ಜನವರಿ-೨೫ ರಿಂದ ೩೧ ರವರೆಗೆ ಗಂಗಾವತಿಯಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ
ಗಂಗಾವತಿ: ಕಿಷ್ಕಿಂಧಾ ಪ್ರತಿಷ್ಠಾನ ಗಂಗಾವತಿ, ವಿಪ್ರಸಿರಿ ಸೌಹಾರ್ದ ಸಹಕಾರ ಸಂಘ ನಿಯಮಿತ ಗಂಗಾವತಿ ಇವರಿಂದ ಜನವರಿ-೨೫ ರಿಂದ ೩೧ ರವರೆಗೆ ಸಂಜೆ ೬ ರಿಂದ ೮ ರವರೆಗೆ ನಗರದ ಕೋರ್ಟ್ ಮುಂಭಾಗದ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದಲ್ಲಿ ಮಹರ್ಷಿ ವಾಲ್ಮೀಕಿ ಶ್ರೀ ರಾಮಾಯಣ ಕಿಷ್ಕಿಂಧಾ ಕಾಂಡ ಪ್ರವಚನ ನಡೆಯಲಿದೆ ಎಂದು ಸಂಚಾಲಕರಾದ ಪವನಕುಮಾರ ಗುಂಡೂರು ಪ್ರಕಟಣೆಯಲ್ಲಿ ತಿಳಿಸಿದರು.
ಈ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಕಜ್ಜಿಡೋಣಿ ಶಂಕರಾಚಾರ್ಯ ಅವಧೂತ ಆಶ್ರಮದ ವಿದ್ವಾನ್ ಶ್ರೀ ಕೃಷ್ಣಾನಂದ ಶರಣರು ಮಾಡಲಿದ್ದು, ಪ್ರವಚನವನ್ನು ಖ್ಯಾತ ವಿದ್ವಾಂಸರಾದ ವಿದ್ವಾನ್ ಶ್ರೀ ಜಗದೀಶ ಶರ್ಮಾ ಸಂಪ ಬೆಂಗಳೂರು ಇವರು ನೀಡಲಿದ್ದಾರೆ.
ಜನವರಿ-೨೫ ಶನಿವಾರ ರಾಮಾಯಣ ಅವತಾರ, ಜನವರಿ-೨೬ ರವಿವಾರ ಶಬರಿ-ಮಾತಂಗ ಪರ್ವತ, ಜನವರಿ-೨೭ ಸೋಮವಾರ ಶ್ರೀರಾಮ-ಪಂಪಾಸರೋವರ, ಜನವರಿ-೨೮ ಮಂಗಳವಾರ ಆಂಜನೇಯ-ಅAಜನಾದ್ರಿ, ಜನವರಿ-೨೯ ಬುಧವಾರ ಸುಗ್ರೀವ-ಋಷ್ಯಮೂಕ, ಜನವರಿ-೩೦ ಗುರುವಾರ ವಾಲಿ-ತಾರಾ ಪರ್ವತ ಕುರಿತಂತೆ ಪ್ರವಚನ ನಡೆಯಲಿದೆ. ಪ್ರವಚನದ ಸಮಾರೋಪ ಸಮಾರಂಭವು ಜನವರಿ-೩೧ ಶನಿವಾರ ಸಂಜೆ ೬:೦೦ ಗಂಟೆಗೆ ರಾಮಾಯಣದ ಸಂದೇಶದೊAದಿಗೆ ನಡೆಯಲಿದೆ ಎಂದು ತಿಳಿಸಿದರು.
ಮತ್ತೊರ್ವ ಸಂಚಾಲಕರಾದ ನಾಗರಾಜ ಗುತ್ತೇದಾರ ಮಾತನಾಡಿ, ಸನಾತನ ಸಂಸ್ಕೃತಿಯನ್ನು, ಮೌಲ್ಯಗಳನ್ನು, ಆದರ್ಶನಗಳನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕಿಷ್ಕಿಂಧಾ ಕಾಂಡ ವಿಶೇಷವಾಗಿ ನಮ್ಮ ನೆಲದ ಬಗ್ಗೆ ಮಾಹಿತಿ ನೀಡುತ್ತದೆ. ಕುಟುಂಬದ ಎಲ್ಲಾ ಸದಸ್ಯರು ಒಟ್ಟಾಗಿ ಈ ರೀತಿಯ ಪ್ರವಚನ ಕಾರ್ಯಕ್ರಮಗಳಿಗೆ ಭಾಗವಹಿಸುವುದರಿಂದ ಭತ್ತದ ಕಣಜವು ಜ್ಞಾನದ ಕಣಜ, ಆಧ್ಯಾತ್ಮಿಕ ಕಣಜ ಆಗುವುದರಲ್ಲಿ ಸಂದೇಹವಿಲ್ಲ. ಕಾರಣ ಗಂಗಾವತಿಯ ಸರ್ವ ಸಮಾಜದ ನಾಗರಿಕರು ಪ್ರವಚನದ ಸದುಪಯೋಗಪಡಿಸಿಕೊಳ್ಳುವುದರ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಕಾರ್ಯದಲ್ಲಿ ನಿರತರಾಗಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಇತರ ಸಂಚಾಲಕರಾದ ಜೋಗದ ನಾರಾಯಣಪ್ಪ ನಾಯಕ, ಸುಬ್ರಹ್ಮಣ್ಯ ರಾಯಕರ್, ಅಕ್ಕಿ ಚಂದ್ರಶೇಖರ, ಅರ್ಜುನ ಕೆ.ವೈ.ಟಿ.ಸಿ., ಬದರಿ ನಾರಾಯಣ ಜೋಶಿ, ಅನೀಲ್ ದೇಸಾಯಿ, ಗುರುರಾಜ ಚಿರ್ಚನಗುಡ್ಡ, ಜಗನ್ನಾಥ ಆಲಂಪಲ್ಲಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


ನೀನು ಏನ್ ಮಾಡ್ತ ಇದ್ದಿಯಾ. ಇನ್ನೂ ನಾಟಕ ಬರ‍್ಕೊಂಡು ಕೂತಿದ್ದಿಯ. ತಂಡ ಕಟ್ಕೊಂಡು ತಿರುಗ್ತಿದ್ದಿಯಾ ಹೇಗೆ..? ಹೀಗೆ ನಮ್ಮ ಮಾತು ಮುಂದುವರೆದು ಪ್ಲಾಷ್ ಬ್ಯಾಕ್‌ಗೆ ಬಂದೆವು. ಮಲ್ಲಪ್ಪದೂರ ಉತ್ತಮ ನಟರು. ಅವರ ಊರು ಮೈಸೂರು ತಾ. ದೂರ. ಅದು ನಂಜನಗೂಡು ಕಡೆ ಬರುತ್ತದೆಯಂತೆ.! ನಮ್ಮೂರಿನಲ್ಲಿ ಹೇಮಾವತಿ ನದಿ ಅಣೆಕಟ್ಟೆ ಕೆಲಸ ಪ್ರಾರಂಭವಾಗಿ ಸರ್ಕಾರಿ ದಿನಗೂಲಿ ಕೆಲಸ ಸೇರಿ ಹೇಮಾವತಿ ವಸತಿ ಕಾಲೋನಿಯಲ್ಲಿ ವಾಸವಿದ್ದರು. ಆಗ ನಾನು ಹೈಸ್ಕೂಲು ವಿದ್ಯಾರ್ಥಿ. ಊರಿನಲ್ಲಿ ಜಿ.ಎಸ್.ಪ್ರಕಾಶ್ ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ರಾಜ್ಯೋತ್ಸವ ದಿನ ಸಾಮಾಜಿಕ ನಾಟಕ ಕಲಿತು ಹೆಚ್‌ಆರ್‌ಪಿ ಮನರಂಜನಾ ಮಂದಿರದಲ್ಲಿ ಪ್ರದರ್ಶಿಸುತ್ತಿದ್ದರು. ಬೇಲೂರು ಕೃಷ್ಣಮೂರ್ತಿಯವರ ಲಚ್ಚಿ, ತ್ಯಾಗಿ, ಕಂಬನಿ, ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿದ ನೆನಪು. ಈ ಎಲ್ಲಾ ನಾಟಕಗಳಲ್ಲಿ ಮಲ್ಲಪ್ಪದೂರ ಅಭಿನಯಿಸಿದ್ದರು. ಈ ತಂಡ ಪ್ರದರ್ಶಿಸಿದ ಸುಳಿಯಲ್ಲಿ ಸಿಕ್ಕವರು ನಾಟಕ ರಂಗದ ಮೇಲೆ ಅದ್ಭುತವಾಗಿ ಮೂಡಿಬಂದಿತ್ತು. ತ್ಯಾಗಿ ನಾಟಕದ ಅಭಿನಯದಿಂದ ತ್ಯಾಗಿಮಂಜು ಎಂದೇ ಊರಿನಲ್ಲಿ ಹೆಸರಾಗಿದ್ದರು ಬ್ರದರ್ ಜಿ.ಆರ್.ಮಂಜುನಾಥ್. ನವೆಂಬರ್ ೧ಕ್ಕೆ ಕುದುರೆ ಮೊಟ್ಟೆ ನಾಟಕ ಪ್ರದರ್ಶಿಸಿ ನನಗೆ ಸ್ಟೂಡೆಂಟ್ ಆಗಿ ಗುರುಗಳನ್ನು ನೋಡಲು ಬರುವಂತೆ ರಂಗದ ಮೇಲೆ ಮಂಜಣ್ಣ ಹೇಳಿದ್ದರು. ಯಾವುದೇ ಡೈಲಾಗ್ ಇಲ್ಲದೆ ರಂಗ ಪ್ರವೇಶಿಸಿದ್ದ ನನ್ನನ್ನು ಬ್ರದರ್ ಕಾಮಿಡಿಗೆ ಬಳಸಿಕೊಂಡು ಗೇಲಿ ಮಾಡಿ ಪ್ರೇಕ್ಷಕರನ್ನು ನಗಿಸಿದ್ದರು. ಪ್ರಥಮ ರಂಗ ಪ್ರವೇಶವೇ ನನಗೆ ಶೇಮ್.! ಬಹುಶ: ನನಗೆ ಗೊತ್ತಿಲ್ಲದೇ ಇದನ್ನೇ ಸವಾಲಾಗಿ ಸ್ವೀಕರಿಸಿ ನಟ ನಾಟಕಕಾರ, ರಂಗ ವಿಮರ್ಶಕನಾಗಿ ಬೆಳೆದೆನು. ಮುಂದೆ ಮಂಜಣ್ಣ ನಾನೇ ಬರೆದಾಡಿಸಿದ ವೀರಪ್ಪನ್ ಭೂತ ನಾಟಕದಲ್ಲಿ ನಟಿಸಿದ್ದರು. ಈ ನಾಟಕಕ್ಕೆ ನಿಜವಾಗಿಯೂ ಜೀವ ತುಂಬಿ ಜನಪ್ರಿಯತೆಗೆ ಕಾರಣರಾದವರು ಮಲ್ಲಪ್ಪದೂರ. ಆಗ ಡಿಸೆಂಬರ್ ಜನವರಿ ತಿಂಗಳಲ್ಲಿ ಹಾಸನ, ಸಕಲೇಶಪುರ, ಹೊಳೆನರಸೀಪುರ ಜಾತ್ರೆಗಳಲ್ಲಿ ಈ ನಾಟಕ ಪ್ರದರ್ಶಿಸಿದೆವು. ಹಾಸನ ಜಾತ್ರೆ ವಸ್ತು ಪ್ರದರ್ಶನದಲ್ಲಿ ಸಂಜೆ ಆರರಿಂದ ಏಳು ಗಂಟೆಯವರೆಗೆ ಜಿಲ್ಲಾ ನಾಟಕ ತಂಡಗಳಿಗೆ ಸ್ಫರ್ಧಾ ನಾಟಕಕ್ಕೆ ಅವಕಾಶ. ಅಂದು ನಮ್ಮ ನಾಟಕದ ನಂತರ ಮಾಸ್ಟರ್ ಹಿರಣ್ಣಯ್ಯನವರ ನಾಟಕ. ನಾಟಕದ ಹೆಸರು ನೆನಪಿಲ್ಲ. ನಮ್ಮ ನಾಟಕದ ಮಧ್ಯೆ ನಿರೂಪಕರು ಸ್ವರೂಪ್ ಬಂದು ನಾಟಕ ಬೇಗ ಮುಗಿಸಿ ಮಾಸ್ಟರ್ ಹಿರಣ್ಣಯ್ಯನವರ ನಾಟಕ ಇದೆ ಎಂದು ಅವಸರಿಸಿ ನನಗೆ ಸಿಟ್ಟು ಬಂತು. ಆಗ ಹಿರಣ್ಣಯ್ಯನವರೇ ಏಕೆ ಅವರ ನಾಟಕಕ್ಕೆ ತೊಂದರೆ ಕೊಡ್ತಿರಿ. ಅವರು ಕಲಾವಿದರೇ ಚೆನ್ನಾಗಿ ಮಾಡ್ತಿದ್ದಾರೆ ಬಿಡಿ. ನನ್ನ ನಾಟಕ ನೋಡುವ ಆಸಕ್ತಿ ಇದ್ದವರು ಕಾಯುತ್ತಾರೆ. ನಾನು ನಾಟಕದಲ್ಲಿ ರಾಜಕಾರಣಿಗಳು ನೇರಾ ಟೀಕಿಸಿ ವಿಡಂಬಿಸಿದರೆ ಇವರು ಚಪ್ಪಲಿ ಸುತ್ತಿ ಹೊಡೆಯುತ್ತಿದ್ದಾರೆ ಅಷ್ಟೇ ಬಿಡಿ ಎಂದಿದ್ದರು. ಮಾಸ್ಟರ್ ಹಿರಣ್ಣಯ್ಯರಂತೆ ಮಲ್ಲಪ್ಪ ದೂರ ಕೂಡ ಸಂದರ್ಭೋಚಿತ ಹೊಸ ಡೈಲಾಗ್ ಹೊಡೆದು ಎದುರು ಪಾತ್ರದಾರಿಯನ್ನು ಗಲಿಬಿಲಿಗೊಳಿಸುತ್ತಿದ್ದರು. ಈ ವೀರಪ್ಪನ್ ಭೂತ ನಾಟಕ ನಾನು ಬರೆದು ಪ್ರಥಮ ಪ್ರದರ್ಶನ ತಾ. ೩೦-೧೧-೧೯೯೧ರಂದು ಗೊರೂರಿನಲ್ಲಿ ನಡೆದಿತು. ನಾಟಕ ನೋಡಿ ಕೃಪಾ ಎಂಬುವರು ತಾ. ೬-೧೨-೧೯೯೧ರ ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಒಳ್ಳೆಯ ವಿಮರ್ಶೆ ಬರೆದಿದ್ದರು. ಯಾರಪ್ಪ ಕೃಪಾ ಇಷ್ಟು ಚೆನ್ನಾಗಿ ಬರೆದಿದ್ದಾರಲ್ಲಾ ಎಂದು ಆಶ್ಚರ್ಯಪಟ್ಟಿದ್ದೆ. ಇರಲಿ ಅಂದು ನಾನು ಸೃಷ್ಟಿಸಿದ ನಾಟಕದ ಪಾತ್ರಗಳು ಮುಂದಿನ ದಿನಗಳಲ್ಲಿ ವಾಸ್ತವವಾಗಿ ಗೋಚರಿಸಿದ್ದವು. ಆಗ ಯಾರ ಕಣ್ಣಿಗೂ ಬೀಳದ ವೀರಪ್ಪನ್ ಭೂತವಾಗಿ ಪೊಲೀಸರನ್ನು ಕಾಡುತ್ತಿದ್ದನು. ನನ್ನ ನಾಟಕದಲ್ಲೂ ವೀರಪ್ಪನ್ ಬರುವುದಿಲ್ಲ. ಬದಲು ಕಾಡಿನಲ್ಲಿ ಈರಪ್ಪ ಎಂಬ ವ್ಯಕ್ತಿ ಗಾರ್ಡ್ ಗಳ ಕೈಗೆ ಸಿಕ್ಕಿ ನಡೆಯುವ ಘಟನೆಗಳು ಕಾಲ್ಪನಿಕವಾಗಿ ರೂಪು ತೆಳೆದಿದ್ದವು. ಮುಂದೆ ಅವುಗಳಲ್ಲಿ ಒಂದಿಷ್ಟು ನಿಜವಾಗಿ ಘಟಿಸಿದವು. ಇದೇ ವರ್ಷ ೧೯೯೧ರಲ್ಲಿ ನಿಜ ವೀರಪ್ಪ ಮತ್ತು ಈರಪ್ಪ ಮುಖಾಮುಖಿ ಆಗಿದ್ದ ಸನ್ನಿವೇಶವನ್ನು ಜಿ.ಬಿ.ಅಶೋಕಕುಮಾರ್ ಅವರು ತಮ್ಮ ಹುಲಿಯ ನೆನಪು ಪುಸ್ತಕದಲ್ಲಿ ಬರೆದಿದ್ದಾರೆ.