ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆ: ಶರಣಬಸವ ತಾತನನವರು

ಗಂಗಾವತಿ: ಸಂಸ್ಕೃತ ಭಾಷೆ ಎಲ್ಲಾ ಭಾಷೆಗಳ ಮೂಲಭಾಷೆಯಾಗಿದೆ. ಈ ಭಾಷೆಯು ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಇದನ್ನು ದೇವನಗರಲಿಪಿ ಎಂದು ಕರೆಯುತ್ತಾರೆ. ಈ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಭಾಷೆಯು ಯಾವುದೇ ಮತ, ಧರ್ಮಕ್ಕೆ ಮೀಸಲಾಗಿರುವುದಿಲ್ಲ. ಯಾರು ಬೇಕಾದರೂ ಕಲಿಯಬಹುದು, ಇದಕ್ಕೆ ವಯೋಮಿತಿ ಇರುವುದಿಲ್ಲ ಎಂದು ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘದ ಅಧ್ಯಕ್ಷರಾದ ಪೂಜ್ಯ ಶ್ರೀ ಶರಣಬಸವ ತಾತನವರು ತಿಳಿಸಿದರು.
ಅವರು ಡಿಸೆಂಬರ್-೮ ಭಾನುವಾರ ನಗರದ ಹೊಸಳ್ಳಿ ರಸ್ತೆಯ ಕನ್ನಡ ಜಾಗೃತಿ ಭವನದಲ್ಲಿ ನಡೆದ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.
ಈ ಸಂಸ್ಕೃತ ಸಂಭಾಷಣಾ ಶಿಬಿರವು ಶ್ರೀ ಹಾನಗಲ್ಲ ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠಶಾಲೆ, ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿವೃದ್ಧಿ ಸಂಘ, ಕನ್ನಡ ಜಾಗೃತಿ ಸಮಿತಿ ಗಂಗಾವತಿ ಇವರ ಸಹಯೋಗದಲ್ಲಿ ನವೆಂಬರ್-೨೮ ರಿಂದ ೧೧ ದಿನಗಳವರೆಗೆ ೧ನೇ ತರಗತಿಯಿಂದ ೯ನೇ ತರಗತಿ ಮಕ್ಕಳಿಗಾಗಿ ಏರ್ಪಡಿಸಲಾಗಿತ್ತು. ಈ ೧೧ ದಿನಗಳ ಪರ್ಯಂತ ಸಂಸ್ಕೃತ ಶಿಕ್ಷಕರಾದ ಶ್ರೀಮತಿ ಪಂಪಾದೇವಿಯವರು ನಡೆಸಿಕೊಟ್ಟಿದ್ದು, ಇವರಿಗೆ ಗಣ್ಯವ್ಯಕ್ತಿಗಳಿಂದ ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ ಮಾಡಿದರು, ಅಧ್ಯಕ್ಷತೆಯನ್ನು ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ವಕೀಲರು ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಡಾ. ಷಣ್ಮುಖಸ್ವಾಮಿ ಕಡ್ಡಿಪುಡಿ ವಕೀಲರು ಸಂಡೂರು, ಸಮಾಜ ಸೇವಕರಾದ ಹಿರೇಜಂತಕಲ್ಲಿನ ಎಸ್.ಬಿ ಹಿರೇಮಠ, ಉಪನ್ಯಾಸಕರಾದ ವಿರುಪಾಕ್ಷಯ್ಯ, ಶಿಕ್ಷಕರಾದ ದುರ್ಗಾಪ್ರಸಾದ, ಕೆ.ಎಸ್.ಆರ್.ಟಿ.ಸಿ ನಿವೃತ್ತ ನಿರ್ವಾಹಕರಾದ ಬಸವನಗೌಡ ಹೊಸಕೇರಿ, ಶಿಕ್ಷಕಿಯಾದ ಶೃತಿ ತಾವರಗೇರಾ ಆಗಮಿಸಿದ್ದರು.
ಈ ಕಾರ್ಯಕ್ರಮದ ವಂದನಾರ್ಪಣೆಯನ್ನು ಅರಳಹಳ್ಳಿಯ ಬೃಹನ್ಮಠದ ರೇವಣಸಿದ್ದಯ್ಯ ತಾತನವರು ಮಾಡಿದರು.

Leave a Reply