ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಿ: ಸದಾನಂದ ನಾಗಪ್ಪ ನಾಯ್ಕ್ ಸಲಹೆ

ಗಂಗಾವತಿ : ಮತದಾರರು ಆಸೆ, ಆಮೀಷಕ್ಕೆ ಬಲಿಯಾಗದೇ ಮತ ಚಲಾಯಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್ ಹೇಳಿದರು.

ನಗರದ ಶ್ರೀರಾಮುಲು ಸ್ಮಾರಕ ಮಹಾವಿದ್ಯಾಲಯದ ಶ್ರೀ ರಾಮಭಟ್ ಜೋಶಿ ಸ್ಮಾರಕ ರಜತ ಭವನದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಸ್ವೀಪ್ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

18 ವರ್ಷ ಮೇಲ್ಪಟ್ಟ ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ಯಾವುದೇ ಆಮೀಷಗಳಿಗೆ ಬಲಿಯಾಗದೇ ಅಭಿವೃದ್ಧಿಗೆ ನೆರವಾಗುವ ಜನಪ್ರತಿನಿಧಿಗೆ ಮತ ಹಾಕಬೇಕು. ದೇಶದ ಏಳ್ಗೆಗೆ ಯುವ ಸಮುದಾಯದ ಪಾತ್ರ ಬಹುಮುಖ್ಯವಾಗಿದ್ದು, ಹೀಗಾಗಿ ಚುನಾವಣೆಗಳಲ್ಲಿ ಅರ್ಹರಿಗೆ ಮತ ಚಲಾಯಿಸಬೇಕು. ಯೋಗ್ಯರನ್ನು ಆಯ್ಕೆ ಮಾಡಿದಾಗ ಮಾತ್ರ ದೇಶ ಪ್ರಗತಿ ದಿಕ್ಕಿನಲ್ಲಿ ಸಾಗಲು ಅನುಕೂಲ ಆಗುತ್ತದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ ಅವರು ಮಾತನಾಡಿ, ಚುನಾವಣೆ ಎಂಬುದು ಹಬ್ಬ ಇದ್ದಂತೆ ಪ್ರತಿಯೊಬ್ಬರೂ ಖುಷಿಯಿಂದ ಪಾಲ್ಗೊಳ್ಳಬೇಕು. ಹಣ, ಹೆಂಡಕ್ಕೆ ಮತ ಮಾರಿಕೊಳ್ಳದೇ ದೇಶದ ಅಭಿವೃದ್ಧಿಗೆ ಹಿತ ಬಯಸುವ ನಾಯಕರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ನಾಗೇಶ ಪಾಟೀಲ್ ಅವರು ಮಾತನಾಡಿ, ಮತದಾನದ ಹಕ್ಕನ್ನು ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ಯುವ ಸಮುದಾಯ ತಮ್ಮ ಕುಟುಂಬಸ್ಥರು ಹಾಗೂ ಗ್ರಾಮಸ್ಥರನ್ನು ಮತದಾನ ಮಾಡಿಸಲು ಪ್ರೇರೆಪಿಸುವ ಕೆಲಸ ಮಾಡಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ಮತದಾನ ದಿನ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಮತದಾನ ಹೆಚ್ಚಳಕ್ಕೆ ಹಲವಾರು ಜಾಗೃತಿ ಕಾರ್ಯಕ್ರಮ ಮಾಡಿದರೂ ಮತದಾನ ಪ್ರಮಾಣ ನಿರೀಕ್ಷೆಯಂತೆ ಹೆಚ್ಚಳ ಆಗುತ್ತಿಲ್ಲ. ಮತದಾನ ಬಗ್ಗೆ ಯಾರೂ ನಿಷ್ಕಾಳಜಿ ತೋರದೇ ಕಡ್ಡಾಯಾಗಿ ಹಕ್ಕು ಚಲಾಯಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಯು. ನಾಗರಾಜ ಅವರು ಮಾತನಾಡಿ, ತಾಲೂಕಿನಲ್ಲಿ ಮತದಾರರ ಸಂಖ್ಯೆ ಹಾಗೂ ಮತದಾನ ಮಹತ್ವ ಕುರಿತು ಮಾತನಾಡಿದರು.

ನಂತರ ಕಾಲೇಜು ವಿದ್ಯಾರ್ಥಿಗಳಿಗೆ ಮತದಾನ ಮಹತ್ವ ಕುರಿತು ಪ್ರತಿಜ್ಞಾ ವಿಧಿ ಬೋಧಿಸಲಾಯಿತು.

ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡರ್, ನಗರಸಭೆ ವ್ಯವಸ್ಥಾಪಕರಾದ ಷಣ್ಮುಖಪ್ಪ, ಸಿಡಿಪಿಓ ಜಯಶ್ರೀ, ಗಂಗಾವತಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಬವರಾಜ ಎಂ.ಎಚ್., ಶಿಕ್ಷಣ ಇಲಾಖೆಯ ಟಿಪಿಓ ಉಮಾದೇವಿ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ್ರು, ಶಿರಸ್ತೇದಾರ್ ರವಿಕುಮರ್ ನಾಯಕವಾಡಿ, ಕಂದಾಯ ಇಲಾಖೆ, ನಗರಸಭೆ, ತಾಪಂ ಸಿಬ್ಬಂದಿಗಳು, ಬೂತ್ ಮಟ್ಟದ ಅಧಿಕಾರಿಗಳು, ಕಾಲೇಜು ಆಫ್ ಸಿರಿಗೇರಿ ಡೊ.ವೆಂಕೋಬ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಇದ್ದರು.

Leave a Reply