ಶ್ರೀ ಶಂಕರಾಚಾರ್ಯ ಜಯಂತೋತ್ಸವದ ಪ್ರಯುಕ್ತ ಪೂರ್ವಭಾವಿ ಸಭೆ.

ಗಂಗಾವತಿ. ನಗರದ ತಹಶೀಲ್ ಕಚೇರಿಯ ಕಾರ್ಯಾಲಯದಲ್ಲಿ ಸೋಮವಾರದಂದು ಉಪ ತಹಶೀಲ್ದಾರ್ ಮಹಾಂತೇಶ್ ಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.

ಈ ಸಂದರ್ಭದಲ್ಲಿ. ಆಚರಣೆಗೆ ಸಂಬಂಧಿಸಿದಂತೆ ಸಮಗ್ರ ಮಾಹಿತಿಯನ್ನು ಮಹಾಂತೇಶ್ ಗೌಡ ಮಾಹಿತಿ ನೀಡಿದರು.

ಬಳಿಕ ಶಂಕರ ಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಮಾತನಾಡಿ ಕೇಂದ್ರ ಸರ್ಕಾರದ ಆದೇಶದಂತೆ ಶ್ರೀ ಶಂಕರಾಚಾರ್ಯರ ಜಯಂತೋತ್ಸವವನ್ನು ತತ್ವಜ್ಞಾನಿಗಳ (ವಿಶ್ವ ದಾರ್ಶನಿಕರ) ದಿನಾಚರಣೆಯನ್ನು ಮೇ-2 ಶುಕ್ರವಾರದಂದು ದೇಶಾದ್ಯಂತ ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಆಚರಿಸಲು ತಹಶೀಲ್ದಾರರು ಆದೇಶ ನೀಡಬೇಕು. ಅಗತ್ಯ ಇದ್ದಲ್ಲಿ ಶ್ರೀ ಶಂಕರಾಚಾರ್ಯರ ಭಾವಚಿತ್ರವನ್ನು ಇಲಾಖೆಗಳಿಗೆ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ. ಜಗನ್ನಾಥ್ ಅಳವಂಡಿಕರ್, ಅನಿಲ್ ಅಳವಂಡಿಕರ್‌, ನಾಗೇಶ್ ಭಟ್, ಶೇಷಗಿರಿ, ಶ್ರೀಪಾದ್ ಮುಧೋಳಕರ್, ವೇಣುಗೋಪಾಲ್, ಹೊಸಳ್ಳಿ ಭೀಮಶಂಕರ, ಮೋಹನ್ ಲೆಕ್ಕಿಹಾಳ ಇತರರು ಉಪಸ್ಥಿತರಿದ್ದರು.

ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ

ಗಂಗಾವತಿ: ತಾಲೂಕಿನ ಗಡ್ಡಿ-ಉಡುಮಕಲ್ ಗ್ರಾಮದಲ್ಲಿ ಊಟಕನೂರು ಪರಮಪೂಜ್ಯ ಶ್ರೀ ಮರಿಬಸವಲಿಂಗ ದೇಶಿಕೇಂದ್ರ ಮಹಾಸ್ವಾಮಿಗಳಿಂದ ಸ್ಥಾಪಿತವಾದ ಶಾಖಾಮಠದ ೨೯ನೇ ಜಾತ್ರಾ ಮಹೋತ್ಸವ ಇದೇ ಏಪ್ರಿಲ್-೩೦ ಬುಧವಾರ ನಡೆಯಲಿದೆ.

ಏಪ್ರಿಲ್-೨೯ ಮಂಗಳವಾರ ಆಹ್ವಾನಿತರ ಭಜನಾ ಸಂಘದವರಿಂದ ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿ ಸ್ವಾಗತ, ಏಪ್ರಿಲ್-೩೦ ಬುಧವಾರ ಬೆಳಗ್ಗೆ ೩:೦೦ ಗಂಟೆಗೆ ತಾತನವರ ಕರ್ತೃ ಗದ್ದುಗೆಗೆ ಮಹಾರುದ್ರಾಭಿಷೇಕ, ಬೆಳಗ್ಗೆ ೬:೦೦ ಗಂಟೆಗೆ ಸುಮಂಗಲೆಯರಿಂದ ಕಳಶದೊಂದಿಗೆ ಡೊಳ್ಳಿನ ಸಂಗಡ ಗಂಗೆಸ್ಥಳಕ್ಕೆ ಹೋಗಿ ಬರುವುದು, ನಂತರ ಗಣಾರಾಧನೆ ನಡೆಯುವುದು, ನಂತರ ಸಾಮೂಹಿಕ ವಿವಾಹಗಳು ಹಾಗೂ ಮಹಾಪ್ರಸಾದ ಕಾರ್ಯಕ್ರಮ ಮತ್ತು ಸಂಜೆ ೫:೦೦ ಗಂಟೆಗೆ ತಾತನವರ ಉತ್ಸವ ಜರುಗಲಿದೆ.

ಉತ್ಸವದ ನೇತೃತ್ವವನ್ನು ಗಡ್ಡಿಮಠದ ಶ್ರೀ ವೇ.ಮೂ. ಈಶ್ವರಯ್ಯ ಸ್ವಾಮಿ ಹಾಗೂ ಉಡುಮಕಲ್ ಬೃಹನ್ಮಠದ ಅಧ್ಯಕ್ಷರಾದ ಶ್ರೀ ವೇ.ಮೂ. ವೀರಬಸವ ಶಾಸ್ತ್ರಿಗಳು ವಹಿಸಲಿದ್ದಾರೆ. ಮೇ-೦೧ ರಂದು ಅಮರೇಶಯ್ಯಸ್ವಾಮಿ ಗಡ್ಡಿಮಠ ಇವರ ಅಧ್ಯಕ್ಷತೆಯಲ್ಲಿ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ಈ ಜಾತ್ರಾ ಮಹೋತ್ಸವಕ್ಕೆ ಸಕಲ ಭಕ್ತಾದಿಗಳು ಆಗಮಿಸಿ ತಾತನವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸಮಿತಿ ಮುಖ್ಯಸ್ಥರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಪಕೀರಪ್ಪ ಪೂಜಾರ ಇವರು ವಿನಂತಿಸಿದ್ದಾರೆ.

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ ಅಸ್ತಿತ್ವಕ್ಕೆ: ಭಾರಧ್ವಾಜ್

ಗಂಗಾವತಿ: ಕೊಪ್ಪಳ ಜಿಲ್ಲೆಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘವನ್ನು ಅಸ್ತಿತ್ವಕ್ಕೆ ತರಲು ನಿರ್ಧರಿಸಿ ನೋಂದಣಿಗೆ ಸಲ್ಲಿಸಲಾಗಿದೆ ಎಂದು ಸಂಘದ ಗೌರವ ಅಧ್ಯಕ್ಷರಾದ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಸಂಘವು ಕ್ರಾಂತಿಚಕ್ರ ಬಳಗದ ಅಡಿಯಲ್ಲಿ ನೋಂದಣಿಯಾಗಲಿದ್ದು, ಸಂಘಕ್ಕೆ ನಿವೃತ್ತ ಹಿರಿಯ ಕಾರ್ಮಿಕ ನಿರೀಕ್ಷಕರಾದ ಶೇಖರಗೌಡ ಮಾಲಿಪಾಟೀಲ್‌ರವರು ಗೌರವ ಸಲಹೆಗಾರರಾಗಿ ಸಲಹೆ ನೀಡಲಿದ್ದು, ಅಧ್ಯಕ್ಷರಾಗಿ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರಾಗಿ ಹನುಮಂತ ಚೌಡಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಮೆಹಬೂಬಸಾಬ ಲಾಠಿ, ಜಂಟಿ ಕಾರ್ಯದರ್ಶಿಯಾಗಿ ಚಾಂದಪಾಷಾ, ಸಂಘಟನಾ ಕಾರ್ಯದರ್ಶಿಗಳಾಗಿ ಕೆ. ಮರಿಸ್ವಾಮಿ, ಎಸ್. ಸಿಖಂದರ್, ಖಜಾಂಚಿಯಾಗಿ ಸೈಯ್ಯದ್ ಇಸೂಬ್ ರವರನ್ನು ನೇಮಿಸಲಾಗಿದ್ದು, ಸಂಘವು ಕಾರ್ಮಿಕ ಇಲಾಖೆಯ ಕಾಯ್ದೆಗಳನ್ವಯ ಕಾರ್ಯನಿರ್ವಹಿಸಲಿದ್ದು, ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸಲಿದೆ ಎಂದು ತಿಳಿಸಿದರು.

ಮೈಸೂರು ಶೋಭಾರಾಣಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

ಹಾಸನ: ಹಾಸನದ ಚಿತ್ಕಲಾ ಪೌ೦ಡೇಶನ್ ವತಿಯಿಂದ ಏರ್ಪಡಿಸಿರುವ ಏಕ ವ್ಯಕ್ತಿಚಿತ್ರ ಕಲಾ ಪ್ರದರ್ಶನಕ್ಕೆ ಕದಂಬ ಸೈನ್ಯ ಕನ್ನಡ ಪರ ಸಂಘಟನೆಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ಸಾಹಿತಿ ಗೊರೂರು ಅನಂತರಾಜು, ಚಿತ್ರ ಕಲಾವಿದ ಯಾಕೂಬ್, ಉಪನ್ಯಾಸಕರು ಎ.ರಾಮಮೂರ್ತಿ ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಏಪ್ರಿಲ್-25‌ ಶುಕ್ರವಾರ ಬೆಳಿಗ್ಗೆ ಭೇಟಿ ನೀಡಿ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಬಿ.ಎಸ್ ದೇಸಾಯಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಚಿತ್ಕಲಾ ಫೌಂಡೇಶನ್ ವತಿಯಿಂದ ಹಾಸದ ಜನತೆಗೆ ಶೋಭಾ ರಾಣಿ ಅವರ ಕಲಾಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಲಾಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟನೆಯಲ್ಲಿ ಕಾರ್ಯಕ್ರಮದಲ್ಲಿ ಗಣಪತಿ ಅಗ್ನಿಹೋತ್ರಿ ಅವರು “ಕಲೆ ಮತ್ತು ಕಲಾಕೃತಿ” ಎಂಬ ವಿಷಯದ ಕುರಿತು ಮಾತನಾಡುತ್ತಾ ಕಲೆ ಮತ್ತು ಕಲಾಕೃತಿ ಎರಡೂ ಕೂಡ ಅಗಾಧವಾದ ಅರ್ಥವ್ಯಾಪ್ತಿಯನ್ನು ಹೊಂದಿರುತ್ತದೆ. ಇದನ್ನು ಸೀಮಿತವಾಗಿ ನೋಡಲು ಸಾಧ್ಯವಿಲ್ಲ. ವಿಜ್ಞಾನ ದೃಷ್ಟಿಯಿಂದ ಇದಕ್ಕೆ ವ್ಯಾಪಾಕವಾದ ವಿಸ್ತಾರಗಳಿವೆ. ಐತಿಹಾಸಿಕವಾಗಿ ನೋಡುತ್ತಾ ಹೋದರು ಇದಕ್ಕೆ ಸ್ಪಷ್ಟವಾದ ಚಿತ್ರಣ ಸಿಗುವುದಿಲ್ಲ. ಕಲಾಕೃತಿಯ ಬಗ್ಗೆ ಹೇಳುವುದಾದರೆ ಇದು ನಮ್ಮ ಅಭಿವ್ಯಕ್ತಿಯ ನಂತರದ ಭಾಗವಾಗಿದೆ. ಕಲಾಕೃತಿಯಲ್ಲಿ ರೂಪಕಗಳ ಬಳಕೆಯಾದಾಗ ಮೂರ್ತ ಹಾಗೂ ಅಮೂರ್ತ ರೂಪಕ್ಕೂ ಕೊಂಡೊಯ್ಯುತ್ತದೆ. ಶೋಭಾರಾಣಿ ಇವರ ಕಲಾಕೃತಿಗಳಲ್ಲಿ ರೂಪಕ ಬಳಕೆಯು ತುಂಬಾ ಅದ್ಭುತವಾಗಿ ಮೂಡಿಬಂದಿರುತ್ತದೆ. ಈ ಚಿತ್ರಗಳಲ್ಲಿ ಒಂದರ ಮೇಲೊಂದು ಮೀನುಗಳು ಇದ್ದರೂ ಸಹ ಹಿಂದಿರುವ ಮೀನಿನ ಭಾವಗಳು ಗೋಚರವಾಗುತ್ತದೆ. ಈ ಬಗೆಯ ರೂಪಕಗಳು ಚಿತ್ರಗಳಲ್ಲಿ ಕಂಡುಬಂದಾಗ ಕಲಾಕೃತಿಯ ಮೌಲ್ಯಗಳು ಹೆಚ್ಚುತ್ತವೆ ಹಾಗೂ ಕಲಾಕೃತಿಯನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಇವರ ಕಲಾಕೃತಿಗಳನ್ನು ಗಮನಿಸಿದಾಗ ಇದರಲ್ಲಿರುವ ರೇಖೆಗಳು, ಬಣ್ಣ, ತಂತ್ರಗಾರಿಕೆ, ರೂಪಕಗಳನ್ನು ಗಮನಿಸಿದಾಗ ಇವು ಶ್ರೇಷ್ಟ ಮಟ್ಟಕ್ಕೆ ತಲುಪುವ ಚಿಗುರುಗಳು ಕಾಣುತ್ತವೆ. ಮುಂದಿನ ದಿನಗಳಲ್ಲಿ ಇವು ಒಳ್ಳೆಯ ಕಲಾಕೃತಿಗಳಾಗುವ ಸಾಧ್ಯತೆಗಳಿವೆ, ಏಕೆಂದರೆ ಈ ಕಲಾಕೃತಿಗಳಲ್ಲಿರುವ ರೂಪಕ ಹಾಗೂ ರೇಖೆಗಳ ವೇಗ ಅದನ್ನು ಸೂಚಿಸುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಶ್ರೀಮತಿ ರೂಪ ಹಾಸನ ರವರು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಬಿ.ಎಸ್. ದೇಸಾಯಿಯವರ ಕುಟುಂಬ ಕಲಾಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು. ದೇಸಾಯಿಯವರ ಕಲಾಸೇವೆಯ ಮುಂದುವರೆದ ಭಾಗವಾಗಿ ಮೈಸೂರಿನ ಕಲಾವಿದೆ ಶ್ರೀಮತಿ ಶೋಭರಾಣಿ ಜಿ. ರವರ ಕಲಾ ಪ್ರದರ್ಶನ ಏರ್ಪಡಿಸಿದ್ದಕ್ಕೆ ಹಾಸನದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು. ಶೋಭರಾಣಿ ಜಿ. ರವರ ಕಲಾಕೃತಿಗಳನ್ನು ಮೊದಲ ಬಾರಿಗೆ ವೀಕ್ಷಿಸಿದಾಗ ರೋಮಾಂಚನವಾಗುತ್ತದೆ. ಕಲಾಪ್ರದರ್ಶನದ ಶೀರ್ಷಿಕೆ ‘ಮತ್ಸ್ಯ ಹೆಜ್ಜೆ’ ಮೀನಿಗೆ ಕಾಲು ಇಲ್ಲ ಕೈಗಳು ಇಲ್ಲ. ಆದರೆ ಮೀನಿಗೆ ಚಲನೆ ಇದೆ. ಇದನ್ನು ರೂಪಕಾತ್ಮಕವಾಗಿ ನೋಡಿದಾಗ, ಜೀವನ ಕ್ರಮದ ವೈಭವೀಕರಣ. ಅದರ ಪ್ರತಿಯೊಂದು ಜೀವನ ಕ್ರಮದ ದಾಖಲೀಕರಣ ಕಾಣುತ್ತದೆ. ಯಾವುದೇ ಕಲೆಗಳಿಗೆ ಹಾಗೂ ಕವಿತೆಗಳಿಗೆ ಮೂರ್ತರೂಪವಿರುವುದಿಲ್ಲ. ಅಮೂರ್ತ ರೂಪ ಇದ್ದಷ್ಟು ನೋಡುಗನು ಅದರ ಆಳಕ್ಕೆ ಇಳಿಯುತ್ತಾನೆ ಮತ್ತು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನಲೆಯಲ್ಲಿ ಶೋಭರಾಣಿ ಅವರ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಆಳಕ್ಕಿಳಿದು ನೋಡುವಂತೆ ಮಾಡುತ್ತವೆ. ಕಾಡುತ್ತವೆ. ಆಕ್ವೆರಿಯಂ ಒಳಗಿನ ಮೀನಿನಿಂದ ಪ್ರೇರಣೆ ಪಡೆದು ಚಿತ್ರಿಸಿದರೂ ಸಹ ಎಲ್ಲಿಯೂ ಕೂಡ ಆಕ್ವೆರಿಯಂ ಪರಿಕಲ್ಪನೆ ಬಾರದ ಹಾಗೆ ಚಿತ್ರಿಸಿದ್ದಾರೆ. ಇದು ಮೆಚ್ಚುವಂತದ್ದು. ತುಂಬಾ ಮುಕ್ತವಾಗಿ, ಸ್ವತಂತ್ರವಾಗಿ, ಸ್ವೇಚ್ಚೆಯಿಂದ, ಓಡಾಡುತ್ತಿರುವ ಮೀನುಗಳು ಕಾಣುತ್ತವೆ. ಇದನ್ನು ಒಂದು ಹೆಣ್ಣಿಗೆ ಹೋಲಿಸಿ ನೋಡುವುದಾದರೆ, ಯಾವುದೇ ಕವಿ, ಕಲಾವಿದ ಮುಕ್ತತೆಯನ್ನು ಹಾಗೂ ಸ್ವಾತಂತ್ರ್ಯವನ್ನು ಬಯಸುತ್ತಿರುತ್ತಾರೆ. ಸಮಾಜವು ಮಹಿಳೆಯ ಮೇಲೆ ಕಟ್ಟುಪಾಡುಗಳನ್ನು ಹೇರುತ್ತಿದ್ದು ಮಹಿಳೆ ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಇದು ಗೋಚರವಾಗಿಯೇ ಇರಬೇಕೆಂದಿಲ್ಲ. ಸೃಜನಶೀಲ ಅಭಿವ್ಯಕ್ತಿಯಲ್ಲಿ ಅವು ಗೋಚರವಾಗುತ್ತವೆ. ಕವಿತೆ ಹಾಗೂ ಚಿತ್ರಗಳು ತುಂಬಾ ಹತ್ತಿರದ ಸಂಬಂಧ ಹೊಂದಿರುತ್ತವೆ. ಇವರ ಚಿತ್ರಗಳ ಪರಿದಿಯಲ್ಲಿ ಬೇರೆ ಬೇರೆ ಆಯಾಮಗಳನ್ನು ಕಾಣಬಹುದು. ಇದನ್ನು ಮೀರಿ ನೋಡುವುದಾದರೆ ಮೀನುಗಳು ಸ್ವತಂತ್ರವಾಗಿ ಬದುಕಲು ಹಾತೊರೆಯುತ್ತಿರುವುದು ಗೋಚರಿಸುತ್ತದೆ. ಇವರ ಕೃತಿಗಳಲ್ಲಿ ಒಗ್ಗೂಡಿಕೆ , ಸಾಮರಸ್ಯ , ಸೌಮ್ಯತೆ , ಸಮಾನತೆ , ಕೂಡಿ ಬಾಳುವಿಕೆ ಸೂಚಿಸುತ್ತದೆ ಎಂದರು.

ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕ ಎನ್. ಭಾನುಪ್ರಸಾದ ಆಯ್ಕೆ.

ಗಂಗಾವತಿ: ಭಾರತೀಯ ಕ್ರೀಡಾ ಪ್ರಾಧಿಕಾರದ ಶೈಕ್ಷಣಿಕ ವಿಭಾಗವಾದ ನೇತಾಜಿ ಸುಭಾಷ್ ರಾಷ್ಟ್ರೀಯ ಕ್ರೀಡಾ ಸಂಸ್ಥೆಯು ನಡೆಸುತ್ತಿರುವ ಎನ್.ಐ.ಎಸ್ ಕೋರ್ಸ್ ಯೋಗಾಸನ ತರಬೇತಿಗಾರರ ತರಬೇತಿಗೆ ಗಂಗಾವತಿಯ ಯೋಗ ಶಿಕ್ಷಕರಾದ ಎನ್. ಭಾನುಪ್ರಸಾದ್ ರವರು ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ.

ಈ ಯೋಗ ತರಬೇತಿಯು ಪಂಜಾಬ್‌ನ ಪಟಿಯಾಲದಲ್ಲಿ ಮುಂದಿನ ತಿಂಗಳು ಮೇ-೬ ರಿಂದ ಆರು ವಾರಗಳ ಕಾಲ ನಡೆಯಲಿದೆ.
ಈ ಯೋಗ ತರಬೇತಿಗೆ ಆಯ್ಕೆಯಾದ ಎನ್. ಭಾನುಪ್ರಸಾದ ಅವರಿಗೆ ಪ್ರಜ್ವಲ ಯೋಗ ಕೇಂದ್ರ, ಸ್ನೇಹ ಬಳಗ ಯೋಗ ಸಂಸ್ಥೆ ಹಾಗೂ ಪ್ರಗತಿ ಕ್ರೀಡಾ ಸಂಸ್ಥೆ ಗಂಗಾವತಿ ಹಾಗೂ ನಿರ್ದೇಶಕರಾದ ಶ್ರೀ ಜಗನ್ನಾಥ ಅಲಂಪಲ್ಲಿ, ಕುಟುಂಬ ವರ್ಗ ಮತ್ತು ಸ್ನೇಹಿತರು ಸೇರಿದಂತೆ ಎಲ್ಲಾ ಯೋಗ ಬಂಧುಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಕೆರಳ ರಾಜ್ಯದಲ್ಲಿ ಕನ್ನಡಿಗ ಪತ್ರಕರ್ತನಿಗೆ ಒಲಿದ ಪ್ರಶಸ್ತಿ. ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ಪ್ರಶಸ್ತಿಗೆ ಟಿವಿ-೫ ನಾಗರಾಜ್.ವೈ ಆಯ್ಕೆ.

ಕಾಸರಗೋಡುನಲ್ಲಿ ನಡೆಯುವ ಸಮಾರಂಭದಲ್ಲಿ ಸಭಾಪತಿಗಳು ಸೇರಿದಂತೆ ಹಲವಾರು ಸಚಿವರು ಭಾಗಿ.

ಕಾಸರಗೋಡು (ಕೆರಳ) : ಕೇರಳ ರಾಜ್ಯದ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಮಾಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ ಶ್ರೀ ಜೋಸೆಫ್ ಮಥಾಯಿಸ್ ದುಬೈ ಅವರು ನೀಡುವ ದತ್ತಿನಿಧಿ ಪ್ರಶಸ್ತಿ ಆಯ್ಕೆ ಸಮಿತಿಯು ಕೊಪ್ಪಳ ಜಿಲ್ಲೆಯ ಟಿವಿ-೫ ವಾಹಿನಿಯ ಜಿಲ್ಲಾ ವರದಿಗಾರ ನಾಗರಾಜ್ ವೈ ಅವರನ್ನು ಆಯ್ಕೆ ಮಾಡಿದೆ. ನಾಗರಾಜ್ ವೈ ರವರು ೧೨ ವರ್ಷಗಳ ಕಾಲ ಎಲೆಕ್ಟಾçನಿಕ್ ಮಿಡಿಯಾದಲ್ಲಿ ಮಾಡಿದ ಹಲವಾರು ಸಾಮಾಜಿಕ ವರದಿಗಳನ್ನು ಆಧರಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಮಾರು ೨ ದಶಕಗಳ ಸೇವೆಯಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕೇರಳದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾರ್ಯಾಚರಿಸುತ್ತಿದೆ.

ಈ ಸಂಘವು ವಾರ್ಷಿಕವಾಗಿ ದತ್ತಿನಿಧಿ ಪ್ರಶಸ್ತಿಯನ್ನು ಪ್ರಧಾನಿಸುತ್ತಿದ್ದು, ಈ ಬಾರಿಯ ಶ್ರೀ ಜೋಸೆಫ್ ಮಥಾಯಿಸ್ ದುಬೈ ನೀಡುವ ದತ್ತಿನಿಧಿ ಪ್ರಶಸ್ತಿಗೆ ನಾಗರಾಜ್. ವೈ ಅವರನ್ನು ಆಯ್ಕೆ ಸಮಿತಿಯು ಆರಿಸಿದೆ.

ಈ ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹೊಂದಿರುತ್ತದೆ. ೨೦೨೫ನೇ ಮೇ-೦೩ ಶನಿವಾರದಂದು ಕಾಸರಗೋಡು ಜಿಲ್ಲೆಯ ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಕೆ ಶೆಟ್ಟಿ ಕುತ್ತಿಕಾರ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ, ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನಿಸುವರು ಎಂದು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಜಿಲ್ಲಾ ಮಹಿಳಾ ಯುವ ಘಟಕದ ಪದಾಧಿಕಾರಿಗಳ ನೇಮಕ.

ಗಂಗಾವತಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕೊಪ್ಪಳ ಜಿಲ್ಲಾ ಯುವ ಘಟಕ ಹಾಗೂ ಕೊಪ್ಪಳ ಜಿಲ್ಲಾ ಮಹಿಳಾ ಯುವ ಘಟಕಗಳಿಗೆ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು ಎಂದು ಮಹಾಸಭಾದ ಜಿಲ್ಲಾಧ್ಯಕ್ಷರಾದ ಕಳಕನಗೌಡ ಪಾಟೀಲ್ ಕಲ್ಲೂರು ಪ್ರಕಟಣೆಯಲ್ಲಿ ತಿಳಿಸಿದರು.

ಅವರು ಏಪ್ರಿಲ್-೨೦ ಭಾನುವಾರ ಕೊಪ್ಪಳದ ಶ್ರೀ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಉಪಾಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿಯಾದ ಕೆ.ಬಿ. ಶ್ರೀನಿವಾಸರೆಡ್ಡಿ, ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀ ಮ.ನಿ.ಪ್ರ.ಸ್ವ ಡಾ. ಮಹಾದೇವಸ್ವಾಮಿಗಳು ಕುಕನೂರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಶಿವಪುತ್ರಪ್ಪ ಕಾಡನವರ್, ಕೊಪ್ಪಳ ತಾಲೂಕ ಅಧ್ಯಕ್ಷರಾದ ನಾಗಭೂಷಣ ಸಾಲಿಮಠ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ಎಲ್ಲ ಮುಖಂಡರ ನೇತೃತ್ವದಲ್ಲಿ ಕೊಪ್ಪಳ ಜಿಲ್ಲಾ ಯುವ ಘಟಕಗಳನ್ನು ಉದ್ಘಾಟಿಸಿ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಿದರು.

ಕೊಪ್ಪಳ ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ಹೆಚ್.ಎಂ. ವಿರುಪಾಕ್ಷಯ್ಯಸ್ವಾಮಿ, ಉಪಾಧ್ಯಕ್ಷರುಗಳಾಗಿ ಬೆಟ್ಟಪ್ಪ ಮೂಲಿಮನಿ, ವಿನಾಯಕ ಬೆನ್ನಳ್ಳಿ, ಶೇಖರಗೌಡ ಬೂದಗುಂಪ, ಅಯ್ಯನಗೌಡ ಕನಕರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಹಾಂತೇಶ ಕುಂಬಾರ, ಕಾರ್ಯದರ್ಶಿಗಳಾಗಿ ಅವಿನಾಶ ಅರಿಕೇರಿ, ಶಿವಣ್ಣ ಮೂಲಿಮನಿ, ವಿರೇಶ ಟೆಂಗಿನಕಾಯಿ, ಲಿಂಗರಾಜ ಲಿಂಗದಳ್ಳಿ, ಕೋಶಾಧ್ಯಕ್ಷರಾಗಿ ಪಂಪನಗೌಡ ಜಂತಕಲ್, ಸದಸ್ಯರುಗಳಾಗಿ ವೀರಣ್ಣ ಮರಳಿ, ವಿನಾಯಕ ಭಾವಿಕಟ್ಟಿ, ಜಗದೀಶ ಜವಳಿ, ನವೀನಕುಮಾರ ಮಾಲಿಪಾಟೀಲ್, ಶಿವಶರಣಗೌಡ ಯರಡೋಣ, ಶರಣಯ್ಯ ಬೇವಿನಾಳ, ಪಂಪಾಪತಿ ಶಿವಲಂತರ, ವೀರನಗೌಡ ಕೊಪ್ಪಳ, ಗವಿಸಿದ್ದಪ್ಪ ಮುದುಗಲ್, ಮಹೇಶ ಭೂತೆ, ಪ್ರವೀಣ ಮತ್ತೂರು, ಆಶಿಕ್ ಕಲಬುರ್ಗಿ, ದೊಡ್ಡಬಸವ ಪವಾಡಶೆಟ್ಟರ್, ಬಸವನಗೌಡ ಎಂ. ಓಲಿ, ವಿರುಪಾಕ್ಷ ಗುಂಡೂರು, ವಿಜಯಕುಮಾರ ಹಿರೇಮಠ, ಸಂಗಯ್ಯಸ್ವಾಮಿ ಸಂಶೀಮಠ, ಮಹಾಬಲೇಶ ಕಾರಟಗಿ, ಸಂತೊಷ ಹಾದಿಮನಿ, ಬಸವರಾಜ ಗಂಗಾವತಿ ಇವರುಗಳು ಆಯ್ಕೆಯಾದರು.

ಅದೇರೀತಿ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಎಸ್. ಮ್ಯಾಗಳಮನಿ, ಉಪಾಧ್ಯಕ್ಷರುಗಳಾಗಿ ಪೂರ್ಣಿಮಾ ಶಶೀಧರಗೌಡ, ಸವಿತಾ ಗಂಗಾಧರಸ್ವಾಮಿ, ಶೀಲಾ ದೇಸಾಯಿಗೌಡ, ಶಾರದಾ ಕೆ. ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಮ್ಮ ಶರಣಬಸಪ್ಪ, ಕಾರ್ಯದರ್ಶಿಗಳಾಗಿ ಜಯಶ್ರೀ ಸಾಹುಕಾರ್, ಬಸಮ್ಮ ಶಿವಪುತ್ರಪ್ಪ, ನಂದಾ ಜಗದೀಶ, ಕಾವ್ಯ ಮಹೇಶ, ಕೋಶಾಧ್ಯಕ್ಷರಾಗಿ ವಿದ್ಯಾಲಕ್ಷ್ಮಿ ಗವಿಸಿದ್ದಪ್ಪ, ಸದಸ್ಯರುಗಳಾಗಿ ಸುಜಾತ ಅಯ್ಯನಗೌಡ, ಸರಸ್ವತಿ ವಿಶ್ವನಾಥ, ಶೈಲಾ ಸಂಗಪ್ಪ, ಬಸಮ್ಮ ಶಿವಾನಂದ, ವಿಶಾಲಾಕ್ಷಿ ಹೆಚ್.ಎಸ್.ಶಶಿಧರ, ಶಶಿಕಲಾ ಚಿನಿವಾಲರ್, ಡಿ.ವರಲಕ್ಷ್ಮಿ ಮಂಜುನಾಥ, ಲಕ್ಷ್ಮಿ ವಿರೇಶ, ನಯನ ವಿಜಯಕುಮಾರ, ಕೋಮಲಾ ಕೆ. ಕುದರಿಮೋತಿ, ಸುಮಂಗಲಾ ಮಲ್ಲಿಕಾರ್ಜುನ, ಗೀತಾಂಜಲಿ ಶರಣಯ್ಯ, ನೀಲಮ್ಮ ಶೇಖರಪ್ಪ, ಸವಿತಾ ಬಸವರಾಜ, ಅನ್ನಪೂರ್ಣ ಸಂಗಪ್ಪ, ಗೀತಾ ರಾಜಶೇಖರ, ಸುಧಾರಾಣಿ ರಮೇಶ, ಉಮಾಮಹೇಶ್ವರಿ ನಾಗೂರು, ಗೀತಾ ದೇವಣ್ಣ, ಪರಿಮಳ ಸಂಗಪ್ಪ ಇವರುಗಳು ಆಯ್ಕೆಯಾದರು.

ನೂತನವಾಗಿ ಆಯ್ಕೆಗೊಂಡ ಎಲ್ಲಾ ಪದಾಧಿಕಾರಿಗಳಿಗೆ ರಾಜ್ಯ ಹಾಗೂ ಜಿಲ್ಲಾ ಸಮಿತಿಗಳಿಂದ ಅಭಿನಂದಿಸಿ, ಮಹಾಸಭಾದ ಎಲ್ಲಾ ಚಟುವಟಿಕೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗುವ ಮೂಲಕ ಬಲಪಡಿಸಲು ಸೂಚಿಸಲಾಯಿತು.

ಯುವ ಜನತೆ ಕಾನೂನು ಪಾಲನೆಯ ಮೂಲಕ ಆದರ್ಶ ಪ್ರಜೆಗಳಾಗಲು ಕರೆ: ಸದಾನಂದ ನಾಯಕ

ಗಂಗಾವತಿ: ೨೦೨೪-೨೫ನೇ ಸಾಲಿನ ಸಂಕಲ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಎನ್.ಎಸ್ ವಿಶೇಷ ಶಿಬಿರದ ೬ನೇ ದಿನದ ಉಪನ್ಯಾಸ ಮಾಲಿಕೆ ಉದ್ಘಾಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಮಾತನಾಡಿ ಇಂದಿನ ಯುವ ಜನತೆ ಇಂತಹ ಶಿಬಿರಗಳ ಮೂಲಕ ಜವಾಬ್ದಾರಿಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆದರ್ಶ ಸಮಾಜ ನಿರ್ಮಾಣದಲ್ಲಿ ತೊಡಗಲು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ್‌ರವರು ಮಾತನಾಡಿ, ಮಹಿಳಾ ಕಾನೂನಿಗೆ ಸಂಬಂಧಿಸಿದ ವಿಷಯಗಳ ಅಗತ್ಯ ಹಾಗೂ ಅನಿವಾರ್ಯತೆಗಳನ್ನು ತಿಳಿಸುತ್ತಾ, ಮಹಿಳೆಯರು ಸಬಲರಾಗಬೇಕು, ಆಧುನಿಕ ಜಗತ್ತಿನ ಈ ಯುಗದಲ್ಲಿ ಎಲ್ಲ ರಂಗದಲ್ಲಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಪಾಟೀಲ್ ರವರು ಶಿಬಿರಾರ್ಥಿಗಳು ಪರಿಸರ ಜಾಗೃತಿ ಸಮಾಜಕ್ಕೆ ಮೌಲ್ಯಗಳ ಅಳವಡಿಕೆಯ ಕಡೆ ಗಮನಹರಿಸಲು ಕರೆ ನೀಡಿದರು.

ಯುವತಿಯರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವ ಮೂಲಕ ಸ್ವಾಭಿಮಾನಿಗಳಾಗಿ ಬದುಕಬೇಕೆಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮೇಘ ಸೋಮಣ್ಣನವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್‌ರವರು, ಶಿಬಿರದಲ್ಲಿ ಶಿಬಿರಾರ್ಥಿಗಳು ಮಾಡಿದ ವಿವಿಧ ಕಾರ್ಯಕ್ರಮಗಳ ಕುರಿತು ಶ್ಲಾಘಿಸಿದರು ಹಾಗೂ ಮನುಷ್ಯನ ಜೀವನದ ಎಲ್ಲಾ ಹಂತಗಳಲ್ಲಿ ಕಾನೂನು ನಮ್ಮ ನೆರವಿಗೆ ಬರುತ್ತಿದ್ದು, ಮನುಷ್ಯ ಜೀವನ ಪರ್ಯಂತ ಕಾನೂನಿನ ನೆರವಿನೊಂದಿಗೆ ಬದುಕು ಸಾಗಿಸಬೇಕು. ಕಾನೂನಿನ ಪಾಲನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.

ಸಮಾಜದ ಪರಿವರ್ತನೆಯಲ್ಲಿ ಇಂತಹ ಶಿಬಿರಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ವಿಶೇಷ ಉಪನ್ಯಾಸ ನೀಡಿದ ಪ್ರಕಾಶ್ ಎಂ. ಕುಸುಬಿ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯ್ಕ್, ಪ್ರಾಚಾರ್ಯರಾದ ಬಸವರಾಜ್ ಶಿರಿಗೇರಿ, ಕಾರ್ಯಕ್ರಮಾಧಿಕಾರಿಗಳು, ಶಿಬಿರಾರ್ಥಿಗಳು ಉಪನ್ಯಾಸಕರು ಹಾಜರಿದ್ದರು.

ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘದ ನೂತನ ಗಂಗಾವತಿ ತಾಲೂಕು ಸಮಿತಿ ರಚನೆ

ಗಂಗಾವತಿ: ಏಪ್ರಿಲ್-೧೭ ಗುರುವಾರ ಗಂಗಾವತಿ ನಗರದ ಬಸ್‌ ಸ್ಟ್ಯಾಂಡ್‌ ಹತ್ತಿರ ಇರುವ ತುಳಸಪ್ಪ ಛತ್ರದ ಬಯಲಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘಟನೆಯ ಸಭೆ ಸೇರಿ ನೂತನ ಗಂಗಾವತಿ ತಾಲೂಕು ಸಮಿತಿಯನ್ನು ರಚಿಸಲಾಯಿತು ಎಂದು ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಘದ ನೂತನ ತಾಲೂಕ ಗೌರವ ಅಧ್ಯಕ್ಷರಾಗಿ ಡಬ್‌ಡಬ್ ಹನುಮಂತಪ್ಪ, ಅಧ್ಯಕ್ಷರಾಗಿ ಮಾಯಮ್ಮ, ಉಪಾಧ್ಯಕ್ಷರಾಗಿ ಪಾರ್ವತಮ್ಮ, ಕಾರ್ಯದರ್ಶಿಯಾಗಿ ರಮೇಶ ಕೆ., ಖಜಾಂಚಿಯಾಗಿ ಗಾಲಿ ಹುಲಿಗೆಮ್ಮ, ಸಹ ಖಜಾಂಚಿಯಾಗಿ ಬಂಕದ ಹುಲಿಗೆಮ್ಮ, ಅದೇರೀತಿ ತಾಲ್ಲೂಕು ಸಮಿತಿ ಸದಸ್ಯರಾಗಿ ಹೇಮಣ್ಣ, ಕೊಟ್ರಪ್ಪ, ಇಂದ್ರಮ್ಮ, ಕರಿಮೂತಿ ಹನುಮಂತಪ್ಪ, ದುರುಗಪ್ಪ ಕಲ್ಗುಡಿ, ಗಂಗಮ್ಮ ಸ್ವಾಮಿ, ನಾಗಮ್ಮ ಮಲ್ಲಿಕಪ್ಪ, ಬಾಬರ್, ಮೌಲಪ್ಪ, ಸಣ್ಣ ಹುಲಗಪ್ಪ ಆಯ್ಕೆಯಾದರು.

ಈ ಸಂದರ್ಭದಲ್ಲಿ ಕಾ|| ಸಣ್ಣ ಹನುಮಂತಪ್ಪ ಹುಲಿಹೈದರ, ಕಾ|| ಪರಶುರಾಮ್, ಕಾ|| ಕೇಶವನಾಯಕ, ಕಾ|| ನಸ್ಪುಡಿ ಗಿಡ್ಡಪ್ಪ, ಕಾ|| ಉಮೇಶ, ಕಾ|| ರೇಣುಕಮ್ಮ ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ತಂಗಡಗಿಯವರಿಗೆ ಕನ್ನಡಪ್ರೇಮಿ ಜಿ.ರಾಮಕೃಷ್ಣ ಅವರಿಂದ ಆತ್ಮೀಯ ಸನ್ಮಾನ.

ಗಂಗಾವತಿ: ಕಳೆದ ೨೦೨೩ ರಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿ ಶ್ರೀ ಶಿವರಾಜ ತಂಗಡಗಿಯವರು ಕೊಪ್ಪಳ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ನಿರಂತರ ಶ್ರಮವಹಿಸುತ್ತಿದ್ದಾರೆ.

ಇವರಿಗೆ ಶ್ರೀರಾಮನಗರದಲ್ಲಿ ಏಪ್ರಿಲ್-೧೫ ಮಂಗಳವಾರ ಶೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಘದ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣ ಅವರು ಆತ್ಮೀಯವಾಗಿ ಸನ್ಮಾನಿಸಿದರು.