ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಿ: ಸದಾನಂದ ನಾಗಪ್ಪ ನಾಯ್ಕ್ ಸಲಹೆ

ಗಂಗಾವತಿ : ಮತದಾರರು ಆಸೆ, ಆಮೀಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.

ನಗರದ ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯದ ಶ್ರೀ ರಾಮಭಟ್ ಜೋಶಿ ಸ್ಮಾರಕ ರಜತ ಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಆಮೀಷಗಳಿಗೆ ಬಲಿಯಾಗದೇ ಅಭಿವೃದ್ಧಿಗೆ ನೆರವಾಗುವ ಜನಪ್ರತಿನಿಧಿಗೆ ಮತ ಹಾಕಬೇಕು. ದೇಶದ ಏಳ್ಗೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದ್ದು, ಹೀಗಾಗಿ ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಬೇಕು. ಯೋಗ್ಯರನ್ನು ಆಯ್ಕೆ ಮಾಡಿದಾಗ ಮಾತ್ರ ದೇಶ ಪ್ರಗತಿ ದಿಕ್ಕಿನಲ್ಲಿ ಸಾಗಲು ಅನುಕೂಲ ಆಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ ಅವರು ಮಾತನಾಡಿ, ಚುನಾವಣೆ ಎಂಬುದು ಹಬ್ಬ ಇದ್ದಂತೆ ಪ್ರತಿಯೊಬ್ಬರೂ ಖುಷಿಯಿಂದ ಪಾಲ್ಗೊಳ್ಳಬೇಕು. ಹಣ, ಹೆಂಡಕ್ಕೆ ಮತ ಮಾರಿಕೊಳ್ಳದೇ ದೇಶದ ಅಭಿವೃದ್ಧಿಗೆ ಹಿತ ಬಯಸುವ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಅವರು ಮಾತನಾಡಿ, ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯುವ ಸಮುದಾಯ ತಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಮತದಾನ ಮಾಡಿಸಲು ಪ್ರೇರೆಪಿಸುವ ಕೆಲಸ ಮಾಡಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಮತದಾನ ದಿನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಹೆಚ್ಚಳಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮ ಮಾಡಿದರೂ ಮತದಾನ ಪ್ರಮಾಣ ನಿರೀಕ್ಷೆಯಂತೆ ಹೆಚ್ಚಳ ಆಗುತ್ತಿಲ್ಲ. ಮತದಾನ ಬಗ್ಗೆ ಯಾರೂ ನಿಷ್ಕಾಳಜಿ ತೋರದೇ ಕಡ್ಡಾಯಾಗಿ ಹಕ್ಕು ಚಲಾಯಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಯು. ನಾಗರಾಜ ಅವರು ಮಾತನಾಡಿ, ತಾಲೂಕಿನಲ್ಲಿ ಮತದಾರರ ಸಂಖ್ಯೆ ಹಾಗೂ ಮತದಾನ ಮಹತ್ವ ಕುರಿತು ಮಾತನಾಡಿದರು.

ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡರ್, ನಗರಸಭೆ ವ್ಯವಸ್ಥಾಪಕರಾದ ಷಣ್ಮುಖಪ್ಪ, ಸಿಡಿಪಿಓ ಜಯಶ್ರೀ, ಗಂಗಾವತಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಬವರಾಜ ಎಂ.ಎಚ್., ಶಿಕ್ಷಣ ಇಲಾಖೆಯ ಟಿಪಿಓ ಉಮಾದೇವಿ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ್ರು, ಶಿರಸ್ತೇದಾರ್ ರವಿಕುಮರ್ ನಾಯಕವಾಡಿ, ಕಂದಾಯ ಇಲಾಖೆ, ನಗರಸಭೆ, ತಾಪಂ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು, ಕಾಲೇಜು ಆಫ್ ಸಿರಿಗೇರಿ ಡೊ.ವೆಂಕೋಬ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಇದ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನ ದಾರಿದೀಪವಾಗಿದೆ: ಪಾರ್ಥಸಾರಥಿ

ಗಂಗಾವತಿ: ವಿಶ್ವದಲ್ಲಿ ಬೃಹತ್ ಪ್ರಜಾಪ್ರಭುತ್ವ ಹೊಂದಿದ ಭಾರತ ದೇಶ ಅತ್ಯಂತ ಪವಿತ್ರವಾದ ಸಂವಿಧಾನವನ್ನು ಹೊಂದಿದ್ದು ಪ್ರತಿಯೊಬ್ಬರೂ ಸಂವಿಧಾನದ ಆಶಯದಂತೆ ಜೀವನದ ಉದ್ದಕ್ಕೂ ನಡೆಸಿಕೊಳ್ಳುವುದರ ಮೂಲಕ ಸಂವಿಧಾನವನ್ನು ಗೌರವಿಸಬೇಕೆಂದು ಸಮೀಪದ ಶ್ರೀರಾಮನಗರ ಶ್ರೀ ಸ್ವಾಮಿ ವಿವೇಕಾನಂದ ಪ್ರೌಢಶಾಲೆಯ ಸಂಸ್ಥಾಪಕ ಅಧ್ಯಕ್ಷ ಪಾರ್ಥ ಸಾರಥಿ ಹೇಳಿದರು.

ಅವರು ರವಿವಾರದಂದು. 76ನೇ ಗಣರಾಜ್ಯೋತ್ಸವಕ್ಕೆ ಬಾತ್ ಬಾ ಗಾಂಧಿ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

ಸಮಾನತೆ ಸ್ವಾತಂತ್ರ್ಯತೆ ಬ್ರಾತೃತ್ವವನ್ನು ಭಾವನೆಯನ್ನು ಆಡಳಿತದ ವ್ಯವಸ್ಥೆಯಲ್ಲಿ ಪಾರದರ್ಶಕತೆಯನ್ನು ಕಾಪಾಡುವ ಉದ್ದೇಶದಿಂದ ಶಾಸಕಾಂಗ ಕಾರ್ಯಾಂಗ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದ್ದು ಕಾಣಬಹುದಾಗಿದೆ ಎಂದು ತಿಳಿಸಿ ದರು.

ಮುಖ್ಯ ಗುರುಗಳಾದ ಶಾರುಣ್ ಕುಮಾರಿ ಮಾತನಾಡಿ ವಿದ್ಯಾರ್ಥಿ ದೆಸೆಯಲ್ಲಿ ಸಂವಿಧಾನದ ತತ್ವ ಸಿದ್ಧಾಂತಗಳನ್ನು ಅರಿತುಕೊಳ್ಳುವುದರ ಮೂಲಕ ಸದೃಢವಾದ ಭಾರತದ ಅಭಿವೃದ್ಧಿಗೆ ಕಂಕಣ ಬಂದರಾಗಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ಇತರೆ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು.

ಈ ಸಂದರ್ಭದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳ ಪಾಲಕರು, ಗ್ರಾಮದ ಗಣ್ಯರು ಉಪಸ್ಥಿತರಿದ್ದರು.

SPECTRUM-3 ಎನ್ನುವ ಶೀರ್ಷಿಕೆಯಡಿ ಅದ್ದೂರಿಯಾಗಿ ಜರುಗಿದ ಆರೋನ್ ಮೀರಜ್‌ಕರ್ ಹಾಗೂ ನಿವೇದಿಕತ ಹಿ.ಪ್ರಾ ಶಾಲೆಗಳ ಶಾಲಾ ವಾರ್ಷಿಕೋತ್ಸವ

ಗಂಗಾವತಿ: ಜನೇವರಿ-೨೪ ಶನಿವಾರದಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ, ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆ ಮತ್ತು ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ SPECTRUM-3 ಎನ್ನುವ ಶೀರ್ಷಿಕೆಯಡಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಮತಿ ಚಿನ್ನಮ್ಮ ಮಿರಜ್‌ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಇ.ಸಿ.ಐ. ಚರ್ಚ್ನ ಬಿಷಪ್ ರವಿಕುಮಾರ್, ಅತಿಥಿಗಳಾಗಿ ಎಂ.ಎನ್.ಎಂ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಾಂತಪ್ಪ, ಯೇಸುದಾಸ್ ಫಾಸ್ಟರ್, ಸಂಸ್ಥೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್, ಖಜಾಂಚಿಗಳಾದ ಸುನೀತಾ ಮಿರಜ್‌ಕರ್, ಶಾಲೆಯ ಆಡಳಿತಾಧಿಕಾಗಳಾದ ಜಿ. ಚಂದ್ರಕಾಂತ್‌ರಾವ್, ಶಾಲೆಯ ವ್ಯವಸ್ಥಾಪಕರಾದ ಮಂಜುನಾಥ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಾನಸಾ ಪಾಟೀಲ್ ಹಾಗೂ ರೇಖಾ ಠಾಕೂರ್, ಝೀ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಗಾಣಿಗೇರ್ ಮತ್ತು ವಾಣಿಗೌಡ ಇದ್ದರು.
ಕಾರ್ಯಕ್ರಮವನ್ನು ಪ್ರಾರ್ಥನೆ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಉಭಯ ಮುಖ್ಯೋಪಾಧ್ಯಾಯರು ಶಾಲಾ ವಾರ್ಷಿಕ ವರದಿ ವಾಚನವನ್ನು ಮಂಡಿಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವನ್ನು ನೆರವೇರಿಸಲಾಯಿತು.
‘ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಚೈತನ್ಯವನ್ನು ಉಂಟು ಮಾಡುತ್ತವೆ. ವಿದ್ಯಾರ್ಥಿಗಳು ತುಂಬಾ ಉತ್ತಮವಾದ ನೃತ್ಯವನ್ನು ಪ್ರದರ್ಶಿಸಲಿ’ ಎಂದು ಮುಖ್ಯ ಅತಿಥಿಗಳಾದ ಬಿಷಪ್ ರವಿಕುಮಾರ್ ಅವರು ಹೇಳಿದರು.
‘ಪ್ರತಿಯೊಂದು ಮಕ್ಕಳಲ್ಲಿ ತನ್ನದೇ ಆದ ಸುಪ್ತ ಪ್ರತಿಭೆಗಳಿರುತ್ತವೆ. ಅವುಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಶಿಕ್ಷಕರಾದ ನಾವು ಮಾಡಬೇಕಾಗಿದೆ’ ಎಂದು ಅತಿಥಿಗಳಾದ ಶಾಂತಪ್ಪನವರು ನುಡಿದರು.
‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ದೇವರ ಪ್ರತಿರೂಪವಿದ್ದಂತೆ. ಮಕ್ಕಳ ಈ ಕಾರ್ಯಕ್ರಮವು ಸ್ವರ್ಗದಂತೆ ಭಾಸವಾಗುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಚಿನ್ನಮ್ಮ ಮಿರಜ್‌ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
‘ಒಂದು ಕೈ ಸೇರಿದರೆ ಚಪ್ಪಾಳೆಯಾಗದು ಎನ್ನುವಂತೆ, ಈ ಕಾರ್ಯಕ್ರಮವು ಒಬ್ಬರ ಶ್ರಮದಿಂದ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ತುಂಬು ಹೃದಯದ ವಂದನೆಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್ ಅವರು ತಮ್ಮ ವಂದನಾ ನುಡಿಗಳನ್ನಾಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಮಕ್ಕಳಿಂದ ವಿಭಿನ್ನ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಗಾಣಿಗೇರ್ ಮತ್ತು ವಾಣಿಗೌಡ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ಸವಿನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಪಾಲಕರು, ಪತ್ರಿಕಾ ಮಾಧ್ಯಮದವರು, ಆರಕ್ಷಕ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.