ಭಕ್ತಿ ಮಾರ್ಗಕ್ಕೆ ಜಾತಿ ಧರ್ಮದ ಹಂಗಿಲ್ಲ: ಕೆ.ಎಫ್. ಮುದ್ದಾಬಳ್ಳಿ

ಗಂಗಾವತಿ: ಸಂಗೀತ ಎಂಬುದು ಯಾವುದೇ ಒಬ್ಬ ವ್ಯಕ್ತಿಯ ಸ್ವತ್ತಲ್ಲ. ಯಾವುದೇ ಜಾತಿ ಮತ ಎಣಿಸದೆ, ಸರ್ವರನ್ನೂ ಆಕರ್ಷಿಸುವ ದಿವ್ಯಶಕ್ತಿ ಸಂಗೀತ ಹೊಂದಿದೆ ಎಂದು ಗಾನಯೋಗಿ ಶ್ರೀ ಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಕೆಎಫ್ ಮುದ್ದಾಬಳ್ಳಿ ಹೇಳಿದರು.

ಅವರು. ಕಳೆದ ಮಹಾ ಶಿವರಾತ್ರಿ ಪ್ರಯುಕ್ತ ಹಿರೇಜಂತಕಲ್‌ನ ಈಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯೆ ಅಬೀದಾ ಬೇಗಂ, ಕಲಾವಿದ ವೆಂಕಟೇಶ್ ದಾಸನಾಳ ಇತರರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸಣ್ಣಪ್ಪ ಕಮ್ಮಾರ್. ಜಿ.ನಾಗೇಶ್ವರ ರಾವ್, ದೇವಸ್ಥಾನ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಕಲಾವಿದರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ರಾಜ ಮನೆತನದ ಶ್ರೀರಂಗದೇವರಾಯಲು ಜನ್ಮ ದಿನೋತ್ಸವ

ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಮಾರ್ಚ್-೩ ಸೋಮವಾರ ವಿಜಯನಗರ ಸಾಮ್ರಾಜ್ಯದ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು ಅವರ ೮೭ನೇ ವರ್ಷದ ಜನ್ಮದಿನೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಆನೆಗೊಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹಲವಾರು ತಲೆಮಾರುಗಳಿಂದ ಇವರ ವಂಶಸ್ಥರಾಗಿ ಇದೇ ಆನೆಗೊಂದಿ ಗ್ರಾಮದಲ್ಲಿ ಜೀವಿಸುತ್ತಿದ್ದಾರೆ. ಶ್ರೀರಂಗದೇವರಾಯಲು ರಾಜಕೀಯಕ್ಕೆ ಪ್ರವೇಶಿಸಿ ಸತತ ಐದುಬಾರಿ ಕನಕಗಿರಿ ಮತ್ತು ಗಂಗಾವತಿ ಎರಡು ಕ್ಷೇತ್ರಗಳಿಗೆ ಶಾಸಕರಾಗಿ, ಸಚಿವರಾಗಿ ರೈತಾಪಿ ವರ್ಗದ ಜನರ ಹಿತವನ್ನು ಕಾಯುತ್ತ ಮತ್ತು ದೀನ-ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಈ ಹಿಂದೆ ಹಂಪಿ ಉತ್ಸವವನ್ನು ಆಚರಿಸುವಾಗ ಎಂ.ಪಿ. ಪ್ರಕಾಶ್ ರವರ ಮನವೊಲಿಸಿ ಹಂಪಿ ಉತ್ಸವದ ಜೊತೆಗೆ ಆನೆಗೊಂದಿ ಉತ್ಸವವು ನಡೆಯುವಂತೆ ಮಾಡಿದ್ದರು. ಆನೆಗುಂದಿ ಉತ್ಸವವನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಉತ್ತಮ ಜನಸೇವೆಯನ್ನು ಮಾಡಿ ಶ್ರೀರಂಗದೇವರಾಯಲುರವರು ಜನಮಾನಸದಲ್ಲಿ ಅಚ್ಚಹಸಿರಾಗಿ ಉಳಿದುಕೊಂಡಿದ್ದಾರೆ. ಈಗ ಅವರು ನಮ್ಮನ್ನು ಅಗಲಿದ್ದರೂ ಸಹ, ಅವರ ೮೭ನೇ ವರ್ಷದ ಜನ್ಮ ದಿನೋತ್ಸವವನ್ನು ನಾವು ಸದಾ ಆಚರಣೆ ಮಾಡುತ್ತಾ ಬರುತ್ತೇವೆ ಎಂದು ಅವರ ಕಟ್ಟಾ ಬೆಂಬಲಿಗರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಹೆಚ್.ಎಂ. ಸಿದ್ದರಾಮಸ್ವಾಮಿ ಮಾಧ್ಯಮ ದೊಂದಿಗೆ ಮಾತನಾಡಿ ಹೇಳಿದರು.

ಜೊತೆಗೆ ಶ್ರೀರಂಗದೇವರಾಯಲು ಅವರ ದೂರದೃಷ್ಟಿ ಮತ್ತು ಅವರ ಜನಸೇವೆ, ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ಬೆಳೆಯಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ವಿಷ್ಣುತೀರ್ಥ ಜೋಶಿ, ಗ್ರಾ.ಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ, ವಿರುಪಾಕ್ಷಯ್ಯ ಸ್ವಾಮಿ, ಕೆ. ತಿರುಕಪ್ಪ, ರವಿಕುಮಾರ ಮತ್ತು ಅವರ ಅಭಿಮಾನಿ ಬಳಗದ ಜೊತೆಗೆ ಆನೆಗುಂದಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

ಅಡುಗೆ ಮನೆಯೇ ವಿಜ್ಞಾನದ ಲ್ಯಾಬ್, ತಾಯಿಯೇ ವಿಜ್ಞಾನದ ಗುರು: ಹಿರಿಯ ವಿಜ್ಞಾನಿ ಮಹಾಂತಶಿವಯೋಗಿ

ಗಂಗಾವತಿ: ಮಕ್ಕಳಿಗೆ ಅಡುಗೆ ಮನೆಯೆ ವಿಜ್ಞಾನದ ಲ್ಯಾಬ್ ಇದ್ದಹಾಗೆ, ತಾಯಿಯೇ ವಿಜ್ಞಾನ ಗುರು ಎಂದು ಗಂಗಾವತಿಯ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಹಿರಿಯ ವಿಜ್ಞಾನಿಗಳಾದ ಮಹಾಂತಶಿವಯೋಗಿಯವರು ಹೇಳಿದರು.

ಅವರು ಮಾರ್ಚ್-೩ ಸೋಮವಾರ ನಗರದ ಮಹಾನ್ ಕಿಡ್ಸ್ ಶಾಲೆಯಲ್ಲಿ ಆಚರಿಸಲಾದ ವಿಜ್ಞಾನ ದಿನಾಚರಣೆಯಲ್ಲಿ ವಿಜ್ಞಾನ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಈ ಶಾಲೆಯ ಮಕ್ಕಳು ಮಾಡಿದ ಸ್ಪ್ರೇಯನ್ನು ಖಾಲಿ ಬೋರ್ಡ್‌ನಲ್ಲಿ ಸಿಂಪಡಿಸಿದಾಗ ವೆಲ್‌ಕಮ್ ಟು ಮಹಾನ್ ಸೈನ್ಸ್ ಡೇ ಎಂದು ಗೋಚರಿಸಿತು. ಮಹಾನ್ ಕಿಡ್ಸ್ ಶಾಲೆ ಮಕ್ಕಳು ಬಯೋಲಜಿ, ಫಿಸಿಕ್ಸ್, ಕೆಮಿಸ್ಟ್ರಿ, ಬಯೋಸೈನ್ಸ್ ಗಳ ಮಾಡೆಲ್‌ಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದರು. ವಿಶೇಷವಾಗಿ ಫಾರಿನ್ ಸಿಕ್ ಲ್ಯಾಬ್‌ಗಳಲ್ಲಿ ಫಿಂಗರ್ ಪ್ರಿಂಟ್ ಹೇಗೆ ತೆಗೆಯಲಾಗುತ್ತದೆ ಹಾಗೂ ಡಿಎನ್‌ಎ ಟೆಸ್ಟ್ ಮತ್ತು ಗ್ಯಾಲಕ್ಸಿ, ತ್ರಿಡಿ ಪ್ರಾಜೆಕ್ಟರ್‌ಗಳು, ವಿಆರ್, ರಕ್ತಪರೀಕ್ಷೆ ಮಾಡೆಲ್‌ಗಳು, ಸ್ಟಾರ್ಚ್‌ಗಳನ್ನು ತೆಗೆಯುವುದು ತಮ್ಮ ವಯಸ್ಸಿಗೆ ಮೀರಿದ ವಿಜ್ಞಾನ ಪ್ರದರ್ಶನಗಳನ್ನು ಮಕ್ಕಳು ಮಾಡಿದ್ದರು.

ಇದೇ ಸಂದರ್ಭದಲ್ಲಿ ಶಾಲೆಯ ಅಧ್ಯಕ್ಷರಾದ ಶ್ರೀ ನೇತ್ರಾಜ್ ಗುರುವಿನ ಮಠ ಮಾತನಾಡಿ, ನಮ್ಮ ಶಾಲೆಯಲ್ಲಿ ವಿಜ್ಞಾನವನ್ನು ಪ್ರತಿನಿತ್ಯ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದರು.

ಮುಖ್ಯ ಶಿಕ್ಷಕಿ ಶ್ರೀಮತಿ ಸವಿತಾ ಮಾತನಾಡಿ ನಮ್ಮ ಶಾಲೆಯಲ್ಲಿ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ರೀತಿಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮ ಕಲಿಕೆಯಲ್ಲಿ ಆಸಕ್ತಿ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಹಲವಾರು ಪಾಲಕರು ಪಾಲ್ಗೊಂಡು ಮಾತನಾಡಿ, ಈ ಶಾಲೆಯಲ್ಲಿ ಮಕ್ಕಳು ತುಂಬಾ ಸಂತೋಷದಿಂದ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಹಲವಾರು ಕಾರ್ಯಕ್ರಮಗಳನ್ನು ಶಾಲೆಯಲ್ಲಿ ಮಾಡುತ್ತಿರುವುದರಿಂದ ಮಕ್ಕಳು ಸಂತೋಷದಿಂದ ಪ್ರತಿಯೊಂದು ವಿಷಯದಲ್ಲೂ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಹಾಗೂ ಕಲಿಯುತ್ತಿದ್ದಾರೆ ಎಂದು ತಮ್ಮ ಸಂತೋಷವನ್ನು ಹಂಚಿಕೊಂಡರು.

ಈ ಸಂದರ್ಭಧಲ್ಲಿ ಶಿಕ್ಷಕರಾದ ಚಂಪರಾಣಿ, ತೇಜಸ್ವಿನಿ, ತಿಮ್ಮಪ್ಪ, ಸಿದ್ದೇಶ್, ಮುತ್ತ, ಕುಮುದಿನಿ, ವಿಜಯಲಕ್ಷ್ಮಿ, ಶಾಂತ, ಚಂದ್ರಶೇಖರ್ ಕುಂಬಾರ್, ಮಂಜುನಾಥ್ ತಳವಾರ್, ಮಂಜುನಾಥ್, ಪ್ರಸಾದ್, ಶ್ವೇತ, ತಿಮ್ಮಪ್ಪ, ಮಂಜುನಾಥ್, ಶ್ರೀದೇವಿ, ವೀರಯ್ಯ, ಅಸ್ಮ ಸೇರಿದಂತೆ ಇತರ ಶಿಕ್ಷಕರು ಇದ್ದರು.

ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕಾರಟಗಿ ತಾಲೂಕ ಯುವ ಘಟಕದ ಅಧ್ಯಕ್ಷರಾಗಿ ದೇವರಾಜ ಬೂದುಗುಂಪ ನೇಮಕ

ಗಂಗಾವತಿ: ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ನರಸಿಂಹಲು ಚಿಂತಲಕುಂಟ, ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿ ಇವರುಗಳ ನೇತೃತ್ವದಲ್ಲಿ ಮಾರ್ಚ್-೩ ಸೋಮವಾರ ಗಂಗಾವತಿ ನಗರದ ಸರ್ಕೀಟ್ ಹೌಸ್‌ನಲ್ಲಿ ಕಾರಟಗಿ ತಾಲೂಕ ಯುವ ಘಟಕದ ಅಧ್ಯಕ್ಷರನ್ನಾಗಿ ದೇವರಾಜ ಬೂದುಗುಂಪ ಅವರನ್ನು ನೇಮಕ ಮಾಡಲಾಯಿತು.

ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಯಲ್ಲಪ್ಪ ಕಟ್ಟಿಮನಿಯವರು ನೇಮಕಾತಿ ಆದೇಶ ಪತ್ರ ನೀಡಿ, ಕಾರಟಗಿ ತಾಲ್ಲೂಕ ಕೇಂದ್ರದಾಧ್ಯಂತ ಪ್ರವಾಸ ಮಾಡಿ ಅಥವಾ ಪತ್ರಿಕಾ ಪ್ರಕಟಣೆಯ ಮೂಲಕ ಸಂಘಟನೆ ಬಲಪಡಿಸಲು ಕಾರ್ಯನಿರ್ವಹಿಸಬೇಕೆಂದು ತಿಳಿಸಿದರು.