ಸೌಂದರ್ಯ ಲಹರಿ ಪಾರಾಯಣದಿಂದ ಸಂಕಷ್ಟ ದೂರ: ವೀಣಾ ಅಳವಂಡಿಕರ್

ಗಂಗಾವತಿ: ನಗರದ ಶಂಕರ ಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ವಿರಚಿತ ಸೌಂದರ್ಯ ಲಹರಿ ಸಪ್ತಾಹವನ್ನು ಅಕ್ಟೋಬರ್‌-11 ರಿಂದ ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಶಾರದಾ ಶಂಕರ ಭಕ್ತ ಭಜನಾ ಮಂಡಳಿಯ ಹಿರಿಯ ಸದಸ್ಯರಾದ ಶ್ರೀಮತಿ ವೀಣಾ ರಾಘವೇಂದ್ರ ಅಳವಂಡಿಕರ್‌ ಹಾಗೂ ಸಂಚಾಲಕಿ ಗಾಯತ್ರಿ ಶ್ರೀಧರ್ ಅಳವಂಡಿಕರ್‌ ಮಾತನಾಡಿ ಜಗದ್ಗುರು ಭಾರತೀ ತೀರ್ಥ ಮಹಾಸ್ವಾಮಿಗಳ 75 ನೆಯ ವರ್ಧಂತಿ ಮಹೋತ್ಸವ ಹಾಗೂ ಆನಂದ ಭಾರತಿ ಅಡಿಯಲ್ಲಿ ದೇಶಾದ್ಯಂತ ಶಂಕರ ಮಠಗಳಲ್ಲಿ ಶ್ರೀ ಸೌಂದರ್ಯ ಲಹರಿ ಸಪ್ತಾಹವನ್ನು ನಡೆಸಲಾಗುತ್ತಿದ್ದು ಇದರಿಂದ ಸಂಕಷ್ಟಗಳು ದೂರವಾಗುವುದರ ಜೊತೆಗೆ ಪಾರಾಯಣದಿಂದ ಬಹು ರೋಗ ನಿವಾರಣೆ ಆಗುವುದು ಎಂದು ಪಾರಾಯಣದ ಮಹತ್ವ ಕುರಿತು ತಿಳಿಸಿದರು.

ಈ ಸಂದರ್ಭದಲ್ಲಿ ವಿವಿಧ ಭಜನಾ ಮಂಡಳಿಯ ಮಹಿಳೆಯರು ಪಾಲ್ಗೊಂಡಿದ್ದರು.

ಕನಸುಗಾರರಾಗಿ ಅಬ್ದುಲ್ ಕಲಾಂ ಜಿ

ದೊಡ್ಡ ದೊಡ್ಡ ಕನಸುಗಳನ್ನು ಕಂಡು, ಅವುಗಳನ್ನು ಸಾಕಾರಗೊಳಿಸಲು ಕಷ್ಟಗಳ ಸಾಗರವನ್ನು ಈಜಿ ಮೇಲೆ ಏರಿದ ಮಹಾನ್ ಕನಸುಗಾರ ಡಾ.ಅಬ್ದುಲ್ ಕಲಾಂ. ಬಡವರಾಗಿ ಹುಟ್ಟುವುದು ತಪ್ಪಲ್ಲ ಆದರೆ ಬಡವರಾಗಿ ಸಾಯುವುದೇ ಮಹಾ ಪಾಪ ಎನ್ನುವ ತತ್ವದಲ್ಲಿ ನಂಬಿಕೆ ಇಟ್ಟುಕೊಂಡು ಸತತ ಪ್ರಯತ್ನದಿಂದ, ಹೋರಾಟದಿಂದ ಏನನ್ನಾದರೂ ಸಾಧಿಸಬಹುದು ಎಂಬುದನ್ನು ತೋರಿಸಿಕೊಟ್ಟ ಚೇತನ ಅಬ್ದುಲ್ ಕಲಾಂ. ಸೂರ್ಯನಂತೆ ಬೆಳಗಬೇಕೆಂದರೆ ಸೂರ್ಯನಂತೆ ಉರಿಯಬೇಕೆಂಬ ಆದರ್ಶ. ನಂಬಿಕೆಗಳಿಂದ ಕರ್ಮ ಯೋಗಿಯಾಗಿ ಸಾಧಕರಾಗಿ, ದೇಶದ ಅತ್ಯುನ್ನತ ಹುದ್ದೆಯಾದ ರಾಷ್ಟ್ರಪತಿ ಸ್ಥಾನಕ್ಕೆ ಏರಿದ್ದು ನಿಜಕ್ಕೂ ನಂಬಲು ಅಸಾಧ್ಯವಾದರೂ ಸಾಧ್ಯ ಎನ್ನುವುದನ್ನು ನಾವು ಡಾ. ಅಬ್ದುಲ್ ಕಲಾಮರಿಂದ ನೋಡಿ ಕಲಿಯಬೇಕು. ಅವರ ದೃಷ್ಟಿ ಯಾವಾಗಲು ಆಕಾಶದೆಡಿಗೆ ಇರುತ್ತಿತ್ತು. ಆಕಾಶದಲ್ಲಿ ಹಾರುವ ವಿಮಾನಗಳನ್ನು ನೋಡಿ ತಾವು ಪೈಲೈಟ್ ಆಗಿ ವಿಮಾನದಲ್ಲಿ ಹಾಗೆ ಹಾರಾಡಬೇಕೆನ್ನುವ ಕನಸನ್ನು ಬಾಲ್ಯದಿಂದ ಕಂಡು ಅದನ್ನು ಗುರಿಯಾಗಿ ಇಟ್ಟುಕೊಂಡು ಬೆಳೆದರು. ಕೊನೆಗೆ ಪೈಲೆಟ್ ಆಗದಿದ್ದರೂ ರಾಕೆಟ್ ಗಳನ್ನು ತಯಾರಿಸುವ ಶಕ್ತಿ ಬೆಳೆಸಿಕೊಂಡು ಕೊನೆಗೆ ಜಗತ್ತೇ ಮೆಚ್ಚುವ ಕ್ಷಿಪಣಿ ಜನಕ ಎನ್ನುವ ಬಿರುದು ಗಳಿಸಿ ದೇಶವೇ ಬೆರಗಾಗುವಂತೆ ಆಕಾಶದೆತ್ತರಕ್ಕೆ ಬೆಳೆದು ನಿಂತರು. ಯಾವುದೇ ಕಾರ್ಯ ಮಾಡಿದರು ಅಚ್ಚುಕಟ್ಟಾಗಿ ಶ್ರದ್ಧೆಯಿಂದ ಮಾಡುವುದು ಅವರ ಹುಟ್ಟುಗುಣವಾಗಿತ್ತು. ‌

ಹೀಗಾಗಿ ರಾಷ್ಟ್ರಪತಿಯಾಗಿ, ವಿಜ್ಞಾನಿಯಾಗಿ ಸಂಶೋಧಕರಾಗಿ, ಉಪನ್ಯಾಸಕರಾಗಿ, ಬರಹಗಾರರಾಗಿ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸಿದರೂ ಎಲ್ಲದರಲ್ಲೂ ಯಶಸ್ವಿಯಾಗಿ ಜನಮನ್ನಣೆ ಗಳಿಸಿದರು. ಅವರಲ್ಲಿನ ಉತ್ಸಾಹ ಚೈತನ್ಯ ಬಾಲ್ಯದಲ್ಲಿ ಇದ್ದಷ್ಟೇ ಅವರ ಇಳಿ ವಯಸ್ಸಿನಲ್ಲಿ ಇದ್ದಿದ್ದು ಆಶ್ಚರ್ಯವನಿಸುತ್ತದೆ. ಯಾವತ್ತೂ ಸುಮ್ಮನೆ ಕುಳಿತವರಲ್ಲ ಅಬ್ದುಲ್ ಕಲಾಂ ಜಿ. ಯಾವುದಾದರೂ ಒಂದು ಕ್ರಿಯೆಯಲ್ಲಿ ನಿರಂತರ ತಮ್ಮನ್ನು ತಾವು ತೊಡಗಿಸಿ ಕೊಂಡವರು. ದೇಶ ಕಂಡ ಅಪರೂಪದಲ್ಲೇ ಅಪರೂಪದ ಸಾಧಕರಲ್ಲಿ ಅಬ್ದುಲ್ ಕಲಾಂ ಒಬ್ಬರು. ತಾವು ನಿರಂತರ ಹೋರಾಟ, ಶ್ರಮದಿಂದ ಮೇಲೆ ಬಂದಂತೆಯೇ ಇತರರನ್ನು ನಿರಂತರ ಸ್ಪೂರ್ತಿದಾಯಕ ಮಾತುಗಳಿಂದ ಬೋಧನೆಯಿಂದ ಮೇಲೆತ್ತಿದವರು.

ಅವರಿಗೆ ಬೋಧನೆ ಎನ್ನುವುದು ಅಚ್ಚುಮೆಚ್ಚಿನ ಕಾರ್ಯವಾಗಿತ್ತು. ಸಮಯ ಸಿಕ್ಕಾಗೆಲ್ಲ ವಿದ್ಯಾರ್ಥಿಗಳೊಂದಿಗೆ ಕಳೆಯುತ್ತಿದ್ದರು ಹಾಗೂ ತಮ್ಮ ಅನುಭವಗಳನ್ನು ವಿಚಾರಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸಿದರು ಹಾಗೂ ಚೈತನ್ಯ ತುಂಬಿ ಸಾಧನೆ ಮಾಡುವಂತೆ ಹುರಿದುಂಬಿಸಿದರು ಅಬ್ದುಲ್ ಕಲಾಂ ಜಿ. ಅವರ ಜೀವನವೇ ಇತರರಿಗೆ ಒಂದು ಪಾಠದಂತೆ ಇತ್ತು. ಅವರ ಜೀವನವೇ ಇತರರಿಗೆ ದಾರಿ ದೀಪವಾಗಿ ಬೆಳಕು ನೀಡುತ್ತಿದೆ ಎಂದರೆ ತಪ್ಪಲ್ಲ. “ಮಾತಿಗಿಂತ ಕೃತಿ ಲೇಸು” ಎನ್ನುವ ಗಾದೆ ಮಾತಿನಂತೆ ನಿರಂತರವಾಗಿ ಕರ್ಮದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಸಾಯುವ ಕ್ಷಣದಲ್ಲೂ ಸಹ ವಿದ್ಯಾರ್ಥಿಗಳಿಗೆ ಬೋಧಿಸುತ್ತಾ ಶರಣರ ಬದುಕನ್ನು ಮರಣದಲ್ಲಿ ನೋಡಿ ಎನ್ನುವಂತೆ ಬದುಕಿನ ಕೊನೆಯ ಕ್ಷಣದವರೆಗೂ ಜೀವನದ ಸಾರ್ಥಕತೆಯನ್ನು ಮೆರೆದವರು ಅಬ್ದುಲ್ ಕಲಾಂ ಜಿ.

ಭಾರತ ರತ್ನವಾಗಿ, ಕ್ಷಿಪಣಿ ಜನಕನಾಗಿ, ರಾಷ್ಟ್ರಪತಿಯಾಗಿ ಎಲ್ಲಕ್ಕಿಂತ ಮೇಲಾಗಿ ಒಬ್ಬ ಆದರ್ಶ ಶಿಕ್ಷಕರಾಗಿ ಅವರು ತೋರಿದ ದಾರಿ ಎಲ್ಲರಿಗೂ ಸ್ಪೂರ್ತಿದಾಯಕ. ದೇಶದ ಬೆಳವಣಿಗೆಗೆ ತಮ್ಮದೇ ಆದ ಅಪರೂಪದ ಕಾಣಿಕೆಯನ್ನು ನೀಡಿ ದೇಶದ ಕೀರ್ತಿಯನ್ನು ಹೆಚ್ಚಿಸಿದ ಅಜರಾಮರವಾಗಿ ಉಳಿದ ಕನಸುಗಾರ ಅಬ್ದುಲ್ ಕಲಾಂ ಅವರಿಗೆ ನನ್ನದೊಂದು ಸಲಾಂ

ಲೇಖನ: ಲಕ್ಷ್ಮೀದೇವಿ ಪತ್ತಾರ, ಪ್ರೌಢಶಾಲಾ ಶಿಕ್ಷಕಿ, ಬರಹಗಾರ್ತಿ, ಗಂಗಾವತಿ. ಜಿಲ್ಲಾ: ಕೊಪ್ಪಳ

ಕೊಪ್ಪಳ ಆರ್‌ಸೆಟಿ: ವಿವಿಧ ತರಬೇತಿಗಳಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಕೊಪ್ಪಳ ವತಿಯಿಂದ ಜಿಲ್ಲೆಯ ಗ್ರಾಮೀಣ ಭಾಗದ ಆಸಕ್ತರಿಗೆ ವಿವಿಧ ತರಬೇತಿಗಳನ್ನು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿ ನೀಡಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯಿಂದ 13 ದಿನಗಳ ಕೃಷಿ ಉದ್ಯಮಿ (ಕುರಿ ಸಾಕಾಣಿಕೆ, ಹೈನುಗಾರಿಕೆ) ತರಬೇತಿ, 10 ದಿನಗಳ ಅಣಬೆ ಬೇಸಾಯ ತರಬೇತಿ, 14 ದಿನಗಳ ಸಾಫ್ಟ್ ಟಾಯ್ಸ್ (ಮೃದು ಆಟಿಕೆಗಳು) ತರಬೇತಿ ಹಾಗೂ 38 ದಿನಗಳ ಕಂಪ್ಯೂಟರೈಸ್ಡ್ ಅಕೌಂಟಿಂಗ್ (ಟ್ಯಾಲಿ) ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಅಕ್ಟೋಬರ್ 23 ರಂದು ಸಂದರ್ಶನ ನಡೆಯಲಿದ್ದು, ಅ.24 ರಂದು ತರಬೇತಿ ಪ್ರಾರಂಭಿಸಲಾಗುವುದು. ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 45 ವರ್ಷದ ಒಳಗಿನವರಾಗಿರಬೇಕು. ಕನಿಷ್ಠ ಎಂಟನೇ ತರಗತಿ ಪಾಸ್ ಆಗಿರಬೇಕು. ಕೊಪ್ಪಳ ಜಿಲ್ಲೆಯ ಗ್ರಾಮೀಣ ಭಾಗದವರಾಗಿರಬೇಕು. ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ಆಸಕ್ತರು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾನ್‌ಕಾರ್ಡ್, ಎಸ್‌ಬಿಐ ಬ್ಯಾಂಕ್ ಪಾಸ್‌ಬುಕ್, ವಿದ್ಯಾರ್ಹತೆಯ ಪ್ರಮಾಣ ಪತ್ರಗಳ ಜೆರಾಕ್ಸ್ ಪ್ರತಿಗಳು ಹಾಗೂ ಪಾಸ್‌ಪೋರ್ಟ್ ಅಳತೆಯ 3 ಭಾವಚಿತ್ರಗಳೊಂದಿಗೆ ನಿರ್ದೇಶಕರು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ, ಜಿಲ್ಲಾ ಕೈಗಾರಿಕಾ ಕೇಂದ್ರ ಆವರಣ, ಅಶೋಕ ಸರ್ಕಲ್ ಹತ್ತಿರ, ಕೊಪ್ಪಳ ವಿಳಾಸಕ್ಕೆ ಅರ್ಜಿ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ಕಚೇರಿ ಅಥವಾ ದೂ.ಸಂ.: 08539-231038, 9483618178, 7259073827, 9538096796, 9481085217 ಗೆ ಸಂಪರ್ಕಿಸಬಹುದು ಎಂದು ಎಸ್‌ಬಿಐ ಆರ್‌ಸೆಟಿಯ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.