ಗಂಗಾವತಿ: ೨೦೨೪-೨೫ನೇ ಸಾಲಿನ ಸಂಕಲ್ಪ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್.ಎನ್.ಎಸ್ ವಿಶೇಷ ಶಿಬಿರದ ೬ನೇ ದಿನದ ಉಪನ್ಯಾಸ ಮಾಲಿಕೆ ಉದ್ಘಾಟಿಸಿದ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯಕ್ ಮಾತನಾಡಿ ಇಂದಿನ ಯುವ ಜನತೆ ಇಂತಹ ಶಿಬಿರಗಳ ಮೂಲಕ ಜವಾಬ್ದಾರಿಗಳನ್ನು ಕಲಿತು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಆದರ್ಶ ಸಮಾಜ ನಿರ್ಮಾಣದಲ್ಲಿ ತೊಡಗಲು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ರಮೇಶ ಗಾಣಿಗೇರ್‌ರವರು ಮಾತನಾಡಿ, ಮಹಿಳಾ ಕಾನೂನಿಗೆ ಸಂಬಂಧಿಸಿದ ವಿಷಯಗಳ ಅಗತ್ಯ ಹಾಗೂ ಅನಿವಾರ್ಯತೆಗಳನ್ನು ತಿಳಿಸುತ್ತಾ, ಮಹಿಳೆಯರು ಸಬಲರಾಗಬೇಕು, ಆಧುನಿಕ ಜಗತ್ತಿನ ಈ ಯುಗದಲ್ಲಿ ಎಲ್ಲ ರಂಗದಲ್ಲಿ ಮುಂದುವರೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ನಾಗೇಶ್ ಪಾಟೀಲ್ ರವರು ಶಿಬಿರಾರ್ಥಿಗಳು ಪರಿಸರ ಜಾಗೃತಿ ಸಮಾಜಕ್ಕೆ ಮೌಲ್ಯಗಳ ಅಳವಡಿಕೆಯ ಕಡೆ ಗಮನಹರಿಸಲು ಕರೆ ನೀಡಿದರು.
ಯುವತಿಯರು ತಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳುವ ಮೂಲಕ ಸ್ವಾಭಿಮಾನಿಗಳಾಗಿ ಬದುಕಬೇಕೆಂದು ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಮೇಘ ಸೋಮಣ್ಣನವರು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್‌ರವರು, ಶಿಬಿರದಲ್ಲಿ ಶಿಬಿರಾರ್ಥಿಗಳು ಮಾಡಿದ ವಿವಿಧ ಕಾರ್ಯಕ್ರಮಗಳ ಕುರಿತು ಶ್ಲಾಘಿಸಿದರು ಹಾಗೂ ಮನುಷ್ಯನ ಜೀವನದ ಎಲ್ಲಾ ಹಂತಗಳಲ್ಲಿ ಕಾನೂನು ನಮ್ಮ ನೆರವಿಗೆ ಬರುತ್ತಿದ್ದು, ಮನುಷ್ಯ ಜೀವನ ಪರ್ಯಂತ ಕಾನೂನಿನ ನೆರವಿನೊಂದಿಗೆ ಬದುಕು ಸಾಗಿಸಬೇಕು. ಕಾನೂನಿನ ಪಾಲನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.
ಸಮಾಜದ ಪರಿವರ್ತನೆಯಲ್ಲಿ ಇಂತಹ ಶಿಬಿರಗಳು ಪ್ರಮುಖ ಪಾತ್ರವಹಿಸುತ್ತದೆ ಎಂದು ವಿಶೇಷ ಉಪನ್ಯಾಸ ನೀಡಿದ ಪ್ರಕಾಶ್ ಎಂ. ಕುಸುಬಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶರಣಪ್ಪ ನಾಯ್ಕ್, ಪ್ರಾಚಾರ್ಯರಾದ ಬಸವರಾಜ್ ಶಿರಿಗೇರಿ, ಕಾರ್ಯಕ್ರಮಾಧಿಕಾರಿಗಳು, ಶಿಬಿರಾರ್ಥಿಗಳು ಉಪನ್ಯಾಸಕರು ಹಾಜರಿದ್ದರು.