ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆ ಭಾರತೀಯ ಸನಾತನ ಗುರು ಪರಂಪರೆ ವಿಶ್ವಕ್ಕೆ ಮಾದರಿಯಾಗಿದೆ: ರಾಘವೇಂದ್ರ ಅಳವಂಡಿಕರ್

ಗಂಗಾವತಿ: ಭಾರತದ ಸನಾತನ ಗುರು ಪರಂಪರೆ ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯ ರಾಘವೇಂದ್ರ ಅಳವಂಡಿಕರ್ ಹೇಳಿದರು.

ಅವರು ಗುರುವಾರದಂದು ನಗರದ ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.

ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ವೇದಾಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿ, ಹರ ಮುನಿದರೂ ಗುರು ಕಾಯುವಂತೆ ಗುರುಗಳ ಅನುಗ್ರಹವಿಲ್ಲದೆ ಶಿಷ್ಯ ಏನನ್ನೂ ಸಾಧಿಸಲಾರ.

ಇದಕ್ಕೆ ಪೂರಕವೆಂಬಂತೆ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳುವುದಾದರೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಒಳಗೊಂಡಂತೆ ಉನ್ನತ ಅಧ್ಯಯನವನ್ನು ಸಾಧನೆ ಮಾಡಲು ಎಲ್ಲ ಶಿಷ್ಯರುಗಳಿಗೆ ಸಲ್ಲುತ್ತದೆ.

ಒಟ್ಟಾರೆ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಗುಣಮಟ್ಟದ ಸಂಸ್ಕಾರ ಪಡೆಯಲು ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಶ್ರೀ ಶಾರದಾ ದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ, ಗುರುಪಾದುಕೆಗಳಿಗೆ ಅರ್ಚಕ ಕುಮಾರ್ ಭಟ್ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಇತರ ಪೂಜಾ ಕಾರ್ಯಕ್ರಮವನ್ನು ನಡೆಸಿದರು.

ಸಂಜೆ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಹಾಗೂ ಇತರೆ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಜರುಗಿದವು.

ಈ ಸಂದರ್ಭದಲ್ಲಿ ವಿನಾಯಕ ಜೋಶಿ, ಹೊಸಳ್ಳಿ ಭೀಮಶಂಕರ, ಜಗನ್ನಾಥ್ ಅಳವಂಡಿಕರ್, ಶ್ರೀನಿವಾಸ ಕರಮುಡಿ, ನಾಗೇಶ್ ಭಟ್, ವೇಣುಗೋಪಾಲ್, ಶ್ರೀನಿವಾಸ ಅಳವಂಡಿಕರ್ ಇತರರು ಉಪಸ್ಥಿತರಿದ್ದರು.

ಮಾಹಿತಿಗಾಗಿ:
ಸುದರ್ಶನ ವೈದ್ಯ
ಮೊ: ೯೪೪೯೨೨೯೪೮೮, ೬೩೬೨೪೫೯೭೬೭

ಚಿತ್ರ ಸಂತೆ ಪತ್ರಿಕೆಯಿಂದ ನೀಡಲಾಗುವ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಆಯ್ಕೆ.

ಗಂಗಾವತಿ: ರಾಜ್ಯದ ಚಿತ್ರರಂಗ ವಿಭಾಗದ ಪ್ರತಿಷ್ಠಿತ ಪತ್ರಿಕೆಯಾದ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಉತ್ತಮ ಕನ್ನಡಿಗ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ.

ಅದರಂತೆ ಈ ವರ್ಷದ ಉತ್ತಮ ಕಲಾವಿದ ಪ್ರಶಸ್ತಿಗೆ ಗಂಗಾವತಿಯ ಚನ್ನಬಸವ ಕೊಟಗಿ ಅವರು ಆಯ್ಕೆಯಾಗಿದ್ದಾರೆ.

ಅವರಿಗೆ ಜುಲೈ-೧೫ ಮಂಗಳವಾರ ಬೆಂಗಳೂರಿನ ಸದಾಶಿವ ನಗರದ ಹೈಪಾರ್ಕ್ ಅಪಾರ್ಟ್ ಹೋಟಲ್‌ನ ಸಭಾಂಗಣದಲ್ಲಿ ಚಿತ್ರ ಸಂತೆ ಪತ್ರಿಕೆಯ ವಾರ್ಷಿಕ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು.

ಚನ್ನಬಸವ ಕೊಟಗಿಯವರು ಗಂಗಾವತಿಯ ನಿವಾಸಿಯಾಗಿದ್ದು, ಅವರು ಒಬ್ಬ ಕಲಾವಿದರಾಗಿ, ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಐತಿಹಾಸಿಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಮಾರ್ಗದರ್ಶಕರಾಗಿ, ಸಂಘಟಕರಾಗಿ, ಸಂಘ-ಸಂಸ್ಥೆಗಳ ಪ್ರತಿನಿಧಿಯಾಗಿ, ಗಣ್ಯವ್ಯಕ್ತಿಗಳ ಆಪ್ತ ಸಹಾಯಕರಾಗಿ ಹತ್ತಾರು ಸೇವೆಗಳನ್ನು ಸಲ್ಲಿಸಿದ್ದಾರೆ. ಮತ್ತು ವಿವಿಧ ಖಾಸಗಿ ಟಿ.ವಿ ಚಾನೆಲ್‌ಗಳು ಹಾಗೂ ಪತ್ರಿಕೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.

ಪ್ರಸ್ತುತ ಭಾರತ ಸರ್ಕಾರದ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇವರ ಸೇವೆಯನ್ನು ಗುರುತಿಸಿದ ಚಿತ್ರ ಸಂತೆ ಪತ್ರಿಕೆಯ ಮುಖ್ಯ ಸಂಪಾದಕರಾದ ಗಿರೀಶ್ ವಿ. ಗೌಡ ರವರು ಇವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಇವರಿಗೆ ಗಂಗಾವತಿಯ ಸಮಸ್ತ ನಾಗರಿಕರು, ಕಲಾವಿದರು, ಪತ್ರಕರ್ತರು, ಸಾಹಿತಿಗಳು, ಸಂಘ-ಸಂಸ್ಥೆಗಳು ಅಭಿನಂದನೆಗಳನ್ನು ಸಲ್ಲಿಸಿವೆ.

ಮಾಹಿತಿಗಾಗಿ:
ಚನ್ನಬಸವ ಕೊಟಗಿ
ಐತಿಹಾಸಿಕ ಸ್ಥಳಗಳ ಮಾರ್ಗದರ್ಶಕರು.
ಹಂಪಿ, ಸಾ|| ಗಂಗಾವತಿ
ಮೊ.ನಂ: ೯೪೮೧೦೮೭೦೦೯

ಹೆಸರಾಂತ ರಂಗನಟ ಸಿ. ಎ. ರಾಮಚಂದ್ರರಾವ್ – ಗೊರೂರು ಅನಂತರಾಜು, ಹಾಸನ

ಬೆಂಗಳೂರಿನ ರಂಗ ಭೂಮಿಯಲ್ಲಿ ನಿರಂತರವಾಗಿ ಸಂಘಟನೆ ನಟನೆಯಲ್ಲಿ ತೊಡಗಿಸಿಕೊಂಡಿರುವ ಸಿ.ಎ. ರಾಮಚಂದ್ರ ರಾವ್ ರವರು ನನಗೆ ಪರಿಚಿತರೇನಲ್ಲ.

ಒಂದು ತಿಂಗಳ ಹಿಂದೆ, ನಾನು ಮಾಯಸಂದ್ರದ ನಟರಾದ ಟಿ. ನಾಗರಾಜ್ ರವರ  ಬಗ್ಗೆ ಬರೆದಿರುವ ಕಲಾ ಪರಿಚಯದ ಲೇಖನವನ್ನು ಓದಿ ಅವರು ಮೆಚ್ಚುಗೆಯ ಮಾತನಾಡಿದರು.

 

ತುಮಕೂರಿನಲ್ಲಿ ನಮ್ಮ ತಂಡದ ನಾಟಕ ಇದೆ ಎ೦ದು ಕರಪತ್ರ ಕಳುಹಿಸಿದ್ದರು. ಅದನ್ನು ಪತ್ರಿಕೆಗೆ ವರದಿ ಮಾಡಿದೆ.

ಅದಕ್ಕಾಗಿ, ಇಂದು ಫೋನ್ ಮಾಡಿ ಜುಲೈ 9ಕ್ಕೆ ಹಾಸನದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಮ್ಮ ಬೆಂಗಳೂರು ತಂಡದಿಂದ ನಾಟಕ ಇದೆ ಬನ್ನಿ ಎಂದರು.

ಶ್ರೀ ಅನ್ನಪೂರ್ಣೇಶ್ವರಿ ಕಲಾ ಸಂಘದಿ೦ದ ಜುಲೈ 4 ರಿಂದ 9 ರವರೆಗೆ ಆರು ದಿನಗಳ ಪೌರಾಣಿಕ ನಾಟಕೋತ್ಸವ ಹಮ್ಮಿಕೊಂಡಿತ್ತು.

ಅದರಲ್ಲಿ ಕಲಾವಿದ ಡಿ.ವಿ. ನಾಗಮೋಹನ್‌ರವರ  ತಂಡದ ನಾಟಕ ಪ್ರದರ್ಶನ ಏರ್ಪಾಡಾಗಿತ್ತು.

 

ಸಿ.ಎ. ರಾಮಚಂದ್ರರಾವ್ ನನಗೆ ಅವರ ನಟನೆಯ ವಿಡಿಯೋ ಕಳುಹಿಸಿದರು. ಅವರು ಪೌರಾಣಿಕ ರಂಗಭೂಮಿಯಲ್ಲಿ ತುಂಬಾ ಕೆಲಸ ಮಾಡಿದ್ದಾರೆ ಎಂದು ಅವರು ಕಳುಹಿಸಿದ ಮಾಹಿತಿಯಿಂದ ತಿಳಿದುಬಂದಿತು.

 

ಇವರು ತುಮಕೂರು ಜಿಲ್ಲೆ ತುಮಕೂರು ತಾಲ್ಲೂಕು ಹೆಬ್ಬೂರು ಹೋಬಳಿ ನಾಗವಲ್ಲಿ ಅಂಚೆ ಚಿಕ್ಕಯನಪಾಳ್ಯದಲ್ಲಿ ಜನಿಸಿದರು. ಇವರು ಶ್ರೀ ಅಪ್ಪುರಾವ್ ಹಾಗೂ ಶ್ರೀಮತಿ ಬೈನಾಬಾಯಿ ಅವರ ಐದನೇ ಸುಪುತ್ರರು.

ಇವರು 12 ವರ್ಷ ಬಾಲಕನಿದ್ದಾಗಲೇ ಗುಬ್ಬಿ ಕಂಪನಿಯ ಹೆಸರಾಂತ ಸಂಗೀತ ನಿರ್ದೇಶಕರಾದ ವಿರುಪಸಂದ್ರ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಕವಿರತ್ನ ಕಾಳಿದಾಸ ಪೌರಾಣಿಕ ನಾಟಕದ ಬಾಲ ಭೋಜನ ಪಾತ್ರದಲ್ಲಿ ಅಭಿನಯಿಸಿ ರಂಗಪ್ರವೇಶ ಮಾಡಿದರು.

 

ತದನಂತರ, ಅದೇ ದಾಸೇಗೌಡರ ಸಂಗೀತ ನಿರ್ದೇಶನದಲ್ಲಿ ಶ್ರೀ ಕೃಷ್ಣಗಾರುಡಿ ಎಂಬ ನಾಟಕದಲ್ಲಿ ಮಾಯಾಮೋಹಿನಿ ಪಾತ್ರವನ್ನು ಮಾಡಿ ಪಾಂಡು ವಿಜಯ ನಾಟಕದಲ್ಲಿ ಅರ್ಜುನ ಪಾತ್ರವನ್ನು ಹತ್ತು ಬಾರಿ ಮಾಡಿದ್ದಾರೆ.

ಅಂದಿನ ಕಾಲಕ್ಕೆ ಸುತ್ತ ಮುತ್ತಲಿನ ಹಳ್ಳಿಗಾಡಿನ ಜನರ ಮನಸ್ಸನ್ನು ಗೆದ್ದಿರುವ ನಾಟಕವಿದು.

ಕುರುಕ್ಷೇತ್ರ ನಾಟಕದಲ್ಲಿ ಶ್ರೀ ಕೃಷ್ಣ, ಅರ್ಜುನ, ದುರ್ಯೋಧನ, ಭೀಮ, ಕರ್ಣ ಹಾಗೂ ಅಭಿಮನ್ಯು ಈ ಒಂದೊಂದು ಪಾತ್ರವನ್ನು ಹಲವಾರು ಬಾರಿ ಮಾಡಿದ್ದಾರೆ.

ರಾಮಾಯಣದಲ್ಲಿ ದಶರಥ, ಶ್ರೀರಾಮ, ಆಂಜನೇಯ, ರಾವಣ ಮತ್ತು ಭರತ ಇಷ್ಟು ಪಾತ್ರಗಳನ್ನು ಹಲವು ಬಾರಿ ಮಾಡಿದ್ದಾರೆ.

ರಾಜ ವಿಕ್ರಮ ನಾಟಕದಲ್ಲಿ ವಿಕ್ರಮ, ಶನೇಶ್ವರನ ಪಾತ್ರಗಳನ್ನು, ದಾನ ಶೂರ ವೀರ ಕರ್ಣ ನಾಟಕದಲ್ಲಿ ಭೀಮನ ಪಾತ್ರ ಮಾಡಿದ್ದಾರೆ.

1985ರಲ್ಲಿ ಮಾರುತಿ ಕಲಾಬಳಗ, ಎಲೆಕ್ಟ್ರಾನಿಕ್ ಸಿಟಿ ಎಂಬ ಸಂಘ ಸ್ಥಾಪಿಸಿತು. ಈ ಸಂಘದಿಂದ ಕಳೆದ 25 ವರ್ಷಗಳಿಂದ ಅನೇಕ ನಾಟಕಗಳನ್ನು ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಪ್ರದರ್ಶನ ಮಾಡಿ ಜನಮನ ಸೆಳೆದಿದ್ದಾರೆ.

ಈ ಮಾರುತಿ ಕಲಾ ಬಳಗದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಯ ಕಲಾವಿದರಿಗೂ ನಟಿಸಲು ಅವಕಾಶ ಕಲ್ಪಿಸಿದ್ದಾರೆ.

ನಲ್ಲಾತಂಗ ಎಂಬ ನಾಟಕದಲ್ಲಿ ರಾಮಸಿಂಹ, ವಂಗರಾಜ, ನಲರಾಜ ವಿಜಯಸಿಂಹ, ಶ್ರೀ ಶನೇಶ್ವರ ಪಾತ್ರಗಳನ್ನು ಒಂದೊಂದು ಪಾತ್ರಗಳನ್ನು 25 ಬಾರಿ ಮಾಡಿದ್ದಾರೆ.

ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ 2007ರಿಂದ ಈವರೆಗೆ 150 ನಾಟಕ ಪ್ರದರ್ಶಿಸಿದ್ದಾರೆ. ತುಮಕೂರು ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ 50 ಪ್ರದರ್ಶನವಾಗಿದೆ.

ಪ್ರಚಂಡ ರಾವಣ ನಾಟಕದಲ್ಲಿ ರಾವಣ, ಆಂಜನೇಯ ಪಾತ್ರಗಳಲ್ಲಿ ಅನೇಕ ಬಾರಿ ಅಭಿನಯಿಸಿದ್ದಾರೆ.

ಸುಭದ್ರ ಕಲ್ಯಾಣ ನಾಟಕದಲ್ಲಿ ಅರ್ಜುನ ಪಾತ್ರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಅಭಿನಯಿಸಿದ್ದಾರೆ.

ರವೀಂದ್ರ ಕಲಾಕ್ಷೇತ್ರದಲ್ಲಿ ತಾ. 3-2-2025 ರಂದು ಭಾರತದ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಆಧರಿಸಿದಂತೆ.

ಹೆಸರಾಂತ ರಂಗ ಕಲಾವಿದರು ರಂಗಶ್ರೀ ರಂಗಸ್ವಾಮಿ ಅವರ ಪರಿಕಲ್ಪನೆಯಲ್ಲಿ ಹೆಸರಾಂತ ರಂಗಕರ್ಮಿ ಎಸ್.ಎಲ್.ಎನ್. ಸ್ವಾಮಿ ನಿರ್ದೇಶನದಲ್ಲಿ ಯುಗೇ ಯುಗೇ ಪೌರಾಣಿಕ ನಾಟಕವು ಪ್ರದರ್ಶನಗೊಂಡಿತು.

ಈ ನಾಟಕವು ಇಂಡಿಯನ್ ಬುಕ್ ಅಫ್ ರೆಕಾರ್ಡ್‌ ನಲ್ಲಿ ದಾಖಲಾಗಿದೆ. ಈ ನಾಟಕದಲ್ಲಿ ತ್ರೇತ, ದ್ವಾಪರ ಯುಗಗಳ ರಾವಣ, ದುರ್ಯೋಧನ ಒಂದೇ ವೇದಿಕೆಯಲ್ಲಿ ಬಂದು ಈ ಎರಡು ಪಾತ್ರಗಳನ್ನು ಇವರು ಯಶಸ್ಸಿಯಾಗಿ ನಿಭಾಯಿಸಿದ್ದಾರೆ.

ಬೆಂಗಳೂರಿನ ಪುರಭವನದಲ್ಲಿ 2013ರಲ್ಲಿ ಸತತ 108 ಗಂಟೆಗಳ ಕಾಲ ಪ್ರದರ್ಶಿತ ಸಮಗ್ರ ಮಹಾಭಾರತ ಪೌರಾಣಿಕ ನಾಟಕದಲ್ಲಿ ಬಬ್ರುವಾಹನ ಪಾತ್ರ ನಿರ್ವಹಿಸಿದ್ದಾರೆ.

ಹಲವಾರು ಸಂಘ ಸಂಸ್ಥೆಗಳು ಕಲಾವಿದರು, ಇವರಿಗೆ ಹಾಗೂ ಇವರ ತಂಡಕ್ಕೆ ಪ್ರಶಸ್ತಿ, ಪುರಸ್ಕಾರ ನೀಡಿ ಸನ್ಮಾನಿಸಿವೆ.

ಈ ವರೆಗೆ 250 ನಾಟಕಗಳನ್ನು ಶ್ರೀ ಮಾರುತಿ ಕಲಾ ಬಳಗದಿಂದ ಪ್ರದರ್ಶನ ಕೊಟ್ಟಿದ್ದಾರೆ.

ತುಮಕೂರು ಸಿದ್ಧಗಂಗಾ ಮಠದಲ್ಲಿ ಬಿ.ಕಾಂ ಪದವಿ ಮಾಡಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸನ್ ವೇರ್ ಗ್ರೂಪ್ ಆಫ್ ಕಂಪನೀಸ್ ಎಚ್.ಆರ್. ಮ್ಯಾನೇಜರ್ ಆಗಿ 16 ವರ್ಷ ಸೇವೆ ಸಲ್ಲಿಸಿ ಈಗ ಜೆ.ಡಿ.ಎಸ್ ಪಕ್ಷದ ಬೆಂಗಳೂರು ಮಹಾನಗರ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.

 

ಕೊನೆಯದಾಗಿ, ನಾನು ರೈತ ಕುಟುಂಬದಿಂದ ಬಂದರೂ ಸಹ ಈಗಲೂ ಹಳ್ಳಿಗೆ ಹೋಗಿ ಕೃಷಿ ಕೆಲಸ ಮಾಡುತ್ತೇನೆ.

ನನ್ನ ಜೀವಿತ ಕಾಲದಲ್ಲಿ ಇನ್ನೂ 250 ನಾಟಕಗಳನ್ನು ಅಭಿನಯಿಸುವ ಅಭಿಲಾಷೆ ಇದೆ ಎನ್ನುತ್ತಾರೆ.

ಗೊರೂರು ಅನಂತರಾಜು, ಹಾಸನ
ಹುಣಸಿನಕೆರೆ ಬಡಾವಣೆ,
29ನೇ ವಾರ್ಡ್, 3 ನೇ ಕ್ರಾಸ್
ಹಾಸನ – 573201