ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಾಯಿತು.

ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ಶನಿವಾರ ಶ್ರೀ ವೀರಾಂಜನೇಯ ಕೃಪಾ ಪೋಷಿತ ನಾಟಕ ಮಂಡಳಿ, ಹಾಸನ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಾಸನ. ಇವರ ಸಹಯೋಗದಲ್ಲಿ ಯುವ ನಿರ್ದೇಶಕ ಹೇಮಂತ್ ದೇವರಾಜ್ ನಿರ್ದೇಶನದಲ್ಲಿ ಬಂದೂರು ಶ್ರೀ ಸಿದ್ಧಲಿಂಗೇಶ್ವರ ಡ್ರಾಮ ಸೀನರಿಯ ರಂಗಸಜ್ಜಿಕೆಯಲ್ಲಿ ಪ್ರದರ್ಶಿತವಾದ ಸಂಪೂರ್ಣ ರಾಮಾಯಣ ನಾಟಕದಲ್ಲಿ ದಶರಥನ ಪಾತ್ರದಲ್ಲಿ ನವಿಲುಹಳ್ಳಿ ವಾಸುದೇವ್ ಉತ್ತಮ ಅಭಿನಯದಿಂದ ಪ್ರೇಕ್ಷಕರ ಮನ ಸೆಳೆದರು. ಕೈಕೆ ಪಾತ್ರದಲ್ಲಿ ಲಕ್ಷ್ಮೀ ಶ್ರೀಧರ್ ನಟಿಸಿದರು.

ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ವಿಶ್ವ ಯೋಗ ದಿನಾಚರಣೆ

ಗಂಗಾವತಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ಗಂಗಾವತಿಯ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಎನ್.ಎಸ್.ಎಸ್ ಘಟಕದ ವತಿಯಿಂದ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ಈ ಸಂದರ್ಭದಲ್ಲಿ ಬಸವನದುರ್ಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಛತ್ರಪ್ಪ ತಂಬೂರಿ ಅವರು ವಿದ್ಯಾರ್ಥಿಗಳಿಗೆ ಯೋಗವನ್ನು ವಿವರಿಸಿದರು. ಅವರು ಯೋಗ, ಪ್ರಾಣಾಯಾಮ ಹಾಗೂ ಆರೋಗ್ಯದ ಮಹತ್ವವನ್ನು ವಿವರಿಸುತ್ತಾ, ವಿದ್ಯಾರ್ಥಿಗಳ ಓದು ಮತ್ತು ಏಕಾಗ್ರತೆಯ ಅಭಿವೃದ್ಧಿಗೆ ಯೋಗ ಮತ್ತು ಧ್ಯಾನ ಹೇಗೆ ಸಹಾಯಕವಾಗಬಹುದು ಎಂಬುದನ್ನು ಅತ್ಯಂತ ಸ್ಪಷ್ಟವಾಗಿ ತಿಳಿಸಿದರು.ಯೋಗ ಮತ್ತು ಪ್ರಾಣಾಯಮದ ಆಸನಗಳನ್ನು ಮಾಡಿ ತೋರಿಸಿ, ಯೋಗದ ಮಧ್ಯೆ ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ನೈತಿಕ ಮೌಲ್ಯಗಳನ್ನು ಹೇಳುವ ಮೂಲಕ ಸ್ವಯಂ ಸೇವಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಹಿರಿಯ ಉಪನ್ಯಾಸಕರಾದ ಸೋಮಶೇಖರಗೌಡ, ಚಂದ್ರಶೇಖರ ರೆಡ್ಡಿ, ಲಿಂಗಣ್ಣ ಜಂಗಮರಹಳ್ಳಿ, ಅಜಗರ್ ಪಾಷಾ, ಈಶ್ವರಪ್ಪ, ಕುಮಾರಸ್ವಾಮಿ, ಶ್ರೀಮತಿ ರಮಾ, ಶ್ರೀಮತಿ ಶ್ರೀದೇವಿ, ಶ್ರೀಮತಿ ಲಕ್ಷೀ, ಚಿದಾನಂದ ಮೇಟಿ, ಶ್ರೀಮತಿ ಕನಕಮ್ಮ, ಮಹೇಶ್ ಹಿರೇಮಠ, ನಿರುಪಾದಿ, ಶ್ರೀಮತಿ ಕವಿತಾ ಹಾಗೂ ಎನ್.ಎಸ್.ಎಸ್ ಸ್ವಯಂ ಸೇವಕ, ಸೇವಕಿಯರು ಉಪಸ್ಥಿತರಿದ್ದರು.

ಗ್ರಂಥ ಪಾಲಕರಾದ ರಮೇಶ ಗಬ್ಬೂರು ಕಾರ್ಯಕ್ರಮಕ್ಕೆ ಎಲ್ಲರನ್ನೂ ಸ್ವಾಗತಿಸುತ್ತಾ, ಛತ್ರಪ್ಪ ತಂಬೂರಿ ಅವರನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.

ಪ್ರಾಚಾರ್ಯರು, ಉಪನ್ಯಾಸಕರು, ಗ್ರಂಥಪಾಲಕರು ಮತ್ತು ವಿದ್ಯಾರ್ಥಿಗಳೆಲ್ಲಾ ಸೇರಿ ಯೋಗವನ್ನು ಮಾಡುವುದರ ಮೂಲಕ ಯೋಗ ದಿನವನ್ನು ಯಶಸ್ವಿಗೊಳಿಸಿದರು.

ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ರಮೇಶ್ ಕೋಟಿ ನೇಮಕ

ಗಂಗಾವತಿ: ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ (ರಿ) ಬೆಂಗಳೂರು ರಾಜ್ಯ ಅಧ್ಯಕ್ಷ ಜಿ.ಎಮ್.ರಾಜಶೇಖರ್ ಇವರ ಆದೇಶದ ಮೇರೆಗೆ ಭೀಮ ಘರ್ಜನೆ ಸಂಪಾದಕ ರಮೇಶ ಕೋಟಿ ಇವರನ್ನು ಕೊಪ್ಪಳ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಇಂದಿನಿಂದ ಅವರು ಕೊಪ್ಪಳ ಜಿಲ್ಲೆಯಲ್ಲಿ ನಮ್ಮ ಸಂಘದ ಸಂಘಟನೆ ಮಾಡಲು ಮತ್ತು ವೃತ್ತಿಪರ ಪತ್ರಕರ್ತರನ್ನು ಸಂಘದ ಸದಸ್ಯತ್ವ ಮಾಡಲು ಮತ್ತು ಸಂಘದ ಹೆಸರಿಗೆ ಚ್ಯುತಿ ಬರದಂತೆ ಕೆಲಸ ಮಾಡಲು ಮುಂದಾಗಲು ತಿಳಿಸಲಾಗಿದೆ.

ಭಾರತೀಯ ಸಂಸ್ಕೃತಿಯ ಅಮೂಲ್ಯ ಕೊಡುಗೆ ಯೋಗ

ಯೋಗವು ಭಾರತದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಹುಟ್ಟಿಕೊಂಡ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಸಾಧನೆ. ಯೋಗವು ಭಾರತೀಯ ಸಂಸ್ಕೃತಿಯ ಮಹತ್ವದ ಕೊಡುಗೆಗಳಲ್ಲಿ ಒಂದು. ಇದು ನಮ್ಮ ದೇಹ, ಮನಸ್ಸು ಹಾಗೂ ಆತ್ಮ ಸಮತೋಲನ ಸಾಧಿಸುವ ಪ್ರಾಚೀನ ಶಿಸ್ತು ಸಂಯಮದ ಪಾಠ.

ಯೋಗ ಎನ್ನುವ ಪದ ಸಂಸ್ಕೃತದ ಯುಜ್‌ ಧಾತುವಿನಿಂದ ಹುಟ್ಟಿದೆ.  ಯುಜ್ ಎಂದರೆ ಜೋಡಿಸು, ಕೂಡಿಸು, ಸಂಬಂಧಿಸು. ದೇಹ ಮತ್ತು ಮನಸ್ಸಿನ ಏಕತೆ ಪ್ರತಿನಿಧಿಸುವ ಯೋಗಾಭ್ಯಾಸ ವೇದ ಕಾಲದಿಂದ ಇಂದಿನವರೆಗೂ ಮುಂದುವರೆದು ಬಂದಿದೆ. ಕ್ರಿ.ಶ. 400 ರಲ್ಲಿ ಪತಂಜಲಿ ಮಹರ್ಷಿ ರಚಿಸಿದ ಯೋಗಸೂತ್ರ ಯೋಗದ ಕುರಿತಾದ ಮೊದಲ ಲಿಖಿತ ಉಲ್ಲೇಖ. ಪತಂಜಲಿ ಮಹರ್ಷಿಗಳ ಪ್ರಕಾರ ಯೋಗಃ ಚಿತ್ತ ವೖತ್ತಿ ನಿರೋಧಃ ಯೋಗವೆಂದರೆ ಚಿತ್ತದ ಚಾಂಚಲ್ಯ ವೖತ್ತಿಗಳನ್ನು ನಿರೋಧಿಸುವುದು.

ಹಿಂದೂ ತತ್ವಶಾಸ್ತ್ರದಲ್ಲಿ ಪ್ರಸ್ತಾಪಿತ ಯೋಗ ಶಾಖೆಗಳು ರಾಜ ಯೋಗ, ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ ಮತ್ತು ಹಠ ಯೋಗ. ಅನೇಕ ಹಿಂದೂ ಗ್ರಂಥಗಳು, ಉಪನಿಷತ್ತುಗಳು, ಭಗವದ್ಗೀತೆ, ಹಠಯೋಗ ಪ್ರದೀಪಿಕಾ, ಶಿವಸಂಹಿತೆ ಮತ್ತು ಅನೇಕ ತಂತ್ರಗಳು ಸೇರಿ ಯೋಗದ ವಿವಿಧತೆ ತಿಳಿಸಿವೆ. ವಶಿಷ್ಠ ಮಹರ್ಷಿಗಳು ಮನಃ ಪ್ರಶಮನೋಪಾಯೋ ಯೋಗಃ ಇತಿ ಅಬಿಧೀಯತೆ. ಮನಸ್ಸನ್ನು ಪ್ರಶಾಂತಗೊಳಿಸುವ ಸುಂದರ ಉಪಾಯವೇ ಯೋಗ ಎಂದಿದ್ದಾರೆ.

ಯೋಗಾಭ್ಯಾಸ ಮಾಡುವವರನ್ನು ಯೋಗಿ ಅಥವಾ ಯೋಗಿನಿ ಎನ್ನುವರು. ಪ್ರಾಚೀನ ಕಾಲದ ತಪಸ್ವಿಗಳನ್ನು ಯೋಗಿಗಳೆಂದು ಕರೆದಿದ್ದಾರೆ. ಋಷಿಗಳು ತಪಸ್ಸು ಮಾಡುವ ಕ್ರಿಯೆಗೆ ಯೋಗವೆಂದಿದ್ದಾರೆ. ಸಿಂಧೂ ಕಣಿವೆ ನಾಗರೀಕತೆಯ ಕಾಲದಲ್ಲಿ ಪತ್ತೆಯಾದ ಮೊಹರುಗಳಲ್ಲಿ ಧ್ಯಾನದ ಭಂಗಿ ಹೋಲುವ ಚಿತ್ರಗಳು ಶಾಸ್ತ್ರೀಯ ಚರ್ಯೆಗಳ ಒಂದು ವಿಧ. ಯೋಗದ ಪ್ರಾಚೀನ ರೂಪವನ್ನು ತೋರಿಸುವಂತಹದು ಎಂಬುದು ಪುರಾತನ ತತ್ವ ಶಾಸ್ತ್ರಜ್ಞ ಗ್ರೆಗೋರಿ ಪಾಸ್ಸೆಲ್‌ರ ಅಭಿಪ್ರಾಯ.

ಹಿಂದೂ ಗ್ರಂಥಗಳಲ್ಲಿ ಯೋಗ ಪದವು  ಕಠೋಪನಿಷತ್‌ನಲ್ಲಿ ಇದ್ದು ಇಂದ್ರಿಯಗಳ ನಿಯಂತ್ರಣ ಮತ್ತು ಮಾನಸಿಕ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಉತ್ತುಂಗ ಸ್ಥಿತಿಗೆ ತಲುಪುವುದನ್ನು ತಿಳಿಸಿದೆ. ಯೋಗಃ ಸಮತ್ವಂ ಉಚ್ಯತೇ. ಯೋಗ ಎಂದರೆ ಕಾರ್ಯ ತತ್ಪರತೆಯಲ್ಲಿ ಸಮಭಾವ, ಸಮಚಿತ್ತವಾಗಿರುವುದು.ಸ್ತುತಿ-ನಿಂದೆ, ಮಾನ-ಅಪಮಾನ, ಸುಖ-ದುಃಖ, ನೋವು-ನಲಿವು ಮುಂತಾದ ದ್ವಂದ್ವ ಜೀವನದಲ್ಲಿ ಸಮಭಾವವನ್ನು ಹೊಂದುವುದೇ ಯೋಗವೆಂದು ಭಗವದ್ಗೀತೆ ಹೇಳುತ್ತದೆ.

ಯೋಗದ ಪರಿಕಲ್ಪನೆಯ ಗ್ರಂಥಮೂಲಗಳು ಮಧ್ಯಕಾಲೀನ ಉಪನಿಷತ್ತುಗಳು, ಭಗವದ್ಗೀತೆ, ಮಹಾಭಾರತ, ಪತಂಜಲಿಯ ಯೋಗಸೂತ್ರಗಳು. ಭಾರತೀಯ ತತ್ವಜ್ಞಾನದ ಪ್ರಕಾರ ಯೋಗ ಆರು ಸಾಂಪ್ರದಾಯಿಕ ಶಾಖೆಗಳಲ್ಲೊಂದು. ಸಾಂಖ್ಯ ದರ್ಶನ, ಯೋಗ ದರ್ಶನ, ನ್ಯಾಯ ದರ್ಶನ, ವೈಶೇಷಿಕ ದರ್ಶನ, ಮೀಮಾಂಸ ದರ್ಶನ, ವೇದಾಂತ ದರ್ಶನ. ಇವು ರೂಢಿಯಲ್ಲಿ ಬಂದ ಭಾರತೀಯ ಷಡ್ ದರ್ಶನಗಳು. ಪತಂಜಲಿ ಋಷಿಗಳು ವ್ಯಾಖ್ಯಾನಿಸಿದ ಯೋಗ ಪಂಥವು ಸಾಂಖ್ಯ ಮನಶಾಸ್ತ್ರ ಮತ್ತು ಆಧ್ಯಾತ್ಮವನ್ನು ಸ್ವೀಕರಿಸುತ್ತದೆ.

ಆದರೆ ಇದು ಸಾಂಖ್ಯ ಶಾಖೆಗಿಂತಲೂ ಹೆಚ್ಚು ಆಸ್ತಿಕ ವ್ಯವಸ್ಥೆಯಾಗಿದ್ದು, ಸಾಂಖ್ಯದ ಸತ್ಯದ ಇಪ್ಪತ್ತೈದು ಅಂಶಗಳಲ್ಲಿ ದೈವಿಕ ಅಂಶವನ್ನು ಸೇರಿಸಿರುವುದು ಇದಕ್ಕೆ ಪೂರಕವಾಗಿದೆ.

2014ರ ಸೆಪ್ಟೆಂಬರ್ 27ರಂದು, ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಭಾಷಣದಲ್ಲಿ ಅಂತರಾಷ್ಟ್ರೀಯ ಯೋಗ ದಿನ ಆಚರಿಸುವ ಕಲ್ಪನೆಯನ್ನು ಪ್ರಸ್ತಾಪಿಸಿದರು. ಪ್ರಧಾನಿಗಳ ಈ ಪ್ರಸ್ತಾವನೆಗೆ ವಿಶ್ವಸಂಸ್ಥೆಯ 177 ಸದಸ್ಯ ರಾಷ್ಟ್ರಗಳಿಂದ ಬೆಂಬಲ ದೊರಕಿದೆ. 2014ರ ಡಿಸೆಂಬರ್ 11ರಂದು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರಾಷ್ಟ್ರೀಯ ಯೋಗ ದಿನ ಎಂದು ಅಧಿಕೃತವಾಗಿ ಘೋಷಿಸಿತು.

ಉತ್ತರ ಗೋಳಾರ್ಧದಲ್ಲಿ ಜೂನ್ 21 ವರ್ಷದ ಅತಿ ಉದ್ದದ ದಿನವಾಗಿದ್ದು ಯೋಗದ ದೃಷ್ಟಿಕೋನದಿಂದ ಇದು ವಿಶೇಷ ಮಹತ್ವ ಪಡೆದಿದೆ.

ಮೊದಲ ಅಂತರಾಷ್ಟ್ರೀಯ ಯೋಗ ದಿನವನ್ನು 21-6-2015 ರಂದು ವಿಶ್ವದಾದ್ಯಂತ ಆಚರಿಸಲಾಯಿತು. ಅಂತರಾಷ್ಟ್ರೀಯ ಯೋಗ ದಿನದ ಮುಖ್ಯ ಉದ್ದೇಶವೇನೆಂದರೆ ಯೋಗದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಆರೋಗ್ಯಕ್ಕೆ ಉತ್ತಮ ಮಾರ್ಗವಾಗಿದ್ದು, ಇದು ವ್ಯಕ್ತಿಯ ಸಮಗ್ರ ಯೋಗಕ್ಷೇಮ ಹೆಚ್ಚಿಸಲು ಸಹಾಯ ಮಾಡುತ್ತದೆ. ಈ ದಿನವು ಯೋಗವನ್ನು ಜೀವನಶೈಲಿಯ ಭಾಗವನ್ನಾಗಿ ಅಳವಡಿಸಿಕೊಳ್ಳಲು ಜನರನ್ನು ಪ್ರೇರೇಪಿಸುತ್ತದೆ.

ಈ ಮೂಲಕ ಯೋಗ ದಿನಾಚರಣೆಯು ಯೋಗದ ಪ್ರಾಚೀನ ಜ್ಞಾನವನ್ನು ಆಧುನಿಕ ಜಗತ್ತಿಗೆ ತಲುಪಿಸಿ ಜಾಗತಿಕ ಆರೋಗ್ಯ ಮತ್ತು ಶಾಂತಿಯನ್ನು ಕಾಪಾಡುವ ಆಶಯ ಹೊಂದಿದೆ.

ಹಾಸನದ ವಸಂತಕುಮಾರ್ ಅವರ ಲ್ಯಾಂಡ್ ಸ್ಕೇಪ್ ಏಕವ್ಯಕ್ತಿ ಚಿತ್ರ ಪ್ರದರ್ಶನ

ಹಾಸನದ ಚಿತ್ರಕಲಾ ಶಿಕ್ಷಕರು ಮತ್ತು ಕಲಾವಿದರು ಆದ ವಸಂತಕುಮಾರ್ ಅವರ ವಾಟರ್ ಕಲರ್, ಲ್ಯಾಂಡ್ ಸ್ಕೇಪ್, ಬಾರ್ಕೋಲ್ ಮತ್ತು ಪೆನ್ಸಿಲ್ ವರ್ಕ್ಸ್ ಗಳ ಏಕ ವ್ಯಕ್ತಿ ಚಿತ್ರ ಕಲಾ ಪ್ರದರ್ಶನವನ್ನು ಹಾಸನದ ಒಡನಾಡಿ ಚಿತ್ರ ಕಲಾ ಬಳಗದಿಂದ ವಿಶ್ವ ಪರಿಸರ ದಿನದ ಪ್ರಯುಕ್ತ ದಿನಾಂಕ 22-6-2025ರ ಭಾನುವಾರ ಬೆ 11ಕ್ಕೆ ಹಾಸನ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ಏರ್ಪಡಿಸಿದೆ.ಹಾಸನ ಕ್ಷೇತ್ರದ ಶಾಸಕರು ಶ್ರೀ ಹೆಚ್.ಪಿ.ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸುವರು. ಅಂತರಾಷ್ಟ್ರೀಯ ಚಿತ್ರ ಕಲಾವಿದರಾದ ಶ್ರೀ ಕೆ.ಟಿ.ಶಿವಪ್ರಸಾದ್ ವಿಶ್ವ ಪರಿಸರ ದಿನದಂದು ವಿವಿಧ ವಯೋಮಾನದ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಚಿತ್ರಕಲಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸುವರು. ಸಾಹಿತಿಗಳು, ವಿಮರ್ಶಕರು, ಶ್ರೀ ಗೊರೂರು ಅನಂತರಾಜು, ಹಿರಿಯ ವ್ಯಂಗ್ಯ ಚಿತ್ರಕಾರರು, ಶ್ರೀ ಶಿವರಾಮ್, ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಶ್ರೀ ಹೆಚ್. ಪಿ. ತಾರಾನಾಥ್, ಶ್ರೀಮತಿ ಭಾಗ್ಯ, ಪ್ರಾಂಶುಪಾಲರು. ಶ್ರೀಮತಿ ಸುವರ್ಣ ಕೆ.ಟಿ ಶಿವಪ್ರಸಾದ್, ಕಾದಂಬರಿಗಾರ್ತಿ, ಹಾಸನ ಮತ್ತು ಶ್ರೀಮತಿ ಸುನಂದ ಕೃಷ್ಣ, ಜನಪದ ಗಾಯಕಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.