ತ್ಯಾಗ, ಬಲಿದಾನಗಳಿಂದ ವಿಮೋಚನೆ ದೊರಕಿದೆ: ನಾಗರಾಜ್ ಗುತ್ತೇದಾರ್

ತ್ಯಾಗ, ಬಲಿದಾನಗಳಿಂದ ವಿಮೋಚನೆ ದೊರಕಿದೆ: ನಾಗರಾಜ್ ಗುತ್ತೇದಾರ್

ಗಂಗಾವತಿ: ನಗರದ ಸಂಕಲ್ಪ ಪಿ.ಯು. ಕಾಲೇಜಿನಲ್ಲಿ ಕಲ್ಯಾಣ ಕರ್ನಾಟಕ ವಿಮೋಚನಾ ದಿನಾಚರಣೆಯ ಪ್ರಯುಕ್ತ ಧ್ವಜಾರೋಹಣವನ್ನು ನೆರವೇರಿಸಿ ಸಂಸ್ಥೆಯ ಕಾರ್ಯಾಧ್ಯಕ್ಷರಾದ ನಾಗರಾಜ್ ಗುತ್ತೇದಾರ್ ವಕೀಲರು ಮಾತನಾಡುತ್ತಾ ಭಾರತ ೧೯೪೭ ಆಗಸ್ಟ್-೧೫ ರಂದು ಸ್ವಾತಂತ್ರ‍್ಯ ಗಳಿಸಿಕೊಂಡರೂ ಸಹ ದೇಶದ ಮೂರು ಪ್ರಾಂತ್ಯಗಳಾದ ಜಮ್ಮು ಕಾಶ್ಮೀರ್, ಜುನಾಗಡ್, ಹೈದರಾಬಾದ್ ಪ್ರಾಂತ್ಯಗಳು ಸ್ವಾಯತ್ತತೆ ಘೋಷಿಸಿಕೊಂಡವು. ಹೈದರಾಬಾದ್ ಪ್ರದೇಶ ವಿಸ್ತೀರ್ಣದಲ್ಲಿ ದೊಡ್ಡದಿದ್ದು ಭಾರತದಲ್ಲಿ ವಿಲೀನವಾಗದೆ ಹೊರಗೆ ಉಳಿಯಿತು.

ನವಾಬನ ದುರಾಡಳಿತದಿಂದ ಬೇಸತ್ತ ಹೈದರಾಬಾದ್ ಪ್ರಾಂತ್ಯದ ಜನ ಆತನ ವಿರುದ್ಧ ದಂಗೆ ಏಳುವ ಮಟ್ಟಕ್ಕೆ ಬಂದಾಗ ಹೈದರಾಬಾದ್ ನವಾಬನು ತನ್ನ ಖಾಸಗಿ ರಜಾಕರ ಸೇನೆಯನ್ನು ಬಳಸಿಕೊಂಡು ನಾಗರೀಕರ ಮೇಲೆ ಹಿಂಸಾ ಕೃತ್ಯಗಳನ್ನು, ದೌರ್ಜನ್ಯಗಳನ್ನ ನಡೆಸಲು ಆರಂಭಿಸಿದನು. ಈ ಸಂದರ್ಭದಲ್ಲಿ ಸ್ವಾಮಿ ರಮಾನಂದತೀರ್ಥರು ಈ ಪ್ರದೇಶದ ಜನರಿಗೆ ಚಳುವಳಿಗೆ ಧುಮುಕುವಂತೆ ಕರೆ ನೀಡಿ ವಿಮೋಚನೆಯ ಕಡೆಗೆ ಜನರ ಗಮನ ಸೆಳೆದರು.

ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಗೊರಟಾ(ಬಿ) ಗ್ರಾಮದಲ್ಲಿ ಹೈದರಾಬಾದ್ ನಿಜಾಮನ ರಜಾಕಾರರ ಸೇನೆ ದೇಶಭಕ್ತ ನಾಗರೀಕರನ್ನು ಹತ್ಯೆ ಮಾಡುವ ಮೂಲಕ ರಕ್ತದೋಕುಳಿಯನ್ನು ಹರಿಸಿತು. ಹಾಗಾಗಿ ಗೋರಟಾ (ಬಿ) ಗ್ರಾಮವನ್ನು ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ನಾವು ಕರೆಯುತ್ತೇವೆ. ಇದೆಲ್ಲವನ್ನು ಅರಿತ ಅಂದಿನ ಗೃಹಸಚಿವರಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ರವರ ಸಲಹೆಯ ಮೇರೆಗೆ ಹೈದರಾಬಾದ್ ಪ್ರಾಂತ್ಯದ ಮೇಲೆ “ಆಪರೇಷನ್ ಪೋಲೊ” ಪೋಲೀಸ್ ಕಾರ್ಯಾಚರಣೆ ಮಾಡುವ ಮೂಲಕ ಹೈದರಾಬಾದ್ ಕರ್ನಾಟಕದ ವಿಮೋಚನೆಗೆ ಸಹಕರಿಸಿದರು.

ಈ ಹೋರಾಟದಲ್ಲಿ ನಮ್ಮ-ನಮ್ಮ ಗ್ರಾಮ, ನಗರಗಳ ಸ್ಥಳಿಯ ಹೋರಾಟಗಾರರು ಅನೇಕ ತ್ಯಾಗ ಬಲಿದಾನಗಳನ್ನು ಮಾಡಿ ಆತ್ಮರ್ಪಣೆ ಮಾಡಿಕೊಳ್ಳುವ ಮೂಲಕ ನಮ್ಮ ಪ್ರದೇಶಕ್ಕೆ ಪೂರ್ಣ ಸ್ವತಂತ್ರ ದೊರಕಲು ಕಾರಣೀಭೂತರಾದರು. ಅವರ ತ್ಯಾಗ ಮತ್ತು ಬಲಿದಾನದ ಪ್ರಯುಕ್ತ ಅಂದಿನ ಹೈದರಾಬಾದ್ ಕರ್ನಾಟಕ ಇಂದಿನ ಕಲ್ಯಾಣ ಕರ್ನಾಟಕ ವಿಮೋಚನೆಗೊಳ್ಳುವ ಮೂಲಕ ನಮಗೆ ಸ್ವಾತಂತ್ರ‍್ಯದ ಬದುಕು ಲಭ್ಯವಾಗಿದೆ. ಹಾಗಾಗಿ ತ್ಯಾಗ ಬಲಿದಾನದ ಇತಿಹಾಸವನ್ನು ಪ್ರತಿಯೊಬ್ಬರೂ ನೆನಪಿಸಿಕೊಳ್ಳುವ ಮೂಲಕ ಹೊರಾಟವನ್ನು ಗೌರವಿಸುವುದನ್ನು ಕಲಿಯಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಉಪನ್ಯಾಸಕರಾದ ಗುರುಮೂರ್ತಿ, ಪ್ರಾಂಶುಪಾಲ ಬಸವರಾಜ್ ಸಿರಿಗೇರಿ ಹಾಗೂ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಮಂಜುಸ್ವಾಮಿ ಮುತ್ತಿನ ಪೆಂಡಿಮಠ ಮಾತನಾಡಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಶಂಕರ್ ವರದಾಪುರ್, ಅಶೋಕ್, ಶರಣಬಸವ, ಬಸವನಗೌಡ, ವಿಶ್ವನಾಥ್, ರಮೇಶ್, ಶರಣಮ್ಮ, ರಾಹುಲ್ ಹಾಗೂ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರು ಬಾಗವಹಿಸಿದ್ದರು.

Leave a Reply