಯಿಂದ ಸಂಪರ್ಕವಿಲ್ಲದೆ ಕೆಲಸಗಳಿಗೆ ಅಡೆತಡೆಯಾಗಿ ದುಡಿಮೆ ಇಲ್ಲದೆ ಮನೆಯಲ್ಲಿ ಕೂರುವಂತಾಗಿ ಸಾಲದಿದ್ದಕ್ಕೆ ಕರೋನ ಬರುವ ಒಂದು ತಿಂಗಳ ಮುಂಚೆ ೫-೨-೨೦೨೦ರಲ್ಲಿ ನನ್ನ ಪೂಜ್ಯ ಪತಿಯವರು ಕ್ಯಾನ್ಸರ್ ಕಾಯಿಲೆಯಿಂದ ತೀರಿಕೊಂಡರು. ಅದರ ನೋವು ಹೆಚ್ಚಿರುವಾಗ ಮಾರ್ಚ್ ನಲ್ಲಿ ಕೊರೋನ ಬೇರೆ ಶುರುವಾಗಿ ಮನೆಯಲ್ಲಿಯೇ ಕೂತು ನೆಂಟರಿಷ್ಟರ ಮನೆಗಳ ಮಕ್ಕಳಿಗೆ ಆಡಲು ಚೌಕಾಬಾರೆ ಹಾಸುಗಳು ಸಾವಿರಗಟ್ಟಲೆ (೭ ಮನೆ ಮತ್ತು ೫ ಮನೆ) ಕವಡೆಗಳು, ಪಗಡೆ ಹಾಸುಗಳು, ಮಾಸ್ಕ್ ಗಳನ್ನು ಬಟ್ಟೆಯಲ್ಲಿ ಹೊಲಿದು ಕಸೂತಿ ಮಾಡಿ ಉಚಿತವಾಗಿ ಹಂಚಿದ ಸಮಾಧಾನ ತೃಪ್ತಿಯಿದೆ. ಅಂದು ನಾನು ಬರೆದ ಮೊದಲ ಲೇಖನ ‘ಹಿಂಗಿತ್ತು ನಮ್ಮ ಹಳೇ ಹಾಸನ’ ಇದು ನನ್ನ ಬಾಲ್ಯದ ಹಾಸನವನ್ನು ಬಳಸುತ್ತಿದ್ದ, ಅಂದಿನ ನಾಣ್ಯಗಳು ಪರಿಕರಗಳು ವಿಸ್ತಾರ ಸಂತೆ ಜಾತ್ರೆಗಳ ಬಗ್ಗೆ ಬರೆದ ೨೦ ಪುಟ ಲೇಖನ ಸ್ಥಳೀಯ ಪತ್ರಿಕೆಯಲ್ಲಿ ಪ್ರಕಟಗೊಂಡು ಅಭಿನಂದನೆ ಪ್ರೋತ್ಸಾಹಗಳ ಮಹಾಪೂರವೇ ಹರಿದುಬಂತು.. ಹೀಗೆ ಸಾವಿತ್ರಿ ಮೇಡಂ ಮೆಸೇಜ್ ಮಾಡಿದ್ದರು.
ಮೇಡಂ ಪ್ರತಿ ತಿಂಗಳು ನಡೆಯುವ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮಕ್ಕೆ ಆಗಿಂದಾಗ್ಗೆ ಆಗಮಿಸಿ ತಮ್ಮ ಕವಿತೆ ವಾಚಿಸುತ್ತಿದ್ದರು. ಅದೇನೋ ನಾನು ಮನೆ ಮನೆ ಕವಿಗೋಷ್ಠಿ ಸಂಚಾಲಕನಾಗಿ ೨ ವರ್ಷ ತುಂಬುತ್ತಾ ಬಂದು ನನ್ನ ಸಂಚಾಲಕತ್ವದ ಕಡೆಯ ಕಾರ್ಯಕ್ರಮ ಮೇಡಂ ಅವರ ಪುಸ್ತಕ ವಿಮರ್ಶೆ ಮಾಡಿಸುವುದು ಎನಿಸಿತು. ಇಲ್ಲಿ ಭಾವನಾತ್ಮಕ ಅಂಶವಿತ್ತು. ಮೇಡಂ ಅವರ ಮತ್ತೊಂದು ಮೆಸೇಜ್ ಬಂತು. ಕಲಿತು ಬರೆಯಲು ಅನುಕೂಲವಿದೆಯೆಂದು ಬರೆಯುತ್ತಿರುವೆ. ಆದರೂ ಬರೆಯುವುದೇ ಆಗಿ ನನ್ನ ಪುಸ್ತಕ ಬಿಡುಗಡೆಯ ಭಾಗ್ಯವೂ ಲಭಿಸಿದೆ. ಆದರೆ ಖರ್ಚು ಹೆಚ್ಚಾಗಿದೆಯೇ ಹೊರತು ಆದಾಯವಿಲ್ಲದಿದ್ದರೆ ಹೊಟ್ಟೆ ತುಂಬುವುದಿಲ್ಲವಲ್ಲ. ಬಿಡುಗಡೆಯಾದ ಪುಸ್ತಕವನ್ನು ಕೊಳ್ಳುವವರು ಯಾರೂ ಇಲ್ಲ. ಕವಿಗೋಷ್ಠಿ ಸಮ್ಮೇಳನ ಅಂತ ತಿರುಗುವುದರಿಂದ ನೆಡೆಯಲಾರದ ನಮ್ಮಂಥವರಿಗೆ ಆಟೋಗಳಿಗೆ ಹಣ ಹೊಂದಿಸಲಾಗುತ್ತಿಲ್ಲ. ಹೆಚ್ಚು ಬಳಗಗಳಿಗೆ ಬರೆಯುತ್ತಿರುವುದರಿಂದ ನಿದ್ರೆ ಊಟ ತಿಂಡಿಗೆ ಸಮಯವಿಲ್ಲ. ಹೊಲಿಯಲು ಸಮಯವಿಲ್ಲದೆ ಮಿಷನ್ ಮೇಲೆ ಕೂತು ವರ್ಷಗಳೇ ಸಂದಿವೆ. ವಯಸ್ಸಾದ ಕಾರಣ ಆರೋಗ್ಯದ ಸಮಸ್ಯೆ. ನನಗೀಗ ೭೭ ವರ್ಷ. ನನ್ನ ಕೆಲಸಗಳಿಗೆ ಬಿಡುವಿಲ್ಲ. ಬರೆದು ಈಗೇನು ಮಾಡಬೇಕು.. ಅರೇ.! ಹೌದಲ್ಲ. ಅವರಿಗೇಕೆ ಹೀಗೆ ಅನಿಸಿತು. ನಾಲ್ಕು ವರ್ಷಗಳ ಹಿಂದೆ ಕಾವ್ಯ ಕ್ಷೇತ್ರಕ್ಕೆ ಕಾಲಿರಿಸಿ ಮೇಡಂ ಹೃದಯದ ಕವಿತೆ ಎಂಬ ಲೇಖನ ಕವನ ಚುಟುಕು ಹಾಯ್ಕುಗಳ ಸಂಕಲನ ಹೊರತಂದಿದ್ದಾರೆ. ಆಗಲೇ ಅವರಿಂದ ಕಾವ್ಯ ದೂರವಾಗುತ್ತಿದೆಯೇ..ಛೇ..!
ಸಾಹಿತ್ಯ ಕ್ಷೇತ್ರವದು ಕಲಿತು ಬರೆಯಲು
ಅನುವು ಆಗಿಹುದು ಜ್ಞಾನವ ಪಡೆಯಲು
ಸಾವಿತ್ರಿ ಮೇಡಂ ಅವರೇ ತಮ್ಮ ಕವಿತೆಯ ಸಾಲಿನಲ್ಲಿ ಹೀಗೇ ಬರೆದಿದ್ದಾರಲ್ಲಾ. ಯಾಕೋ ಮೆಸೇಜ್ ತುಂಬಾ ಕಾಡಿಸಿತು. ಇದನ್ನು ಪುಸ್ತಕದಲ್ಲಿ ಆಶಯ ನುಡಿ ಬರೆದ ಮಾಳೇಟರ ಸೀತಮ್ಮ ವಿವೇಕ್ ಮೇಡಂ ಅವರಲ್ಲಿ ಹಂಚಿಕೊ೦ಡೆ. ಇತ್ತ ಸಾವಿತ್ರಿ ಮೇಡಂ ಜೊತೆ ಪೋನ್‌ಲ್ಲಿ ಮಾತನಾಡಲೆಂದರೆ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಅವರೇ ‘ಸಾರ್, ನನಗೆ ಪೋನ್‌ನಲ್ಲಿ ಏನೂ ಮಾತು ಕೇಳಿಸುವುದಿಲ್ಲ. ತಾವು ಮೆಸೇಜ್ ಮಾಡಿ ಪ್ಲೀಸ್.. ಏನೆಂದು ಮೆಸೇಜ್ ಮಾಡಲಿ..? ಅದಕ್ಕಿಂತ ಅವರ ಪುಸ್ತಕ ಓದಿ ಬರೆಯುವುದೇ ಉಚಿತವೆನಿಸಿತು. ಪುಸ್ತಕದ ಆಶಯ ನುಡಿಯಲ್ಲಿ ಸೀತಮ್ಮ ಮೇಡಂ ಒಂದು ಚುಟುಕು ಎತ್ತಿಕೊಂಡು ಕೆಲ ಸಾಲು ಬರೆದಿದ್ದಾರೆ.
ಮೊಳಕೆಯೊಡೆವ ಮೊದಲ ಪ್ರೀತಿ
ಅದು ಹೆತ್ತವ್ವನ ಚುಂಬನದ ಪ್ರೀತಿ
ಅಪ್ಪಿ ಮುದ್ದಿನ ಮಳೆಗರೆವಾ ಪೀತಿ..
ಬೇರಾರೂ ಕೊಡಲಾಗದ ನಿಷ್ಕಲ್ಮಶ ಪ್ರೀತಿ ಎಂದು ಚುಟುಕಿನ ಮೂಲಕ ತಾಯಿ ಪ್ರೀತಿಯ ಭಾವ ವ್ಯಕ್ತಪಡಿಸಿರುವ ಇವರು ಹೆಣ್ಣು ಮನಸು ಮಾಡಿದರೆ ಯಾವಾಗ ಬೇಕಾದರೂ ಏನನ್ನು ಬೇಕಾದರೂ ಮಾಡಬಲ್ಲಳು ಎಂಬುದನ್ನು ಸಾಧಿಸಿ ತೋರಿಸಿ ಅನೇಕರಿಗೆ ಸ್ಫೂರ್ತಿಯಾಗಿದ್ದಾರೆ. ಅವರ ದೇಹ ಕ್ಷೀಣಗೊಂಡು ಕಾಡಿದರೂ ನೋವುಗಳನ್ನು ನಿರ್ಲಕ್ಷಿಸಿ ಛಲ ಬಿಡದೆ ಅನೇಕ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಎಲ್ಲರೊಡನೆ ಒಡನಾಡುತ್ತ ತಾವು ಮಾಡಬೇಕೆಂದುಕೊಳ್ಳುವ ಕೆಲಸವನ್ನು ಪ್ರೀತಿಯಿಂದ ಮಾಡುತ್ತಾ ಇರುತ್ತಾರೆ..
ಲೇಖಕಿ ಬರೆಯುತ್ತಾರೆ ನಾನು ಹುಟ್ಟಿದ್ದು ೨೪-೮-೧೯೪೮. ದೇಶಕ್ಕೆ ಸ್ವತಂತ್ರ ಬಂದ ಮೊದಲನೆ ವರ್ಷದ ಸಂಭ್ರಮದ ಮಾಸದಲ್ಲಿ. ಹಾಸನದಲ್ಲಿ ನನ್ನ ತಂದೆ ತಿಮ್ಮಪ್ಪಗೌಡರು ಹಾಸನದ ದೊಡ್ಡಕೊಂಡುಗುಳದ ಹತ್ತಿರವಿರುವ ಹೊಸಕೊಪ್ಪಲು. ಹಿಂದಿನ ಕಾಲದಲ್ಲಿ ಒಮ್ಮೆ ಹುರುಳಿಯನ್ನು ಸಮೃದ್ಧಿಯಾಗಿ ಬೆಳೆದ ಕಾರಣ ಅಂದಿನಿಂದ ಹೊಸಕೊಪ್ಪಲು ಹೋಗಿ ಜನರ ನುಡಿಯಲ್ಲಿ ಹುರಳೀಕೊಪ್ಪಲು ಆಗಿದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು.
ಏಕೋ ಇದನ್ನು ಓದುತ್ತಿರಲು ನನಗೆ ಹಳೆಯ ವಿಚಾರವೊಂದು ತಟ್ಟನೆ ನನ್ನ ಮನದಲ್ಲಿ ಹಾಯ್ದುಹೋಯಿತು. ನಮ್ಮ ತಂದೆ ಗೊರೂರಿನಲ್ಲಿದ್ದಾಗ ಭಾನುವಾರದ ಸಂತೆಯಲ್ಲಿ ಒಣ ಮೆಣಸಿನಕಾಯಿ ವ್ಯಾಪಾರ ಮಾಡುತ್ತಿದ್ದರು. ನಮ್ಮ ತಂದೆ ಬಸವಣ್ಣನವರ ಸಂತೆ ಕಟ್ಟೆಯಲ್ಲಿ ಸುಂಕದವರ ಕಾಟವೇ ಹೆಚ್ಚು. ಅದೇ ಗ್ರಾಮ ಪಂಚಾಯ್ತಿಗೆ ದೊಡ್ಡ ರೆವಿನ್ಯೂ. ಅದಕ್ಕೆ ವರ್ಷಕ್ಕೊಮ್ಮೆ ಟೆಂಡರ್ ಕರೆದು ಏಜೆನ್ಸಿ ಫಿಕ್ಸ್ ಆಗುತ್ತಿತ್ತು. ಸುಂಕದವರ ಮುಂದೆ ಸುಖದು:ಖ ಹೇಳಿಕೊಳ್ಳಲುಂಟೆ. ಅವನು ನಾಟಿ ಬೀಡಿ ವ್ಯಾಪಾರಿಯಾಗಿರಲಿ ಗುಡ್ಡೆ ಬೆಳ್ಳುಳ್ಳಿ ವ್ಯಾಪಾರಿಯಾಗಿರಲಿ ಎಲ್ಲರಿಗೂ ಒಂದೇ ರೇಟು ಫಿಕ್ಸು. ಸುಂಕದವನ ನಿರ್ದಾಕ್ಷಿಣ್ಯ ಕ್ರಮ. ನಮ್ಮ ತಂದೆ ಬಿಸಿಲಿನ ರಕ್ಷಣೆಗೆ ಗುಡಾರ ಹೊಡೆಯುತ್ತಿದ್ದರು. ಈ ಗುಡಾರದ ನೆರಳಿಗೆ ಗುಡ್ಡೆ ಬೆಳ್ಳುಳ್ಳಿ ಸಾಹೇಬ್ರು, ನಾಟಿ ಬೀಡಿ ಮನೆಯಲ್ಲೇ ಕಟ್ಟಿ ತಂದು ಮಾರುತ್ತಿದ್ದ ಈಗಿನ ಪ್ರಸಿದ್ಧ ವಾಲ್ ರೈಟರ್ ಯಾಕೂಬ್ ಅವರ ಮದರ್ ಹೀಗೆ ಕೆಲವು ಸಣ್ಣ ಅತೀ ಸಣ್ಣ ವ್ಯಾಪಾರಿಗಳು ಆಶ್ರಯ ಪಡೆಯುತ್ತಿದ್ದರು. ಕೆಲವು ವ್ಯಾಪಾರಿಗಳು ಗುಡಾರ ಹೊಡೆಯಲು ಬಸ್ಸಿನಲ್ಲಿ ಗಳುಗಳನ್ನು ಡೇರೆಯನ್ನು ತರಲು ಕಷ್ಟವಾಗಿ ನಮ್ಮ ಮನೆಯ ಹೊರಾಂಡದಲ್ಲಿ ಇಟ್ಟು ಹೋಗುತ್ತಿದ್ದರು. ಅವರಿಂದ ನಮ್ಮ ತಂದೆಯೇನು ಬಾಡಿಗೆ ಪಡೆಯುತ್ತಿರಲಿಲ್ಲ. ಆದರೆ ನಮ್ಮ ಮನೆ ಎದುರಿಗೆ ಮಂಜಣ್ಣನ ಮನೆ ಇತ್ತು. ಅದು ಸಂತೆಗೆ ಹತ್ತಿರವಾಗಿ ಬಹುಶ: ಅವರು ಕನಿಷ್ಟ ಬಾಡಿಗೆಗೆ ನಿಗದಿ ಮಾಡಿಕೊಂಡು ಸಾಕಷ್ಟು ಮಂದಿ ಅಲ್ಲಿ ತಮ್ಮ ಸಾಮಾನು ಸರಂಜಾಮು ಇಟ್ಟು ಹೋಗಲು ಅದೊಂದು ತರಹ ಗೋಡೌನ್ ತರಹವೇ ಆಗಿತ್ತು. ಇರಲಿ. ನಮ್ಮ ಊರ ಸಂತೆಗೆ ಹಾಸನದ ದೊಡ್ಡಕೊಂಡಗುಳದಿಂದ ಒಂದು ಹೆಂಗಸು ವ್ಯಾಪಾರಕ್ಕೆ ಬರುತ್ತಿತ್ತು. ಅದೇನೋ ವ್ಯಾಪಾರ ಎಂಬದು ತಕ್ಷಣಕ್ಕೆ ನೆನಪಾಗುತ್ತಿಲ್ಲ. ಆದರೆ ಆ ಹೆಂಗಸು ಬಹಳ ವರ್ಷ ರಾತ್ರಿ ನಮ್ಮ ಮನೆಗೆ ಬಂದು ತಂಗುತ್ತಿತ್ತು. ತನ್ನ ವ್ಯಾಪಾರಿ ಸಾಮಾಗ್ರಿಗಳ ಚೀಲವನ್ನು ಹೊರಾಂಡದಲ್ಲಿ ಇಟ್ಟು ಮನೆಯ ಹಾಲ್‌ನಲ್ಲಿ ಮಲಗಿ ಬೆಳಿಗ್ಗೆ ಎದ್ದು ಹಾಸನಕ್ಕೆ ಹೋಗುತ್ತಿತ್ತು. ಬಸ್ ಸೌಕರ್ಯಗಳ ಕೊರತೆ ಮತ್ತೇ ಹಳ್ಳಿಗೆ ಹೋಗಬೇಕಾಗಿದ್ದರಿಂದ ಪಾಪ ಆಕೆಗೆ ಇದು ಅನಿವಾರ್ಯವಾಗಿತ್ತು. ಅವರಿಗೆ ನಮ್ಮ ತಾಯಿ ದೊಡ್ಡಕೊಂಡುಗಳ್ಳದಮ್ಮ ಎಂದೇ ಕರದು ನಮಗೆ ಆಕೆಯ ಹೆಸರೇನಂದೇ ತಿಳಿಯದು. ನಮ್ಮ ತಾಯಿಯವರು ಮುತ್ತುಗದ ಎಲೆ ಕಟ್ಟಿ ಮಾರಿ ತಮ್ಮ ಎಲೆ ಅಡಿಕೆ ಖರ್ಚು ನಿಭಾಯಿಸಿಕೊಳ್ಳುತ್ತಿದ್ದರು. ಅವರಿಗೆ ಮಾತನಾಡಲು ಒಬ್ಬರು ಹೆಂಗಸು ಯಾವಾಗಲೂ ಇರಬೇಕಿತ್ತು. ಅದಕ್ಕಾಗಿಯೇ ನಾಲ್ಕೈದು ಕಟ್ಟು ಎಲೆ, ಅರ್ಧ ಕೆಜಿಯಷ್ಟು ಅಡಿಕೆ ಸಂತೆಯಲ್ಲಿ ಖರೀದಿಸುತ್ತಿದ್ದರು. ಈ ಎಲೆ ಅಡಿಕೆ ಮತ್ತು ಕಾಫಿ ಈ ಹಂಗೆಳೆಯರ ಮಧ್ಯದ ಒಡನಾಡಿಯಾಗಿತ್ತು. ಅಂತೆಯೇ ಈ ದೊಡ್ಡಕೊಂಡಗೊಳ್ಳದಮ್ಮ ಭಾನುವಾರ ಸಂಜೆಯ ವಿಶೇಷ ಅತಿಥಿ. ಇಂತಹ ವಿಷಯಗಳೇ ಒಮ್ಮೊಮ್ಮೆ ಒಂದು ಒಳ್ಳೆಯ ಲಲಿತ ಪ್ರಬಂಧಗಳಾಗುವುದು0ಟು. ಹೃದಯದ ಕವಿತೆಯ ಈ ಒಂದು ಕವಿತೆ ನನ್ನ ಬಾಲ್ಯವನ್ನು ನೆನಪಿಸಿತ್ತು.
ತವರಿನ ತೊಟ್ಟಿಲಿನಲ್ಲಿ ಜೀಕೋಣ
ತಾಯಿಯ ಮಡಿಲಲ್ಲಿ ಮಲಗೋಣ
ತಿಳಿನೀರ ಕೊಳದಲ್ಲಿ ಮೀಯೋಣ..
ತುಂತುರು ಮಳೆಯಲ್ಲಿ ನೆನೆಯೋಣ
ತಮ್ಮ ಅನುಭವ ಜನ್ಯ ಬದುಕಿನ ಹಲವಾರು ವಿಚಾರಗಳನ್ನು ಮೆಲುಕು ಹಾಕುತ್ತಾ ಸಾಹಿತ್ಯದ ಹಲವು ಪ್ರಕಾರಗಳಾದ ಕತೆ ಕವನ ಲೇಖನ ಹಾಯ್ಕು ಟಂಕಾ ಲಿಮರಿಕ್ ಕವನ ಚುಟುಕು ಅತ್ಯಂತ ಶ್ರದ್ಧೆಯಿಂದ ಕಲಿತು ಬರೆಯುತ್ತಾ ತಮ್ಮ ಬಾಳ ಸಂಜೆಯನ್ನು ಅತ್ಯಂತ ಚಂದಗಾಣಿಸಿಕೊಳ್ಳುತ್ತಿದ್ದಾರೆ ಎಂದು ಬೆನ್ನುಡಿಯಲ್ಲಿ ಕವಯಿತ್ರಿ ಮಾಲಾ ಚೆಲುವನಹಳ್ಳಿ ಬರೆದಿದ್ದಾರೆ. ಇಳಿಯ ವಯಸ್ಸಿನಲ್ಲಿ ಏರುಗತಿಯಲ್ಲಿರುವ ಸಾಹಿತ್ಯ ಕೃಷಿಯ ಉತ್ಸಾಹ ಸಾಧನೆಯ ಸಂಕಲ್ಪ ತೊಟ್ಟವರಿಗೆ ವಯಸ್ಸಿನ ಹಂಗಿಲ್ಲ, ಅನಾಸಕ್ತಿಯ ಗುಂಗಿಲ್ಲ. ಇಳಿ ವಯಸ್ಸಿನಲ್ಲಿಯೂ ಪಿಹೆಚ್‌ಡಿಯಂತಹ ಉನ್ನತ ಶಿಕ್ಷಣ ಪಡೆದವರೂ ನಮ್ಮಲ್ಲಿದ್ದಾರೆ..ಇದು ಪರಮೇಶ್ ಹೊಡೇನೂರರ ಮುನ್ನುಡಿಯ ಆರಂಭಿಕ ಸಾಲು. ಹೌದು ಇದು ಖರೆ. ಇದಕ್ಕೆ ಸಾಕ್ಷಿ ತಾ.ನಂ.ಕುಮಾರಸ್ವಾಮಿಯವರು ‘ಕರ್ನಾಟಕದಲ್ಲಿ ಚೋಳರ ಕನ್ನಡ ಶಾಸನಗಳು-ಒಂದು ಅಧ್ಯಯನ’ ಎಂಬ ಮಹಾಪ್ರಬಂಧ ಮುಗಿಸಿ ಕೃತಿ ಪ್ರಕಟಿಸಿದ ಕಾಲಕ್ಕೆ ಅವರಿಗೆ ವಯಸ್ಸು ೮೦ ಆಗಿತ್ತು. ಈಗಾಗಲೇ ಅವರ ೫೦೦ ಪುಟದ ಆ ಪುಸ್ತಕ ಓದಿ ಆನಂದಿಸಿ ಬರೆದಿದ್ದೇನೆ. ಇರಲಿ ಇತ್ತ ಸಂಕಲನ ಮತ್ತೊಂದು ಕವಿತೆ:
ಮುಪ್ಪಿನಾ ಕಾಲದಲಿ ನೋಯಿಸದಿರಿ
ಹೆತ್ತವರ ಇಂದು ನಿಮಗಿರುವ ಸೌಲತ್ತು
ಅಂದು ಅವರಿಗಿರಲಿಲ್ಲ ಆ ಹೊತ್ತು
ನಿಂದಿಸದಿರಿ ಹೆತ್ತವರ ನಿಮ್ಮೇಳಿಗೆಗೆ
ಕಾರಣ ಅವರೇ ಎಂಬುದ ತಿಳಿಯಿರಿ
ಆಧುನಿಕ ತಂತ್ರಜ್ಞಾನ ಹೆಚ್ಚು ಆವರಿಸಿ ಸಾಮಾಜಿಕ ಜಾಲತಾಣಗಳು ವಿಜೃಂಭಿಸುತ್ತಿರುವ ಪ್ರಸಕ್ತ ದಿನಗಳಲ್ಲಿ ಹಲವಾರು ವಾಟ್ಸಾಪ್ ಗ್ರೂಪ್‌ಗಳು ಬೆಳೆಸುತ್ತಿರುವ ಕವಿ ಸಾಹಿತಿಗಳಲ್ಲಿ ಸಾವಿತ್ರಿ ಮೇಡಂ ಕೂಡ ಒಬ್ಬರೆಂದು ಹೇಳಬಹುದು. ಇದು ಕರೋನ ಕಾಲದಲ್ಲಿ ಹುಟ್ಟಿಕೊಂಡ ಹೊಸ ಬೆಳವಣಿಗೆ. ಮೇಡಂ ತಮ್ಮ ಕಾಲಘಟ್ಟದ ಹಳ್ಳಿ ಬದುಕನ್ನು ಕಟ್ಟಿಕೊಡಲು ಶಶಕ್ತರಿದ್ದಾರೆ. ನಾವು ಬಾಲ್ಯದಲ್ಲಿ ಅನೇಕ ಘಟನೆಗಳಿಗೆ ಸಾಕ್ಷಿಯಾಗಿರುತ್ತೇವೆ. ಆದರೆ ಅದನ್ನು ದಾಖಲಿಸಲು ಆಗ ನಮಗೆ ಸಾಧ್ಯವಾಗಿರುವುದಿಲ್ಲ. ಏಕೆಂದರೆ ಆಗ ನಮಗೆ ಬರವಣಿಗೆ ಸಿದ್ಧಿಸಿರುವುದಿಲ್ಲ. ನನ್ನ ಮಟ್ಟಿಗೆ ಹೇಳುವುದಾದರೇ ನಾನು ಓದಿನ ದಿನಗಳಲ್ಲೇ ಸಾವಿರಾರು ಪುಸ್ತಕಗಳನ್ನು ಓದಿ ಅರಗಿಸಿಕೊಂಡಿದ್ದೆ. ಏನು ಮನರಂಜನೆ ಇಲ್ಲದ ಕಾಲದಲ್ಲಿ ಪುಸ್ತಕವೇ ನನಗೆ ಮನರಂಜನಾ ಮಾಧ್ಯಮವಾಗಿ ಹಳ್ಳಿಗಾಡಿನಲ್ಲಿ ಸಂತೋಷದ ಜೀವನ ಕಳೆಯುವುದು ಸಾಧ್ಯವಾಗಿತು. ಈಗಲೂ ಏನಾದರೂ ಬರೆಯಲೂ ಹೊರಟರೆ ಅದೇ ಬಾಲ್ಯದ ಆ ದಿನಗಳು ಹೇನಿನಂತೆ ತಲೆಯಲ್ಲಿ ಓಡಾಡುತ್ತಿರುತ್ತವೆ. ರಾತ್ರಿ ಕನಸಿನಲ್ಲೂ ಹುಟ್ಟಿದೂರೇ ಸಿನಿಮಾ ರೀಲ್‌ನಂತೆ ಓಡುತ್ತಿರುತ್ತದೆ. ಆದರೆ ಎಚ್ಚರಗೊಂಡಾಗ ಎಲ್ಲಾ ಮಾಯವೋ..! ಈ ಸಿಟಿ ಲೈಫು ನಮಗೆ ಕಥೆ, ಪ್ರಬಂಧ ಕಟ್ಟಲು ನೆರವಾಗುತ್ತಿಲ್ಲ. ಈ ದಿಶೆಯಲ್ಲಿ ಮೇಡಂ ಪ್ರಯತ್ನಿದ್ದಾರೆ. ಅವರು ಮದುವೆಯಾಗಿ ಗಂಡನ ಮನೆಗೆ ಹೋದದನ್ನು ಸ್ಮರಿಸುತ್ತಾ ೧೯೭೪ನೇ ಇಸವಿಯಲ್ಲಿ ನನ್ನ ಮದುವೆ ಆಲೂರು ತಾ. ಕುಂದೂರಿನ ದಿವಂಗತ ಛೇ: ತಿಮ್ಮೇಗೌಡ್ರು ಮತ್ತು ಕೆಂಚಮ್ಮನವರ ಕಿರಿಯ ಪುತ್ರರಾದ ಛೇ: ಕೆ.ಟಿ.ಬಸವೇಗೌಡ (ಶಾಮಣ್ಣ) ರವರೊಂದಿಗೆ ನನ್ನ ವಿವಾಹವಾಗಿ ಕುಂದೂರು ಸೇರಿದ್ದೆ. ಆದರೆ ನಮ್ಮೆಜಮಾನ್ರು ನಾನೇ ಕೆಲಸದಲ್ಲಿಲ್ಲ ನಿಮಗ್ಯಾಕೆ ರಿಸೈನ್ ಮಾಡಿ ಅಂದ್ರು, ರಿಸೈನ್ಮಾಡ್ದೆ. ನಮ್ಮೆಜಮಾನ್ರು ನನಗೆ ಬಹುವಚನದಲ್ಲಿ ಹೇಳಿದ ಮಾತುಗಳನ್ನು ಓದುಗರು ಗಮನಿಸಿರಬಹುದು. ಹೌದು ಅವರು ಯಾವಾಗಲೂ ಹೆಣ್ಣು ಮಕ್ಕಳಿಗೆ ದೊಡ್ಡವರಾಗಲೀ, ಚಿಕ್ಕವರಾಗಲೀ ಗೌರವದಿಂದ ಬೆಲೆ ಕೊಟ್ಟು ಬಹುವಚನದಲ್ಲಿ ಮಾತನಾಡಿಸುವ ಸ್ವಭಾವ. ಅವರ ಅತ್ತಿಗೆಯಂದಿರನ್ನೆಲ್ಲ ಅತ್ಗೆ ಯಮ, ನಾದಿನಿಯರನ್ನು, ಸೊಸೆ ಮೊಮ್ಮಕ್ಕಳನ್ನು ಸಹ ಬನ್ರಮ್ಮ, ಹೋಗ್ರಮ್ಮ ಅಂತಾನೆ ಮಾತನಾಡಿಸುತ್ತಿದ್ದರು. ಅದು ಅವರ ಸಂಸ್ಕಾರ. ನನ್ನ ತಾಯಿ ಅಜ್ಜಿಗೆ ಗುಣವಂತ ಅಳಿಯ ಅಂತ ಅಚ್ಚುಮೆಚ್ಚಾಗಿತ್ತು. ಅದೆಲ್ಲಾ ಈಗ ಸಿಹಿ ನೆನಪುಗಳು ಮಾತ್ರ..
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.
ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ದಾನಿಗಳ ಸಹಕಾರ ಅಗತ್ಯ: ಡಾ|| ಅಮರೇಶ ಪಾಟೀಲ್
ಗಂಗಾವತಿ: ಸರಕಾರಿ ಶಾಲೆಗಳಲ್ಲಿ ಓದುವ ಮಕ್ಕಳ ಪಾಲಕರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿರುತ್ತದೆ. ಆದರೂ ಅವರು ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ದೊರೆಯಲಿ ಎಂಬ ಉದ್ದೇಶದಿಂದ ತಮಗೆ ಎಷ್ಟೇ ಕಷ್ಟವಿದ್ದರೂ ಮಕ್ಕಳನ್ನು ಶಾಲೆಗಳಿಗೆ ಕಳಿಸುತ್ತಾರೆ. ಸರಕಾರದ ಜೊತೆಗೆ ನಾವೂ ಕೈಜೋಡಿಸಿದಾಗ ಸರ್ಕಾರಿ ಶಾಲೆಗಳನ್ನು ಉಳಿಸಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಜವಾಬ್ದಾರಿ ಜೊತೆಗೆ ಸಾರ್ವಜನಿಕರ ಜವಾಬ್ದಾರಿಯೂ ಅಷ್ಟೇ ಇರುತ್ತದೆ ಎಂದು ಗಂಗಾವತಿಯ ಖ್ಯಾತ ಮಕ್ಕಳ ತಜ್ಞರು ಹಾಗೂ ಐಎಪಿ ವಿಜಯನಗರ ಶಾಖೆಯ ಅಧ್ಯಕ್ಷರಾದ ಡಾ|| ಅಮರೇಶ್ ಪಾಟೀಲ್ ಅವರು ಅಭಿಪ್ರಾಯಪಟ್ಟರು.
ಅವರು ಇತ್ತೀಚೆಗೆ ಗಂಗಾವತಿಯ ಸ.ಹಿ.ಪ್ರಾ. ಶಾಲೆ ವಿರುಪಾಪುರ ತಾಂಡಾದಲ್ಲಿ ಆಯೋಜಿಸಿದ್ದ ದಾನಿಗಳಿಗೆ ಗೌರವ ಸಮರ್ಪಣಾ ಸಮಾರಂ
ಭದಲ್ಲಿ ಭಾಗವಹಿಸಿ ಮಾತನಾಡಿದರು. ಸರ್ಕಾರಿ ಶಾಲೆಗೆ ಎಲ್.ಇ.ಡಿ ಟಿ.ವಿ ದೇಣಿಗೆ ನೀಡಿ ಮಾತನಾಡಿದರು. ಸರಕಾರ ಕೊಡುವ ಬಿಸಿ ಊಟ, ಹಾಲು, ಮೊಟ್ಟೆ, ಪಠ್ಯಪುಸ್ತಕ, ಸಮವಸ್ತçಗಳ ಜೊತೆಗೆ ಇಂದಿನ ಡಿಜಿಟಲ್ ಯುಗದಲ್ಲಿ ಆಧುನಿಕ ಹಾಗೂ ತಂತ್ರಜ್ಞಾನ ಆಧಾರಿತ ಪರಿಣಾಮಕಾರಿಯಾದ ಶಿಕ್ಷಣ ಸಿಗಲಿ ಎಂಬ ಸದುದ್ದೇಶದಿಂದ ಶ್ರೀಮತಿ ಶ್ರೀದೇವಿಯವರು ಎಲ್.ಇ.ಡಿ ಟಿವಿಯ ಅವಶ್ಯಕತೆ ನಮ್ಮ ಶಾಲೆಗೆ ಇದೆ ಎನ್ನುವ ವಿಷಯ ಪ್ರಸ್ತಾಪಿಸಿದಾಗ ನಾನು ಅತ್ಯಂತ ಸಂತೋಷದಿAದ ಎಲ್.ಇ.ಡಿ ಟಿವಿಯನ್ನು ನೀಡಲು ಒಪ್ಪಿದ್ದೇನೆ. ಕನ್ನಡ ಭಾಷೆ ಮತ್ತು ಕನ್ನಡ ಶಾಲೆಗಳನ್ನು ಉಳಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯವಾಗಿದೆ ಎಂದು ಹೇಳುತ್ತಾ ಬನ್ನಿ ಸರ್ಕಾರಿ ಶಾಲೆಗಳನ್ನು ಉಳಿಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಗಂಗಾವತಿಯ ಸಿಎಂಎಸ್ ಎಂಟರ್ ಪ್ರೈಸಸ್‌ನ ಮಾಲಿಕರಾದ ಶ್ರೀ ಅಮಿತ್‌ಕುಮಾರ್, ಚಂದ್ರಶೇಖರ ಬಲಕುಂದಿ ಅವರು ಶಾಲಾ ದಾಖಲಾತಿಗಳ ಸಂರಕ್ಷಣೆಯ ಉದ್ದೇಶದಿಂದ ಹತ್ತು ಸಾವಿರ ರೂಪಾಯಿ ಬೆಲೆ ಬಾಳುವ ಅಲ್ಮಾರವನ್ನು ಹಾಗೂ ವಿರುಪಾಪುರ ತಾಂಡಾದ ಗುತ್ತಿಗೆದಾರರಾದ ಶ್ರೀ ವೆಂಕಟೇಶ್ ನಾಯಕ್ ಮಾತಾಳೋ ಇವರು ಐದು ಸಾವಿರ ರೂಪಾಯಿ ಬೆಲೆಬಾಳುವ ಡಯಾಸ್ ಅನ್ನು ದೇಣಿಗೆ ನೀಡಿದ್ದರಿಂದ, ಈ ಮೂವರು ದಾನಿಗಳಿಗೆ ಶಾಲೆಯವತಿಯಿಂದ ಗೌರವ ಸಮರ್ಪಣೆ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಮುಖ್ಯೋಪಾಧ್ಯಾಯರು ಸ.ಕಿ.ಪ್ರಾ ಶಾಲೆ ವಿರುಪಾಪುರ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಗೌರವ ಸಮರ್ಪಣೆಯ ನಂತರ ಮುಖ್ಯೋಪಾಧ್ಯಾಯರಾದ ರಾಮಣ್ಣ ಅವರು ಸರಕಾರದ ಜೊತೆಗೆ ಇಂತಹ ದಾನಿಗಳು ಕೈ ಜೋಡಿಸಿದಾಗ ಸರ್ಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ. ನಿಮ್ಮ ಸಹಾಯ ಸಹಕಾರ ಸದಾ ನಮ್ಮೊಂದಿಗೆ ಇರಲಿ ಎಂದು ಕೃತಜ್ಞತೆಗಳನ್ನು ಸಲ್ಲಿಸಿದರು.
ಸಹ ಶಿಕ್ಷಕಿಯಾದ ಜಿ. ಶ್ರೀದೇವಿ ಕೃಷ್ಣಪ್ಪ ಅವರು “ಪ್ರಾರ್ಥಿಸುವ ತುಟಿಗಳಿಗಿಂತ ದಾನ ನೀಡುವ ಕೈ ದೊಡ್ಡದು” ಎಂಬಂತೆ ಶಾಲೆಗೆ ಅಗತ್ಯವಿರುವ ವಸ್ತುಗಳ ಬಗ್ಗೆ ಪ್ರಸ್ತಾಪ ಮಾಡಿದ ತಕ್ಷಣ ದೇಣಿಗೆ ನೀಡಲು ಒಪ್ಪಿಕೊಂಡ ಮೂವರು ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದುರುಗಪ್ಪ, ಶಿಕ್ಷಣ ಪ್ರೇಮಿಗಳು, ಸಹ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಪವಿತ್ರ ಕುಂಭಮೇಳ ಅಮೃತ ಸ್ನಾನ ನೆರವೇರಿಸಿದ ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾ ಮುಖಂಡರಗಳ ಕುಟುಂಬಸ್ಥರು.
ಗಂಗಾವತಿ: ನಗರದ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ಶರಣಪ್ಪ ಬಚಾಳಿ ಕುಟುಂಬ ವರ್ಗದವರು, ಮಹಿಳಾ ಮೋರ್ಚಾದ ಮುಖಂಡರಾದ ಲಲಿತಾ ನಾಗರಾಜ್ ಕುಟುಂಬಸ್ಥರು ಪ್ರಯಾಗರಾಜ್ ತ್ರಿವೇಣಿ ಸಂಗಮದ ಕುಂಭಮೇಳದಲ್ಲಿ ಅಮೃತ ಸ್ನಾನ ನೆರವೇರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕುಂಭಮೇಳದ ಇತಿಹಾಸವನ್ನು ಗಮನಿಸಿದಾಗ ಭಾರತದ ಪರಂಪರೆ ಸಂಸ್ಕೃತಿಯ ಮೇಳವಾಗಿ ಕುಂಭಮೇಳ ಕಂಗೊಳಿಸುತ್ತಿದೆ. 144 ವರ್ಷಗಳ ಬಳಿಕ ಬಂದಿರುವ ಈ ಮಹಾ ಕುಂಭಮೇಳ ದೇಶ ಸೇರಿದಂತೆ ವಿದೇಶಿಗಳನ್ನು ದಿನದಿಂದ ದಿನಕ್ಕೆ ಆಕರ್ಷಿಸುತ್ತಿದೆ. ಕಳೆದ ಜನವರಿ 13 ರಿಂದ ಆರಂಭವಾದ ಈ ಮೇಳ ಧಾರ್ಮಿಕ ಕಾರ್ಯಕ್ರಮ ಫೆಬ್ರುವರಿ 26ರ ವರೆಗೆ ನಡೆಯಲಿದ್ದು, 144 ವರ್ಷಗಳ ಬಳಿಕ ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವುದು ಭಕ್ತರನ್ನು ಸಮುದ್ರದ ಅಲೆಯಂತೆ ಉಕ್ಕಿ ಉಕ್ಕಿ ಬರುತ್ತಿದೆ. ಇಂತಹ ಪವಿತ್ರವಾದ ಕುಂಭಮೇಳದಲ್ಲಿ ಅಮೃತ ಸ್ನಾನವನ್ನು ನಡೆಸಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಬಿಜೆಪಿ ಮುಖಂಡ ಶರಣಪ್ಪ ಬಾಚಾಳಿ ಅಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.
ಇತ್ತೀಚಿಗಷ್ಟೇ ಕಾಲ್ತುಳಿತ ಪ್ರಕರಣದಿಂದಾಗಿ ಉತ್ತರಪ್ರದೇಶ ಯೋಗಿ ನೇತೃತ್ವದ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಆಗಮಿಸಲಾಗಿದೆ ಎಂದು ತಿಳಿಸಿದರು.
ಲಲಿತಾ ನಾಗರಾ
ಜ್ ಮಹಿಳಾ ಮೋರ್ಚಾ ಮುಖಂಡರು ಮಾತನಾಡಿ ಆತ್ಮ ಶುದ್ಧಿಗಾಗಿ ತ್ರಿವೇಣಿ ಸಂಗಮದ ಸ್ನಾನ ಅತ್ಯಂತ ಪವಿತ್ರ ಹಾಗೂ ಮಹತ್ವವನ್ನು ಹೊಂದಿದೆ. ಯೋಗ ಧ್ಯಾನ. ಆಧ್ಯಾತ್ಮಿಕ ಸೆಳೆತ ಸೇರಿದಂತೆ ವಿವಿಧತೆಯಲ್ಲಿ ಏಕತೆಯ ಮನೋಭಾವನೆ ಮೇಳದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಿದರು.


