ಹಿರೇಬೆಣಕಲ್ ಸೇತುವೆ ಗ್ರಾಮದ ಸಿದ್ಧಗಂಗಾಶ್ರೀ ಬೆಲ್ಲದ ಚಹಾ ಅಂಗಡಿಯ ನಾಮಫಲಕ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಂದ ಬಿಡುಗಡೆ.

ಗಂಗಾವತಿ : ಜೂನ್-೨೮ ಶನಿವಾರದಂದು ತ್ರಿವಿಧ ದಾಸೋಹದ ನಾಡು ಪುಣ್ಯಕ್ಷೇತ್ರ ಶ್ರೀ ಸಿದ್ದಗಂಗಾ ಮಠದಲ್ಲಿ ಒಂದು ಭಾವಪೂರ್ಣ ಸಮಾರಂಭ ನಡೆಯಿತು.

ಡಾ. ಶ್ರೀ. ಶ್ರೀ. ಶಿವಕುಮಾರ ಮಹಾಸ್ವಾಮಿಗಳವರ ಗ್ರಂಥ ಲೋಕಾರ್ಪಣೆಯು ಈ ದಿನದ ಆಕರ್ಷಣೆಯಾಗಿತ್ತು.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಸೇತುವೆ ಬಳಿ ಸ್ಥಾಪಿಸಲಾದ “ಸಿದ್ದಗಂಗಾಶ್ರೀ ಬೆಲ್ಲದ ಚಹಾ ಅಂಗಡಿ”ಗೆ ವಿಶೇಷ ಗೌರವ ದೊರೆಯಿತು.

ಅಂಗಡಿಯ ನಾಮಫಲಕವನ್ನು ಪರಮಪೂಜ್ಯ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಅನಾವರಣಗೊಳಿಸಿ ಸಾಂಕೇತಿಕವಾಗಿ ಉದ್ಘಾಟಿಸಿದರು.

ಅವರು ಮಾತನಾಡುತ್ತಾ “ಈ ಅಂಗಡಿ ನಾಡಿನಾದ್ಯಂತ ಹೆಸರಾಗಲಿ. ಗುರುಪರಂಪರೆ ಆಶೀರ್ವಾದ ಸದಾ ನಿಮ್ಮ ಕುಟುಂಬದ ಮೇಲಿರಲಿ” ಎಂದು ಆಶೀರ್ವದಿಸಿದರು.

ಬಸನಗೌಡ ಹೊಸಳ್ಳಿ ಮತ್ತು ಅವರ ಕುಟುಂಬ ವರ್ಗ ಈ ವಿಶೇಷ ಅನುಭವದಿಂದ ಧನ್ಯರಾದರು.

ಈ ಸಮಾರಂಭದಲ್ಲಿ ನಾಡಿನ ಹೆಸರಾಂತ ಜಾನಪದ ವಿದ್ವಾಂಸ ಡಾ. ಶ್ರೀ ಗೊ. ರು. ಚೆನ್ನಬಸಪ್ಪ ಅವರು ವಿಶೇಷ ಆತಿಥ್ಯ ವಹಿಸಿದರು.

ಸಿದ್ದಗಂಗೆಯ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು ಕಾರ್ಯಕ್ರಮದ ಇತರ ಪ್ರಮುಖ ಅತಿಥಿಗಳಲ್ಲೊಬ್ಬರಾಗಿದ್ದರು.

ಇದಲ್ಲದೆ, ಶ್ರೀಮಠದ ಹಳೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರೂ ಈ ಸಂಭ್ರಮದಲ್ಲಿ ಹಾರ್ದಿಕವಾಗಿ ಭಾಗವಹಿಸಿದ್ದರು.

ಮಾಹಿತಿಗಾಗಿ:
ಬಸನಗೌಡ ಹೊಸಳ್ಳಿ
ಅಧ್ಯಕ್ಷರು, ಶ್ರೀ ಸ್ವಾಮಿ ವಿವೇಕಾನಂದ ಗ್ರಾಮೀಣ ಅಭಿವೃದ್ಧಿ ಕ್ರೀಡೆ ಮತ್ತು ಸಾಂಸ್ಕೃತಿಕ ಯುವಕ ಸಂಘ
ಮೊ.ನಂ: ೭೪೮೩೨೨೯೯೬೨

ಹಾಸ್ಯದರ್ಶನ ಪತ್ರಿಕೆ ಕೊಂಡರೆ ಒಂದು ಜೋಳದ ರೊಟ್ಟಿ ಫ್ರೀ..! ಗೊರೂರು ಅನಂತರಾಜು, ಹಾಸನ.

ಎಸ್.‌ ಎಸ್.‌ ಪಡಶೆಟ್ಟಿ: ಹಾಸ್ಯ ದರ್ಶನದ ಪರಿಚಯ : ಹಾಸ್ಯ ಬರಹಗಳಿಗೆ ಪ್ರಸಿದ್ಧರಾದ. ಎಸ್. ಪಡಶೆಟ್ಟಿ ಹಾಸ್ಯ ಭಾಷಣಕಾರರಾಗಿದ್ದು, ಹಾಸ್ಯ ದರ್ಶನ ಮಾಸಪತ್ರಿಕೆಯ ಸಂಪಾದಕರಾಗಿದ್ದರು. ಹಾಸ್ಯ ಸಾಹಿತಿ ಕೋ. ಲ. ರಂಗನಾಥರಾವ್ ಅವರೊಂದಿಗೆ ಅವರು ಬೆಂಗ ಮತ್ತು ಪಡಶೆಟ್ಟರು ಜೊತೆಯಾಗಿ ಬೆಂಗಳೂರು ನಗರದ ಹಲವೆಡೆ ಹಾಸ್ಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ.

ಲೇಖಕರ ನೆನಪುಗಳು ಮತ್ತು ಹಾಸ್ಯ ಪ್ರಯಾಣ : ಗೊರೂರಿನಲ್ಲಿ ಎಡಿಟರ್ ಆಗಿದ್ದ ರಾವ್‌ ಅವರ ಜೊತೆ ಲೇಖಕರು ಶಾಲಾ-ಕಾಲೇಜುಗಳಲ್ಲಿ ಹಾಸ್ಯ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ರಾವ್ ಬೆಂಗಳೂರಿಗೆ ತೆರಳಿದ ನಂತರ ಈ ಜೊತೆಯ ಹಾಸ್ಯ ಕಾರ್ಯಕ್ರಮ ನಿಂತಿತು, ಆದರೆ ಪಡಶೆಟ್ಟರೊಂದಿಗೆ ಹಾಸ್ಯ ಕಾರ್ಯಕ್ರಮ ಮುಂದುವರಿಯಿತು. ಈ ಲೇಖನದಲ್ಲಿ ಲೇಖಕರು ತಮ್ಮ ಜೀವನದ ಅನೇಕ ಹಾಸ್ಯ ಪ್ರಸಂಗಗಳನ್ನು ತೋಡಿಹಾಕಿದ್ದಾರೆ.

ಹಾಸ್ಯ ನೆನಪಿನ ಗುರುತು : ಬಾಲ್ಯದ ಅನುಭವ : ೨ನೇ ತರಗತಿಯಲ್ಲಿ ಓದುತ್ತಿದ್ದಾಗ ೧೦೬ ವರ್ಷ ಆಗಿರುವ ಅವರ ಊರಿನ ಗೌಡರ ತಂದೆ ತೀರಿಕೊಂಡರು. ಸುತ್ತ ಹಳ್ಳಿಗೆಲ್ಲಾ ಪ್ರಸಿದ್ಧರು. ಸಾವಿರಾರು ಜನ ಸೇರಿದ್ದರು. ಲೇಖಕರ ತಾಯಿಯು ನೋಡಲು ಹೊರಟಾಗ ಬಾಲಕನು ಹಿಂಬಾಲಿಸುತ್ತಾನೆ. ಅಲ್ಲಿ ತೀರಿಕೊಂಡ ಗೌಡರ ಶವದ ಮುಂದೆ ಕರೆಸಿಕೊಂಡ ಬಾಡಿಗೆ ಹೆಂಗಸರು ಅತ್ತು ಕರೆದು ಈ ಗೌಡರು ಹೇಗಿದ್ರು? ಹಾಗಿದ್ರು..ಹೀಗೆಲ್ಲಾ ಹಾಡಾಡಿ ಹೊಗಳಿ ಕೂಗಿ ಆ ಕೃತಕ ನಟನೆಗೆ ಬಾಲಕ ನಗುತ್ತಾನೆ. ಆಗ, ತಾಯಿ ಹೊಡೆಯಲು ಬಾಲಕ ಅಳತೊಡಗುತ್ತಾನೆ. ಆಗ ಒಂದು ಹೆಂಗಸು ಬಾಲಕನ ಕಡೆ ಬಂದು ‘ಏ ಕೂಸಾ ನೀನ್ಯಾಕೆ ಅಳ್ತೀಯಪ್ಪ, ಗೌಡರಂತು ಹೋಗಿಬಿಟ್ಟರು ಅಳಬೇಡ ಕಂದಾʼ ಎಂದು ಕೆನ್ನೆ ಸವರುತ್ತಾಳೆ…

ಶೈಕ್ಷಣಿಕ ಸೇವೆ ಮತ್ತು ನೆನಪಿನ ತಿರುವು : ಎಸ್.‌ ಎಸ್.‌ ಪಡಶೆಟ್ಟರು ಬೆಂಗಳೂರಿನ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯಲ್ಲಿ ೩೨ ವರ್ಷ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನಿನ್ನೆ ಬೆಂಗಳೂರಿನಲ್ಲಿದ್ದೆ, ಅವರ ಪುಸ್ತಕ ಓದುತ್ತಾ ಮಧ್ಯೆ ಅವರಿಗೆ ಫೋನ್ ಮಾಡಿ ಎಲ್ಲಿದ್ದಿರಾ ಸರ್? ಎಂದೆ. ಗ್ರಂಥಾಲಯದಲ್ಲಿ ಇರುವುದಾಗಿ ಪಿಸುಧ್ವನಿಯಲ್ಲಿ ಹೇಳಿದರು. ಸೈಲೆಂಟ್ ಆಗಿ, ಆನಂತರ ಅವರೇ ಫೋನ್ ಮಾಡಿದರು. ಈಗೆಲ್ಲೂ ಹಾಸ್ಯ ಕಾರ್ಯಕ್ರಮ ನೀಡುತ್ತಿಲ್ಲವೇ?  ಎಂದು ಕೇಳಿದೆ. ನನಗೆ ಈಗ ವಯಸ್ಸು ೮೦ ಎಂದರು. ನಾನು ಈ ಹಿಂದೆ ಹಾಸನದಲ್ಲಿ ಶಾರದ ಕಲಾಸಂಘದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿರೂಪಕನಾಗಿ ಇವರ ಹಾಸ್ಯ ಭಾಷಣಕ್ಕೆ ಅವಕಾಶ ಒದಗಿಸಿದ್ದೆ. ಜನರಿಗೆ ಶ್ರೀ ಕೃಷ್ಣ ಸಂಧಾನ ನಾಟಕ ನೋಡುವ ತರಾತುರಿ. ಹಾಗಾಗಿ ಇವರಿಗೆ ಹೆಚ್ಚು ಸಮಯಾವಕಾಶ ಸಿಗಲಿಲ್ಲ. ಪಾಪ, ಅಷ್ಟು ದೂರ (ಬೆಂಗಳೂರು) ಉತ್ಸಾಹದಿಂದ ಬಂದವರಿಗೆ ನಿರುತ್ಸಾಹ ಮಾಡಿಬಿಟ್ಟೆನಲ್ಲ ಎಂದು ಪೇಚಾಡಿಕೊಂಡೆ. ಸರ್, ನಿಮ್ಮ ಹಾಸ್ಯ ಕಾರ್ಯಕ್ರಮ ಬೇರೆಯೇ ಏರ‍್ಪಡಿಸಬೇಕು. ಹಾಡು, ಡ್ಯಾನ್ಸ್, ನಾಟಕ ನಡುವೆ ನಿಮ್ಮ ಹಾಸ್ಯ ಪ್ರೇಕ್ಷಕರಿಗೆ ತಲುಪಲಿಲ್ಲ ಎಂದೆ. ಛೇ ಛೇ ಹಾಗೆಂದುಕೊಳ್ಳಬೇಡಿ ಗೊರೂರು ಅನಂತರಾಜು. ನನಗೆ ಇಂತಹ ಭವ್ಯ ವೇದಿಕೆ ಒದಗಿಸಿಕೊಟ್ಟರಲ್ಲಾ ಅದೇ ದೊಡ್ಡದು ಎಂದರು. ಅದು ಅವರ ದೊಡ್ಡ ಗುಣ. ಅವರು ಅಂದು ಕೊಟ್ಟ ಪುಸ್ತಕ ಇಂದು ಓದಿದೆ. ಇದರಲ್ಲಿನ ಮೊದಲ ಲೇಖನ ನಮ್ಮೂರಿನ ಎರಡು ನಾಟಕಗಳು.
ನಮ್ಮೂರಿನಲ್ಲಿ ರೈತರು ಬಿಡುವಾಗಿರುವ ಸಮಯ ಬೇಸಿಗೆಯ ಕಾಲದಲ್ಲಿ ಬಹಳ ಉತ್ಸಾಹದಿಂದ ನಾಟಕ ಮಾಡಿ ರೈತ ಬಾಂಧವರು ಸಾಕಷ್ಟು ಸಂತೋಷಪಟ್ಟಿದ್ದಾರೆ.

ನಾಟಕ ಅನುಭವ: ದ್ರೌಪದಿ ವಸ್ತ್ರಾಭರಣ ಪ್ರಸಂಗ: ನಮ್ಮೂರಿನ ಗಿರಣಿ ಕಾಶೀರಾಮ ಸುಂದರಾಂಗ. ದ್ರೌಪದಿ ಪಾತ್ರಕ್ಕೆ ಆತನು ಒಪ್ಪಿ ಹೋಗಿದ್ದನು. ಒಂದು ತಿಂಗಳು ರಂಗತಾಲೀಮು ನಡೆಯುತ್ತದೆ. ನಾಟಕಕಾರ ನಿಂಗಣ್ಣ ದುಶ್ಯಾಸನ ಪಾತ್ರ ವಹಿಸಿದ್ದ, “ಪರಮಾನಂದೇಶ್ವರ ಯುವಕ ನಾಟಕ ಮಂಡಳಿ” ಎಂದು ಹೆಸರನ್ನಿಟ್ಟು ಸುತ್ತಲು ಹಳ್ಳಿಗಳಿಗೆಲ್ಲಾ ಪ್ರಚಾರ ಮಾಡಲಾಯಿತು. ನಾಟಕ ರಾತ್ರಿ ೧೦.೩೦ಕ್ಕೆ ಪ್ರಾರಂಭವಾಯಿತು. ಊರ ಹೊರಗೆ ಹನುಮದೇವರ ದೇವಸ್ಥಾನ ಮುಂಭಾಗ ನಾಟಕದ ಸ್ಟೇಜ್ ಮೇಲೆ ಶ್ರೀಕೃಷ್ಣ ಕುಳಿತು ಅಲ್ಲಿಂದಲೇ ಸೀರೆ ಬಿಡುವ ವ್ಯವಸ್ಥೆ ಮಾಡಲಾಗಿತ್ತು. ಕಾಶಿರಾಮ ತೆಳ್ಳನೆಯ ಏಳು ಸೀರೆಗಳನ್ನು ಉಟ್ಟುಕೊಂಡಿದ್ದ. ಪಾತ್ರದಾರಿಗಳ ನಟನೆ ನೋಡಿ ಪ್ರೇಕ್ಷಕರು ಮೆಚ್ಚುಗೆ ಸೂಚಿಸಿ ಒನ್ಸ್ ಮೋರ್ ಬದಲು ಮನಸ್ ಮೋರ್ ಎನ್ನುತ್ತಾರೆ. ಈಗ ದ್ರೌಪದಿ ವಸ್ತ್ರಾಭರಣ ಪ್ರಸಂಗ. ದುಃಖಪ್ರಾಪ್ತಳಾದ ದ್ರೌಪದಿಯನ್ನು ತುಂಬಿದ ಸಭೆಯಲ್ಲಿ ದುಶ್ಯಾಸನ ನಾಟಕಕಾರ ನಿಂಗಣ್ಣ ನಿಧಾನವಾಗಿ ಸೀರೆ ಸೆಳೆಯುವುದನ್ನು ಬಿಟ್ಟು ತುಂಬಾ ಜೋರಾಗಿ ಸೆಳೆಯುಲು ಪ್ರಾರಂಭಿಸಿದ. ಆಗ ಕಾಶಿರಾಮ ‘ಏ ನಿಂಗಣ್ಣ ನಿಧಾನವಾಗಿ ನನ್ನ ಸೀರೆ ಸೆಳೆ ?  ಎನ್ನುತ್ತಾನೆ. ಅವನು ಸಣ್ಣ ಧ್ವನಿಯಲ್ಲಿ ಹೇಳಿದ್ದು, ನಿಂಗಣ್ಣನಿಗೆ ಕೇಳಿಸಲಿಲ್ಲ. ಅದು ಯಾವ ಸ್ಫಿರಿಟ್ ಬಂದಿತ್ತೊ ನಿಂಗಣ್ಣ ಆರು ಸೀರೆ ಸೆಳೆದ. ಕೊನೆಯ ಸೀರೆ ಉಳಿದುಕೊಂಡಿದೆ. ಜೋರಾಗಿ ಎಳೆಯುತ್ತಿದ್ದಾನೆ. ಕಾಶಿರಾಮ ಸೀರೆಯ ಕೊನೆಯ ತುದಿ ಬಿಗಿಯಾಗಿ ಹಿಡಿದುಕೊಂಡು ಮೇಲಕ್ಕೆ ನೋಡಿ ಅಣ್ಣ ಕೃಷ್ಣ ನನ್ನ ಮಾನ ಕಾಪಾಡು.. ಆದರೆ ಅಷ್ಟರಲ್ಲಿ ನಿಂಗಣ್ಣ ಪೂರ್ತಿ ಸೀರೆ ಸೆಳೆದು ದ್ರೌಪದಿ ಅಂಡರ್ ವೇರ್ ಬನಿಯನ್ ಮೇಲೆ ನಿಂತ.. ಸದ್ಯ ಪ್ರೇಕ್ಷಕರು ಒನ್ಸ್ ಮೋರ್ ಎನ್ನಲಿಲ್ಲ ಅಷ್ಟೇ.

ಶಿಕ್ಷಕನ ವೃತ್ತಿ ಜೀವನ ಮತ್ತು ಕನಸಿನ ವ್ಯಾಕುಲತೆ: ಕನ್ನಡ ಅಧ್ಯಾಪಕರಾಗಿದ್ದ ಲೇಖಕರು ಹತ್ತನೇ ತರಗತಿ ಮಕ್ಕಳಿಗೆ ರನ್ನನ ಗದಾಯುದ್ದ ಪಾಠ ಮಾಡುತ್ತಿದ್ದರು. ವೈಶಂಪಾಯನ ಸನ್ನಿವೇಶದಲ್ಲಿ, ಭೀಮ ಅಲ್ಲಿಗೆ ಬಂದು ಅವಿತು ಕುಳಿತುಕೊಂಡ ದುರ್ಯೋಧನನ್ನು ಸರೋವರದಿಂದ ಹೊರಗೆ ಬರಲು ‘ಈ ಭೂತು ಎನ್ನ ಸರಂಗೇಳ್ದೊಲ್ಲದೆ ಪೊರ ಮಡುವನಲ್ಲಂ.. ಎಂದು ಗಡುಸಾಗಿ ಹೇಳುವುದನ್ನು ಹತ್ತಾರು ಸಲ ಓದಿ ಮನನ ಮಾಡಿಕೊಂಡು ರಾತ್ರಿನಿದ್ರೆಯಲ್ಲಿ  ಪುನರುಚ್ಚರಿಸಿ ಪಕ್ಕದಲ್ಲಿ ಮಲಗಿದ್ದ ಹೆಂಡತಿ ಬೆನ್ನಿಗೆ ಗುದ್ದುತ್ತಾರೆ. ‘ಅಯ್ಯೋಯ್ಯಪ್ಪೊ..ಎಂದು ಹೆಂಡತಿ ಚೀರಿ ನಿದ್ರೆಯಿಂದ ಎಚ್ಚರವಾಗಿ ಸಾರಿ ಮಿಸ್..ಎನ್ನುತ್ತಾರೆ.

ಇನ್ನೊಂದು ಸಲ ರಾಘವಾಂಕನ ಹರಿಶ್ಚಂದ್ರ ಕಾವ್ಯ ಪಾಠ ಮಾಡಬೇಕಾಗಿತ್ತು. ಅದು ಚಂದ್ರಮತಿಯ ಪ್ರಲಾಪ. ಲೋಹಿತಾಶ್ವ ಕಾಡಿನಲ್ಲಿ ಹಾವು ಕಚ್ಚಿ ಸಾವಿಗೀಡಾದ ಸನ್ನಿವೇಶ. ಚಂದ್ರಮತಿ ಮಗುವಿನ ಬಳಿಯಲ್ಲಿ ಬಂದು ‘ಏವನೇವಲೆ ಮಗನೆ ಸಾವೇಕಾಯಿತ್ತಲೆ ಚೆನ್ನಿಗನೆ..ಎಂದು ರೋಧಿಸಿ ಅಳುವ ಪ್ರಸಂಗ. ಮಕ್ಕಳಿಗೆ ನೈಜ ಪಾಠ ಮಾಡಲು ರಾತ್ರಿಯೇ ತಾಲೀಮು ಮಾಡಿ ಮಲಗಿ ರಾತ್ರಿ ನಿದ್ರೆಯಲ್ಲಿ ರೋಧಿಸಿ ಅಳಲು ಗಾಬರಿಯಿಂದ ಎಚ್ಚರಗೊಂಡ ಮಡದಿ ಇಂಥ ಸರಿರಾತ್ರಿ ಏಕೆ ಅಳುತ್ತಿರುವಿರಿ ಡಿಯರ್..ಎನ್ನಲು ‘ಸಾರಿ ಚಂದ್ರಮ.. ಎಂದು ಕನಸಿನಲ್ಲಿ ಕನವರಿಸುತ್ತಾರೆ.
ಮತ್ತೊಮ್ಮೆ ಹಾಸ್ಯ ಸಾಹಿತಿ ಬೀಚಿಯವರ ತಿಮ್ಮನ ತಲೆ ಪುಸ್ತಕ ಓದಿ ತಲೆಗೆ ತುಂಬಿಕೊಳ್ಳುತ್ತಾರೆ. ರಾತ್ರಿ ಮಲಗಿ ಪುಸ್ತಕದ ನಗೆ ಪ್ರಸಂಗ ನೆನೆದು ಜೋರಾಗಿ ನಗುತ್ತಾರೆ. ನಗುವಿನ ಧ್ವನಿಗೆ ಎಚ್ಚರವಾಗಿ ಹೆಂಡತಿ ‘ಏನ್ರೀ ನಿಮಗೆ ಬುದ್ಧಿಗಿದ್ಧಿ ಇದೆಯೇ. ಸುಮ್ಮ-ಸುಮ್ಮನೆ ನನಗೆ ರಾತ್ರಿ ಹೊಡೆಯುತ್ತೀರಿ, ಅಳುತ್ತೀರಿ, ನಡುರಾತ್ರಿ ನಗುತ್ತೀರಿ ನಿಮಗೆ ಹುಚ್ಚು ಹಿಡಿದಿದೆಯೇ ಎಂದಾಗ ಪಡತರು ಬೆಪ್ಪುಕ್ಕಡಿ!ಶೆಟ್ಟ

ಭಾನುವಾರ ಸಂಜೆ ಅಕ್ಕಪಕ್ಕದ ಮನೆಯ ಹೆಂಗಸರು ಶೆಟ್ಟರ ಮನೆಯಲ್ಲಿ ಒಟ್ಟಿಗೆ ಸೇರಿ ತಮ್ಮ ಗಂಡಂದಿರ ಬಗೆಗೆ ಹಾಸ್ಯವಾಗಿ ಮಾತನಾಡುತ್ತಿರಲು ಹೆಂಡತಿ ಮಾತು ರೂಂನಲ್ಲಿ ಮಲಗಿದ್ದ ಶೆಟ್ಟರ ಕಿವಿಗೆ ಬಿದ್ದು, ತಲೆ ನೆಟ್ಟಗಾಗುತ್ತದೆ. ‘ನಮ್ಮನೆ ಯಜಮಾನರು ರಾತ್ರಿ ಹೊತ್ತು ಸುಮ್ಮಸುಮ್ಮನೆ ನನ್ನ ಬೆನ್ನಿಗೆ ಗುದ್ದುತ್ತಾರೆ, ಅಳುತ್ತಾರೆ, ಜೋರಾಗಿ ನಗುತ್ತಾರೆ ಹುಚ್ಚರಂತೆ ಆಡುತ್ತಾರೆ.. ಎನ್ನಲು ‘ಹಾಗಾದರೆ ನಿಮ್ಮ ಯಜಮಾನರಿಗೆ ಹುಚ್ಚು ಹಿಡಿದಿರುವುದು ಖರೆ ಎಂದು ಸಭೆ ತೀರ್ಮಾನಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ತೋರಿಸಲು ಸಲಹೆ ನೀಡುತ್ತಾರೆ.

ಪತ್ನಿಯ ನಗು ಮತ್ತು ನಿಂಹಾನ್ಸ್‌ ಹಾಸ್ಯ ಕಥೆ: ಹೆಂಡತಿ ಮತ್ತು ಮಗನು ಗುಟ್ಟಾಗಿ ಹೇಳಿ ನೆಟ್ಟಗೆ ನಿಮ್ಹಾನ್ಸ್ಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಲೇಖಕರಿಗೆ ಪರಿಚಯವಿರುವ ಡಾ.ಸಿ.ಚಂದ್ರಶೇಖರ್ ಇರುತ್ತಾರೆ. ಲೇಖಕರು ಆಗಲೇ ಹಾಸ್ಯದರ್ಶನ ಮಾಸಪತ್ರಿಕೆ ತರುತ್ತಿದ್ದು, ಪತ್ರಿಕೆಗೆ ಡಾಕ್ಟರ್ ಲೇಖನ ಬರೆದು ಪರಿಚಿತರಾಗಿದ್ದಾರೆ. ‘ಪಡಶೆಟ್ಟಿರೇ ನಿಮ್ಮ ಹಾಸ್ಯ ದರ್ಶನ ಪತ್ರಿಕೆಯಲ್ಲಿ ಬರುವ ಲೇಖನ ಚೆನ್ನಾಗಿವೆ. ನಿಮ್ಮ ಬುದ್ದಿಪೂರ್ವಕ ಸಂಪಾದಕೀಯ ತುಂಬಾ ಸ್ವಾರಸ್ಯಕರ.. ಎಂದು ಎಲ್ಲರಿಗೂ ಚಹ ತರಿಸಿ ಕಳಿಸುತ್ತಾರೆ.

ಪತ್ರಿಕೆಯ ಸ್ಥಗಿತ: ಹಾಸ್ಯದರ್ಶನ ನಿಂತ ಹಾಸ್ಯ: ಪಡಶೆಟ್ಟರು ನಡೆಸುತ್ತಿದ್ದ ಹಾಸ್ಯ ದರ್ಶನ ಮಾಸಪತ್ರಿಕೆ ೧೫ ವರ್ಷಕ್ಕೆ ನಿಂತುಹೋಯಿತು. ಹಾಸ್ಯದರ್ಶನದಲ್ಲಿ ನನ್ನ ಹಾಸ್ಯ ಲೇಖನ ಪ್ರಕಟಿಸಿ ಅದಕ್ಕೊಂದು ಕಾಮಿಡಿ ಕಾರ್ಟೂನ್ ಬರೆಸಿ ಚೆನ್ನಾಗಿ ಪತ್ರಿಕೆ ತರುತ್ತಿದ್ದರು. ಲೇಖಕರು ಕನ್ನಡ ಪುಸ್ತಕ ಮಾರಾಟ ಮಾಡುವ ಜೊತೆಗೆ ಹಾಸ್ಯ ದರ್ಶನ ಮಾರುತ್ತಾ ಬರೆದ ಈ ಪ್ರಸಂಗ ನಿಂತು ಹೋದ ಪತ್ರಿಕೆಯ ಕಾರಣ ತಮಾಷೆಯಾದರೂ ವಾಸ್ತವತೆ ಚಿತ್ರಿಸಿದೆ.

ವಿಜಯಪುರದಲ್ಲಿ ಹಾಸ್ಯ ಲೆಕ್ಕಾಚಾರ: ವಿಜಾಪುರದೊಬ್ಬರು ಟ್ರಾನ್ಸ್ ಫರ್‌ ರಾಗಿ ತೋಟಗಾರಿಕೆ ಇಲಾಖೆಗೆ ಬಂದಿದ್ದರು. ಕರಿಕೋಟು, ಕಚ್ಚೆಪಂಚೆ, ಕರಿಟೋಪಿ ಹಾಕಿಕೊಂಡು ಇಲಾಖೆಯ ಫೈಲ್ಸ್ಗಳನ್ನು ಗಮನಿಸುತ್ತಿದ್ದರು. ನಾನು ಹೋಗಿ ಅವರಿಗೆ ನಮಸ್ಕರಿಸಿದೆ. ಅವರದು ಹೆಣ್ಣು ಧ್ವನಿ. ನನ್ನ ಹೆಗಲಲಿದ್ದ ಪುಸ್ತಕ ಬ್ಯಾಗ್ ನೋಡಿ ‘ಏನಿದು ಗಂಟು.. ಎಂದರು. ‘ಸರ್ ಇದು ಪುಸ್ತಕಗಳ ಗಂಟು.. ಒಂದೊದಾಗಿ ಪುಸ್ತಕಗಳನ್ನು ಅವರೆದುರಿಗಿಟ್ಟೆ. ‘ನಿಮ್ಮದೂ ಬರೀ ಪುಸ್ತಕ ಮಾರಾಟ ಮಾಡುವುದೇ ಕಸುಬೆ. ಮತ್ತೇನಾದರೂ ಉದ್ಯೋಗ ಮಾಡ್ತೀರಾ.. ‘ಸರ್ ನಾನೊಂದು ಶಾಲೆಯಲ್ಲಿ ಕನ್ನಡ ಅಧ್ಯಾಪಕ. ಸುಮ್ಮನೆ ಬಿಡುವಿನ ವೇಳೆ ಪುಸ್ತಕ ಮಾರಾಟ ಮಾಡುತ್ತೇನೆ. ‘ವ್ಹಾ..ಶಹಬ್ಬಾಸ್.. ಅಲ್ರೀ ಮಾಸ್ತರ, ಸಾಲಿ ಮಾಸ್ತಾರಕಿ ಮಾಡ್ತೀರಾ. ಪುಸ್ತಕನು ಮರ‍್ತೀರಾ ವ್ಹಾ ತುಂಬಾ ಸಂತೋಷ..ಎಂದರು. ಅವರಿಗೆ ನಾನು ಹಾಸ್ಯ ದರ್ಶನ ಪತ್ರಿಕೆ ತೋರಿಸಿದೆ.

ಅಲ್ರೀ ಮಾಸ್ತರ, ಮಾಸ್ತರಿಕೀನು ಮಾಡ್ತೀರಾ ಪುಸ್ತಕನೂ ಮಾರ್ತಿರಾ, ಪತ್ರಿಕೇನು ತರ್ತೀರಾ ಶಹಬ್ಬಾಸ್! ನಿಮಗೆ ಮಕ್ಕಳೆಷ್ಟು..? ನನಗೆ ೪ ಜನ ಮಕ್ಕಳೆಂದೆ.
‘ಹೆಣ್ಣೇಸು ಗಂಡೇಸು..? ಮೂರು ಹೆಣ್ಣು, ಒಬ್ಬನೇ ಗಂಡು ಎಂದೆ.
‘ನೀವು ಪುಸ್ತಕ ಮರ‍್ತೀರಾ. ೩ ಜನ ಹೆಣ್ಣು ಮಕ್ಕಳಿದ್ದಾರೆಂದರೆ ವರದಕ್ಷಿಣೆ ಕೊಡಲಿಕ್ಕೆ ರೊಕ್ಕ ಬೇಕಲ್ರೀ.. ಎಂದು ನಾನು ಕೊಟ್ಟ ಹಾಸ್ಯದರ್ಶನ ಓದಲಿಕ್ಕೆ ಪ್ರಾರಂಭಿಸಿದರು. ೫-೧೦ ನಿಮಿಷ ಮೌನ. ‘ಅಲ್ರೀ ಮಾಸ್ತಾರ ಹಾಸ್ಯದರ್ಶನ ಅಂತೀರಿ ಒಂದು ನಗುವೇ ಬರಲಿಲ್ಲವಲ್ಲರೀ. ಇಂಥವೆಲ್ಲ ನನಗಿಷ್ಟವಿಲ್ರೀ..
ಒಂದಾದರೂ ಪುಸ್ತಕ ತೆಗೆದುಕೊಳ್ರೀ ಎಂದೆ.
‘ಏನ್ರೀ ಮಾಸ್ತಾರ ಒಂದು ನಗುವೇ ಬರಲಿಲ್ಲರ‍್ರೀ. ನಮ್ಮ ಮನ್ಯಾಗ ಒಂದು ಕ್ವಾಡಗ ಅದ. ನಾನು ಯಾವಾಗ ತಾಳಿ ಕಟ್ಟಿದಾಗಿನಿಂದ ಒಂದು ದಿವಸ ನಕ್ಕಿಲ್ರೀ. ನೀವು ಅವಳಿಗೆ ನಗುವ ಪುಸ್ತಕ ತಗೊಳ್ರೀ ನಾನು ರೊಕ್ಕ ಕೊಟ್ಟು ತೆಗೆದುಕೊಳ್ಳುತ್ತೇನೆ. ಮಾಸ್ತರ ಈ ಕನ್ನಡ ಪುಸ್ತಕ ಯಾರು ತಗೊಳ್ಳುತ್ತಾರೆ ಯಾರು ತೊಗಳಲ್ರೀ. ಜೋಳದ ರೊಟ್ಟಿ ತಗೊರ‍್ರೀ ದುಮ್ಮಾ ಹಾರಿ ಹೋಗ್ತಾವ್. ನಾನು ಬಿಜಾಪುರದಿಂದ ಬಂದು ನಾಲ್ಕು ತಿಂಗಳಾತು. ರೊಟ್ಟಿ ಮಾರೀನೆ ನೋಡಿಲ್ಲ. ಜೋಳದ ಸಜ್ಜಿರೊಟ್ಟಿ ತೆಗೆದುಕೊಂಡ್ರ‍, ನಿಮಗೆ ಒಳ್ಳೆಯ ವ್ಯಾಪಾರ ಆಗುತ್ತೆ. ಮಾಸ್ತಾರ ಒಂದು ವಿಷಯ ಹೇಳ್ತಿನಿ ಕೇಳ್ರೀ.. ಒಂದು ಹಾಸ್ಯ ದರ್ಶನ ಪ್ರತಿ ಕೊಂಡರೆ ಒಂದು ರೊಟ್ಟಿ ಫ್ರೀ ಎನ್ನಿರಿ, ಆಗ ನೋಡಿ ನಿಮ್ಮ ವ್ಯಾಪಾರ ದುಮ್ಮಾಹಾರಿ (ಸಿಕ್ಕಾಪಟ್ಟೆ) ನಿಮ್ಮೆಲ್ಲ ಪುಸ್ತಕ ಹೋಗುತ್ತವೆ… ಎಂದ ಆ ಮಹಾಶಯ ಕೊನೆಗೂ ಒಂದು ಪುಸ್ತಕ ತೆಗೆದುಕೊಳ್ಳುವುದಿಲ್ಲ. ಪಡಶೆಟ್ಟರು ತರುತ್ತಿದ್ದ ಹಾಸ್ಯದರ್ಶನದಲ್ಲಿ ವೈವಿಧ್ಯ ಹಾಸ್ಯ ಬರಹ ಇರುತ್ತಿದ್ದವು. ಅಂತೆಯೇ ಇಲ್ಲಿಯೂ ಇವೆ.

ಹಾಸ್ಯದರ್ಶನದ ವೈವಿಧ್ಯ:

ಗಿರಾಕಿ: ಸೆಲೂನಿನ ತುಂಬೆಲ್ಲ ಬರೀ ಪತ್ತೆದಾರಿ ಪುಸ್ತಕಗಳನ್ನಿಟ್ಟಿರುವಿರಲ್ಲ..ಏನಾದರೂ ಪತ್ರಿಕೆ ಇಡಬಾರದೇ?

ಮಾಲೀಕ: ಸ್ವಾಮಿ, ಈ ಪತ್ತೆದಾರಿ ಕಾದಂಬರಿ ಓದುತ್ತಿರುವಂತೆ ಗಿರಾಕಿಗಳಿಗೆ ರೋಮಾಂಚನವಾಗಿ ಅವರ ಕೂದಲು ಸೆಟೆದು ನಿಲ್ಲುತ್ತೆ. ಆಗ ಅದನ್ನು ಕತ್ತರಿಸಲು ನನಗೆ ಸುಲಭ.

ಶಿಕ್ಷಕ: ಸುರೇಶ, ಘಜನಿ ಮೊಹಮ್ಮದ್ ಭಾರತಕ್ಕೆ ಮೊದಲನೇ ಹೆಜ್ಜೆ ಇಟ್ಟ ಕೂಡಲೇ ಏನು ಮಾಡಿದ?
ಸುರೇಶ: ಎರಡನೇ ಹೆಜ್ಜೆ ಇಟ್ಟ.

ಆತ: ಯಾಕಿಷ್ಟು ನಗ್ತಿದಾನೆ ಆತ

ಈತ: ಅವನಿಗೆ ನಗಲಿಕ್ಕೆ ಇವತ್ತು ಕೊನೆ ದಿನ

ಆತ: ಅಂದ್ರೇ?

ಈತ: ನಾಳೆ ಆತನ ಮದುವೆ..!

 

 

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

ಸ್ವಚ್ಛ ಭಾರತ್ ಹಚ್ಚೆ ದಿನ್ – ಗೊರೂರು ಅನಂತರಾಜು, ಹಾಸನ.

ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ್ ತಮ್ಮ “ಹಚ್ಚೆ ದಿನ್” ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು, ಯಾವಾಗ ಕೊಟ್ಟರೆಂಬುದೇ ಮರೆತು ಹೋಗಿತ್ತು. ಮೊನ್ನೆ ಬೆಂಗಳೂರಿಗೆ ಹೊರಟಾಗ, ನನ್ನ ಪುಸ್ತಕ ರಾಶಿಯಲ್ಲಿ ಆ ಪುಸ್ತಕವು ಬಿದ್ದಿತ್ತು.

ಅನೇಕ ಪುಸ್ತಕಗಳನ್ನು ನನ್ನ ಮಡದಿ ಪೇಪರ್..ಪೇಪರ್.. ಎಂದು ಕೂಗಿ ಬರುವ ಮಂದಿಗೆ ಮಾರುತ್ತಿದ್ದಳು. ಅದರಿಂದ ಹಣ ತೆಗೆದು ಪಾತ್ರೆ ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನ ಖರೀದಿಸುತ್ತಿದ್ದಳು. ಅಲ್ಲಿ “ಹಚ್ಚೆ ದಿನ್‌” ಪುಸ್ತಕ ತೆಗೆದುಕೊಂಡು ಕೋಣನಕುಂಟೆ ಕ್ರಾಸ್ ತಲುಪಿದ ಆರು ಗಂಟೆ ಪಯಣದಲ್ಲಿ ಸಂಪೂರ್ಣ ಓದಿದೆ.

“ಹಚ್ಚೆ ದಿನ್”‌ ೩೨ ಹಾಸ್ಯ ಲೇಖನಗಳ ಸಂಕಲನ. ನಾವು ನೋಡುವ ನಿತ್ಯದ ದೃಶ್ಯ, ವಸ್ತುಗಳು ಲೇಖಕಿಯ ನಿರೂಪಣಾ ಕೌಶಲ್ಯದಿಂದ ನಾವೀನ್ಯತೆ ಪಡೆದಿವೆ. ಮನಸ್ಸಿಗೆ ಹೊಸ ಭಾವನೆ ತಂದಿವೆ.

ಮನುಷ್ಯನ ದೇಹಾರೋಗ್ಯದಲ್ಲಿ ನಾಲಿಗೆಯ ಪಾತ್ರ ತುಂಬಾ ಮುಖ್ಯ. ಅದನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅದು ಹೊಟ್ಟೆಗೆ ನಷ್ಟ ಮಾಡುತ್ತದೆ. ಉದಾಹರಣೆಗೆ : ‘ಬಾಣಲೆಯಿಂದ ಬುರಬುರನೆ ಊದಿದ ಪೂರಿಗಳು ಸಾಗುವಿನೊಂದಿಗೆ ಬೆರೆತು ನಾಲಿಗೆಯ ಮೂಲಕ ಹೊಟ್ಟೆಗೆ ಇಳಿದವು.ʼ

ಖಾಸಗಿ ಬಸ್ಸಿನ ಕಂಡಕ್ಟರ್ ಎಲ್ಲಾ ಜನರನ್ನು ಹತ್ತಿಸಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎನ್ನುತ್ತಾನೆ. ಹಾಗೆ, ಹೊಟ್ಟೆ ಪೂರಿಗಳನ್ನು ಅಕಾಮಡೇಟ್ ಮಾಡಿ ಕೊನೆಗೆ ಕೈಚೆಲ್ಲುತ್ತದೆ.

“ಎತ್ತಿಗೆ ಜ್ವರ, ಎಮ್ಮೆಗೆ ಬರೆ” ಎಂಬಂತೆ, ನಾಲಿಗೆಯ ತಪ್ಪಿಗೆ ಹೊಟ್ಟೆ ಶಿಕ್ಷೆ ಅನುಭವಿಸುತ್ತದೆ. ಲೇಖಕಿ ಎಲ್ಲಿಂದ ಎಲ್ಲಿಗೋ ಹೋಲಿಸಿ ಸೊಗಸಾಗಿ ನಿರೂಪಿಸುವುದೇ ಸೋಜಿಗ.

ಆಹಾರದ ಜೀರ್ಣ ಕ್ರಿಯೆ ಬಹಳ ಸಣ್ಣ ವಿಷಯವಲ್ಲ. ಉದರ ತಿಣುಕುತ್ತಿರುವಾಗ ಆಗಾಗ ಅಸೂಯೆ ಎಂಬ ಗ್ಯಾಸ್ ಪ್ರತ್ಯಕ್ಷವಾಗಿ ಹೊಟ್ಟೆಕಿಚ್ಚು ಉಂಟುಮಾಡುತ್ತದೆ. ಡಿವಿಜಿಯವರ ಕಗ್ಗದ ಸಾಲುಗಳ ಮೂಲಕ ಅದನ್ನು ವಿಶ್ಲೇಷಿಸಿದ್ದಾರೆ.

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್
ಹೊಟ್ಟೆ ತುಂಬಿದ ತೋಳ ಮಲಗೀತು: ನೀಂ ಪೆರರ
ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ

ಉದರವು ಮಸಾಲೆ ಮಿಶ್ರಿತ ಆಹಾರವನ್ನು ಎರಡು ವಿಭಾಗಗಳಲ್ಲಿ ಪ್ರಕ್ರಿಯೆಗೊಳಿಸುತ್ತವೆ. ಸೀನಿಯರ್ ಮತ್ತು ಜೂನಿಯರ್ ಕರುಳಿನಲ್ಲಿ ಅದರ ಶುದ್ಧ ಅಂಶ ಬೇರ್ಪಡಿಸುತ್ತವೆ.

ಆಹಾರದ ಸ್ಕ್ರಾಪ್‌ ಭಾಗವನ್ನು ನಗರಸಭೆಯ ವಿಲೇವಾರಿಗೆ ಹಸಿಕಸ, ಒಣಕಸವನ್ನು ಬೇರ್ಸಡಿಸಿದಂತೆ ಬೇರ್ಪಡಿಸಿ ದೇಹದೊಳಗಿನ ಆಯಾ ಇಲಾಖೆಗೆ ರವಾನಿಸಬೇಕು. ಈ ಪ್ರಕ್ರಿಯೆಯೇ ವಿಚಿತ್ರ. ವಿಷಯನ್ನು ಹಾಸ್ಯ ರೀತಿಯಲ್ಲಿ ನಿರೂಪಿಸುವಾಗ ನಗು ತಡೆಸಲಾಗದು. ಇದು ಲೇಖಕಿಯ ಶೈಲಿ ಹಾಗೂ ಶಕ್ತಿಯನ್ನು ಬಿಂಬಿಸುತ್ತದೆ.

ಎಂಬತ್ತರ ದಶಕದಲ್ಲಿ ಜಗತ್ತಿನ ಸುದ್ಧಿ ಪಡೆಯಲು ರೇಡಿಯೋ ಅಥವಾ ಪತ್ರಿಕೆಗಳಿಗೆ ನಂಬಿಕೆಯಿಟ್ಟಿದ್ದರು. ರೇಡಿಯೋದಲ್ಲಿ ಬರುತ್ತಿದ್ದ ನಿರ್ಮಾ..ವಾಷಿಂಗ್‌ ಪೌಡರ್ ನಿರ್ಮಾ. ಲೈಫ್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಆರೋಗ್ಯ.. ಎಂಬ ಈ ಗೀತೆಗಳು ಬೆಳಗಿನ ವಾರ್ತೆಗಳ ನಂತರ ಲಯಬದ್ಧವಾಗಿ ತೇಲಿಬರುತ್ತಿದ್ದವು.

“ಹಚ್ಚೇವು ನೊರೆ ನೊರೆಯ ಸೋಪು..” ಎಂಬ ಶೀರ್ಷಿಕೆಯ ಲೇಖನ ಹಾಸ್ಯದಲ್ಲಿ ಹಾಸ್ಯ, ಭಾಷೆಯಲ್ಲಿ ಕ್ರಿಯಾಶೀಲತೆ ಹಾಗೂ ಪ್ರಬಂಧ ಹೆಚ್ಚೇವು ಕನ್ನಡ ದೀಪ ಗೀತೆಯ ಸಾಲು ಹಿಡಿದು ಕನ್ನಡಾಂಗ್ಲ ಮಿಶ್ರಣದಿ ಪೂರಿಗೆ ಒಗ್ಗರಣೆ ಹಾಕಿ ಚುರುಮುರಿ ಮಾಡಿದಂತಿದೆ.

ಮುಂಜಾನೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನಿನ್ನಿಂದಲೇ….ನಿನ್ನಿಂದಲೇ….ಕನಸೊಂದು ಶುರುವಾಗಿದೆ… ಎಂಬ ಸುಂದರ ಹಿಮ್ಮೇಳದೊಂದಿಗೆ, ಸ್ವಚ್ಛ್ ಭಾರತ್ ಕನಸನ್ನು ಹೊತ್ತ ನಗರಸಭೆಯ ಗಾರ್ಬೇಜ್ ವ್ಯಾನುಗಳು ಮನೆ ಮನೆಗೆ ಬಂದು ನಿಲ್ಲತೊಡಗಿದವು.

ತಡವಾಗಿ ಎದ್ದವರು ಗಾಡಿ ಮುಂದೆ ಕಸ ಹಾಕಲು ಬೇಸರ ಪಡುತ್ತಾರೆ. ನಂತರ ಖಾಲಿ ಸೈಟ್‌ ನಲ್ಲಿ ಕಸ ಬಿಸಾಡುವ ಅಸಂಸ್ಕೃತತೆಗೆ ಇಳಿಯುತ್ತಾರೆ. ಹೀಗೆ ಜನರ ಅಶಿಸ್ತು ಹೆಚ್ಚಿದಂತೆ ಕಸವೊಂದು ತೀರ.. ವ್ಯಾನ್ ಒಂದು ತೀರ.. ಸ್ವಚ್ಛ್ ಭಾರತ್ ಕನಸು ದೂರಾ.. ಮೇಡಂ ಮನ್ ಕಿ ಬಾತ್ ಮನ ಮುಟ್ಟಿ ಕಸ ನಮ್ಮ ತಲೆಯಲ್ಲೇ ಉಳಿಯುವುದು.

ಪಾರ್ಕ್, ಫುಟ್‌ಪಾತ್ ಎಲ್ಲೆಡೆ ತ್ಯಾಜ್ಯ ತುಂಬಿ ವ್ಯಾಜ್ಯಗಳಿಗೆ ಮುನ್ನುಡಿ ಬರೆದವು. ಇಲ್ಲಿ ಕಸ ಹಾಕಬಾರದು ಬೋರ್ಡುಗಳು, ಇಲ್ಲಿ ಕಸ ಹಾಕುವವರು ಹಂದಿಗಳಿಗೆ ಸಮ ಎಂದು ತಿದ್ದುಪಡಿಯಾಗಿ ಹಂದಿಗಳು ನಾಚಿಕೊಂಡವು ಅಷ್ಟೇ ಜನ ನಾಚಿಕೊಳ್ಳಲಿಲ್ಲ. ಕಸ ವಿಲೇವಾರಿಗೆ ಸರ್ಕಾರ ಮುನಿಸಿಪಾಲಿಟಿಗಳು ಎಷ್ಟೇ ಹೆಣಗಾಡಿದರೂ ಜನರಿಗೆ ಅದರ ಪರಿವೇ ಇಲ್ಲ.

ಬಾಲ್ಯದ ದಿನಗಳ ನೆನಪಿನಲ್ಲಿ ಲೇಖಕಿ ಮನೆ ಮುಂಭಾಗದ ಚರಂಡಿ ಇರಲಿಲ್ಲ. ನಮ್ಮ ಮತ್ತು ಪಕ್ಕದ ದೊಡ್ಡಪ್ಪರ ಮನೆಗಳ ಬಚ್ಚಲು ನೀರು ಒಟ್ಟಾಗಿ ಹೊರ ಹೋಗಲು ಮಣ್ಣು ರಸ್ತೆಯ ಮಧ್ಯೆ ಪೈಪ್‌ನ್ನು ಹೂತು ಆಚೆಯ ದಡಕ್ಕೆ ದಾಟಿಸಿದ್ದೆವು. ನಮ್ಮ ಎದುರು ರಸ್ತೆ ಆಚೆ ಕಡೆ ಯಾರೂ ಮನೆ ಕಟ್ಟಿರಲಿಲ್ಲ. ಆ ಕಡೆಯ ಚರಂಡಿ ತುಂಬಿ ತುಳುಕಿ ತಳಕ್ಕೆ ಹರಿದು ಕಪ್ಪು ಕೊಳಚೆ ಗುಂಡಿ ಅದರಲ್ಲಿ ಹಂದಿ ಹೊರಳಾಡುತ್ತಿದ್ದವು.

ಅತ್ತ ಆ ಕಡೆಯ ಚರಂಡಿ ಹೂಳನ್ನು ಗ್ರಾಮ ಪಂಚಾಯ್ತಿ ತೆಗೆಸದೆ ಇತ್ತ ನಮ್ಮಮ್ಮನಿಗೂ, ದೊಡ್ಡಮ್ಮನಿಗೂ ದಿನಾ ಇದೇ ರಾಜಿ ಪಂಚಾಯ್ತಿ. ಚರಂಡಿ ಪೈಪ್ ಬ್ಲಾಕ್ ಆಗಿ ನೀರು ನಿಂತು ದೊಡ್ಡಮ್ಮ ‘ಹೇ ಬಸವಣ್ಣ, ಚರಂಡಿ ಕ್ಲೀನ್ ಮಾಡಿಸು.. ಎಂದು ಪದೇ ಪದೇ ಹೇಳುತ್ತಿದ್ದರು. ಇದು ಕುಟುಂಬ ಕದನವಾಗಿ ಸಂಬಂಧ ಹಳಸಿದ ಅನ್ನವಾಗಿತ್ತು.

ಅಪ್ಪನೇ ಪೈಪ್‌ ಕ್ಲೀನ್ ಮಾಡಿ, ಗೊಡ್ಡೆ ಹೊತ್ತರೆಂದು ಕೊನೆಗೆ ಸ್ವತಃ ಗುದ್ದಲಿ ಹಿಡಿದು ಸ್ವಚ್ಛತೆ ನಡೆಸಿದ ವೃತ್ತಾಂತ ಮನ ಮುಟ್ಟುತ್ತದೆ. ಸುಮಾ ಮೇಡಂ ರ ಕಸದ ಕಥೆ ಓದಿ ಹಳೆಯ ನಮ್ಮೂರ ಚರಂಡಿ ಕಥೆ ನೆನಪಾಗಿ ಅರೇ.! ಎಷ್ಟು ರಸವತ್ತಾಗಿ ಕಸದ ಕಥೆ ನಿರೂಪಿಸಿದ್ದಾರೆ ಎನಿಸಿತು.

ಕೃತಿಯ ಶೀರ್ಷಿಕೆ “ಹಚ್ಚೆ ದಿನ್” ಹೆಣ್ಣು ಮಕ್ಕಳ ಫ್ಯಾಶನ್ ಕ್ಷೇತ್ರಕ್ಕೆ ಹಳೆಯ ಹಚ್ಚೆಯನ್ನು ಟ್ಯಾಟೂ ಆಗಿ ಬಾಡಿ ಆರ್ಟ್ ಲಗ್ಗೆ ಇಟ್ಟದೆ. ಲೇಖಕಿಯು ಟ್ಯಾಟೂ ವನ್ನ ಶಿಲೆಯ ಮೇಲಿನ ಶಾಸನಗಳಂತೆ, ತೊಗಲ ಮೇಲಿನ ಹಚ್ಚೆ ಅಚ್ಚಾ ಹೈ ಎಂದು ಆಧುನಿಕತೆಯೆಂದು ಪರಿಚಯಿಸುತ್ತದೆ.

ಪುಸ್ತಕದ ಮುನ್ನುಡಿಯಲ್ಲಿ ಎನ್.ರಾಮನಾಥ್ ಅವರು ಸುಂದರವಾಗಿ ಲೇಖಕಿಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಅದು ಓದುಗರಿಗೆ ಮಾರ್ಗದರ್ಶಕವಾಗುತ್ತದೆ.

ಗುಡಿಯ ದೇವರುಗಳು ಪೂರ್ವಾಭಿಮುಖವಾಗಿ ನಿಂತಿದ್ದರೆ ನವಗ್ರಹಗಳು ಕಣ್ಣಿನಾಸ್ಪತ್ರೆಯ ರೋಗಿಗಳಂತೆ ಬೇರೆ ಬೇರೆ ದಿಕ್ಕಿಗೆ ತಿರುಗಿರುವ ಹೋಲಿಕೆ ಉಡಾಫೆ ನಗಿಸುತ್ತವೆ.

ಹಾಸ್ಯ, ವಿಡಂಬನೆ, ಕಟಕಿ, ವ್ಯಂಗ್ಯ, ಲೇವಡಿ ತಿಳಿಹಾಸ್ಯಗಳ ಹಿತಮಿಶ್ರಣದಿಂದ ೩೨ ಲೇಖನಗಳು ಓದುಗರನ್ನು ನಗಿಸಲು ನೆರವಾಗುತ್ತವೆ. ಇದು ಉತ್ತಮ ಹಾಸ್ಯ ಸಾಹಿತ್ಯದ ಸಂಕಲನ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.