ಗಂಗಾವತಿ: ಭಾರತದ ಸನಾತನ ಗುರು ಪರಂಪರೆ ಪ್ರಸ್ತುತ ದಿನಗಳಲ್ಲಿ ವಿಶ್ವಕ್ಕೆ ಮಾದರಿಯಾಗಿದೆ ಎಂದು ಶಂಕರ ಮಠದ ಹಿರಿಯ ಸದಸ್ಯ ರಾಘವೇಂದ್ರ ಅಳವಂಡಿಕರ್ ಹೇಳಿದರು.
ಅವರು ಗುರುವಾರದಂದು ನಗರದ ಶಂಕರ ಮಠದಲ್ಲಿ ಗುರು ಪೂರ್ಣಿಮಾ ಆಚರಣೆಯ ಧರ್ಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಮಹಾಭಾರತವನ್ನು ರಚಿಸಿದ ವೇದವ್ಯಾಸರು ಜನಿಸಿದ ಆಷಾಢ ಮಾಸದ ಹುಣ್ಣಿಮೆಯ ದಿನವನ್ನು ಗುರು ಪೂರ್ಣಿಮಾ ಎಂದು ಆಚರಿಸಲಾಗುತ್ತದೆ.
ಇದರ ಅರ್ಥ ಗುರುವಿನ ಪೂಜಾ ದಿನವಾಗಿದ್ದು, ಪ್ರಥಮವಾಗಿ ಮಾತೃದೇವೋಭವ, ಪಿತೃದೇವೋಭವ ಹಾಗೂ ಆಚಾರ್ಯ ದೇವೋಭವವೆಂದು ಕರೆಯಲಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು.
ವೇದಾಬಾಯಿ ಬಾಲಕೃಷ್ಣ ದೇಸಾಯಿ ಮಾತನಾಡಿ, ಹರ ಮುನಿದರೂ ಗುರು ಕಾಯುವಂತೆ ಗುರುಗಳ ಅನುಗ್ರಹವಿಲ್ಲದೆ ಶಿಷ್ಯ ಏನನ್ನೂ ಸಾಧಿಸಲಾರ.
ಇದಕ್ಕೆ ಪೂರಕವೆಂಬಂತೆ ಗುರು ಶಿಷ್ಯರ ಸಂಬಂಧದ ಬಗ್ಗೆ ಹೇಳುವುದಾದರೆ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಒಳಗೊಂಡಂತೆ ಉನ್ನತ ಅಧ್ಯಯನವನ್ನು ಸಾಧನೆ ಮಾಡಲು ಎಲ್ಲ ಶಿಷ್ಯರುಗಳಿಗೆ ಸಲ್ಲುತ್ತದೆ.
ಒಟ್ಟಾರೆ ಜನ್ಮ ತಾಳಿದ ಪ್ರತಿಯೊಬ್ಬರಿಗೂ ಗುಣಮಟ್ಟದ ಸಂಸ್ಕಾರ ಪಡೆಯಲು ಗುರುಗಳ ಪಾತ್ರ ಅತ್ಯಂತ ಮಹತ್ವದಾಗಿದೆ ಎಂದು ಹೇಳಿದರು.
ಇದಕ್ಕೂ ಪೂರ್ವದಲ್ಲಿ ಶ್ರೀ ಶಾರದಾ ದೇವಿ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ, ಗುರುಪಾದುಕೆಗಳಿಗೆ ಅರ್ಚಕ ಕುಮಾರ್ ಭಟ್ ರುದ್ರಾಭಿಷೇಕ, ಅಷ್ಟೋತ್ತರ ಪಾರಾಯಣ, ಇತರ ಪೂಜಾ ಕಾರ್ಯಕ್ರಮವನ್ನು ನಡೆಸಿದರು.
ಸಂಜೆ ಶಾರದಾ ಶಂಕರ ಭಕ್ತ ಭಜನಾ ಮಂಡಳಿ ಹಾಗೂ ಇತರೆ ಭಜನಾ ಮಂಡಳಿಯ ಸದಸ್ಯರಿಂದ ಭಜನೆ ಜರುಗಿದವು.
ಈ ಸಂದರ್ಭದಲ್ಲಿ ವಿನಾಯಕ ಜೋಶಿ, ಹೊಸಳ್ಳಿ ಭೀಮಶಂಕರ, ಜಗನ್ನಾಥ್ ಅಳವಂಡಿಕರ್, ಶ್ರೀನಿವಾಸ ಕರಮುಡಿ, ನಾಗೇಶ್ ಭಟ್, ವೇಣುಗೋಪಾಲ್, ಶ್ರೀನಿವಾಸ ಅಳವಂಡಿಕರ್ ಇತರರು ಉಪಸ್ಥಿತರಿದ್ದರು.
ಮಾಹಿತಿಗಾಗಿ:
ಸುದರ್ಶನ ವೈದ್ಯ
ಮೊ: ೯೪೪೯೨೨೯೪೮೮, ೬೩೬೨೪೫೯೭೬೭