ಬದುಕು ಹಾವು ಏಣಿಯಾಟ, ಅದರಲ್ಲಿ ದುರಾಸೆ, ದುಃಖ, ಜಾತಿ, ಮತ, ಕುಲ, ಧರ್ಮಗಳೆಂಬ ವಿಷಕಾರುವ ಹಾವುಗಳು ಜಾಸ್ತಿ, ‘ಬುದ್ಧ-ಬಸವ-ಅಂಬೇಡ್ಕರ್’ ಮುಂತಾದವರಿಲ್ಲಿ ಏಣಿಗಳು, ಆ ಏಣಿಗಳನ್ನು ಹಿಡಿದುಕೊಂಡು ನಾವು ಮೇಲೇರಬೇಕಾಗಿದೆ, ಅದರಲ್ಲೂ ಮುಖ್ಯವಾಗಿ ನಾವು ಅಂದರೆ ಬರೆವಣಿಗೆಯಲ್ಲಿ ತೊಡಗಿಸಿಕೊಂಡವರು, ಬರೆಯದ ಸಾವಿರಾರು ಜನರ ಪ್ರತಿನಿಧಿಗಳಾಗಿ, ಜಾತ್ಯತೀತರಾಗಿ ಜಗತ್ತಿಗೆ ಆದರ್ಶವಾಗಬೇಕಾಗಿದೆ, ತಾತೀತನಾಗದವನು, ಕುಲಾತೀತನಾಗದವನು ಎಂದಿಗೂ ಕವಿಯಾಗಲಾರ, ಮಮತೆ ಸಮತೆಗಳ ತನ್ನೆರಡೂ ಕಣ್ಣಾಗಿಸಿಕೊಂಡವ ಮಾತ್ರ ಕವಿಯಾಗಲು ಸಾಧ್ಯ, ರಾಜಕಾರಣಿಗಳ, ಮಂತ್ರಿ ಮಹೋದಯರ ಶಿಫಾರಸ್ಸಿನಿಂದ ಯಾರೇ ಕವಿಗೋಷ್ಠಿಯ ವೇದಿಕೆಗಳನ್ನೇರಿದರೂ, ಸಹೃದಯರೆದೆಯ ಸಿಂಹಾಸನವನ್ನೇರುವುದು ಅಸಾಧ್ಯ, ಕವಿತೆಯೇ ಕವಿಯನ್ನು ಶಿಫಾರಸ್ಸು ಮಾಡಿದರೆ ಮಾತ್ರ ಸಹೃದಯರೆದೆಯ ಸಿಂಹಾಸನನ್ನು ಪಂಪ-ಕುಮಾರವ್ಯಾಸ-ಕುವೆಂಪು-ಬೇಂದ್ರೆಯವರಂತೆ ಏರಬಹುದು, ಇದನ್ನು ಇಂದಿನ ಬಹುಪಾಲು ಬರೆಹಗಾರರು ಮರೆತಿರುವುದು ಖೇದಕರ ಸಂಗತಿ ಎಂದು ಕವಿ ಡಾ. ಜಯಪ್ಪ ಹೊನ್ನಾಳಿ ಹೇಳಿದರು.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಮೈಸೂರು ಜಿಲ್ಲಾ ಘಟಕದಿಂದ ಹಾರ್ಡ್ವೀಕ್ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದಸರಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತಾಡಿದ ಅವರು, ವಿಶ್ವಪ್ರಜ್ಞೆ ಕವಿಗಳದಾಗಬೇಕು, ಅವರು ಶಾಶ್ವತ ಸಾಂಸ್ಕೃತಿಕ ಶಾಸಕರು ತಾವೆಂಬುದನ್ನೆಂದಿಗೂ ಮರೆಯಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕವಯತ್ರಿ ಹೇಮಗಂಗಾ ಮಾತನಾಡಿ, ಭಾಷಾ ಶುದ್ಧಿ ಕವಿಗಳಿಗೆ ಬಹುಮುಖ್ಯ, ಭಾಷೆಯ ಮೇಲೆ ಪ್ರಭುತ್ವವಿಲ್ಲದಿರೆ ಉತ್ತಮ ಸಾಹಿತ್ಯ ಸೃಷ್ಟಿಸಲು ಸಾಧ್ಯವಿಲ್ಲ, ಪ್ರೌಢವಾದ ಭಾಷಾ ಸಂಪನ್ನತೆಯನ್ನು ಕವಿಗಳು ಎಲ್ಲಕ್ಕೂ ಮೊದಲು ತಮ್ಮದಾಗಿಸಿಕೊಳ್ಳಬೇಕು ಎಂದರು.
ವೇದಿಕೆಯ ಮೈಸೂರು ಜಿಲ್ಲಾಧ್ಯಕ್ಷೆ ಶ್ರೀಮತಿ ಇಂದಿರಾ ವಸಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಮೀರಾ ಕೇಸರ್ಕರ್ ಎಲ್ಲರನ್ನೂ ಸ್ವಾಗತಿಸಿದರು, ಸ್ಮಿತಾ ಹೇಮೇಶ್ ಪ್ರಾರ್ಥನೆ ಹಾಗೂ ಕುಮಾರಿ ಪರಿಣಿತ ಹಚ್ಚೇವು ಕನ್ನಡದ ದೀಪ ದೀಪಾರತಿಯ ಅಮೋಘ ನೃತ್ಯ ದೊಂದಿಗೆ ಎಲ್ಲರನ್ನು ರಂಜಿಸಿ ಮೆಚ್ಚುಗೆಗೆ ಪಾತ್ರರಾದರು.
ಮುಖ್ಯ ಅತಿಥಿಗಳಾಗಿ ಎಂ ಶಿವಸ್ವಾಮಿ, ಶೈಲಜಾ ಹಾಸನ, ರಾಜೇಶ್ವರಿ ಹುಲ್ಲೇನಳ್ಳಿ, ರಾಘವೇಂದ್ರ, ಶಿವಕುಮಾರ್, ಬಿಡಿಎಂ ಕುಮಾರ್, ಹಿರಿಯ ಕವಿಗಳಾದ ಎನ್.ಎಲ್. ಚನ್ನೇಗೌಡ, ಗೊರೂರು ಅನಂತ ರಾಜು, ಶೀಲಾ ಭಟ್ ಇದ್ದು ಕವಿತೆ ವಾಚಿಸಿದರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು. ಪುಷ್ಪಲತಾ ನಾರಾಯಣ್, ಮಂಜುಳ ಜಾದವ್ ನಿರ್ವಹಿಸಿದರು.
ಮನೋಜ್ ಕುಮಾರ್, ಅನಿಲ್ ಕುಮಾರ್ ನಿರೂಪಿಸಿದರು. ವೇದಿಕೆಯ ಸಂಸ್ಥಾಪಕ ಅಧ್ಯಕ್ಷೆ ಕಲಾವತಿ ಮಧುಸೂದನ್ ಪ್ರಾಸಂಗಿಕವಾಗಿ ಮಾತನಾಡುತ್ತ ವೇದಿಕೆಯ ಧ್ಯೇಯೋದ್ದೇಶಗಳನ್ನು ತಿಳಿಸಿ, ವೇದಿಕೆ ಮುನ್ನೆಡೆಸಲು ಸರ್ವರ ಸಹಕಾರ ಕೋರಿದರು ಮತ್ತು ಕಾರ್ಯಕ್ರಮದ ಕಡೆಯಲ್ಲಿ ವಂದನಾರ್ಪಣೆ ಮಾಡಿದರು.