ನಾಡಿನ ಹಿರಿಯ ಸಾಹಿತಿ ಪದ್ಮಭೂಷಣ ಎಸ್.ಎಲ್.ಬೈರಪ್ಪ ರವರು ನಿಧನಕ್ಕೆ ಸಂತಾಪ

ಹಾಸನ:ಸೆ-24: ನಾಡಿನ ಹಿರಿಯ ಸಾಹಿತಿ ಎಸ್.ಎಲ್.ಬೈರಪ್ಪ ರವರು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರ ಗ್ರಾಮದಲ್ಲಿ 26-07-1934 ರಲ್ಲಿ ಜನಿಸಿದರು. ಆನೇಕ ಪ್ರಶಸ್ತಿಗಳಾದ ಸರಸ್ವತಿ ಸನ್ಮಾನ್ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹೀಗೆ ಆನೇಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಅವರು ಲೇಖಕರಾಗಿ, ವಿಮರ್ಶಕರಾಗಿ, ಅಧ್ಯಾಪಕರಾಗಿ, ಕಥೆ, ಕಾಂದಬರಿ ಮತ್ತು ಇತಿಹಾಸ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.1999 ರಲ್ಲಿ ಕನಕಪುರದಲ್ಲಿ ನಡೆದ 67 ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರು ನೂರಾರು ಕಾದಂಬರಿ ರಚಿಸಿದ್ದಾರೆ.

ಇವರ ನಿಧನದಿಂದ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ನಿಧನಕ್ಕೆ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಡಾ. ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷರಾದ ರವಿನಾಕಲಗೂಡು, ಕಲ್ಲಹಳ್ಳಿ ಹರೀಶ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಸೋಮನಾಯಕ್ ದಿಬ್ಬೂರು ರಮೇಶ್, ಹರಳಹಳ್ಳಿ ರಂಗಸ್ವಾಮಿ, ಪುಟ್ಟಣ್ಣ ನಂದಕುಮಾರ, ಭಾರತ ಸೇವಾದಳ ವಲಯ ಸಂಘಟಕಿ ವಿ.ಎಸ್.ರಾಣಿ. ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷರಾದ ಚೈತ್ರ ನಾಯಕರಹಳ್ಳಿ, ಉಪಾಧ್ಯಕ್ಷರಾದ ಗುಡುಗನಹಳ್ಳಿ ಮಂಜುನಾಥ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಸಂಭ್ರಮ. ಸರ್ವ ಜನಾಂಗದ ಮಹಿಳೆಯರ ಸಹಕಾರದಿಂದ ದಾಖಲೆಯ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರನಾಮ ಪಾರಾಯಣ: ನಾರಾಯಣ ವೈದ್ಯ.

ಗಂಗಾವತಿ: ಸರ್ವ ಜನಾಂಗದ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಶಾರದಾ ಶರನ್ನವರಾತ್ರಿಯ ಪ್ರಥಮ ದಿನದಂದು ದಾಖಲೆಯ ಕುಂಕುಮಾರ್ಚನೆ ಹಾಗೂ ಲಲಿತ ಸಹಸ್ರ ಪಾರಾಯಣ ಜರುಗಿರುವುದು ಸಂತಸದಾಯಕವಾಗಿದೆ ಎಂದು ಶೃಂಗೇರಿ ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಸೋಮವಾರದಂದು ಶಾರದಾ ನಗರದ ಶೃಂಗೇರಿ ಶಂಕರ ಮಠದಲ್ಲಿ ಆಯೋಜಿಸಿದ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿ, ಶೃಂಗೇರಿ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳವರ ೭೫ ವರ್ಧಂತಿ ಮಹೋತ್ಸವದ ಸಂಭ್ರಮಾಚರಣೆಯಲ್ಲಿ ಕಳೆದ ಏಳು ವರ್ಷಕ್ಕಿಂತ ೮ನೇ ವರ್ಷದ ಆಚರಣೆಯಲ್ಲಿ ಶ್ರೀ ಶಾರದಾ ಮಾತೆಗೆ ನೂತನವಾದ ಬಹುವೆಚ್ಚದ ಮಂಟಪವನ್ನು ಬಾಲಕೃಷ್ಣ ದೇಸಾಯಿ ಕುಟುಂಬಸ್ಥರು ಸಮರ್ಪಿಸಿದ್ದರು. ಈ ಸಂದರ್ಭದಲ್ಲಿ ಅಪಾರ ಪ್ರಮಾಣದ ಮಹಿಳೆಯರು ಅತ್ಯಂತ ಉತ್ಸಾಹ ಭಕ್ತಿಯಿಂದ ಭಾಗವಹಿಸಿ ಶ್ರೀ ಶಾರದಾ ದೇವಿಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಧಾರ್ಮಿಕ ಆಚರಣೆ ವ್ಯಕ್ತಿಗೆ ಸನ್ಮಾರ್ಗ ಹಾಗೂ ಗುಣಮಟ್ಟದ ಸಂಸ್ಕಾರ ನೀಡಲು ಮೂಲ ಕಾರಣವಾಗಿದೆ. ಇದರಿಂದ ಪಾರಂಪರಿಕ ಸಂಸ್ಕೃತಿ ಧರ್ಮರಕ್ಷಣೆ ಸಂಘಟನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

ಇದಕ್ಕೂ ಪೂರ್ವದಲ್ಲಿ ಶಾರದಾ ಶಂಕರ ಭಕ್ತ ಮಂಡಳಿ ವಿವಿಧ ಭಜನಾ ಮಂಡಳಿಯವರಿಂದ ಭಜನೆ ಪಾರಾಯಣಗಳನ್ನು ದೇವಸ್ಥಾನದ ಪ್ರಧಾನ ಅರ್ಚಕ ಕುಮಾರಭಟ್ ಮಹಾಸಂಕಲ್ಪವನ್ನು ನೆರವೇರಿಸಿದರು.

ಬೆಳಗ್ಗೆ ಶ್ರೀ ಶಾರದಾ ಮಾತೆ ಸೇರಿದಂತೆ ಪರಿವಾರ ದೇವರುಗಳಿಗೆ ಅಭಿಷೇಕ ಅಷ್ಟೋತ್ತರ ಪಾರಾಯಣ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ ಅಳವಂಡಿಕರ್. ಶ್ರಿನಿವಾಸ ಕರಮುಡಿ, ವೇಣು ಅಳವಂಡಿ, ಕಾಶಿನಾಥ ಭಟ್. ಶೇಷಗಿರಿ ಗಡಾದ್, ಜಗನ್ನಾಥ್ ಅಳವಂಡಿಕರ್, ಭೀಮಾಶಂಕರ್ ಹೊಸಳ್ಳಿ, ಕೆ.ವಿ ಜೋಶಿ. ನಾಗೇಶ್ ಭಟ್ ಸೇರಿದಂತೆ ಮತ್ತಿತರ ಶಂಕರ ಸೇವಾ ಟ್ರಸ್ಟ್ನ ಸದಸ್ಯರು ಪಾಲ್ಗೊಂಡಿದ್ದರು.

ವಂಕಲಕುಂಟೆ ಶ್ರೀ ಮಾರುತೇಶ್ವರ ಟ್ರಸ್ಟ್ ಅಸ್ತಿತ್ವಕ್ಕೆ ನೂತನ ಪದಾಧಿಕಾರಿಗಳ ನೇಮಕ.

ಗಂಗಾವತಿ: ತಾಲೂಕಿನ ಬಸಾಪಟ್ಟಣ ಮತ್ತು ಮಲ್ಲಾಪುರ ಗ್ರಾಮದ ಸೀಮಾ ವ್ಯಾಪ್ತಿಯಲ್ಲಿ ಬರುವ ತುಂಗಭದ್ರಾ ಎಡದಂಡೆ ಕಾಲುವೆಯ ಬವಾರ್ ಪಕ್ಕದಲ್ಲಿರುವ ವಂಕಲಕುಂಟೆ ಶ್ರೀ ಮಾರುತೇಶ್ವರ ದೇವಸ್ಥಾನದಲ್ಲಿ ಮಲ್ಲಾಪುರ, ಬಸಾಪಟ್ಟಣ, ವೆಂಕಟಗಿರಿ, ಗಂಗಾವತಿ, ವಡ್ಡರಹಹಟ್ಟಿ ಹಾಗೂ ಇನ್ನಿತರ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಸಭೆ ಸೇರಿ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಸಲುವಾಗಿ ವಂಕಲಕುಂಟೆ ಶ್ರೀ ಮಾರುತೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿಯನ್ನು ಅಸ್ತಿತ್ವಕ್ಕೆ ತರಲಾಗಿದ್ದು, ನೂತನವಾಗಿ ಗೌರವಾಧ್ಯಕ್ಷರನ್ನು, ಅಧ್ಯಕ್ಷರನ್ನು, ಉಪಾಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.

ದೇವಸ್ಥಾನದ ಪ್ರಮುಖ ಅರ್ಚಕರಾದ ಶ್ರೀ ಫಕೀರೇಶ್ವರಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ಗೌರವಾಧ್ಯಕ್ಷರಾಗಿ ಬಸವನಗೌಡ ಮಾಲಿಪಾಟೀಲ್ ಮಲ್ಲಾಪುರ, ನಾಗಪ್ಪ ಕಂಬಳಿ ಬಸಾಪಟ್ಟಣ, ಅಧ್ಯಕ್ಷರಾಗಿ ಶಿವಕುಮಾರ ಅರಿಕೇರಿ ಗಂಗಾವತಿ, ಉಪಾಧ್ಯಕ್ಷರುಗಳಾಗಿ ಹನುಮಂತಪ್ಪ ಯಾದವ್ ವೆಂಕಟಗಿರಿ, ವಿರುಪಣ್ಣ ಡಂಬರ್ ಬಸಪಟ್ಟಣ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಪ್ಪ ತಳವಾರ್ ಬಸಾಪಟ್ಟಣ, ಸಹ ಕಾರ್ಯದರ್ಶಿಯಾಗಿ ಕೆ ನಿಂಗಜ್ಜ, ಖಜಾಂಚಿಯಾಗಿ ಅಯ್ಯನಗೌಡ ಮಲ್ಲಾಪುರ, ಕಾರ್ಯಕಾರಿ ಮಂಡಳಿ ಸದಸ್ಯರುಗಳಾಗಿ ಕೆ ಮಂಜುನಾಥ್ ಕುರುಗೋಡು ಗಂಗಾವತಿ, ಮಹದೇವಪ್ಪ ಫೊಟೋಗ್ರಾಫರ್ ಗಂಗಾವತಿ, ಭೀಮರಾಯ ಸಿಂಗಾಪುರ ಸಿದ್ದಿಕೆರೆ, ವಡ್ರಹಟ್ಟಿಕ್ಯಾಂಪ್ ರಾಘವಲು, ನಾಗರಾಜ ಮಡಿವಾಳ ಹಾಗೂ ಲೋಕೇಶ್ ಯಾದವ್ ವೆಂಕಟಗಿರಿ ಅವರು ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷರಾಗಿರುವ ಹಿರಿಯ ಸದಸ್ಯರಾದ ಹನುಮಂತಪ್ಪ ಯಾದವ್ ವೆಂಕಟಗಿರಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್.ಎಸ್.ಎಸ್. ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

ಗಂಗಾವತಿ: ನಗರದ ಬಾಲಕರ ಪದವಿ ಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆಯು ಸೆಪ್ಟೆಂಬರ್-೨೦ ರಂದು ತಾಲೂಕಿನ ಅರಳಹಳ್ಳಿ ಗ್ರಾಮದ ಅಲ್ಪಸಂಖ್ಯಾತ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನೆರವೇರಿತು. ಶಿಬಿರವನ್ನು ಅರಳಹಳ್ಳಿ ಗ್ರಾಮದ ಪೂಜ್ಯ ವೇ.ಮೂ ಗವಿಸಿದ್ದಯ್ಯ ಸ್ವಾಮಿಗಳು ನೆರವೇರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಬಸಪ್ಪ ನಾಗೋಲಿ ಅವರು ವಹಿಸಿಕೊಂಡಿದ್ದರು. ಗ್ರಾ.ಪಂ ಮಾಜಿ ಉಪಾಧ್ಯಕ್ಷರಾದ ವೀರಭದ್ರಯ್ಯ, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ದಾನನಗೌಡ, ಮಲ್ಲಿಕಾರ್ಜುನ, ಅಂಗನವಾಡಿ ಕಾರ್ಯಕರ್ತೆಯಾದ ಶ್ರೀಮತಿ ನಿರ್ಮಲ ಹಾಗೂ ಆಶಾ ಕಾರ್ಯಕರ್ತೆಯಾದ ಶಿವಗಂಗಮ್ಮ ಉಪಸ್ಥಿತರಿದ್ದರು. ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ, ಗ್ರಂಥಪಾಲಕರಾದ ರಮೇಶ ಗಬ್ಬೂರು, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳಾದ ರುದ್ರೇಶ್ ತಬಾಲಿ, ಇತಿಹಾಸ ಉಪನ್ಯಾಸಕರಾದ ಈಶ್ವರಪ್ಪ ಸಿ., ಉಪನ್ಯಾಸಕರಾದ ಮಹೇಶ್ ಹಿರೇಮಠ್, ನಿರುಪಾದಿ, ಶ್ರೀಕಾಂತ್ ಉಪಸ್ಥಿತರಿದ್ದರು.

ಅರಳಹಳ್ಳಿ ಬೃಹನ್ಮಠದ ವೇ.ಮೂ ಗವಿಸಿದ್ದಯ್ಯ ಸ್ವಾಮಿಗಳು ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತಿಯೊಬ್ಬರ ಜೀವನದಲ್ಲಿ ಶಿಕ್ಷಣ ಮತ್ತು ಸಂಸ್ಕಾರಗಳು ಬಹಳ ಮುಖ್ಯ. ಶಿಕ್ಷಣ ಒಂದೇ ಜೀವನವನ್ನು ಪರಿಪೂರ್ಣ ಮಾಡುವುದಿಲ್ಲ. ಅದಕ್ಕೆ ಉತ್ತಮವಾದ ಸಂಸ್ಕಾರದ ಅವಶ್ಯಕತೆ ಇದೆ. ಉತ್ತಮ ಸಂಸ್ಕಾರವನ್ನು ನಮ್ಮಲ್ಲಿ ತರುವ ಕೆಲಸ ಈ ಶಿಬಿರ ಮಾಡುತ್ತದೆ ಎಂದರು. ೭ ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ದೇಶ, ಸಮಾಜ ಮತ್ತು ವ್ಯಕ್ತಿ ವಿಕಸನಕ್ಕೆ ಸಂಬAಧಪಟ್ಟ ಅನೇಕ ವಿಷಯಗಳ ಕುರಿತು ಉಪನ್ಯಾಸಗಳನ್ನು ಹಮ್ಮಿಕೊಂಡಿದ್ದೀರಿ. ಉಪನ್ಯಾಸಕರ ವಿಷಯಗಳನ್ನು ಮನಸುಕೊಟ್ಟು ಆಲಿಸಿ ತಾವು ಈ ದೇಶದ ಉತ್ತಮ ಪ್ರಜೆಗಳಾಗಿ ಪರಿವರ್ತನೆಯಾಗಬೇಕು. ಕಾಯಕದಲ್ಲಿ ಯಾವುದೇ ಮೇಲು-ಕೀಳು ಇರುವುದಿಲ್ಲ. ವಿದ್ಯಾವಂತರಾದವರು ಕೃಷಿ ಕೆಲಸ ಮಾಡಬಾರದು ಎನ್ನುವ ಭಾವನೆ ಅನೇಕರಲ್ಲಿದೆ ಇದು ತಪ್ಪು. ಕೋಟಿ ವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು ಎಂಬ ನಾಣ್ನುಡಿಯಂತೆ ಕೃಷಿ ಈ ಜಗತ್ತಿಗೆ ಅನ್ನ ನೀಡುವಂತಹ ಶ್ರೇಷ್ಠ ಕಾಯಕವಾಗಿದೆ. ಇದರ ಬಗ್ಗೆ ನಿರ್ಲಕ್ಷö್ಯ ಮಾಡದೇ ವೈಜ್ಞಾನಿಕ ಬೇಸಾಯ ಕೈಗೊಂಡು ದೇಶ ನಿರ್ಮಾಣದಲ್ಲಿ ತೊಡಗಲು ಕರೆ ನೀಡಿದರು. ಶಿಬಿರದ ಉದ್ದೇಶ ಮತ್ತು ಗುರಿಗಳ ಕುರಿತು ಹಾಗೂ ಶಿಬಿರದಲ್ಲಿ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ಹಿರಿಯ ಉಪನ್ಯಾಸಕರಾದ ಡಾ. ಲಿಂಗಣ್ಣ ಜಂಗಮರಹಳ್ಳಿ ಅವರು ಮಾತನಾಡಿದರು.

ಕಾರ್ಯಕ್ರಮ ಅಧಿಕಾರಿ ರುದ್ರೇಶ್ ತಬಾಲಿಯವರು ಎನ್.ಎಸ್.ಎಸ್. ಪ್ರತಿಜ್ಞಾವಿಧಿ ಬೋಧಿಸಿದರು. ಎನ್.ಎಸ್.ಎಸ್. ವಿದ್ಯಾರ್ಥಿನಿ ಕುಮಾರಿ ಬಾಳಮ್ಮ ಕಾರ್ಯಕ್ರಮ ನಿರೂಪಣೆ ಮಾಡಿದರು. ಶಿಬಿರವು ಸೆಪ್ಟೆಂಬರ್-೨೦ ರಿಂದ ೨೬ರವರೆಗೆ ಏಳು ದಿನಗಳ ಕಾಲ ನಿರಂತರವಾಗಿ ನಡೆಯಲಿದ್ದು, ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ೩೦ ವಿದ್ಯಾರ್ಥಿನಿಯರು ೨೦ ವಿದ್ಯಾರ್ಥಿಗಳು ಸೇರಿ ಒಟ್ಟು ೫೦ ಜನ ಸ್ವಯಂ ಸೇವಕರು ಭಾಗವಹಿಸಿದ್ದರು.

ಯುವಜನತೆ ದೇಶದ ಆಸ್ತಿ: ಹೇಮಂತರಾಜ ಕಲ್ಮಂಗಿ

ಗಂಗಾವತಿ: ನಗರದ ಸಂಕಲ್ಪ ಎಜುಕೇಷನ್ ಟ್ರಸ್ಟ್ (ರಿ) ಅಂಗಸಂಸ್ಥೆಯಾದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯರ ಸ್ವಾಗತ ಸಮಾರಂಭ ಹಾಗೂ ಎನ್.ಎಸ್.ಎಸ್ ದೈನಂದಿನ ಚಟುವಟಿಕೆಗಳಿಗೆ ಚಾಲನೆಯನ್ನು ಐ.ಎಂ.ಎ ಹಾಲ್‌ನಲ್ಲಿ ನೀಡುತ್ತಾ, ಸಂಸ್ಥೆಯ ಅಧ್ಯಕ್ಷರಾದ ಹೇಮಂತರಾಜ ಕಲ್ಮಂಗಿಯವರು ಮಾತನಾಡಿ ಇಂದಿನ ಯುವ ಜನತೆ ದೇಶದ ಆಸ್ತಿಯಾಗಿದ್ದು, ವೈಯಕ್ತಿಕ-ಸಾಮಾಜಿಕ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ನಡೆದಾಗ ಮಾತ್ರ ದೇಶ ವಿಶ್ವಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗುತ್ತದೆ. ಈ ನಿಟ್ಟಿನಲ್ಲಿ ಯುವಕರು ಪ್ರಾಮಾಣಿಕತೆಯಿಂದ, ಶ್ರದ್ಧೆಯಿಂದ ನಡೆಯುವಂತೆ ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಎಂ.ಆರ್. ಮಂಜುಸ್ವಾಮಿಯವರು ಪ್ರಾಸ್ತಾವಿಕ ನುಡಿಗಳನ್ನಾಡಿ, ವಿದ್ಯಾರ್ಥಿನಿಯರಿಗೆ ಗುಣಮಟ್ಟದ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳುತ್ತಾ ಉನ್ನತ ಶಿಕ್ಷಣವನ್ನು ಪಡೆದಾಗ ಮಾತ್ರ ಉದ್ಯೋಗವಕಾಶಗಳು ವಿಪುಲವಾಗಿ ದೊರೆಯುತ್ತವೆ. ಇದರ ಮೂಲಕ ವೈಯಕ್ತಿಕ, ಆರ್ಥಿಕ ಭದ್ರತೆ ಲಭಿಸುವುದಲ್ಲದೆ ಸ್ವಾವಲಂಬಿ ಜೀವನ ನಡೆಸಬಹುದು. ಈ ನಿಟ್ಟಿನಲ್ಲಿ ಆಧುನಿಕ ಮಾಧ್ಯಮಗಳ ಸದುಪಯೋಗ ಪಡೆದುಕೊಂಡು ಯಶಸ್ಸನ್ನು ಸಾಧಿಸುವಂತೆ ಮಾರ್ಗದರ್ಶನ ಮಾಡಿದರು.

ಇದೇ ಸಂದರ್ಭದಲ್ಲಿ ಹಿರಿಯ ಉಪನ್ಯಾಸಕರಾದ ನಾಗರಾಜ ಹೆಚ್. ವಿದ್ಯಾರ್ಥಿ ಒಕ್ಕೂಟದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ವಿದ್ಯಾರ್ಥಿನಿಯರು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ನಿರ್ದೇಶಕರಾದ ಡಾ. ಅಮಿತ್‌ಕುಮಾರ ರೆಡ್ಡಿ, ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪರಿಸರದಲ್ಲಿ ಸತತ ಪ್ರಯತ್ನ ಮಾಡುತ್ತಾ ಬದುಕನ್ನು ಕಟ್ಟಿಕೊಳ್ಳಲು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತಿವಹಿಸಿದ್ದ ಪ್ರಾಚಾರ್ಯರಾದ ಬಸವರಾಜ ಶಿರಿಗೇರಿಯವರು, ವಿದ್ಯರ್ಥಿನಿಯರು ಯಾವುದೇ ಕೆಲಸ ಮಾಡಬೇಕಾದರೂ ಮೊದಲು ತಮ್ಮ ಕುಟುಂಬ, ತಂದೆ-ತಾಯಿ ಬಗ್ಗೆ ಆಲೋಚಿಸಿ ಮುಂದೆ ಸಾಗಿದರೆ ಖಂಡಿತ ಸಾಧಕಿಯರಾಗುತ್ತಾರೆ ಎಂದು ಹೇಳಿ, ನೂತನ ವಿದ್ಯಾರ್ಥಿನಿಯರಿಗೆ ಸ್ವಾಗತ ಕೋರಿ ಶುಭಹಾರೈಸಿದರು.

ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾದ ಕು. ಮುಸ್ಕಾನ್ ಕಂಫ್ಲಿ ಬಿ.ಕಾಂ ಹಾಗೂ ಸಹಕಾರ್ಯದರ್ಶಿಯಾದ ಕು. ಅಕ್ಷತಾ ಪಂಪಾಪತಿ ಎಲ್ಲಾ ವಿದ್ಯಾರ್ಥಿನಿಯರಿಗೂ ಹೂವು ನೀಡಿ, ಸ್ವಾಗತಿಸಿ ಶುಭ ಕೋರಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಬಸವರಾಜ, ವೈ. ಬಸವನಗೌಡ, ಸುರೇಶ, ಶ್ರೀಮತಿ ಆಶಾ, ಶ್ರೀಮತಿ ಉಷಾದೇವಿ, ರಮೇಶ, ಚನ್ನಬಸವ, ವಿಶ್ವನಾಥ, ಶಿವಶರಣ, ರಾಹುಲ್, ಶ್ರೀಮತಿ ಮೇಘ, ಶರಣಮ್ಮ, ವೆಂಕಟಲಕ್ಷಿö್ಮ, ಗುರುಮೂರ್ತಿ, ಅಶೋಕ ಹೆಚ್.ಎಂ ಸೇರಿದಂತೆ ಇತರರ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕಿಯಾದ ಶ್ರೀಮತಿ ಸಂಪತ್‌ಕುಮಾರಿ ಅಚ್ಚುಕಟ್ಟಾಗಿ ನಿರೂಪಿಸಿದರು. ಶ್ರೀಮತಿ ವಿದ್ಯಾ ಗಣ್ಯರನ್ನು ಸ್ವಾಗತಿಸಿದರೆ, ಶಂಕರ ವರದಾಪುರ ವಂದಿಸಿದರು.

ತ್ಯಾಗ, ಬಲಿದಾನಗಳಿಂದ ವಿಮೋಚನೆ ದೊರಕಿದೆ: ನಾಗರಾಜ್ ಗುತ್ತೇದಾರ್

ಗಂಗಾವತಿ: ನಗರದ ಸಂಕಲ್ಪ ಪಿ.ಯು. ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ವಕೀಲರು ಮಾತನಾಡುತ್ತಾ ಭಾರತ ೧೯೪೭ ಆಗಸ್ಟ್-೧೫ ರಂದು ಸ್ವಾತಂತ್ರ‍್ಯ ಗಳಿಸಿಕೊಂಡರೂ ಸಹ ದೇಶದ ಮೂರು ಪ್ರಾಂತ್ಯಗಳಾದ ಜಮ್ಮು ಕಾಶ್ಮೀರ್, ಜುನಾಗಡ್, ಹೈದರಾಬಾದ್ ಪ್ರಾಂತ್ಯಗಳು ಸ್ವಾಯತ್ತತೆ ಘೋಷಿಸಿಕೊಂಡವು. ಹೈದರಾಬಾದ್ ಪ್ರದೇಶ ವಿಸ್ತೀರ್ಣದಲ್ಲಿ ದೊಡ್ಡದಿದ್ದು ಭಾರತದಲ್ಲಿ ವಿಲೀನವಾಗದೆ ಹೊರಗೆ ಉಳಿಯಿತು.

ನವಾಬನ ದುರಾಡಳಿತದಿಂದ ಬೇಸತ್ತ ಹೈದರಾಬಾದ್ ಪ್ರಾಂತ್ಯದ ಜನ ಆತನ ವಿರುದ್ಧ ದಂಗೆ ಏಳುವ ಮಟ್ಟಕ್ಕೆ ಬಂದಾಗ ಹೈದರಾಬಾದ್ ನವಾಬನು ತನ್ನ ಖಾಸಗಿ ರಜಾಕರ ಸೇನೆಯನ್ನು ಬಳಸಿಕೊಂಡು ನಾಗರೀಕರ ಮೇಲೆ ಹಿಂಸಾ ಕೃತ್ಯಗಳನ್ನು, ದೌರ್ಜನ್ಯಗಳನ್ನ ನಡೆಸಲು ಆರಂಭಿಸಿದನು. ಈ ಸಂದರ್ಭದಲ್ಲಿ ಸ್ವಾಮಿ ರಮಾನಂದತೀರ್ಥರು ಈ ಪ್ರದೇಶದ ಜನರಿಗೆ ಚಳುವಳಿಗೆ ಧುಮುಕುವಂತೆ ಕರೆ ನೀಡಿ ವಿಮೋಚನೆಯ ಕಡೆಗೆ ಜನರ ಗಮನ ಸೆಳೆದರು.

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೊರಟಾ(ಬಿ) ಗ್ರಾಮದಲ್ಲಿ ಹೈದರಾಬಾದ್ ನಿಜಾಮನ ರಜಾಕಾರರ ಸೇನೆ ದೇಶಭಕ್ತ ನಾಗರೀಕರನ್ನು ಹತ್ಯೆ ಮಾಡುವ ಮೂಲಕ ರಕ್ತದೋಕುಳಿಯನ್ನು ಹರಿಸಿತು. ಹಾಗಾಗಿ ಗೋರಟಾ (ಬಿ) ಗ್ರಾಮವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ನಾವು ಕರೆಯುತ್ತೇವೆ. ಇದೆಲ್ಲವನ್ನು ಅರಿತ ಅಂದಿನ ಗೃಹಸಚಿವರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ರವರ ಸಲಹೆಯ ಮೇರೆಗೆ ಹೈದರಾಬಾದ್ ಪ್ರಾಂತ್ಯದ ಮೇಲೆ “ಆಪರೇಷನ್ ಪೋಲೊ” ಪೋಲೀಸ್ ಕಾರ್ಯಾಚರಣೆ ಮಾಡುವ ಮೂಲಕ ಹೈದರಾಬಾದ್ ಕರ್ನಾಟಕದ ವಿಮೋಚನೆಗೆ ಸಹಕರಿಸಿದರು.

ಈ ಹೋರಾಟದಲ್ಲಿ ನಮ್ಮ-ನಮ್ಮ ಗ್ರಾಮ, ನಗರಗಳ ಸ್ಥಳಿಯ ಹೋರಾಟಗಾರರು ಅನೇಕ ತ್ಯಾಗ ಬಲಿದಾನಗಳನ್ನು ಮಾಡಿ ಆತ್ಮರ್ಪಣೆ ಮಾಡಿಕೊಳ್ಳುವ ಮೂಲಕ ನಮ್ಮ ಪ್ರದೇಶಕ್ಕೆ ಪೂರ್ಣ ಸ್ವತಂತ್ರ ದೊರಕಲು ಕಾರಣೀಭೂತರಾದರು. ಅವರ ತ್ಯಾಗ ಮತ್ತು ಬಲಿದಾನದ ಪ್ರಯುಕ್ತ ಅಂದಿನ ಹೈದರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕ ವಿಮೋಚನೆಗೊಳ್ಳುವ ಮೂಲಕ ನಮಗೆ ಸ್ವಾತಂತ್ರ‍್ಯದ ಬದುಕು ಲಭ್ಯವಾಗಿದೆ. ಹಾಗಾಗಿ ತ್ಯಾಗ ಬಲಿದಾನದ ಇತಿಹಾಸವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ಮೂಲಕ ಹೊರಾಟವನ್ನು ಗೌರವಿಸುವುದನ್ನು ಕಲಿಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗುರುಮೂರ್ತಿ, ಪ್ರಾಂಶುಪಾಲ ಬಸವರಾಜ್ ಸಿರಿಗೇರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಂಜುಸ್ವಾಮಿ ಮುತ್ತಿನ ಪೆಂಡಿಮಠ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಂಕರ್ ವರದಾಪುರ್, ಅಶೋಕ್, ಶರಣಬಸವ, ಬಸವನಗೌಡ, ವಿಶ್ವನಾಥ್, ರಮೇಶ್, ಶರಣಮ್ಮ, ರಾಹುಲ್ ಹಾಗೂ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಗವಹಿಸಿದ್ದರು.