ಗಂಗಾವತಿ: ಇಲ್ಲಿನ ಶಂಕರ ಮಠದಲ್ಲಿ ಶ್ರೀ ದತ್ತಾತ್ರೇಯ ಜಯಂತೋತ್ಸವದ ಸಂದರ್ಭದಲ್ಲಿ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ಸುವರ್ಣ ಮಹೋತ್ಸವ ಆಚರಣೆಯ ಪ್ರಯುಕ್ತ ಕಿರಿಯ ಸ್ವಾಮೀಜಿಗಳಾದ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ಆಶಯದಂತೆ ಹರ ಮತ್ತು ಹರಿ ಒಂದೇ ಎಂಬ ದಿವ್ಯ ಸಂದೇಶವನ್ನು ಸಾರುವ ಉದ್ದೇಶದಿಂದ ಹಾಗೂ ಶ್ರೀಮತಸ್ಥರು ಒಂದಾಗುವುದರ ಮೂಲಕ ಸನಾತನ ಧರ್ಮದ ರಕ್ಷಣೆಗಾಗಿ ಹರಿ ನಾಮಾಮೃತ ಕೋಟಿ ಬರವಣಿಗೆ ಪತ್ರಿಕೆಯನ್ನು ಧರ್ಮದರ್ಶಿ ನಾರಾಯಣರಾವ್ ಉದ್ಘಾಟಿಸಿದರು
ಬಳಿಕ ಮಾತನಾಡಿದ ಅವರು ಯಾವುದೇ ಜಾತಿ ಮತ ಪಂಥವೆನಿಸದೆ ಸರ್ವ ಜನಾಂಗದವರು ಶಿವನಾಮ ಹಾಗೂ ರಾಮನಾಮವನ್ನು 108 ಬರವಣಿಗೆ ಮೂಲಕ ಶೃಂಗೇರಿ ಉಭಯ ಜಗದ್ಗುರುಗಳಿಗೆ ಸಮರ್ಪಿಸಲಾಗುತ್ತದೆ ಎಂದು ತಿಳಿಸಿ. ಆಗಮಿಸಿದ ಸರ್ವ ಭಕ್ತಾದಿಗಳಿಗೆ ವಿತರಿಸಿದರು.
ಇದೇ ಸಂದರ್ಭದಲ್ಲಿ ಮೋಹನ್ ಹಂಪಿ ಅವರಿಂದ ಶ್ರೀ ದತ್ತಾತ್ರೇಯ ಕುರಿತು ಪ್ರವಚನ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಚಿತ್ರದುರ್ಗ: ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರುಗಳ ಹಾಗೂ ವಿದ್ಯಾರ್ಥಿಗಳ ಬದ್ದತೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ಆರ್.ಪುಟ್ಟಸ್ವಾಮಿ ತಿಳಿಸಿದರು.
ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪಿಹೆಚ್‌ಡಿ ಸಹಿತ ಹತ್ತು ಹಲವು ಪದವಿ ಪಡೆದ ಉಪನ್ಯಾಸಕರು ಎಷ್ಟೇ ಬುದ್ದಿವಂತರಾಗಿದ್ದರೂ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ತಲುಪದೆ ಹೋದರೆ ತರಗತಿಗಳು ಯಶಸ್ವಿಯಾಗುವುದಿಲ್ಲ ಎಂದರು.
ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ ಈ ಹಿಂದೆ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುವಾಗ ನೆಮ್ಮದಿಯಿತ್ತು. ಬೋಧನೆ ಹೊರತು ಬೇರೆ ಯಾವುದೇ ಕಾರ್ಯಭಾರ ಇರಲಿಲ್ಲ. ಆದರೆ ಈಗ ಬೋಧನೆ ಸಹಿತ ಇನ್ನಿತರೆ ಕೆಲಸಗಳ ಒತ್ತಡದಲ್ಲಿ ಕಲಿಸುವುದು ಒಂದು ಭಾಗವಾಗಿ ಮಾತ್ರ ಉಳಿದಿದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಡಾ.ಜೆ. ಮೋಹನ್ ಪ್ರಾಸ್ತಾವಿಕ ಮಾತನಾಡುತ್ತಾ ಕಾರ್ಯಾಗಾರಗಳು ಫಲಿಶಾಂಶ ಹೆಚ್ಚುಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು
ಪ್ರಾಂಶುಪಾಲರಾದ ವಿ. ಲೋಕೇಶ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಬದಲಾದ ಪಠ್ಯವಸ್ತು, ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಬೋಧನಾ ವಿಧಾನದಲ್ಲಿ ಹೊಸತನ ಕಂಡುಕೊಳ್ಳಲು ಇಂತಹ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.
ಹಿರಿಯ ಪ್ರಾಂಶುಪಾಲರಾದ ಹೆಚ್.ಬಿ. ನರಸಿಂಹಮೂರ್ತಿ, ಜಿ.ದೇವರಾಜ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್. ದೇವೇಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಡಾ.ಎನ್. ಪ್ರಭಾಕರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಆರಂಭದಲ್ಲಿ ಉಪನ್ಯಾಸಕಿ ಶ್ರೀಮತಿ ಮೀರಾ ನಾಡಿಗ್ ಪ್ರಾರ್ಥಿಸಿದರು, ಉಪನ್ಯಾಸಕ ಬುಡೇನ್ ಸಾಬ್ ಸ್ವಾಗತಿಸಿದರು, ಪ್ರಾಂಶುಪಾಲರಾದ ಶ್ರೀಮತಿ ಸರೋಜಮ್ಮ ವಂದಿಸಿದರು. ಉಪನ್ಯಾಸಕ ಆರ್.ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಗಂಗಾವತಿ: ತಾಲೂಕಿನ ಹೊಸಕೇರಾ ಗ್ರಾಮ ಪಂಚಾಯತಿ, ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ (ರಿ) ಶ್ರೀರಾಮನಗರ, ವೈದೇಹಿ ಆಸ್ಪತ್ರೆ ಬೆಂಗಳೂರು, ಮಾರುತಿ ಕಣ್ಣಿನ ಮತ್ತು ಹಲ್ಲಿನ ಆಸ್ಪತ್ರೆ ಗಂಗಾವತಿ, ಇವರುಗಳ ಸಹಯೋಗದಲ್ಲಿ ಡಿಸೆಂಬರ್-೧೮ ಬುಧವಾರ ಬೆಳಿಗ್ಗೆ ೧೦:೦೦ ರಿಂದ ಮಧ್ಯಾಹ್ನ ೨:೦೦ ಗಂಟೆಯವರೆಗೆ ಹೊಸಕೇರಾ ಗ್ರಾಮದ ಶ್ರೀ ದುರ್ಗಾದೇವಿ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ಹಾಗೂ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೊಸಕೇರಿ ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಸುನಿತಾ ಎಸ್. ಮತ್ತು ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉಚಿತ ಆರೋಗ್ಯ ಶಿಬಿರದಲ್ಲಿ ನುರಿತ ವೈದ್ಯರಿಂದ ವೈದ್ಯಕೀಯ ಚಿಕಿತ್ಸೆ ಪಡೆಯಬಹುದು ಹಾಗೂ ಗಂಭೀರ ಕಾಯಿಲೆಗಳಾದ ಹೃದಯರೋಗ, ಕಣ್ಣಿನ ತಪಾಸಣೆ, ಸಕ್ಕರೆ ಕಾಯಿಲೆ, ಬಿ.ಪಿ., ದಂತಚಿಕಿತ್ಸೆ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಸಂಬAಧಿಸಿದAತೆ ಚಿಕಿತ್ಸೆ ನೀಡಲಾಗುವುದು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ: ಮೊಬೈಲ್ ೯೪೪೮೨೨೮೭೩೮ ಸಂಖ್ಯೆಯನ್ನು ಸಂಪರ್ಕಿಸಲು ತಿಳಿಸಲಾಗಿದೆ.