ಕಲೆಯು ಮಾನವನ ಹುಟ್ಟಿನೊಂದಿಗೆ ಬೆಳೆದು ಬಂದ ಚಮತ್ಕಾರ

ಒಂದು ಕಾಲದ ಸಂಸ್ಕೃತಿಯೊಂದಿಗೆ ಸಂಬಂಧ ಜೋಡಿಸುವ ಸಂಪರ್ಕ ಸಾಧನೆಯಾಗಿರುವ ಭಾಷೆಯಂತೆ ಕಲೆಯೂ ಸಂಪರ್ಕ ಮಾಧ್ಯಮ. ಕಲೆಯು ಮಾನವನ ಹುಟ್ಟಿನೊಂದಿಗೆ ದೈವದತ್ತವಾಗಿ ಬೆಳೆದು ಬಂದ ಚಮತ್ಕಾರ ಎಂದು ಸಾಹಿತಿ ಗೊರೂರು ಅನಂತರಾಜು ತಿಳಿಸಿದರು.

ಹಾಸನದ ಒಡನಾಡಿ ಚಿತ್ರಕಲಾ ಬಳಗ ಹಾಸನಾಂಬ ಕಲಾಕ್ಷೇತ್ರದ ಹೊರಂಗಣದಲ್ಲಿ ಭಾನುವಾರ ಹಾಗೂ ಸೋಮವಾರದಂದು ಏರ್ಪಡಿಸಿದ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಮಾತನಾಡುತ್ತಾ ವಸಂತಕುಮಾರ್ ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸನಲ್ಲಿ ರಚಿಸಿರುವ ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಶ್ರೀಮತಿ ಭಾನು ಮುಷ್ತಾಕ್, ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ನನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್.ಡಿ. ದೇವೇಗೌಡರು, ಅಂತರಾಷ್ಟ್ರೀ ಯ ಚಿತ್ರಕಲಾವಿದರು ಕೆ.ಟಿ.ಶಿವಪ್ರಸಾದ್, ಇಸ್ರೋ ಮಾಜಿ ಅಧ್ಯಕ್ಷರು ಕಿರಣ್‌ಕುಮಾರ್ ಇವರೆಲ್ಲರೂ ಜಿಲ್ಲೆಯ ಕೀರ್ತಿಯನ್ನು ಬೆಳಗಿದ ಮಹನೀಯರು. ಕಲಾವಿದರು ಪ್ರಕೃತಿಯ ನಡುವೆ ಕುಳಿತು ಬರೆದ ಪ್ರಕೃತಿ ಚಿತ್ರಗಳು ಕಲಾತ್ಮಕವಾಗಿವೆ ಎಂದರು.

ವಿಶ್ವ ಪರಿಸರ ದಿನ ಏರ್ಪಡಿಸಿದ್ದ ಚಿತ್ರಕಲಾ ಸ್ಫರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಖ್ಯಾತ ಕಲಾವಿದರು ಕೆ.ಟಿ.ಶಿವಪ್ರಸಾದ್ ಮಾತನಾಡಿ ಮನುಷ್ಯ ಚಿತ್ರ ಬಿಡಿಸಬೇಕಾದರೆ ಎಷ್ಟು ಕಷ್ಟಪಟ್ಟಿದ್ದಾರೆ? ಚಿತ್ರ ಹೇಗೆ ಶುರುವಾಯ್ತು? ಚಿತ್ರ ಹೇಗೆ ಮಾಡಿದ್ರಿ? ಬಣ್ಣ ಹೇಗೆ ಹಾಕಿದ್ರಿ? ಎಂಬುದನ್ನೆಲ್ಲಾ ಚಿತ್ರಕಾರರನ್ನು ಮಕ್ಕಳು ಕೇಳಿ ತಿಳಿದುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಆಲೂರಿನ ಡಾ. ಬಿ.ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಭಾಗ್ಯ, “ಕಲೆ ದೇವರು ಕೊಟ್ಟ ವರವಾಗಿದೆ. ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು.

ಕಾದಂಬರಿಗಾರ್ತಿ ಶ್ರೀಮತಿ ಸುವರ್ಣ ಕೆ.ಟಿ.ಶಿವಪ್ರಸಾದ್, “ಮಕ್ಕಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ವ್ಯಕ್ತಿತ್ವ ವಿಕಸನಕ್ಕೆ ಕಲೆ ಸಹಕಾರಿ,” ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಗೋಡೆ ಬರಹಗಾರ ಕಲಾವಿದ ಯಾಕೂಬ್, ಕಲಾವಿದ ಚಂದ್ರಕಾಂತ್ ನಾಯರ್ ಉಪಸ್ಥಿತರಿದ್ದರು. ಗಾಯಕಿ ಶ್ರೀಮತಿ ಸುನಂದ ಕೃಷ್ಣ ಭಾವಗೀತೆ ಮತ್ತು ಜನಪದ ಗೀತೆಗಳಿಂದ ರಂಜಿಸಿದರು. ಕಲಾವಿದ ವಸಂತಕುಮಾರ್ ಈ ಕಾರ್ಯಕ್ರಮವನ್ನು ನಿರೂಪಿಸಿದರು.

ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯ ಯೋಗ ದಿನಾಚರಣೆ.

ಗಂಗಾವತಿ: ಜೂನ್-೨೧ ಶನಿವಾರದಂದು ಬೆಳಿಗ್ಗೆ ೬.೩೦ಕ್ಕೆ “ಆರೋನ್ ಮಿರಜಕರ್ ಆಂಗ್ಲ ಮಾಧ್ಯಮ ಶಾಲೆ”, ಹಾಗೂ “ನಿವೇದಿತಾ ಶಾಲೆ”ಯ ಸಹಯೋಗದಲ್ಲಿ “ಒಂದು ಭೂಮಿ, ಒಂದು ಆರೋಗ್ಯಕ್ಕಾಗಿ ಯೋಗ” ಎನ್ನುವ ಶೀರ್ಷಿಕೆಯಡಿ ‘೧೧ನೇ ಅಂತರಾಷ್ಟ್ರೀಯ ಯೋಗ’ ದಿನವನ್ನು ಆಯೋಜಿಸಲಾಗಿತ್ತು.

ಯೋಗ ಶಿಬಿರದಲ್ಲಿ ಗಂಗಾವತಿಯ ಸ್ನೇಹ ಬಳಗ ಯೋಗ ಸಂಸ್ಥೆಯ ಯೋಗ ತರಬೇತುದಾರರಾದ ಪರಸಪ್ಪ ಕುರುಗೋಡ ಹಾಗೂ ಆನಂದ ಪಟ್ಟಣಶೆಟ್ಟಿಯವರು ಯೋಗ ತರಬೇತಿಯನ್ನು ನೀಡಿ ಹಾಗೂ ಯೋಗ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಶಿಬಿರದಲ್ಲಿ ಸಂಸ್ಥೆಯ ಕಾರ್ಯದರ್ಶಿಯಾದ ರುಬೀನ್ ಮಿರಜ್‌ಕರ್ ಭಾಗವಹಿಸಿ ಮಕ್ಕಳಿಗೆ ಯೋಗದಿಂದಾಗುವ ಪ್ರಯೋಜನಗಳನ್ನು ತಿಳಿಸಿದರು.

ಶಾಲೆಯ ಆಡಳಿತಾಧಿಕಾರಿಗಳಾದ ಚಂದ್ರಕಾಂತ್‌ ರಾವ್‌ರವರು ಆರೋಗ್ಯದ ಮಹತ್ವದ ಕುರಿತು ತಿಳಿ ಹೇಳಿದರು.

ಆರೋನ್ ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ಮಾನಸ ಪಾಟೀಲ್ ಅವರು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.

ನಿವೇದಿತಾ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇಖಾ ಠಾಕೂರ್ ಅವರು ಮಾತನಾಡಿ ಯೋಗವು ಸಕಲ ರೋಗಗಳಿಗೆ ನಿಯಂತ್ರಕವಿದ್ದಂತೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲೆಯ ಖಜಾಂಚಿಗಳಾದ ಶ್ರೀಮತಿ ಸುನಿತಾ ಮಿರಜ್‌ಕರ್, ವ್ಯವಸ್ಥಾಪಕರಾದ ಮಂಜುನಾಥ, ಉಭಯ ಶಾಲೆಗಳ ಶಿಕ್ಷಕ ವೃಂದ ಹಾಗೂ ಸುಮಾರು ೬೫೦ ವಿದ್ಯಾರ್ಥಿಗಳು ಈ ಶಿಬಿರದಲ್ಲಿ  ಭಾಗವಹಿಸಿ ಯೋಗಾಭ್ಯಾಸದ ಪ್ರಯೋಜನವನ್ನು ಪಡೆದರು.

ಕಲೆ ಕಲಾವಿದರ ಪರಿಚಯಿಸುವ ಲೋಕ ದೃಷ್ಟಿ ಕಲಾ ಸೃಷ್ಟಿ ಕೃತಿ

ಕವಿ, ಕಲಾವಿದ, ಸಾಹಿತಿ , ವಿಮರ್ಶಕ, ನಾಟಕಕಾರ, ಪರಿಸರ ಸ್ನೇಹಿಯಾದ ಬಹುಮುಖ ಪ್ರತಿಭೆಯ ಸಹೃದಯಿ, ಸರಳ ಸಜ್ಜನಿಕೆಯ ಸಂಪನ್ನರಾದ ಶ್ರೀ ಗೊರೂರು ಅನಂತರಾಜುರವರು ಕಳೆದ 25 ವರ್ಷಗಳಿಂದ ನನಗೆ ಆತ್ಮೀಯರಾಗಿದ್ದಾರೆ. ಇವರು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ದಣಿವಿಲ್ಲದೆ ಕ್ರಿಯಾಶೀಲರಾಗಿ, ಸಾಹಿತ್ಯ ಲೋಕಕ್ಕೆ ವಿಭಿನ್ನ ಆಯಾಮಗಳಲ್ಲಿ ಕೊಡುಗೆ ನೀಡಿದವರು. ಕ್ರಿಯಾಶೀಲ ಬರಹಗಾರರಾಗಿ, ವಿಮರ್ಶಕರಾಗಿ, ಯಶಸ್ಸುಗಳಿಸಿದ್ದಾರೆ.

ಶ್ರೀಯುತರದು ತೀರ ಸರಳ ಹಾಗೂ ಸಾತ್ವಿಕ ವ್ಯಕ್ತಿತ್ವ. ಮಾನವೀಯ ಸಂವೇದನೆಗಳು, ಅನುಕಂಪ ಪ್ರೇರಿತ ಜೀವನದೃಷ್ಟಿ, ಪರಿಸರದ ಎಲ್ಲ ಸಂಭವಗಳಿಗೆ ತೀಕ್ಷ್ಣ ಸ್ಪಂದನೆ, ಸಹಾನುಭೂತಿ, ಮುಗ್ಧತೆ, ಸ್ನೇಹಪರತೆ ಇವರ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಮಾನವೀಯ ಮೌಲ್ಯಗಳು. ಬರವಣಿಗೆಯಲ್ಲಿ ಸತ್ವ ಮತ್ತು ತತ್ವಗಳಿಂದ ಕಂಗೊಳಿಸುವ ಇವರ ಸಾಹಿತ್ಯ ಶ್ರೇಷ್ಠವೆನಿಸಿತು. ಮನುಕುಲದ ಸಹಜ ಬದುಕಿನ ಚಿತ್ರಣ ಹಾಗೂ ನೀತಿಕಥೆಗಳು ಓದುಗರ ಮನ ಮುಟ್ಟುತ್ತವೆ. ಸಾರಸತ್ವ ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಛಾಪು ಒತ್ತಿರುವ ಇವರ ಸೃಜನಶೀಲತೆ ಕ್ರಿಯಾಶೀಲತೆಗಳು ವೈವಿಧ್ಯಮಯ ಬರವಣಿಗೆಗಳಲ್ಲಿ ಕಾಣುತ್ತವೆ. ಸಮಕಾಲೀನ ಸಾಹಿತ್ಯಲೋಕದ ಸವಾಲುಗಳ ಸೂಕ್ಷ್ಮತೆಯನ್ನು ಕಲೆಯ ಮೂಲಕ ಗ್ರಹಿಸಿ ಕೃತಿಗಳಲ್ಲಿನ ಸಂವೇದನೆ ಮತ್ತು ಆಂತರಿಕ ತೀವ್ರತೆಯನ್ನು ಒಳಗಣ್ಣಿನಿಂದ ಕಂಡು ಅವುಗಳ ಬಗ್ಗೆ ವಿಮರ್ಶೆ ಮಾಡುವ ವಿಶಿಷ್ಟ ಶೈಲಿ ಅವರದು.

ಪಾಶ್ಚಿಮಾತ್ಯರಲ್ಲಿ ಸಾಮಾನ್ಯ ಮನುಷ್ಯ ಕೂಡ ದೃಶ್ಯ ಕಲೆಯನ್ನು, ಕಲಾಕೃತಿಯನ್ನು ನೋಡುವ ಬಗೆ, ಕಲೆಯನ್ನು ಆಸ್ವಾದಿಸುವ ಬಗೆಯನ್ನು ಅರಿತಿರುತ್ತಾರೆ. ದೃಶ್ಯ ಭಾಷೆ(visual language) ಅವರಿಗೆ ಸಾಹಿತ್ಯ ಓದಿದಷ್ಟೇ ಸರಳವೆನಿಸುತ್ತದೆ. ಆದರೆ ನಮ್ಮ ದೇಶದಲ್ಲಿ ಕಲಾವಿದನನ್ನು ಬಿಟ್ಟರೆ ದೃಶ್ಯ ಭಾಷೆ ತಿಳಿದುಕೊಳ್ಳುವ ಗೋಜಿಗೆ ಜನಸಾಮಾನ್ಯರು ಹೋಗುವುದೇ ಇಲ್ಲ. ಹಾಗಾಗಿ ಕಲಾವಿದ ಹಾಗೂ ಜನಸಾಮಾನ್ಯರ ನಡುವಿನ ಸಂಬಂಧ ದೂರವಿರುತ್ತದೆ. ಆದರೆ ಈ ಇಬ್ಬರ ನಡುವಿನ ಅಂತರದ ಕೊಂಡಿಯನ್ನು ಜೋಡಿಸುವ ಮಹತ್ತರ ಕಾರ್ಯವನ್ನು ತಮ್ಮ ಲೇಖನ, ವಿಮರ್ಶೆಗಳಿಂದ ಕಲಾವಿದರನ್ನು ಸಮಾಜಕ್ಕೆ ಪರಿಚಯಿಸುವ ಕಾರ್ಯವನ್ನು ಶ್ರೀಯುತರು ಹಲವು ದಶಕಗಳಿಂದ ಮಾಡುತ್ತಲೇ ಬಂದಿರುವುದು ಶ್ಲಾಘನೀಯವಾಗಿದೆ.

ನಾಡಿನ ಸಾಂಸ್ಕೃತಿಕ ಲೋಕವನ್ನು ಅನನ್ಯಗೊಳಿಸುವ ನಿಟ್ಟಿನಲ್ಲಿ ಕರುನಾಡಿನ ಅನೇಕ ಸಾಹಿತಿಗಳು, ವಿಚಾರವಂತರು, ಕಲಾವಿದರು ತಮ್ಮ ಕರ್ತವ್ಯವನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸುವ ಪರಂಪರೆಯನ್ನು ವರ್ತಮಾನದಲ್ಲಿ ಅದರ ಶ್ರೇಷ್ಠತೆಯನ್ನು ನೆನೆಯುತ್ತ ಅದರ ಮಹತ್ವವನ್ನು ಮತ್ತಷ್ಟು ಹೇಳಲು ನಾವು ಅವಶ್ಯವಾದದ್ದನ್ನು ಪ್ರೀತಿಸಲೇ ಬೇಕು. ಹೀಗಾಗಿ ಶ್ರೀ ಗೊರೂರು ಅನಂತರಾಜುರವರು ಅವರ ಯೋಜನೆ ಅನುಸಾರ “ಲೋಕ ದೃಷ್ಟಿ ಕಲಾ ಸೃಷ್ಟಿ” ಕೃತಿಯು ಒಬ್ಬ ಚಿತ್ರ ಕಲಾವಿದನಾಗಿರುವ ನನಗೆ ಹೆಮ್ಮೆ ಅನಿಸುತ್ತದೆ.

ಈ ಕೃತಿಯಲ್ಲಿ ಚಿತ್ರ ಕಲಾವಿದರನ್ನು ವಿಷಯವಾಗಿಸಿ ಅವರ ಅಭಿವ್ಯಕ್ತಿ ಭಾವನೆ, ದೃಷ್ಟಿಕೋನ, ಬದುಕು ಬರಹ ಇವುಗಳನ್ನು ಪರಿಚಯಿಸುವ ಕಾರ್ಯ ಬಹಳ ಮಹತ್ವವೆನಿಸುತ್ತದೆ. ನಾನು ಬೆಳಗಾವಿ ಜಿಲ್ಲೆಯವನಾಗಿದ್ದರು ಹಾಸನ ಜಿಲ್ಲೆಯ ಕಲಾವೈಭವ, ಸಂಸ್ಕೃತಿ ಅಲ್ಲಿರುವ ಚಿತ್ರ ಕಲಾವಿದರ ನೈಪುಣ್ಯತೆಯನ್ನು ಬಹಳ ಹತ್ತಿರದಿಂದ ಬಲ್ಲವನು. ಹಾಗೂ ಗೊರೂರು ಅನಂತರಾಜುರವರನ್ನು ಅವರ ಬರಹಗಳನ್ನು ಒಬ್ಬ ಸ್ನೇಹಿತನಾಗಿ ಕಂಡವನು.

ಶ್ರೀಯುತರು ಅನೇಕ ಚಿತ್ರ ಕಲಾವಿದರ ಪರಿಚಯಿಸುವ ಜೊತೆಗೆ ಅವರ ಜೀವನ ಶೈಲಿ ಕಲಾವಿದರ ಬದುಕು ಅವರ ಶ್ರೇಷ್ಠತೆಯನ್ನು ನೈಜವಾಗಿ ಲೇಖನಿಯಿಂದ ಚಿತ್ರಿಸಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಚಿತ್ರ ಕಲಾವಿದರ ಬದುಕನ್ನು ಇತಿಹಾಸದ ಪುಟಗಳಿಗೆ ಗೊರೂರು ಅನಂತರಾಜುರವರು ಸೇರಿಸಿರುವುದು ಕಲಾವಿದರಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಎಂದು ನಾನು ಭಾವಿಸಿದ್ದೇನೆ. 30 ವರ್ಷಗಳಿಂದಲೂ ಅನೇಕ ನಾಟಕಗಳನ್ನು, ವಿಷಯಗಳನ್ನು ಅಭಿನಯ ಅಭಿವ್ಯಕ್ತಿ ಎಂಬ ಕೃತಿಯಲ್ಲಿ ಸುಮಾರು 150ಕ್ಕೂ ಹೆಚ್ಚು ನಟನೆಯ ಗಣ್ಯರನ್ನು ಗುರುತಿಸಿ ಅವರನ್ನು ಲೇಖನದಲ್ಲಿ ಪರಿಚಯಿಸಿರುವ ಕೀರ್ತಿ ಅವರ ಬರಹ ಲೋಕಕ್ಕೆ ಮತ್ತೊಂದು ಸ್ಪೂರ್ತಿ ಅನಿಸುತ್ತದೆ. ಇವರು ಒಂದು ರೀತಿಯ “ಆಡು ಮುಟ್ಟದ ಸೊಪ್ಪಿಲ್ಲ” ಎಂಬ ನಾಣ್ಣುಡಿ ಅಂಟಿ ಕೊಂಡವರಂತೆ ಕಾಣುತ್ತಾರೆ.

ಅನೇಕ ಕಲಾಕೃತಿಗಳನ್ನು ವಿಮರ್ಶೆ ಮಾಡುತ್ತಾ ಅನೇಕ ವ್ಯಕ್ತಿಗಳ ಜೀವನ ಚರಿತ್ರೆಯನ್ನು ರಚಿಸುತ್ತಾ, ನಾಟಕಗಳನ್ನು ಬರೆಯುತ್ತ, ನಿರ್ದೇಶಕ, ಒಬ್ಬ ನಾಟಕಕಾರನಾಗಿ ನಾಟಕ ರಚಿಸುತ್ತ, ನಟನಾಗಿ ಅಭಿನಯಿಸುತ್ತ ಒಬ್ಬ ವ್ಯಕ್ತಿ ಹೇಗೆ ತನ್ನ ಬದುಕನ್ನು ಎಲ್ಲಾ ಆಯಾಮಗಳಲ್ಲೂ ಅಭಿವ್ಯಕ್ತಗೊಳಿಸಬಹುದು ಎಂಬುದಕ್ಕೆ ಗೊರೂರು ಅನಂತರಾಜುರವರರ ಅಪೂರ್ವ ಬದುಕು ಮತ್ತು ಬರಹಗಳೆ ಇದಕ್ಕೆ ಸಾಕ್ಷಿ. ಇವರು ನಾಡಿನ ಹೆಸರಾಂತ ಸಾಹಿತಿಗಳಾದ ಡಾ. ಎಸ್. ಕೆ. ಕರೀಂ ಖಾನ್, ಡಾ. ಎಚ್.ಕೆ. ಲಕ್ಕಪ್ಪ ಗೌಡ, ಬೇಲೂರು ಕೃಷ್ಣಮೂರ್ತಿ, ಡಾ. ಮಳಲಿ ವಸಂತ್ ಕುಮಾರ್, ಸಾಹಿತಿಗಳು ರಂಗಕರ್ಮಿಗಳು, ವಿಚಾರವಂತರನ್ನು ಕೂಡ ತಮ್ಮ ಬರವಣಿಗೆ ಮೂಲಕ ಅವರ ಬದುಕಿಗೊಂದು ಗಟ್ಟಿ ನೆಲೆಯನ್ನು ತುಂಬಿ ಕೊಟ್ಟಂತಹ ಈ ನಾಡಿನ ಒಬ್ಬ ಶ್ರೇಷ್ಠ ಲೇಖಕ ಎನ್ನಲು ಹರ್ಷವೆನಿಸುತ್ತದೆ.

ಶ್ರೀಯುತರು ಜಾನಪದ ಲೋಕವನ್ನು ತಮ್ಮ ಬರವಣಿಗೆಯಲ್ಲಿ ಸುಂದರಗೊಳಿಸಿದ್ದಾರೆ. ಕನ್ನಡ ನಾಡಿನಲ್ಲಿರುವ ಅನೇಕ ಹಬ್ಬಗಳನ್ನು ಮತ್ತು ನಂಬಿಕೆಗಳನ್ನು ತಮ್ಮ ಬರಹಗಳ ಮೂಲಕ ವೈಚಾರಿಕತೆಯನ್ನು ಹಾಗೆ ಲೀನವಾಗಿಸಿರುವುದು ಮಹತ್ವವೆನಿಸುತ್ತದೆ. ಇವರು ಸುಮಾರು 6 ನಾಟಕಗಳನ್ನು 20 ಕಿರು ನಾಟಕಗಳನ್ನು, ವಿಜ್ಞಾನ ಮೌಲ್ಯ ಶಿಕ್ಷಣ ಇತಿಹಾಸ, ಪುರಾಣ ವಾಸ್ತವಿಕತೆ, ಧಾರ್ಮಿಕತೆ ಎಲ್ಲವನ್ನು ಚಿತ್ರಿಸುವ ಸಾಹಿತಿ ಅದುವೇ ಗೊರೂರು ಅಂತರಾಜುರವರು.

ಪ್ರಸ್ತುತ ಈ ದಿನಮಾನಗಳಲ್ಲಿ ಚಿತ್ರ ಕಲಾವಿದರನ್ನು ಅವರ ಶ್ರೇಷ್ಠ ಸಾಧನೆಗಳನ್ನು ತಮ್ಮಷ್ಟಕ್ಕೆ ತಾವೇ ಈ ಪ್ರಪಂಚವನ್ನು ವರ್ಣಮಯವಾಗಿಸಿ ಸೃಷ್ಟಿಗೆ ಮತ್ತಷ್ಟು ಚೈತನ್ಯವನ್ನು ತುಂಬುವ ಚಿತ್ರಕಲಾವಿದರ ಬಗ್ಗೆ ಬರೆಯುವುದು ಒಬ್ಬ ಬರಹಗಾರನಿಗೆ ಇರುವ ಅತಿ ಸೂಕ್ಷ್ಮತೆ ಎಂದು ನಾನು ಭಾವಿಸಿದ್ದೇನೆ. ಶ್ರೀ ಗೊರೂರು ಅನಂತರಾಜುರವರು ಕಾಲದ ಪ್ರವಾಹದಲ್ಲಿ ಕಳೆದುಹೋಗುತ್ತಿರುವ ಚಿತ್ರ ಕಲಾವಿದರ ಹತ್ತಾರು ಸಂಗತಿಗಳನ್ನು ಹಲವಾರು ಚಿತ್ರ ಕಲಾವಿದರ ರೇಖೆಗಳನ್ನು ಅವರ ವರ್ಣ ಶೈಲಿಯನ್ನು ಅವರ ಮನಸ್ಥಿತಿಯ ಓರೆ ಕೋರೆಗಳನ್ನು ಅವರ ಬದುಕಿದ ವಿಚಾರವಂತಿಕೆಯನ್ನು ಈ ಕೃತಿಯಲ್ಲಿ ಹೇಳಿರುವುದು ನನಗೆ ಬಹಳ ಅಪರೂಪವೆನಿಸುತ್ತದೆ.

ನಾನು ಸದಾ ಕ್ಯಾನ್ವಾಸ್ ಮತ್ತು ಬಣ್ಣಗಳ ಜೊತೆ ಬದುಕು ಕಳೆಯುವವನು ಬಿಳಿ ಕ್ಯಾನ್ವಾಸಿಗೆ ನಾನು ಹಚ್ಚಿದ ಬಣ್ಣಗಳಿಂದ ಕ್ಯಾನ್ವಾಸಿನ ಶ್ರೇಷ್ಠತೆಯನ್ನು ಪ್ರಪಂಚಕ್ಕೆ ಅರ್ಪಿಸಿದವನು, ಆದರೆ ಬರವಣಿಗೆ ನನ್ನದಲ್ಲದು. ಆದರೂ ಸಹ ಅವರ ಪ್ರೀತಿಯ ಮನಸ್ಸಿಗೆ ಸೋತು ನನ್ನ ಬರಹ ಅಧ್ಯಾಯಕ್ಕೆ ಗೊರೂರು ಅನಂತರಾಜುರವರು ಈ ಮೂಲಕ ಸಾಕ್ಷಿಯಾಗಿದ್ದಾರೆ.

 

ಡಾ, ಬಾಬುರಾವ್ ನಡೋಣಿ
ಚಿತ್ರ ಕಲಾವಿದರು
ರಾಯಬಾಗ.
ಮೊಬೈಲ್ : 9448237722