ಹಿರಿಯ ನ್ಯಾಯವಾದಿ ಸೋಮನಾಥ ಪಟ್ಟಣಶೆಟ್ಟಿಗೆ ಜೀ ಕನ್ನಡ ನ್ಯೂಸ್‌ನಿಂದ ವೀರ ಕನ್ನಡಿಗ ಅವಾರ್ಡ್

ಗಂಗಾವತಿ: ನಗರದ ಹಿರಿಯ ನ್ಯಾಯವಾದಿ, ವೀರಶೈವ ಸಮಾಜದ ಮುಖಂಡ ಸೋಮನಾಥ ಪಟ್ಟಣಶೆಟ್ಟಿ ಅವರಿಗೆ ಜೀ ಕನ್ನಡ ನ್ಯೂಜ್ ಅವರಿಂದ ವೀರ ಕನ್ನಡಿಗ ಅವಾರ್ಡ್ ಪ್ರದಾನ ಮಾಡಲಾಗಿದೆ. ಕನ್ನಡ ನಾಡು ನುಡಿ ಏಳ್ಗೆಗೆ ಶ್ರಮಿಸುತ್ತಿರುವ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ರಾಜ್ಯದ ವಿವಿಧ ಜಿಲ್ಲೆಗಳಿಂದ ಗುರುತಿಸಿರುವ ಜೀ ಕನ್ನಡ ನ್ಯೂಜ್ ಅವರು ಪ್ರತಿ ವರ್ಷ ಈ ಅವಾರ್ಡ್ ನೀಡಲಾಗಿದೆ.

ಪ್ರಸಕ್ತ ೨೦೨೫ನೇ ಸಾಲಿನ ಈ ಅವಾರ್ಡ್ ಗೆ ಕಲ್ಯಾಣ ಕರ್ನಾಟಕ ಭಾಗದ ಹಿರಿಯ ನ್ಯಾಯವಾದಿ ಪಟ್ಟಣಶೆಟ್ಟಿ ಅವರಿಗೆ ನೀಡಲಾಗಿದೆ. ಕಳೆದ ೪೦ ವರ್ಷಗಳಿಂದ ವಕೀಲ ವೃತ್ತಿ ಮಾಡುತ್ತಿರುವ ಸೋಮನಾಥ ಪಟ್ಟಣಶೆಟ್ಟಿ ಅವರು ಗಂಗಾವತಿಯ ಹಿರಿಯ ನ್ಯಾಯವಾದಿಯಾಗಿ, ವಿವಿಧ ಬ್ಯಾಂಕ್ ಮತ್ತು ಇನ್ಸೂರೆನ್ಸ್ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿದ್ದಾರೆ. ವಕೀಲ ವೃತ್ತಿಯ ಜೊತೆಗೆ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜಕ್ಕೆ ವಕೀಲ ವೃತ್ತಿಗೆ ಮಾದರಿಯಾಗಿದ್ದಾರೆ. ಬಡವರಿಗೆ ಸರಕಾರಿ ಯೋಜನೆಗಳು ನೇರವಾಗಿ ತಲುಪಬೇಕು. ರಸ್ತೆ ಸುಧಾರಣೆ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಬೇಕೆಂಬ ಕಳಕಳಿ ಹೊಂದಿದ್ದಾರೆ. ಅವರ ಸೇವಾ ಮನೋಭಾವನೆ ಮತ್ತು ಕನ್ನಡದ ಕಳಕಳಿಯನ್ನು ಗುರುತಿಸಿ ಜೀ ನ್ಯೂಜ್ ಅವರು ಈ ಅವಾರ್ಡ್ ನೀಡಿದ್ದಾರೆ.

ಡಿ.೪ ರಂದು ಬೆಂಗಳೂರಿನ ಲಲಿತ್ ಅಶೋಕ ಹೊಟೇಲ್‌ನಲ್ಲಿ ಸಂಜೆ ೫.೦೦ ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗಡೆ, ಸಚಿವರಾದ ಹೆಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಸೇರಿದಂತೆ ಬಿಜೆಪಿಯ ಚಲುವಾದಿ ನಾರಾಯಣಸ್ವಾಮಿ ಅವರ ಅಮೃತ ಹಸ್ತದಿಂದ ಈ ಅವಾರ್ಡ್ ನೀಡಿ ಅಭಿನಂದಿಸಲಾಗಿದೆ ಎಂದು ಜೀ ಕನ್ನಡ ನ್ಯೂಜ್ ನ ಸಂಪಾದಕ ರವಿ.ಎಸ್ ಅವರು ತಿಳಿಸಿದರು.

ಹಿರಿಯ ನಟಿಯಾದ ತಾರಾ ಅವರು ಮಾತನಾಡಿ, ಝೀ ಕನ್ನಡ ನ್ಯೂಸ್ ಅವರು ನಾಡಿನ ವಿವಿಧ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿ ನೀಡುವ ಮೂಲಕ ಪ್ರೋತ್ಸಾಹಿಸುತ್ತಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ವಿಶೇಷವಾದ ವೀರ ಕನ್ನಡಿಗ ಅವಾರ್ಡ್ ಪಡೆದ ಹಿರಿಯ ನ್ಯಾಯವಾದಿ ಸೋಮನಾಥ ಎಸ್ ಪಟ್ಟಣಶೆಟ್ಟಿ ಅವರಿಗೆ ಗಂಗಾವತಿಯ ಮುಖಂಡರು, ಸಾರ್ವಜನಿಕರು ಶುಭ ಹಾರೈಸಿದ್ದಾರೆ. https://aratt.ai/@vishwaroopa_news_blog

ಶಂಕರ ಮಠದಲ್ಲಿ ದತ್ತ ಜಯಂತಿ ಆಚರಣೆ ಜನ್ಮ ಸಾರ್ಥಕತೆಗೆ ಗುರುವಿನ ಅನುಗ್ರಹ ಅವಶ್ಯಕ: ನಾರಾಯಣರಾವ್ ವೈದ್ಯ.

ಗಂಗಾವತಿ: ಹರ ಮುನಿದರೂ ಗುರು ಕಾಯುವನಂತೆ ಎಂಬಂತೆ ಪ್ರತಿಯೊಬ್ಬ ವ್ಯಕ್ತಿಯ ಜೀವನ ಸಾರ್ಥಕತೆಗೆ ಗುರುಗಳ ಅನುಗ್ರಹ ಅತ್ಯವಶ್ಯವಾಗಿದೆ ಎಂದು ಶಂಕರಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ನಗರದ ಶಂಕರ ಮಠದ ಶಾರದಾ ಮಂದಿರದಲ್ಲಿ ಗುರುವಾರದಂದು ತ್ರಿಮೂರ್ತಿ ಅವತಾರಿಗಳಾದ ಶ್ರೀ ದತ್ತಾತ್ರೇಯ ಜಯಂತೋತ್ಸವ ಸಮಾರಂಭದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಶ್ರೀಮಠದ ನಿರ್ಮಾಣಕ್ಕೆ ಪೂರ್ವದಲ್ಲಿ ಹಲವು ದಶಕಗಳಿಂದ ಶ್ರೀ ಶಂಕರಾಚಾರ್ಯ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಹಲವು ವೈವಿಧ್ಯಮಯವಾದ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಧರ್ಮಜಾಗೃತಿ ಹಾಗೂ ಸಮಾಜದ ಸಂಘಟನೆಗೆ ಗಮನಹರಿಸುತ್ತಾ ಬರಲಾಗಿದೆ.

ದಿವಂಗತ ಭೀಮಸೇನ್‌ರಾವ್ ಅಳವಂಡಿಕರ್ ಅವರ ಪರಿಶ್ರಮದಿಂದ ಹಾಗೂ ಶೃಂಗೇರಿಯ ಜಗದ್ಗುರುಗಳಾದ ಶ್ರೀ ಭಾರತಿತೀರ್ಥ ಮಹಾಸ್ವಾಮಿಗಳ ವಜ್ರೋತ್ಸವ ಹಾಗೂ ವಿದುಶೇಖರ ಮಹಾಸ್ವಾಮಿಗಳ ಅನುಗ್ರಹದ ಮೇರೆಗೆ ಸರ್ವಜನಾಂಗದವರ ಸಹಕಾರದಿಂದ ನಗರದಲ್ಲಿ ಶೃಂಗೇರಿ ಪೀಠದ ಉಭಯ ಜಗದ್ಗುರುಗಳ ಅನುಗ್ರಹದಿಂದ ಶ್ರೀಮಠ ಸ್ಥಾಪಿಸಿ ಎಂಟು ವರ್ಷಗಳು ಪೂರೈಸಿದ್ದು, ಶ್ರೀಮಠದ ಎಲ್ಲಾ ವಿಶೇಷ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಸಾಂಗತವಾಗಿ ನಡೆಸಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದತ್ತಾತ್ರೇಯ ಪಾದುಕೆಗಳಿಗೆ ಅಭಿಷೇಕ, ಅಷ್ಟೋತ್ತರ ಪಾರಾಯಣ, ಪಾಲಕಿ ಉತ್ಸವ, ತೊಟ್ಟಿಲು ಸೇವೆ ಕಾರ್ಯಕ್ರಮವನ್ನು ಮಹೇಶ್ ಭಟ್ ಜೋಷಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ಕುಮಾರ್ ಭಟ್ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮವು ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದರ ಮೂಲಕ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಜಗನ್ನಾಥ್ ಅಳವಂಡಿಕರ್, ಬಾಲಕೃಷ್ಣ ದೇಸಾಯಿ, ಶೇಷಗಿರಿ ಗಡಾದ್, ಶ್ರೀನಿವಾಸ ಕರಮುಡಿ, ಭೀಮಾಶಂಕರ್ ಹೊಸಳ್ಳಿ, ನಾಗೇಶ್, ಅನಿಲ್ ಭಟ್, ಕಾಶಿನಾಥ್ ಭಟ್ ಜೋಶಿ ಸೇರಿದಂತೆ ವಿವಿಧ ಭಜನಾ ಮಂಡಳಿಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು. https://aratt.ai/@vishwaroopa_news_blog

ವಿಭಾಗೀಯ ಮಟ್ಟದ ಸಾಂಸ್ಕೃತಿಕ ಭಾವಗೀತೆ ಸ್ಪರ್ಧೆಯಲ್ಲಿ ಗಂಗಾವತಿಯ ವೈಷ್ಣವಿ ರಾಜ್ಯಮಟ್ಟಕ್ಕೆ ಆಯ್ಕೆ

ಗಂಗಾವತಿ: ನಗರದ ಶ್ರೀಕೊಟ್ಟೂರೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ದ್ವಿತೀಯು ಪಿ.ಯು.ಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿಯಾದ ಕುಮಾರಿ ವೈಷ್ಣವಿ ಇವರು ಡಿಸೆಂಬರ್-೨ ರಂದು ಬಸವಕಲ್ಯಾಣದಲ್ಲಿ ನಡೆದ ವಿಭಾಗೀಯ ಮಟ್ಟದ ಪದವಿಪೂರ್ವ ಕಾಲೇಜುಗಳ ಸಾಂಸ್ಕೃತಿಕ ಭಾವಗೀತೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.

ಈ ವಿದ್ಯಾರ್ಥಿನಿಗೆ ಸಂಘದ ಅಧ್ಯಕ್ಷರಾದ ಶ್ರೀ ಮ.ನಿ.ಪ್ರ ಡಾ. ಕೊಟ್ಟೂರು ಮಹಾಸ್ವಾಮಿಗಳು ಕಲ್ಮಠ ಹಾಗೂ ಕಾರ್ಯದರ್ಶಿಗಳಾದ ಶ್ರೀ ಶರಣೇಗೌಡ ಮಾಲಿಪಾಟೀಲ್ ಹಾಗೂ ಸಂಘದ ಸರ್ವ ಸದಸ್ಯರು, ಕಾಲೇಜಿನ ಪ್ರಾಚಾರ್ಯರಾದ ಚಂದ್ರಶೇಖರ ಹಾಗೂ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿಸಿದ್ದಾರೆ. https://aratt.ai/@vishwaroopa_news_blog

ಯಶಸ್ವಿಯಾಗಿ ನಡೆದ ವಿಶ್ವ ವಿಕಲಚೇತನರ ದಿನಾಚರಣೆ

ಗಂಗಾವತಿ: ಡಿಸೆಂಬರ್-೩ ಬುಧವಾರ ವಿಶ್ವವಿಕಲಚೇತನರ ದಿನಾಚರಣೆಯನ್ನು ಜಿಲ್ಲಾ ಕೇಂದ್ರವಾದ ಕೊಪ್ಪಳದಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸಂಯುಕ್ತಾಶ್ರಯದಲ್ಲಿ ತಾಲೂಕಾ ಕ್ರೀಡಾಂಗಣದಲ್ಲಿ ನಡೆಯಿತು.

ವಿಶ್ವವಿಕಲಚೇತನರ ದಿನಾಚರಣೆ ನಿಮಿತ್ಯ ವಿವಿಧ ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದರಿ ಸ್ಪರ್ಧೆಗಳಲ್ಲಿ ಲಯನ್ಸ್ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯ ೩೦ ವಿದ್ಯಾರ್ಥಿಗಳು ಭಾಗವಹಿಸಿ, ಕಿರಿಯರು ಹಾಗೂ ಹಿರಿಯರ ವಿಭಾಗ (೮-೧೧, ೧೨-೧೫ ಮತ್ತು ೧೬ ರಿಂದ ೨೧ ವರ್ಷ ಹಾಗೂ ೨೧ ವರ್ಷ ಮೇಲ್ಪಟ್ಟವರ ಕ್ರೀಡಾ ಸ್ಪರ್ಧೆಗಳಲಾದ ೨೫ ಮಿ, ೫೦ ಮಿ, ಮತ್ತು ೧೦೦ ಮಿ. ಓಟ, ಬಕೆಟ್‌ನಲ್ಲಿ ಚಂಡು ಹಾಕುವುದು, ಸಾಫ್ಟ್ ಬಾಲ್ ಥ್ರೋ, ಹಾಗೂ ಗುಂಡು ಎಸೆತಗಳಲ್ಲಿ ೧೦ ಪ್ರಥಮ ಹಾಗೂ ೧೦ ದ್ವಿತಿಯ ಬಹುಮಾನ ಪಡೆದು ಸಂಸ್ಥೆ ಹಾಗೂ ಶಾಲೆಗೆ ಕೀರ್ತಿ ತಂದಿದ್ದಾರೆ.

ಲಯನ್ಸ್ ಬುದ್ದಿಮಾಂದ್ಯ ಮಕ್ಕಳ ವಸತಿ ಶಾಲಾ ಮುಖ್ಯಗುರುಗಳಾದ ಪ್ರಭು ಹಿರೇಮಠ, ಶಾಲಾ ಶಿಕ್ಷಕರು ಮತ್ತು ಶಿಕ್ಷಕೇತರರು ಕ್ರೀಡಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಕಲಚೇತನರು ಹಾಗೂ ಶಾಲಾ ಸಿಬ್ಬಂದಿ ಎಲ್ಲರ ಸಹಕಾರದಿಂದ ವಿಶ್ವ ವಿಕಲಚೇತನರ ದಿನಾಚರಣೆ ಯಶಸ್ವಿಯಾಗಿದ್ದು, ಲಯನ್ಸ್ ಸಂಸ್ಥೆಯ ಅಧ್ಯಕ್ಷರಾ ಡಾ|| ಜಿ.ಚಂದ್ರಪ್ಪರವರು ಹರ್ಷ ವ್ಯಕ್ತಪಡಿಸಿದ್ದಾರೆ. https://aratt.ai/@vishwaroopa_news_blog