ದಾಸನಾಳ ಗ್ರಾಮದ ಕಾಟಮೇಶ್ವರ ದೇವರ ೧೬ನೇ ವರ್ಷದ ಜಾತ್ರಾ ಮಹೋತ್ಸವ, ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳು

ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದ ಕಾಟಮೇಶ್ವರ ದೇವರ 16ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥರವರು ಯಾವುದೇ ಸಮುದಾಯದ ಅಭಿವೃದ್ಧಿಗೆ, ಪ್ರಗತಿಗೆ, ಅವರ ಕುಲದೇವರ ಅನುಗ್ರಹ ತುಂಬಾ ಅವಶ್ಯವಾಗಿದೆ. ಅದರಂತೆ ಕುಲ ಗುರುಗಳ ಮಾರ್ಗದರ್ಶನ, ಅವರ ಆಶೀರ್ವಾದವಿದ್ದಲ್ಲಿ ಸಮಾಜವು ಪ್ರಗತಿಯ ಕಡೆಗೆ ಸಾಗಲು ಸಾಧ್ಯ ಎಂದರು.

ಸಮಾಜದ ಎಲ್ಲ ಬಂಧುಗಳು ಎಲ್ಲಾ ಸಮಾಜ ಬಾಂಧವರೊಂದಿಗೆ ಸಾಮರಸ್ಯದಿಂದ ಬದುಕು ನಡೆಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದ ಗಂಗಾವತಿಯ ವಕೀಲರು ಮತ್ತು ನಗರಸಭೆಯ ಕಾನೂನು ಸಲಹೆಗಾರರಾದ ನಾಗರಾಜ್ ಎಸ್. ಗುತ್ತೇದಾರ್ ರವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಸಮುದಾಯದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಗುರು ಪರಂಪರೆಯನ್ನು, ದೈವತ್ವವನ್ನು ನಂಬಿ ನಡೆದಾಗ ಜೀವನ ಸಮೃದ್ಧವಾಗಲು ಸಾಧ್ಯ. ಸಮುದಾಯದ ಕಾರ್ಯಕ್ರಮಗಳು ನಡೆದಾಗ ಕುಟುಂಬ ಸಮೇತರಾಗಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವ ಕಡೆಗೆ ಗಮನಹರಿಸಬೇಕು ಎಂದರು.

೧೪ನೇ ವರ್ಷದ ತುಲಾಭಾರ ಕಾರ್ಯಕ್ರಮವನ್ನು ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಶ್ರೀ ನಾರಾಯಣ ಗುರುಮಠದ ಪೀಠಾಧಿಪತಿಗಳಾದ ಶ್ರೀ ರೇಣುಕಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ನಾರಾಯಣ ಗುರುಗಳ ಚಿಂತನೆ ಪರಂಪರೆಯನ್ನು ಸಮಾಜದ ಬಂಧುಗಳು ಮನವರಿಕೆ ಮಾಡಿಕೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ಸಾಗಬೇಕು ಹಾಗೂ ಮಕ್ಕಳಿಗೆ ಮೌಲ್ಯಾಧಾರಿತ ಜೀವನವನ್ನು ರೂಪಿಸುವಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳು ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಲಿ ಎಂದು ಆಶೀರ್ವದಿಸಿದರು.

ಈ ವರ್ಷದ ಕಾರ್ಯಕ್ರಮದಲ್ಲಿ ಹಲವು ಭಕ್ತಾದಿಗಳು ಶ್ರೀ ನಾರಾಯಣ ಗುರು ಮಾಲೆಯನ್ನು ಧರಿಸಿದ್ದು ವಿಶೇಷವಾಗಿತ್ತು.

ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿತ್ತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ದಾಸನಾಳ ಗ್ರಾಮದ ಬಸವಣ್ಣಯ್ಯ ಶಾಸ್ತ್ರಿ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಘದ ಕಾರಟಗಿ ತಾಲೂಕ ಅಧ್ಯಕ್ಷರಾದ ಈ.ವಿರೇಶ ಮರ್ಲಾನಹಳ್ಳಿ, ಕನಕಗಿರಿ ತಾಲೂಕ ಅಧ್ಯಕ್ಷರಾದ ಈ.ನಾಗೇಶ ಚಿಕ್ಕಡಂಕನಕಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಈ.ಶ್ರೀಕಾಂತ್ ಮರ್ಲನಹಳ್ಳಿ, ಶ್ರೀಹರಿಬಾಬು ಕಾರಟಗಿ. ಶ್ರೀನಾಥ ಕಾರಟಗಿ. ಶರಣಪ್ಪ ಮೈಲಾಪುರ್, ರಾಘವೇಂದ್ರ ಜಂತಕಲ್, ಶೇಖರಪ್ಪ ಚಳ್ಳೂರು, ಪ್ರಭು ಬಸಾಪಟ್ಟಣ, ರಂಗಪ್ಪ ಆರಾಳ, ಹನುಮಂತರಾಯ ವಡ್ಡರಹಟ್ಟಿ, ಭುವನೇಶಪ್ಪ ಉಡುಮಕಲ್, ತುಕಾರಾಮಪ್ಪ ಕಲಿಕೆರಿ, ಶರಣಪ್ಪ ಉಳೇನೂರು, ರಾಜಶೇಖರ್ ವೆಂಕಟಗಿರಿ, ಮಾರುತೇಶ ಊರಮುಂದಲರ, ಈ.ಮಾರ್ಕಂಡಯ್ಯ, ಪ್ರಕಾಶ್, ಬಸವರಾಜ್, ನಿರುಪಾದಿ, ರಾಜಕುಮಾರ, ರಾಜಶೇಖರ್, ವಿರುಪಣ್ಣ ಕುಣಿಕೇರಿ ಹಾಗೂ ವಿವಿಧ ತಾಲೂಕು ಜಿಲ್ಲೆಗಳಿಂದ ಸಾಕಷ್ಟು ಜನ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬಸವನಗೌಡ ಕಾರ್ಯಕ್ರಮ ನಿರೂಪಿಸಿದರು.

ಹಂಪಿ ಉತ್ಸವದ ‘ಧ್ವನಿ ಮತ್ತು ಬೆಳಕು’ ಪ್ರದರ್ಶನಕ್ಕೆ ಗಂಗಾವತಿಯ ಎನ್.ಆರ್.ರಾಯಬಾಗಿ ಆಯ್ಕೆ

ಗಂಗಾವತಿ: ವಿಶ್ವವಿಖ್ಯಾತ ಹಂಪಿಯಲ್ಲಿ ಫೆ. ೨೮ ಶುಕ್ರವಾರ ಆರಂಭಗೊಳ್ಳುವ ಹಂಪಿ ಉತ್ಸವದ ‘ವಿಜಯನಗರ ವೈಭವ’ ಧ್ವನಿ ಮತ್ತು ಬೆಳಕು ಪ್ರದರ್ಶನಕ್ಕೆ ನಗರದ ಕಲಾವಿದ ಜೂನಿಯರ್ ರಾಜಕುಮಾರ ಎನ್.ಆರ್. ರಾಯಬಾಗಿ ಆಯ್ಕೆಯಾಗಿದ್ದಾರೆ.

ಕೇಂದ್ರ ರ‍್ಕಾರದ ಮಾಹಿತಿ, ಪ್ರಸಾರ ಹಾಗೂ ಸಂಪರ್ಕ ಕೇಂದ್ರ (ಗಾಯನ ಮತ್ತು ನಾಟಕ ವಿಭಾಗ), ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಿಜಯನಗರ ಜಿಲ್ಲಾಡಳಿತ ನೇತೃತ್ವದಲ್ಲಿ ಧ್ವನಿ ಮತ್ತು ಬೆಳಕು ಪ್ರರ‍್ಶನ ಫೆ.೨೮ ರಿಂದ ಆರಂಭಗೊಂಡು ಮಾ.೭ ರವರಗೆ ನಡೆಯಲಿದೆ. ಕಲಾವಿದ ನಾರಾಯಣ ರಾಯಬಾಗಿಯು ಸತತ ೧೬ನೇ ವರ್ಷದಲ್ಲಿ ಧ್ವನಿ ಬೆಳಕು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಈ ಮೊದಲು ‘ಕರ್ನಾಟಕ ವೈಭವ’, ‘ಶ್ರೀ ಕೃಷ್ಣದೇವರಾಯ’ ವಿಜಯನಗರ ವೈಭವ’ ಧ್ವನಿ ಬೆಳಕು ಪ್ರದರ್ಶನಗಳಲ್ಲಿ ಅಶೋಕ ಚಕ್ರವರ್ತಿ, ಶಂಕರಾಚಾರ್ಯರ, ಭರತ ಚಕ್ರವರ್ತಿ, ತಿಮ್ಮರಸ, ಅಪ್ಪಾಜಿ, ಪೊರ್ಚುಗೀಸ್ ಅಧಿಕಾರಿ, ಸಾಮಂತ ರಾಜ್, ಕನಕದಾಸ ಮತ್ತಿತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿಜಯನಗರ ವೈಭವದಲ್ಲಿ ಪುರಂದರ ದಾಸ, ಅಬ್ದುಲ್ ರಜಾಕ್, ಬ್ರಿಟಿಷ್ ಅಧಿಕಾರಿ ನಿಕೋಲಸ್ ಕೌಂಟಿ, ಗಜಪತಿ ರಾಜನ ಮಂತ್ರಿ, ಡೋಯಿಂಗ್ ಪಾಯಸ ಇನ್ನಿತರ ಪಾತ್ರಗಳಲ್ಲಿ ಅಭಿನಯಿಸುವರು.

ಮಹಾಶಿವರಾತ್ರಿ ಪ್ರಯುಕ್ತ ಗಂಗಾವತಿಯ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ

ಗಂಗಾವತಿ: ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ನಗರದ ಹೊಸಳ್ಳಿ ರಸ್ತೆಯಲ್ಲಿರುವ ಶ್ರೀ ಮೌನೇಶ್ವರ ದೇವಸ್ಥಾನದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಗಳು ಸಾಂಗತವಾಗಿ ಜರುಗಿದವು ಎಂದು ವಿಶ್ವಕರ್ಮ ಸಮಾಜದ ಗಂಗಾವತಿ ತಾಲೂಕ ಅಧ್ಯಕ್ಷರಾದ ಕಾಳೇಶ ಬಡಿಗೇರ ಪ್ರಕಟಣೆಯಲ್ಲಿ ತಿಳಿಸಿದರು.

ಅಂದು ಸಂಜೆ ೬ಕ್ಕೆ ಶಿವಸ್ವರೂಪರಾದ ಶ್ರೀಗುರು ಮೌನೇಶ್ವರರಿಗೆ ಪೂಜೆ, ಅಭಿಷೇಕ ನೆರವೇರಿಸಲಾಯಿತು. ನಂತರದಲ್ಲಿ ಭಕ್ತಿಸಂಗೀತ ಕಾರ್ಯಕ್ರಮಕ್ಕೆ ಸಮಾಜದ ಜಿಲ್ಲಾಧ್ಯಕ್ಷರಾದ ನಾಗೇಶಕುಮಾರ ಕಂಸಾಲಿಯವರು ಚಾಲನೆ ನೀಡಿದರು.

ಭಕ್ತಿ ಸಂಗೀತ ಕಾರ್ಯಕ್ರಮವನ್ನು ಸ್ಥಳೀಯ ಸಂಗೀತ ಕಲಾವಿದರಾದ ಕನಕಪ್ಪ ಚಿತ್ರಗಾರ, ಗಂಗಾಧರಯ್ಯ, ವೆಂಕಟೇಶ ದಾಸನಾಳ, ಕಾಶೀಂ ಅಲಿ ಮುದ್ದಾಬಳ್ಳಿ, ಶಿವಪ್ಪ ಹುಳ್ಳಿ, ನರಸಿಂದ ದರೋಜಿ, ಮಲ್ಲೇಶಪ್ಪ, ಸಮಾಜದ ಪ್ರತಿನಿಧಿಗಳಾದ ಸಣ್ಣೆಪ್ಪ ಕಮ್ಮಾರ, ನಾಗಪ್ಪ ಬಡಿಗೇರ ಸೇರಿದಂತೆ ಮುಂತಾದ ಸಂಗೀತ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.

ಈ ಕಾರ್ಯಕ್ರಮವನ್ನು ಸಮಾಜದ ಹಿರಿಯರಾದ ಸಿ.ವಿ ಸರ್ವಜ್ಞಾಚಾರ್, ಪ್ರಮುಖರಾದ ಹನುಮೇಶ ಬಡಿಗೇರ, ಬಸವರಾಜ ಬಡಿಗೇರ, ಛಾಯಾ ಭಾಸ್ಕರ, ಬಸವರಾಜ ವಣಗೇರಿ, ಶ್ರೀನಿವಾಸ ಪತ್ತಾರ, ದೇವೆಂದ್ರ ಅರ್ಕಸಾಲಿ, ಗುರುರಾಜ ಬಡಿಗೇರ, ಮಹಿಳಾ ಮಂಡಳಿಯವರು, ಯುವಮಿತ್ರರು ಪಾಲ್ಗೊಂಡು ಅಚ್ಚುಕಟ್ಟಾಗಿ ನಡೆಸಿದರು.

ಮಾರ್ಚ್-05‌ ರಂದು ಗಂಗಾವತಿಯ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ೨೫ನೇ ವಾರ್ಷಿಕೋತ್ಸವ

ಗಂಗಾವತಿ: ನಗರದ ಆನೆಗೊಂದಿ ರಸ್ತೆಯಲ್ಲಿರುವ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದ ೨೫ನೇ ವಾರ್ಷಿಕೋತ್ಸವವು ಮಾರ್ಚ್-೦೫ ಬುಧವಾರದಂದು ನಡೆಯಲಿದೆ ಎಂದು ಶ್ರೀ ಶಿರಿಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ (ರಿ)ನ ಅಧ್ಯಕ್ಷರಾದ ರಾಮಕೃಷ್ಣರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

೨೫ನೇ ವಾರ್ಷಿಕೋತ್ಸವದ ನಿಮಿತ್ಯವಾಗಿ ಅಂದು ಭಕ್ತಾದಿಗಳಿಗೆ ಲೋಕಕಲ್ಯಾಣಾರ್ಥವಾಗಿ ಭಕ್ತ ಜನರಿಗೆ ಭೋಗ ಭಾಗ್ಯ ಆಯುರಾರೋಗ್ಯ ಅಷ್ಟೈಶ್ವರ್ಯ ಪ್ರಾಪ್ತಿಗಾಗಿ ನವಗ್ರಹ ಪರಿಹಾರಕ್ಕಾಗಿ ಅನೇಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಅಂದು ಬೆಳಿಗ್ಗೆ ೫:೧೫ಕ್ಕೆ ಕಾಕಡ ಆರತಿ, ನಂತರ ಶ್ರೀಸಾಯಿಬಾಬಾ ಅವರಿಗೆ ಪಂಚಾಮೃತ ಅಭಿಷೇಕ ಪೂಜಾದಿಗಳು ನಂತರ ಪುಷ್ಪಾರ್ಚನೆ, ಮಹಾಮಂಗಳಾರತಿ, ತೀರ್ಥಪ್ರಸಾದ, ಮತ್ತೆ ಮಧ್ಯಾಹ್ನದ ಆರತಿ ಹಾಗೂ ಸಂಜೆ ಸಂಧ್ಯಾ ಆರತಿ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.

ಕಾರಣ ಎಲ್ಲಾ ಭಕ್ತಾದಿಗಳು ಆಗಮಿಸಿ, ಶ್ರೀ ಬಾಬಾರವರ ದರ್ಶನ ಪಡೆದು ತನು, ಮನ, ಧನದಿಂದ ಸೇವೆ ಸಲ್ಲಿಸಿ, ತೀರ್ಥಪ್ರಸಾದ ಸ್ವೀಕರಿಸಿ, ಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಶಿರಿಡಿ ಸಾಯಿಬಾಬಾ ಚಾರಿಟೇಬಲ್ ಟ್ರಸ್ಟ್ (ರಿ), ಶ್ರೀ ಶಿರಿಡಿ ಸಾಯಿಬಾಬಾ ಸೇವಾ ಸಮಿತಿಯ ಆಡಳಿತ ಮಂಡಳಿ ಮನವಿ ಮಾಡಿದೆ.

ಮಹಾಶಿವರಾತ್ರಿ ಅಂಗವಾಗಿ ಸಿದ್ದಿಕೆರೆಯಲ್ಲಿ ಬೇಡರ ಕಣ್ಣಪ್ಪ ನಾಮಫಲಕಕ್ಕೆ ಪೂಜಾ ಕಾರ್ಯಕ್ರಮ

ಗಂಗಾವತಿ: ನಗರದ ೪ನೇ ವಾರ್ಡ್ ಸಿದ್ದಿಕೆರೆಯಲ್ಲಿ ಫೆಬ್ರವರಿ-೨೬ ಬುಧವಾರ ಮಹಾಶಿವರಾತ್ರಿ ಪ್ರಯುಕ್ತ ಬೇಡರ ಕಣ್ಣಪ್ಪ ಭಾವಚಿತ್ರವಿರುವ ನಾಮಫಲಕಕ್ಕೆ ಗಂಗಾವತಿ ತಾಲೂಕ ಶ್ರೀಗುರು ಆದಿಕವಿ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಕಲಾವಿದರ ಸಂಘದಿಂದ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಎಂದು ಸಂಘದ ಅಧ್ಯಕ್ಷರಾದ ಜೆ. ಸೋಮಪ್ಪ ಕವಿಗಳು ಪ್ರಕಟಣೆ ಮೂಲಕ ತಿಳಿಸಿದರು.


ಅವರು ಮಹಾಶಿವರಾತ್ರಿಯ ದಿನ ಸಂಜೆ ೬ ಗಂಟೆಗೆ ಪೂಜಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಬೇಡರ ಕಣ್ಣಪ್ಪನು ಮಹಾಶಿವನ ಭಕ್ತನಾಗಿ ತನ್ನ ಕಣ್ಣುಗಳನ್ನು ದಾನ ನೀಡಿದ ದಿನವೇ ಮಹಾಶಿವರಾತ್ರಿಯಾಗಿದ್ದು, ಈ ಮಹಾಶಿವರಾತ್ರಿ ಅಂಗವಾಗಿ ಶಿವನ ಭಕ್ತ ಬೇಡರ ಕಣ್ಣಪ್ಪನಿಗೆ ನಮ್ಮ ಸಂಘದಿಂದ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಪೂಜಾ ಕಾರ್ಯಕ್ರಮದಲ್ಲಿ ಚಿಕ್ಕವಂಕಲಕುಂಟಾ ದೇವಸ್ಥಾನದ ಫಕೀರೇಶ್ವರ ತಾತನವರು, ನಗರಸಭೆ ಸದಸ್ಯ ಎಫ್.ರಾಘವೇಂದ್ರ, ಸಿದ್ದಿಕೆರೆ ಮಾರೆಮ್ಮ ದೇವಸ್ಥಾನದ ಅರ್ಚಕರಾದ ಪ್ರಭಾಕರ, ಸಂಘದ ಗೌರವಾಧ್ಯಕ್ಷ ನಾಗಭೂಷಣ ನಾಯಕ ರಾಂಪುರ, ಉಪಾಧ್ಯಕ್ಷರಾದ ಸಿಂಗಾಪುರ ಭೀಮರಾಯ ನಾಯಕ, ಉಮೇಶಪ್ಪ ರಾಂಪುರ, ಕಾರ್ಯದರ್ಶಿಯಾದ ಟಿ. ಅನೀಲಕುಮಾರ, ಮುಖಂಡರಾದ ಸೋಮಲಾಪುರ ಬಸಪ್ಪ ನಾಯಕ, ಸೋಮಲಾಪುರ ಶೇಖರ ನಾಯಕ, ಕೋಲ್ಕಾರ ನಾಗರಾಜ ನಾಯಕ, ಮಣ್ಣೂರು ನಾಗಪ್ಪ ನಾಯಕ, ಗಿರೀಶ ನಾಯಕ ಬಸವನದುರ್ಗ, ಟಿ. ಬಸವರಾಜ ಮಲ್ಲಾಪುರ, ಸಿಂಗಾಪುರ ಶ್ರೀನಿವಾಸ ನಾಯಕ ಸೇರಿದಂತೆ ಸಿದ್ದಿಕೆರೆ, ಸಂಗಾಪುರ, ರಾಂಪುರ ಗ್ರಾಮದ ಗುರುಹಿರಿಯರು, ಸರ್ವ ಸಮಾಜಗಳ ಮುಖಂಡರು, ಪ್ರಮುಖರು ಪಾಲ್ಗೊಂಡಿದ್ದರು.