ಚಿತ್ರದುರ್ಗ: ಪಿಯುಸಿ ಫಲಿತಾಂಶ ಸುಧಾರಣೆಯಲ್ಲಿ ಉಪನ್ಯಾಸಕರುಗಳ ಹಾಗೂ ವಿದ್ಯಾರ್ಥಿಗಳ ಬದ್ದತೆ ಪ್ರಮುಖ ಪಾತ್ರವಹಿಸುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ)ಯ ಉಪನಿರ್ದೇಶಕರಾದ ಆರ್.ಪುಟ್ಟಸ್ವಾಮಿ ತಿಳಿಸಿದರು.
ಅವರು ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯಶಾಸ್ತ್ರ ವಿಷಯದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪಿಹೆಚ್‌ಡಿ ಸಹಿತ ಹತ್ತು ಹಲವು ಪದವಿ ಪಡೆದ ಉಪನ್ಯಾಸಕರು ಎಷ್ಟೇ ಬುದ್ದಿವಂತರಾಗಿದ್ದರೂ ತರಗತಿಗಳಲ್ಲಿ ವಿದ್ಯಾರ್ಥಿಗಳನ್ನು ತಲುಪದೆ ಹೋದರೆ ತರಗತಿಗಳು ಯಶಸ್ವಿಯಾಗುವುದಿಲ್ಲ ಎಂದರು.
ಚಿತ್ರದುರ್ಗ ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್ ಮಾತನಾಡಿ ಈ ಹಿಂದೆ ಉಪನ್ಯಾಸಕನಾಗಿ ಕೆಲಸ ನಿರ್ವಹಿಸುವಾಗ ನೆಮ್ಮದಿಯಿತ್ತು. ಬೋಧನೆ ಹೊರತು ಬೇರೆ ಯಾವುದೇ ಕಾರ್ಯಭಾರ ಇರಲಿಲ್ಲ. ಆದರೆ ಈಗ ಬೋಧನೆ ಸಹಿತ ಇನ್ನಿತರೆ ಕೆಲಸಗಳ ಒತ್ತಡದಲ್ಲಿ ಕಲಿಸುವುದು ಒಂದು ಭಾಗವಾಗಿ ಮಾತ್ರ ಉಳಿದಿದೆ ಎಂದು ಹೇಳಿದರು.
ರಾಜ್ಯಶಾಸ್ತ್ರ ವೇದಿಕೆಯ ಅಧ್ಯಕ್ಷರಾದ ಡಾ.ಜೆ. ಮೋಹನ್ ಪ್ರಾಸ್ತಾವಿಕ ಮಾತನಾಡುತ್ತಾ ಕಾರ್ಯಾಗಾರಗಳು ಫಲಿಶಾಂಶ ಹೆಚ್ಚುಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಹೀಗಾಗಿ ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು
ಪ್ರಾಂಶುಪಾಲರಾದ ವಿ. ಲೋಕೇಶ್ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಬದಲಾದ ಪಠ್ಯವಸ್ತು, ಪ್ರಶ್ನೆಪತ್ರಿಕೆಗೆ ಅನುಗುಣವಾಗಿ ಬೋಧನಾ ವಿಧಾನದಲ್ಲಿ ಹೊಸತನ ಕಂಡುಕೊಳ್ಳಲು ಇಂತಹ ಕಾರ್ಯಾಗಾರಗಳು ಹೆಚ್ಚು ಸಹಕಾರಿಯಾಗುತ್ತವೆ ಎಂದರು.
ಹಿರಿಯ ಪ್ರಾಂಶುಪಾಲರಾದ ಹೆಚ್.ಬಿ. ನರಸಿಂಹಮೂರ್ತಿ, ಜಿ.ದೇವರಾಜ್, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಸ್. ದೇವೇಂದ್ರಪ್ಪ, ಸಂಪನ್ಮೂಲ ವ್ಯಕ್ತಿ ಡಾ.ಎನ್. ಪ್ರಭಾಕರ್ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಆರಂಭದಲ್ಲಿ ಉಪನ್ಯಾಸಕಿ ಶ್ರೀಮತಿ ಮೀರಾ ನಾಡಿಗ್ ಪ್ರಾರ್ಥಿಸಿದರು, ಉಪನ್ಯಾಸಕ ಬುಡೇನ್ ಸಾಬ್ ಸ್ವಾಗತಿಸಿದರು, ಪ್ರಾಂಶುಪಾಲರಾದ ಶ್ರೀಮತಿ ಸರೋಜಮ್ಮ ವಂದಿಸಿದರು. ಉಪನ್ಯಾಸಕ ಆರ್.ಚಂದ್ರಶೇಖರ್ ಕಾರ್ಯಕ್ರಮ ನಿರ್ವಹಣೆ ಮಾಡಿದರು.
