ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

ಗಂಗಾವತಿ. ನಗರದ ತಹಶೀಲ್ ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು ಉಪ ತಹಶೀಲ್ದಾರ್ ಮಹಾಂತೇಶ್ ಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ. ಆಚರಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಮಹಾಂತೇಶ್ ಗೌಡ ಮಾಹಿತಿ ನೀಡಿದರು.

ಬಳಿಕ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಮಾತನಾಡಿ ಕೇಂದ್ರ ಸರ್ಕಾರದ ಆದೇಶದಂತೆ ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ತತ್ವಜ್ಞಾನಿಗಳ (ವಿಶ್ವ ದಾರ್ಶನಿಕರ) ದಿನಾಚರಣೆಯನ್ನು ಮೇ-2 ಶುಕ್ರವಾರದಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಆಚರಿಸಲು ತಹಶೀಲ್ದಾರರು ಆದೇಶ ನೀಡಬೇಕು. ಅಗತ್ಯ ಇದ್ದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರವನ್ನು ಇಲಾಖೆಗಳಿಗೆ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ. ಜಗನ್ನಾಥ್ ಅಳವಂಡಿಕರ್, ಅನಿಲ್ ಅಳವಂಡಿಕರ್‌, ನಾಗೇಶ್ ಭಟ್, ಶೇಷಗಿರಿ, ಶ್ರೀಪಾದ್ ಮುಧೋಳಕರ್, ವೇಣುಗೋಪಾಲ್, ಹೊಸಳ್ಳಿ ಭೀಮಶಂಕರ, ಮೋಹನ್ ಲೆಕ್ಕಿಹಾಳ ಇತರರು ಉಪಸ್ಥಿತರಿದ್ದರು.

ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ

ಗಂಗಾವತಿ: ತಾಲೂಕಿನ ಗಡ್ಡಿ-ಉಡುಮಕಲ್ ಗ್ರಾಮದಲ್ಲಿ ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ ಇದೇ ಏಪ್ರಿಲ್-೩೦ ಬುಧವಾರ ನಡೆಯಲಿದೆ.

ಏಪ್ರಿಲ್-೨೯ ಮಂಗಳವಾರ ಆಹ್ವಾನಿತರ ಭಜನಾ ಸಂಘದವರಿಂದ ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ, ಏಪ್ರಿಲ್-೩೦ ಬುಧವಾರ ಬೆಳಗ್ಗೆ ೩:೦೦ ಗಂಟೆಗೆ ತಾತನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ ೬:೦೦ ಗಂಟೆಗೆ ಸುಮಂಗಲೆಯರಿಂದ ಕಳಶದೊಂದಿಗೆ ಡೊಳ್ಳಿನ ಸಂಗಡ ಗಂಗೆಸ್ಥಳಕ್ಕೆ ಹೋಗಿ ಬರುವುದು, ನಂತರ ಗಣಾರಾಧನೆ ನಡೆಯುವುದು, ನಂತರ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ ೫:೦೦ ಗಂಟೆಗೆ ತಾತನವರ ಉತ್ಸವ ಜರುಗಲಿದೆ.

ಉತ್ಸವದ ನೇತೃತ್ವವನ್ನು ಗಡ್ಡಿಮಠದ ಶ್ರೀ ವೇ.ಮೂ. ಈಶ್ವರಯ್ಯ ಸ್ವಾಮಿ ಹಾಗೂ ಉಡುಮಕಲ್ ಬೃಹನ್ಮಠದ ಅಧ್ಯಕ್ಷರಾದ ಶ್ರೀ ವೇ.ಮೂ. ವೀರಬಸವ ಶಾಸ್ತ್ರಿಗಳು ವಹಿಸಲಿದ್ದಾರೆ. ಮೇ-೦೧ ರಂದು ಅಮರೇಶಯ್ಯಸ್ವಾಮಿ ಗಡ್ಡಿಮಠ ಇವರ ಅಧ್ಯಕ್ಷತೆಯಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಈ ಜಾತ್ರಾ ಮಹೋತ್ಸವಕ್ಕೆ ಸಕಲ ಭಕ್ತಾದಿಗಳು ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಮುಖ್ಯಸ್ಥರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಪಕೀರಪ್ಪ ಪೂಜಾರ ಇವರು ವಿನಂತಿಸಿದ್ದಾರೆ.

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್

ಗಂಗಾವತಿ: ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿ ನೋಂದಣಿಗೆ ಸಲ್ಲಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಸಂಘವು ಕ್ರಾಂತಿಚಕ್ರ ಬಳಗದ ಅಡಿಯಲ್ಲಿ ನೋಂದಣಿಯಾಗಲಿದ್ದು, ಸಂಘಕ್ಕೆ ನಿವೃತ್ತ ಹಿರಿಯ ಕಾರ್ಮಿಕ ನಿರೀಕ್ಷಕರಾದ ಶೇಖರಗೌಡ ಮಾಲಿಪಾಟೀಲ್‌ರವರು ಗೌರವ ಸಲಹೆಗಾರರಾಗಿ ಸಲಹೆ ನೀಡಲಿದ್ದು, ಅಧ್ಯಕ್ಷರಾಗಿ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರಾಗಿ ಹನುಮಂತ ಚೌಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮೆಹಬೂಬಸಾಬ ಲಾಠಿ, ಜಂಟಿ ಕಾರ್ಯದರ್ಶಿಯಾಗಿ ಚಾಂದಪಾಷಾ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಮರಿಸ್ವಾಮಿ, ಎಸ್. ಸಿಖಂದರ್, ಖಜಾಂಚಿಯಾಗಿ ಸೈಯ್ಯದ್ ಇಸೂಬ್ ರವರನ್ನು ನೇಮಿಸಲಾಗಿದ್ದು, ಸಂಘವು ಕಾರ್ಮಿಕ ಇಲಾಖೆಯ ಕಾಯ್ದೆಗಳನ್ವಯ ಕಾರ್ಯನಿರ್ವಹಿಸಲಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಲಿದೆ ಎಂದು ತಿಳಿಸಿದರು.