ಗಂಗಾವತಿ: ಜನೇವರಿ-೨೪ ಶನಿವಾರದಂದು ನಗರದ ಹೊಸಳ್ಳಿ ರಸ್ತೆಯಲ್ಲಿರುವ ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ, ಆರೋನ್ ಮಿರಜ್‌ಕರ್ ಆಂಗ್ಲ ಮಾಧ್ಯಮ ಶಾಲೆ ಮತ್ತು ನಿವೇದಿತಾ ಹಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ SPECTRUM-3 ಎನ್ನುವ ಶೀರ್ಷಿಕೆಯಡಿ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಶ್ರೀಮತಿ ಚಿನ್ನಮ್ಮ ಮಿರಜ್‌ಕರ್ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಇ.ಸಿ.ಐ. ಚರ್ಚ್ನ ಬಿಷಪ್ ರವಿಕುಮಾರ್, ಅತಿಥಿಗಳಾಗಿ ಎಂ.ಎನ್.ಎಂ. ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಾಂತಪ್ಪ, ಯೇಸುದಾಸ್ ಫಾಸ್ಟರ್, ಸಂಸ್ಥೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್, ಖಜಾಂಚಿಗಳಾದ ಸುನೀತಾ ಮಿರಜ್‌ಕರ್, ಶಾಲೆಯ ಆಡಳಿತಾಧಿಕಾಗಳಾದ ಜಿ. ಚಂದ್ರಕಾಂತ್‌ರಾವ್, ಶಾಲೆಯ ವ್ಯವಸ್ಥಾಪಕರಾದ ಮಂಜುನಾಥ, ಮುಖ್ಯೋಪಾಧ್ಯಾಯರಾದ ಶ್ರೀಮತಿ ಮಾನಸಾ ಪಾಟೀಲ್ ಹಾಗೂ ರೇಖಾ ಠಾಕೂರ್, ಝೀ ವಾಹಿನಿಯ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಗಾಣಿಗೇರ್ ಮತ್ತು ವಾಣಿಗೌಡ ಇದ್ದರು.
ಕಾರ್ಯಕ್ರಮವನ್ನು ಪ್ರಾರ್ಥನೆ ಹಾಗೂ ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟನೆ ಮಾಡಲಾಯಿತು. ಉಭಯ ಮುಖ್ಯೋಪಾಧ್ಯಾಯರು ಶಾಲಾ ವಾರ್ಷಿಕ ವರದಿ ವಾಚನವನ್ನು ಮಂಡಿಸಿದರು. ವೇದಿಕೆಯ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನವನ್ನು ನೆರವೇರಿಸಲಾಯಿತು.
‘ಸಾಂಸ್ಕೃತಿಕ ಕಾರ್ಯಕ್ರಮಗಳು ಮಕ್ಕಳಲ್ಲಿ ಚೈತನ್ಯವನ್ನು ಉಂಟು ಮಾಡುತ್ತವೆ. ವಿದ್ಯಾರ್ಥಿಗಳು ತುಂಬಾ ಉತ್ತಮವಾದ ನೃತ್ಯವನ್ನು ಪ್ರದರ್ಶಿಸಲಿ’ ಎಂದು ಮುಖ್ಯ ಅತಿಥಿಗಳಾದ ಬಿಷಪ್ ರವಿಕುಮಾರ್ ಅವರು ಹೇಳಿದರು.
‘ಪ್ರತಿಯೊಂದು ಮಕ್ಕಳಲ್ಲಿ ತನ್ನದೇ ಆದ ಸುಪ್ತ ಪ್ರತಿಭೆಗಳಿರುತ್ತವೆ. ಅವುಗಳನ್ನು ಹುಡುಕಿ ತೆಗೆಯುವ ಕೆಲಸವನ್ನು ಶಿಕ್ಷಕರಾದ ನಾವು ಮಾಡಬೇಕಾಗಿದೆ’ ಎಂದು ಅತಿಥಿಗಳಾದ ಶಾಂತಪ್ಪನವರು ನುಡಿದರು.
‘ಇಂದಿನ ಮಕ್ಕಳೇ ನಾಳಿನ ಪ್ರಜೆಗಳು, ಮಕ್ಕಳು ದೇವರ ಪ್ರತಿರೂಪವಿದ್ದಂತೆ. ಮಕ್ಕಳ ಈ ಕಾರ್ಯಕ್ರಮವು ಸ್ವರ್ಗದಂತೆ ಭಾಸವಾಗುತ್ತಿದೆ’ ಎಂದು ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಚಿನ್ನಮ್ಮ ಮಿರಜ್‌ಕರ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿದರು.
‘ಒಂದು ಕೈ ಸೇರಿದರೆ ಚಪ್ಪಾಳೆಯಾಗದು ಎನ್ನುವಂತೆ, ಈ ಕಾರ್ಯಕ್ರಮವು ಒಬ್ಬರ ಶ್ರಮದಿಂದ ಯಶಸ್ವಿಯಾಗಲು ಸಾಧ್ಯವಿಲ್ಲ. ಹಾಗಾಗಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ತುಂಬು ಹೃದಯದ ವಂದನೆಗಳನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ರುಬೇನ್ ಮಿರಜ್‌ಕರ್ ಅವರು ತಮ್ಮ ವಂದನಾ ನುಡಿಗಳನ್ನಾಡಿದರು.
ವೇದಿಕೆಯ ಕಾರ್ಯಕ್ರಮದ ನಂತರ ಮಕ್ಕಳಿಂದ ವಿಭಿನ್ನ ಪ್ರಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ಕಾಮಿಡಿ ಕಿಲಾಡಿಗಳು ಖ್ಯಾತಿಯ ಅಪ್ಪಣ್ಣ ಗಾಣಿಗೇರ್ ಮತ್ತು ವಾಣಿಗೌಡ ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಶ್ರಮಿಸಿದ ಎಲ್ಲರಿಗೂ ಸವಿನೆನಪಿನ ಕಾಣಿಕೆಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರು, ಪಾಲಕರು, ಪತ್ರಿಕಾ ಮಾಧ್ಯಮದವರು, ಆರಕ್ಷಕ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.