ಸ್ವಚ್ಛ ಭಾರತ್ ಹಚ್ಚೆ ದಿನ್ – ಗೊರೂರು ಅನಂತರಾಜು, ಹಾಸನ.

ಸ್ವಚ್ಛ ಭಾರತ್ ಹಚ್ಚೆ ದಿನ್ – ಗೊರೂರು ಅನಂತರಾಜು, ಹಾಸನ.

ಹಾಸನದ ಹಾಸ್ಯ ಲೇಖಕಿ ಸುಮಾ ರಮೇಶ್ ತಮ್ಮ “ಹಚ್ಚೆ ದಿನ್” ಪುಸ್ತಕ ಕೊಟ್ಟು ತುಂಬಾ ದಿನಗಳೇ ಆಗಿದ್ದವು, ಯಾವಾಗ ಕೊಟ್ಟರೆಂಬುದೇ ಮರೆತು ಹೋಗಿತ್ತು. ಮೊನ್ನೆ ಬೆಂಗಳೂರಿಗೆ ಹೊರಟಾಗ, ನನ್ನ ಪುಸ್ತಕ ರಾಶಿಯಲ್ಲಿ ಆ ಪುಸ್ತಕವು ಬಿದ್ದಿತ್ತು.

ಅನೇಕ ಪುಸ್ತಕಗಳನ್ನು ನನ್ನ ಮಡದಿ ಪೇಪರ್..ಪೇಪರ್.. ಎಂದು ಕೂಗಿ ಬರುವ ಮಂದಿಗೆ ಮಾರುತ್ತಿದ್ದಳು. ಅದರಿಂದ ಹಣ ತೆಗೆದು ಪಾತ್ರೆ ಮತ್ತು ಪ್ಲಾಸ್ಟಿಕ್ ಸಾಮಾನುಗಳನ್ನ ಖರೀದಿಸುತ್ತಿದ್ದಳು. ಅಲ್ಲಿ “ಹಚ್ಚೆ ದಿನ್‌” ಪುಸ್ತಕ ತೆಗೆದುಕೊಂಡು ಕೋಣನಕುಂಟೆ ಕ್ರಾಸ್ ತಲುಪಿದ ಆರು ಗಂಟೆ ಪಯಣದಲ್ಲಿ ಸಂಪೂರ್ಣ ಓದಿದೆ.

“ಹಚ್ಚೆ ದಿನ್”‌ ೩೨ ಹಾಸ್ಯ ಲೇಖನಗಳ ಸಂಕಲನ. ನಾವು ನೋಡುವ ನಿತ್ಯದ ದೃಶ್ಯ, ವಸ್ತುಗಳು ಲೇಖಕಿಯ ನಿರೂಪಣಾ ಕೌಶಲ್ಯದಿಂದ ನಾವೀನ್ಯತೆ ಪಡೆದಿವೆ. ಮನಸ್ಸಿಗೆ ಹೊಸ ಭಾವನೆ ತಂದಿವೆ.

ಮನುಷ್ಯನ ದೇಹಾರೋಗ್ಯದಲ್ಲಿ ನಾಲಿಗೆಯ ಪಾತ್ರ ತುಂಬಾ ಮುಖ್ಯ. ಅದನ್ನು ಹಿಡಿತದಲ್ಲಿಟ್ಟುಕೊಳ್ಳದಿದ್ದರೆ ಅದು ಹೊಟ್ಟೆಗೆ ನಷ್ಟ ಮಾಡುತ್ತದೆ. ಉದಾಹರಣೆಗೆ : ‘ಬಾಣಲೆಯಿಂದ ಬುರಬುರನೆ ಊದಿದ ಪೂರಿಗಳು ಸಾಗುವಿನೊಂದಿಗೆ ಬೆರೆತು ನಾಲಿಗೆಯ ಮೂಲಕ ಹೊಟ್ಟೆಗೆ ಇಳಿದವು.ʼ

ಖಾಸಗಿ ಬಸ್ಸಿನ ಕಂಡಕ್ಟರ್ ಎಲ್ಲಾ ಜನರನ್ನು ಹತ್ತಿಸಿಕೊಂಡು ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ ಎನ್ನುತ್ತಾನೆ. ಹಾಗೆ, ಹೊಟ್ಟೆ ಪೂರಿಗಳನ್ನು ಅಕಾಮಡೇಟ್ ಮಾಡಿ ಕೊನೆಗೆ ಕೈಚೆಲ್ಲುತ್ತದೆ.

“ಎತ್ತಿಗೆ ಜ್ವರ, ಎಮ್ಮೆಗೆ ಬರೆ” ಎಂಬಂತೆ, ನಾಲಿಗೆಯ ತಪ್ಪಿಗೆ ಹೊಟ್ಟೆ ಶಿಕ್ಷೆ ಅನುಭವಿಸುತ್ತದೆ. ಲೇಖಕಿ ಎಲ್ಲಿಂದ ಎಲ್ಲಿಗೋ ಹೋಲಿಸಿ ಸೊಗಸಾಗಿ ನಿರೂಪಿಸುವುದೇ ಸೋಜಿಗ.

ಆಹಾರದ ಜೀರ್ಣ ಕ್ರಿಯೆ ಬಹಳ ಸಣ್ಣ ವಿಷಯವಲ್ಲ. ಉದರ ತಿಣುಕುತ್ತಿರುವಾಗ ಆಗಾಗ ಅಸೂಯೆ ಎಂಬ ಗ್ಯಾಸ್ ಪ್ರತ್ಯಕ್ಷವಾಗಿ ಹೊಟ್ಟೆಕಿಚ್ಚು ಉಂಟುಮಾಡುತ್ತದೆ. ಡಿವಿಜಿಯವರ ಕಗ್ಗದ ಸಾಲುಗಳ ಮೂಲಕ ಅದನ್ನು ವಿಶ್ಲೇಷಿಸಿದ್ದಾರೆ.

ಹೊಟ್ಟೆಯೊಂದರ ರಗಳೆ ಸಾಲದೆಂದೇನೊ ವಿಧಿ
ಹೊಟ್ಟೆಕಿಚ್ಚಿನ ಕಿಡಿಯ ನೆಟ್ಟಿಹನು ನರರೊಳ್
ಹೊಟ್ಟೆ ತುಂಬಿದ ತೋಳ ಮಲಗೀತು: ನೀಂ ಪೆರರ
ದಿಟ್ಟಿಸುತ ಕರುಬುವೆಯೋ ಮಂಕುತಿಮ್ಮ

ಉದರವು ಮಸಾಲೆ ಮಿಶ್ರಿತ ಆಹಾರವನ್ನು ಎರಡು ವಿಭಾಗಗಳಲ್ಲಿ ಪ್ರಕ್ರಿಯೆಗೊಳಿಸುತ್ತವೆ. ಸೀನಿಯರ್ ಮತ್ತು ಜೂನಿಯರ್ ಕರುಳಿನಲ್ಲಿ ಅದರ ಶುದ್ಧ ಅಂಶ ಬೇರ್ಪಡಿಸುತ್ತವೆ.

ಆಹಾರದ ಸ್ಕ್ರಾಪ್‌ ಭಾಗವನ್ನು ನಗರಸಭೆಯ ವಿಲೇವಾರಿಗೆ ಹಸಿಕಸ, ಒಣಕಸವನ್ನು ಬೇರ್ಸಡಿಸಿದಂತೆ ಬೇರ್ಪಡಿಸಿ ದೇಹದೊಳಗಿನ ಆಯಾ ಇಲಾಖೆಗೆ ರವಾನಿಸಬೇಕು. ಈ ಪ್ರಕ್ರಿಯೆಯೇ ವಿಚಿತ್ರ. ವಿಷಯನ್ನು ಹಾಸ್ಯ ರೀತಿಯಲ್ಲಿ ನಿರೂಪಿಸುವಾಗ ನಗು ತಡೆಸಲಾಗದು. ಇದು ಲೇಖಕಿಯ ಶೈಲಿ ಹಾಗೂ ಶಕ್ತಿಯನ್ನು ಬಿಂಬಿಸುತ್ತದೆ.

ಎಂಬತ್ತರ ದಶಕದಲ್ಲಿ ಜಗತ್ತಿನ ಸುದ್ಧಿ ಪಡೆಯಲು ರೇಡಿಯೋ ಅಥವಾ ಪತ್ರಿಕೆಗಳಿಗೆ ನಂಬಿಕೆಯಿಟ್ಟಿದ್ದರು. ರೇಡಿಯೋದಲ್ಲಿ ಬರುತ್ತಿದ್ದ ನಿರ್ಮಾ..ವಾಷಿಂಗ್‌ ಪೌಡರ್ ನಿರ್ಮಾ. ಲೈಫ್ ಬಾಯ್ ಎಲ್ಲಿದೆಯೋ.. ಅಲ್ಲಿದೇ ಆರೋಗ್ಯ.. ಎಂಬ ಈ ಗೀತೆಗಳು ಬೆಳಗಿನ ವಾರ್ತೆಗಳ ನಂತರ ಲಯಬದ್ಧವಾಗಿ ತೇಲಿಬರುತ್ತಿದ್ದವು.

“ಹಚ್ಚೇವು ನೊರೆ ನೊರೆಯ ಸೋಪು..” ಎಂಬ ಶೀರ್ಷಿಕೆಯ ಲೇಖನ ಹಾಸ್ಯದಲ್ಲಿ ಹಾಸ್ಯ, ಭಾಷೆಯಲ್ಲಿ ಕ್ರಿಯಾಶೀಲತೆ ಹಾಗೂ ಪ್ರಬಂಧ ಹೆಚ್ಚೇವು ಕನ್ನಡ ದೀಪ ಗೀತೆಯ ಸಾಲು ಹಿಡಿದು ಕನ್ನಡಾಂಗ್ಲ ಮಿಶ್ರಣದಿ ಪೂರಿಗೆ ಒಗ್ಗರಣೆ ಹಾಕಿ ಚುರುಮುರಿ ಮಾಡಿದಂತಿದೆ.

ಮುಂಜಾನೆ ಸೂರ್ಯೋದಯದ ಸಮಯಕ್ಕೆ ಸರಿಯಾಗಿ ನಿನ್ನಿಂದಲೇ….ನಿನ್ನಿಂದಲೇ….ಕನಸೊಂದು ಶುರುವಾಗಿದೆ… ಎಂಬ ಸುಂದರ ಹಿಮ್ಮೇಳದೊಂದಿಗೆ, ಸ್ವಚ್ಛ್ ಭಾರತ್ ಕನಸನ್ನು ಹೊತ್ತ ನಗರಸಭೆಯ ಗಾರ್ಬೇಜ್ ವ್ಯಾನುಗಳು ಮನೆ ಮನೆಗೆ ಬಂದು ನಿಲ್ಲತೊಡಗಿದವು.

ತಡವಾಗಿ ಎದ್ದವರು ಗಾಡಿ ಮುಂದೆ ಕಸ ಹಾಕಲು ಬೇಸರ ಪಡುತ್ತಾರೆ. ನಂತರ ಖಾಲಿ ಸೈಟ್‌ ನಲ್ಲಿ ಕಸ ಬಿಸಾಡುವ ಅಸಂಸ್ಕೃತತೆಗೆ ಇಳಿಯುತ್ತಾರೆ. ಹೀಗೆ ಜನರ ಅಶಿಸ್ತು ಹೆಚ್ಚಿದಂತೆ ಕಸವೊಂದು ತೀರ.. ವ್ಯಾನ್ ಒಂದು ತೀರ.. ಸ್ವಚ್ಛ್ ಭಾರತ್ ಕನಸು ದೂರಾ.. ಮೇಡಂ ಮನ್ ಕಿ ಬಾತ್ ಮನ ಮುಟ್ಟಿ ಕಸ ನಮ್ಮ ತಲೆಯಲ್ಲೇ ಉಳಿಯುವುದು.

ಪಾರ್ಕ್, ಫುಟ್‌ಪಾತ್ ಎಲ್ಲೆಡೆ ತ್ಯಾಜ್ಯ ತುಂಬಿ ವ್ಯಾಜ್ಯಗಳಿಗೆ ಮುನ್ನುಡಿ ಬರೆದವು. ಇಲ್ಲಿ ಕಸ ಹಾಕಬಾರದು ಬೋರ್ಡುಗಳು, ಇಲ್ಲಿ ಕಸ ಹಾಕುವವರು ಹಂದಿಗಳಿಗೆ ಸಮ ಎಂದು ತಿದ್ದುಪಡಿಯಾಗಿ ಹಂದಿಗಳು ನಾಚಿಕೊಂಡವು ಅಷ್ಟೇ ಜನ ನಾಚಿಕೊಳ್ಳಲಿಲ್ಲ. ಕಸ ವಿಲೇವಾರಿಗೆ ಸರ್ಕಾರ ಮುನಿಸಿಪಾಲಿಟಿಗಳು ಎಷ್ಟೇ ಹೆಣಗಾಡಿದರೂ ಜನರಿಗೆ ಅದರ ಪರಿವೇ ಇಲ್ಲ.

ಬಾಲ್ಯದ ದಿನಗಳ ನೆನಪಿನಲ್ಲಿ ಲೇಖಕಿ ಮನೆ ಮುಂಭಾಗದ ಚರಂಡಿ ಇರಲಿಲ್ಲ. ನಮ್ಮ ಮತ್ತು ಪಕ್ಕದ ದೊಡ್ಡಪ್ಪರ ಮನೆಗಳ ಬಚ್ಚಲು ನೀರು ಒಟ್ಟಾಗಿ ಹೊರ ಹೋಗಲು ಮಣ್ಣು ರಸ್ತೆಯ ಮಧ್ಯೆ ಪೈಪ್‌ನ್ನು ಹೂತು ಆಚೆಯ ದಡಕ್ಕೆ ದಾಟಿಸಿದ್ದೆವು. ನಮ್ಮ ಎದುರು ರಸ್ತೆ ಆಚೆ ಕಡೆ ಯಾರೂ ಮನೆ ಕಟ್ಟಿರಲಿಲ್ಲ. ಆ ಕಡೆಯ ಚರಂಡಿ ತುಂಬಿ ತುಳುಕಿ ತಳಕ್ಕೆ ಹರಿದು ಕಪ್ಪು ಕೊಳಚೆ ಗುಂಡಿ ಅದರಲ್ಲಿ ಹಂದಿ ಹೊರಳಾಡುತ್ತಿದ್ದವು.

ಅತ್ತ ಆ ಕಡೆಯ ಚರಂಡಿ ಹೂಳನ್ನು ಗ್ರಾಮ ಪಂಚಾಯ್ತಿ ತೆಗೆಸದೆ ಇತ್ತ ನಮ್ಮಮ್ಮನಿಗೂ, ದೊಡ್ಡಮ್ಮನಿಗೂ ದಿನಾ ಇದೇ ರಾಜಿ ಪಂಚಾಯ್ತಿ. ಚರಂಡಿ ಪೈಪ್ ಬ್ಲಾಕ್ ಆಗಿ ನೀರು ನಿಂತು ದೊಡ್ಡಮ್ಮ ‘ಹೇ ಬಸವಣ್ಣ, ಚರಂಡಿ ಕ್ಲೀನ್ ಮಾಡಿಸು.. ಎಂದು ಪದೇ ಪದೇ ಹೇಳುತ್ತಿದ್ದರು. ಇದು ಕುಟುಂಬ ಕದನವಾಗಿ ಸಂಬಂಧ ಹಳಸಿದ ಅನ್ನವಾಗಿತ್ತು.

ಅಪ್ಪನೇ ಪೈಪ್‌ ಕ್ಲೀನ್ ಮಾಡಿ, ಗೊಡ್ಡೆ ಹೊತ್ತರೆಂದು ಕೊನೆಗೆ ಸ್ವತಃ ಗುದ್ದಲಿ ಹಿಡಿದು ಸ್ವಚ್ಛತೆ ನಡೆಸಿದ ವೃತ್ತಾಂತ ಮನ ಮುಟ್ಟುತ್ತದೆ. ಸುಮಾ ಮೇಡಂ ರ ಕಸದ ಕಥೆ ಓದಿ ಹಳೆಯ ನಮ್ಮೂರ ಚರಂಡಿ ಕಥೆ ನೆನಪಾಗಿ ಅರೇ.! ಎಷ್ಟು ರಸವತ್ತಾಗಿ ಕಸದ ಕಥೆ ನಿರೂಪಿಸಿದ್ದಾರೆ ಎನಿಸಿತು.

ಕೃತಿಯ ಶೀರ್ಷಿಕೆ “ಹಚ್ಚೆ ದಿನ್” ಹೆಣ್ಣು ಮಕ್ಕಳ ಫ್ಯಾಶನ್ ಕ್ಷೇತ್ರಕ್ಕೆ ಹಳೆಯ ಹಚ್ಚೆಯನ್ನು ಟ್ಯಾಟೂ ಆಗಿ ಬಾಡಿ ಆರ್ಟ್ ಲಗ್ಗೆ ಇಟ್ಟದೆ. ಲೇಖಕಿಯು ಟ್ಯಾಟೂ ವನ್ನ ಶಿಲೆಯ ಮೇಲಿನ ಶಾಸನಗಳಂತೆ, ತೊಗಲ ಮೇಲಿನ ಹಚ್ಚೆ ಅಚ್ಚಾ ಹೈ ಎಂದು ಆಧುನಿಕತೆಯೆಂದು ಪರಿಚಯಿಸುತ್ತದೆ.

ಪುಸ್ತಕದ ಮುನ್ನುಡಿಯಲ್ಲಿ ಎನ್.ರಾಮನಾಥ್ ಅವರು ಸುಂದರವಾಗಿ ಲೇಖಕಿಯ ದೃಷ್ಟಿಕೋನವನ್ನು ವಿವರಿಸಿದ್ದಾರೆ. ಅದು ಓದುಗರಿಗೆ ಮಾರ್ಗದರ್ಶಕವಾಗುತ್ತದೆ.

ಗುಡಿಯ ದೇವರುಗಳು ಪೂರ್ವಾಭಿಮುಖವಾಗಿ ನಿಂತಿದ್ದರೆ ನವಗ್ರಹಗಳು ಕಣ್ಣಿನಾಸ್ಪತ್ರೆಯ ರೋಗಿಗಳಂತೆ ಬೇರೆ ಬೇರೆ ದಿಕ್ಕಿಗೆ ತಿರುಗಿರುವ ಹೋಲಿಕೆ ಉಡಾಫೆ ನಗಿಸುತ್ತವೆ.

ಹಾಸ್ಯ, ವಿಡಂಬನೆ, ಕಟಕಿ, ವ್ಯಂಗ್ಯ, ಲೇವಡಿ ತಿಳಿಹಾಸ್ಯಗಳ ಹಿತಮಿಶ್ರಣದಿಂದ ೩೨ ಲೇಖನಗಳು ಓದುಗರನ್ನು ನಗಿಸಲು ನೆರವಾಗುತ್ತವೆ. ಇದು ಉತ್ತಮ ಹಾಸ್ಯ ಸಾಹಿತ್ಯದ ಸಂಕಲನ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

Leave a Reply