ರಾಜ ಮನೆತನದ ಶ್ರೀರಂಗದೇವರಾಯಲು ಜನ್ಮ ದಿನೋತ್ಸವ

ಗಂಗಾವತಿ: ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಮಾರ್ಚ್-೩ ಸೋಮವಾರ ವಿಜಯನಗರ ಸಾಮ್ರಾಜ್ಯದ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು ಅವರ ೮೭ನೇ ವರ್ಷದ ಜನ್ಮದಿನೋತ್ಸವವನ್ನು ಅತ್ಯಂತ ಸರಳವಾಗಿ ಆಚರಿಸಲಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ ಆನೆಗೊಂದಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಹಲವಾರು ತಲೆಮಾರುಗಳಿಂದ ಇವರ ವಂಶಸ್ಥರಾಗಿ ಇದೇ ಆನೆಗೊಂದಿ ಗ್ರಾಮದಲ್ಲಿ ಜೀವಿಸುತ್ತಿದ್ದಾರೆ. ಶ್ರೀರಂಗದೇವರಾಯಲು ರಾಜಕೀಯಕ್ಕೆ ಪ್ರವೇಶಿಸಿ ಸತತ ಐದುಬಾರಿ ಕನಕಗಿರಿ ಮತ್ತು ಗಂಗಾವತಿ ಎರಡು ಕ್ಷೇತ್ರಗಳಿಗೆ ಶಾಸಕರಾಗಿ, ಸಚಿವರಾಗಿ ರೈತಾಪಿ ವರ್ಗದ ಜನರ ಹಿತವನ್ನು ಕಾಯುತ್ತ ಮತ್ತು ದೀನ-ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಈ ಹಿಂದೆ ಹಂಪಿ ಉತ್ಸವವನ್ನು ಆಚರಿಸುವಾಗ ಎಂ.ಪಿ. ಪ್ರಕಾಶ್ ರವರ ಮನವೊಲಿಸಿ ಹಂಪಿ ಉತ್ಸವದ ಜೊತೆಗೆ ಆನೆಗೊಂದಿ ಉತ್ಸವವು ನಡೆಯುವಂತೆ ಮಾಡಿದ್ದರು. ಆನೆಗುಂದಿ ಉತ್ಸವವನ್ನು ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇಂತಹ ಉತ್ತಮ ಜನಸೇವೆಯನ್ನು ಮಾಡಿ ಶ್ರೀರಂಗದೇವರಾಯಲುರವರು ಜನಮಾನಸದಲ್ಲಿ ಅಚ್ಚಹಸಿರಾಗಿ ಉಳಿದುಕೊಂಡಿದ್ದಾರೆ. ಈಗ ಅವರು ನಮ್ಮನ್ನು ಅಗಲಿದ್ದರೂ ಸಹ, ಅವರ ೮೭ನೇ ವರ್ಷದ ಜನ್ಮ ದಿನೋತ್ಸವವನ್ನು ನಾವು ಸದಾ ಆಚರಣೆ ಮಾಡುತ್ತಾ ಬರುತ್ತೇವೆ ಎಂದು ಅವರ ಕಟ್ಟಾ ಬೆಂಬಲಿಗರಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಹಾಗೂ ಬಿಜೆಪಿ ಹಿರಿಯ ಮುಖಂಡರಾದ ಹೆಚ್.ಎಂ. ಸಿದ್ದರಾಮಸ್ವಾಮಿ ಮಾಧ್ಯಮ ದೊಂದಿಗೆ ಮಾತನಾಡಿ ಹೇಳಿದರು.

ಜೊತೆಗೆ ಶ್ರೀರಂಗದೇವರಾಯಲು ಅವರ ದೂರದೃಷ್ಟಿ ಮತ್ತು ಅವರ ಜನಸೇವೆ, ಅವರ ಮಾರ್ಗದರ್ಶನ ಇಂದಿನ ಯುವ ಪೀಳಿಗೆ ತಮ್ಮ ಜೀವನದಲ್ಲಿ ಆದರ್ಶಗಳನ್ನು ಅಳವಡಿಸಿಕೊಂಡು ಅವರಂತೆ ಬೆಳೆಯಬೇಕೆಂದು ಆಶಿಸಿದರು.

ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಶ್ರೀಮತಿ ಲಲಿತಾರಾಣಿ ಶ್ರೀರಂಗದೇವರಾಯಲು, ವಿಷ್ಣುತೀರ್ಥ ಜೋಶಿ, ಗ್ರಾ.ಪಂ ಮಾಜಿ ಅಧ್ಯಕ್ಷ ತಿಮ್ಮಪ್ಪ ಬಾಳೆಕಾಯಿ, ವಿರುಪಾಕ್ಷಯ್ಯ ಸ್ವಾಮಿ, ಕೆ. ತಿರುಕಪ್ಪ, ರವಿಕುಮಾರ ಮತ್ತು ಅವರ ಅಭಿಮಾನಿ ಬಳಗದ ಜೊತೆಗೆ ಆನೆಗುಂದಿ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.

Leave a Reply