ಗಂಗಾವತಿ: ತಾಲೂಕಿನ ದಾಸನಾಳ ಗ್ರಾಮದಲ್ಲಿ ನಡೆದ ಕಾಟಮೇಶ್ವರ ದೇವರ 16ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಪೂಜ್ಯ ಶ್ರೀ ರೇಣುಕಾನಂದ ಮಹಾಸ್ವಾಮಿಗಳ ೧೪ನೇ ವರ್ಷದ ತುಲಾಭಾರ ಕಾರ್ಯಕ್ರಮ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥರವರು ಯಾವುದೇ ಸಮುದಾಯದ ಅಭಿವೃದ್ಧಿಗೆ, ಪ್ರಗತಿಗೆ, ಅವರ ಕುಲದೇವರ ಅನುಗ್ರಹ ತುಂಬಾ ಅವಶ್ಯವಾಗಿದೆ. ಅದರಂತೆ ಕುಲ ಗುರುಗಳ ಮಾರ್ಗದರ್ಶನ, ಅವರ ಆಶೀರ್ವಾದವಿದ್ದಲ್ಲಿ ಸಮಾಜವು ಪ್ರಗತಿಯ ಕಡೆಗೆ ಸಾಗಲು ಸಾಧ್ಯ ಎಂದರು.
ಸಮಾಜದ ಎಲ್ಲ ಬಂಧುಗಳು ಎಲ್ಲಾ ಸಮಾಜ ಬಾಂಧವರೊಂದಿಗೆ ಸಾಮರಸ್ಯದಿಂದ ಬದುಕು ನಡೆಸಿದಾಗ ಜೀವನ ಸಾರ್ಥಕವಾಗುತ್ತದೆ ಎಂದು ಮಾತನಾಡಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮುಖ್ಯ ಅಥಿತಿಗಳಾಗಿ ಬಾಗವಹಿಸಿದ್ದ ಗಂಗಾವತಿಯ ವಕೀಲರು ಮತ್ತು ನಗರಸಭೆಯ ಕಾನೂನು ಸಲಹೆಗಾರರಾದ ನಾಗರಾಜ್ ಎಸ್. ಗುತ್ತೇದಾರ್ ರವರು ಪ್ರಸ್ತಾವಿಕ ಮಾತುಗಳನ್ನಾಡುತ್ತಾ ಸಮುದಾಯದ ಬಂಧುಗಳು ತಮ್ಮ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು, ಗುರು ಪರಂಪರೆಯನ್ನು, ದೈವತ್ವವನ್ನು ನಂಬಿ ನಡೆದಾಗ ಜೀವನ ಸಮೃದ್ಧವಾಗಲು ಸಾಧ್ಯ. ಸಮುದಾಯದ ಕಾರ್ಯಕ್ರಮಗಳು ನಡೆದಾಗ ಕುಟುಂಬ ಸಮೇತರಾಗಿ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುವ ಕಡೆಗೆ ಗಮನಹರಿಸಬೇಕು ಎಂದರು.
೧೪ನೇ ವರ್ಷದ ತುಲಾಭಾರ ಕಾರ್ಯಕ್ರಮವನ್ನು ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಜಿಲ್ಲೆ ಶ್ರೀ ನಾರಾಯಣ ಗುರುಮಠದ ಪೀಠಾಧಿಪತಿಗಳಾದ ಶ್ರೀ ರೇಣುಕಾನಂದ ಶ್ರೀಗಳು ಆಶೀರ್ವಚನ ನೀಡುತ್ತಾ, ನಾರಾಯಣ ಗುರುಗಳ ಚಿಂತನೆ ಪರಂಪರೆಯನ್ನು ಸಮಾಜದ ಬಂಧುಗಳು ಮನವರಿಕೆ ಮಾಡಿಕೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ಸಾಗಬೇಕು ಹಾಗೂ ಮಕ್ಕಳಿಗೆ ಮೌಲ್ಯಾಧಾರಿತ ಜೀವನವನ್ನು ರೂಪಿಸುವಲ್ಲಿ ಪ್ರತಿಯೊಬ್ಬರು ಕಾರ್ಯನಿರ್ವಹಿಸಬೇಕು ಎಂದು ಹೇಳುತ್ತಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ಮಠದಿಂದ ಪ್ರತಿವರ್ಷ ಪ್ರತಿಭಾ ಪುರಸ್ಕಾರವನ್ನು ನೀಡುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ಮಕ್ಕಳು ಶಿಕ್ಷಣದಲ್ಲಿ ಪ್ರಗತಿಯನ್ನು ಸಾಧಿಸಲಿ ಎಂದು ಆಶೀರ್ವದಿಸಿದರು.
ಈ ವರ್ಷದ ಕಾರ್ಯಕ್ರಮದಲ್ಲಿ ಹಲವು ಭಕ್ತಾದಿಗಳು ಶ್ರೀ ನಾರಾಯಣ ಗುರು ಮಾಲೆಯನ್ನು ಧರಿಸಿದ್ದು ವಿಶೇಷವಾಗಿತ್ತು.
ಜಾತ್ರಾ ಮಹೋತ್ಸವದ ಅಂಗವಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಲಾಗಿತ್ತು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ದಾಸನಾಳ ಗ್ರಾಮದ ಬಸವಣ್ಣಯ್ಯ ಶಾಸ್ತ್ರಿ ಅವರು ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಆರ್ಯ ಈಡಿಗ ಸಂಘದ ಕಾರಟಗಿ ತಾಲೂಕ ಅಧ್ಯಕ್ಷರಾದ ಈ.ವಿರೇಶ ಮರ್ಲಾನಹಳ್ಳಿ, ಕನಕಗಿರಿ ತಾಲೂಕ ಅಧ್ಯಕ್ಷರಾದ ಈ.ನಾಗೇಶ ಚಿಕ್ಕಡಂಕನಕಲ್, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ಈ.ಶ್ರೀಕಾಂತ್ ಮರ್ಲನಹಳ್ಳಿ, ಶ್ರೀಹರಿಬಾಬು ಕಾರಟಗಿ. ಶ್ರೀನಾಥ ಕಾರಟಗಿ. ಶರಣಪ್ಪ ಮೈಲಾಪುರ್, ರಾಘವೇಂದ್ರ ಜಂತಕಲ್, ಶೇಖರಪ್ಪ ಚಳ್ಳೂರು, ಪ್ರಭು ಬಸಾಪಟ್ಟಣ, ರಂಗಪ್ಪ ಆರಾಳ, ಹನುಮಂತರಾಯ ವಡ್ಡರಹಟ್ಟಿ, ಭುವನೇಶಪ್ಪ ಉಡುಮಕಲ್, ತುಕಾರಾಮಪ್ಪ ಕಲಿಕೆರಿ, ಶರಣಪ್ಪ ಉಳೇನೂರು, ರಾಜಶೇಖರ್ ವೆಂಕಟಗಿರಿ, ಮಾರುತೇಶ ಊರಮುಂದಲರ, ಈ.ಮಾರ್ಕಂಡಯ್ಯ, ಪ್ರಕಾಶ್, ಬಸವರಾಜ್, ನಿರುಪಾದಿ, ರಾಜಕುಮಾರ, ರಾಜಶೇಖರ್, ವಿರುಪಣ್ಣ ಕುಣಿಕೇರಿ ಹಾಗೂ ವಿವಿಧ ತಾಲೂಕು ಜಿಲ್ಲೆಗಳಿಂದ ಸಾಕಷ್ಟು ಜನ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಬಸವನಗೌಡ ಕಾರ್ಯಕ್ರಮ ನಿರೂಪಿಸಿದರು.