ಗಂಗಾವತಿ: ನಗರದ ಭಾರತೀಯ ಜನತಾ ಪಕ್ಷದ ಯುವ ಮುಖಂಡರಾದ ಶರಣಪ್ಪ ಬಚಾಳಿ ಕುಟುಂಬ ವರ್ಗದವರು, ಮಹಿಳಾ ಮೋರ್ಚಾದ ಮುಖಂಡರಾದ ಲಲಿತಾ ನಾಗರಾಜ್ ಕುಟುಂಬಸ್ಥರು ಪ್ರಯಾಗರಾಜ್ ತ್ರಿವೇಣಿ ಸಂಗಮದ ಕುಂಭಮೇಳದಲ್ಲಿ ಅಮೃತ ಸ್ನಾನ ನೆರವೇರಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಕುಂಭಮೇಳದ ಇತಿಹಾಸವನ್ನು ಗಮನಿಸಿದಾಗ ಭಾರತದ ಪರಂಪರೆ ಸಂಸ್ಕೃತಿಯ ಮೇಳವಾಗಿ ಕುಂಭಮೇಳ ಕಂಗೊಳಿಸುತ್ತಿದೆ. 144 ವರ್ಷಗಳ ಬಳಿಕ ಬಂದಿರುವ ಈ ಮಹಾ ಕುಂಭಮೇಳ ದೇಶ ಸೇರಿದಂತೆ ವಿದೇಶಿಗಳನ್ನು ದಿನದಿಂದ ದಿನಕ್ಕೆ ಆಕರ್ಷಿಸುತ್ತಿದೆ. ಕಳೆದ ಜನವರಿ 13 ರಿಂದ ಆರಂಭವಾದ ಈ ಮೇಳ ಧಾರ್ಮಿಕ ಕಾರ್ಯಕ್ರಮ ಫೆಬ್ರುವರಿ 26ರ ವರೆಗೆ ನಡೆಯಲಿದ್ದು, 144 ವರ್ಷಗಳ ಬಳಿಕ ಪ್ರಯಾಗರಾಜ್ ತ್ರಿವೇಣಿ ಸಂಗಮದಲ್ಲಿ ಜರುಗುತ್ತಿರುವುದು ಭಕ್ತರನ್ನು ಸಮುದ್ರದ ಅಲೆಯಂತೆ ಉಕ್ಕಿ ಉಕ್ಕಿ ಬರುತ್ತಿದೆ. ಇಂತಹ ಪವಿತ್ರವಾದ ಕುಂಭಮೇಳದಲ್ಲಿ ಅಮೃತ ಸ್ನಾನವನ್ನು ನಡೆಸಿರುವುದು ನಮ್ಮ ಸೌಭಾಗ್ಯವಾಗಿದೆ ಎಂದು ಬಿಜೆಪಿ ಮುಖಂಡ ಶರಣಪ್ಪ ಬಾಚಾಳಿ ಅಲ್ಲಿನ ತಮ್ಮ ಅನುಭವವನ್ನು ಹಂಚಿಕೊಂಡರು.
ಇತ್ತೀಚಿಗಷ್ಟೇ ಕಾಲ್ತುಳಿತ ಪ್ರಕರಣದಿಂದಾಗಿ ಉತ್ತರಪ್ರದೇಶ ಯೋಗಿ ನೇತೃತ್ವದ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಅನುಸರಿಸಿದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಆಗಮಿಸಲಾಗಿದೆ ಎಂದು ತಿಳಿಸಿದರು.
ಲಲಿತಾ ನಾಗರಾಜ್ ಮಹಿಳಾ ಮೋರ್ಚಾ ಮುಖಂಡರು ಮಾತನಾಡಿ ಆತ್ಮ ಶುದ್ಧಿಗಾಗಿ ತ್ರಿವೇಣಿ ಸಂಗಮದ ಸ್ನಾನ ಅತ್ಯಂತ ಪವಿತ್ರ ಹಾಗೂ ಮಹತ್ವವನ್ನು ಹೊಂದಿದೆ. ಯೋಗ ಧ್ಯಾನ. ಆಧ್ಯಾತ್ಮಿಕ ಸೆಳೆತ ಸೇರಿದಂತೆ ವಿವಿಧತೆಯಲ್ಲಿ ಏಕತೆಯ ಮನೋಭಾವನೆ ಮೇಳದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಹೇಳಿದರು.