ಗಾನಯೋಗಿ ಪದ್ಮಭೂಷಣ ಶ್ರೀ ಪುಟ್ಟರಾಜ ಗವಾಯಿಗಳವರ ೧೧೧ನೆಯ ಜಯಂತೋತ್ಸವ. ಸಾಹಿತ್ಯ ಸಂಗೀತ ಒಂದೇ ನಾಣ್ಯದ ಎರಡು ಮುಖಗಳು: ಕಾಶಿಮ್ ಅಲಿ ಮುದ್ದಾಬಳ್ಳಿ.

ಗಂಗಾವತಿ: ಸಾಹಿತ್ಯ, ಸಂಗೀತ ಒಂದೇ ನಾಣ್ಯದ ಎರಡು ಮುಖಗಳಾಗಿದ್ದು ಕನ್ನಡ ಸಾಹಿತ್ಯ ಸಮ್ಮೇಳನದಂಥ ಕಾರ್ಯಕ್ರಮಗಳಲ್ಲಿ ಸಂಗೀತ ಕಲಾವಿದರನ್ನು ನಿರ್ಲಕ್ಷಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಸಾಹಿತ್ಯಕ್ಕೆ ಶಕ್ತಿ ತುಂಬುವುದೇ ಸಂಗೀತ. ಅಂತಹ ಅದ್ಭುತ ಶಕ್ತಿಯನ್ನು ಹೊಂದಿದ ಸಂಗೀತ ಪ್ರತಿಯೊಬ್ಬರ ಮನೆಯು ಒಬ್ಬ ಸಂಗೀತಗಾರನ್ನು ಹೊಂದಬೇಕು. ಯಾವುದೇ ಅಂಗವಿಕಲಾಂಗ ಅನಾಥ ಮಕ್ಕಳು ಇದ್ದಲ್ಲಿ ಅಂತಹ ಮಕ್ಕಳನ್ನು ಗದುಗಿನ ವೀರೇಶ್ವರ ಪುಣ್ಯಶ್ರಮಕ್ಕೆ ಸೇರ್ಪಡೆಗೊಳಿಸುವುದರ ಮೂಲಕ ಸ್ವಾವಲಂಬಿ ಬದುಕಿಗಾಗಿ ಸಮಾಜ ಮುಖಿವಾಗಿ ಜೀವಿಸಲು ಅವಕಾಶ ಕಲ್ಪಿಸಬೇಕೆಂದು ಗಾನಯೋಗಿ ಶ್ರೀಗುರು ಪಂಚಾಕ್ಷರಿ ಸಂಗೀತ ಮಹಾವಿದ್ಯಾಲಯದ ಅಧ್ಯಕ್ಷ ಡಾ. ಕಾಶಿಮಲಿ ಮುದ್ದಾಬಳ್ಳಿ ಹೇಳಿದರು.

ಅವರು ಬುಧವಾರದಂದು ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನದ ವೇದಿಕೆಯಲ್ಲಿ ಡಾ. ಪಂಡಿತ್ ಪುಟ್ಟರಾಜ ಸಂಗೀತ ಕಲಾ ಪರಿಷತ್ ಹಾಗೂ ಶ್ರೀ ಕೊಟ್ಟೂರು ಬಸವೇಶ್ವರ ದೇವಸ್ಥಾನ ಸಮಿತಿ ಆಯೋಜಿಸಿದ ಡಾ. ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ೧೧೧ನೇ ಜಯಂತೋತ್ಸವ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದುಗಿನ ಮಾದರಿಯಲ್ಲಿ ಭತ್ತದ ಕಣಜವನ್ನು ಎರಡನೆಯ ಕೈಲಾಸವನ್ನಾಗಿಸಿದ ಕೀರ್ತಿ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ. ಈ ಹಿಂದಿನಂತೆ ಬೆಳ್ಳಿ ತುಲಾಭಾರವನ್ನು ಗಂಗಾವತಿಯ ಸರ್ವಭಕ್ತರ ಸಹಕಾರದಿಂದ ನಡೆಸುವುದರ ಮೂಲಕ ಅಂಧ ಅನಾಥ ನಿರ್ಗತಿಕರ ಮಕ್ಕಳ ಬದುಕಿಗೆ ಆಸರೆ ಆಗಬೇಕೆಂದು ಸಲಹೆ ನೀಡಿದರು.

ಸಮಾರಂಭದ ಉದ್ಘಾಟನೆಯನ್ನು ಜೆ. ನಾಗೇಶ್‌ರಾವ್ ನೆರವೇರಿಸಿ ಮಾತನಾಡಿ ನಗರದಲ್ಲಿ ಸಾಕಷ್ಟು ಸಂಗೀತ ಶಾಲೆಗಳನ್ನು ಹೊಂದಿದ್ದು, ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ, ಸಂಗೀತ ಶಿಕ್ಷಣಕ್ಕೆ ಹೆಚ್ಚಿನ ಅಗತ್ಯ ನೀಡಬೇಕು ಎಂದು ತಿಳಿಸಿದರು.

ಅಧ್ಯಕ್ಷತೆಯನ್ನು ವೆಂಕಟೇಶ್ ದಾಸನಾಳವಹಿಸಿ ಮಾತನಾಡಿ, ಹಾನಗಲ್ಲ ಗುರು ಕುಮಾರಸ್ವಾಮಿಗಳವರ ದಿವ್ಯ ದೃಷ್ಟಿಯ ಫಲವೇ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಹಾಗೂ ಡಾ. ಪುಟ್ಟರಾಜ ಗವಾಯಿಗಳು. ಇಂತಹ ದೈವಿ ಪುರುಷರ ಅನುಗ್ರಹದಿಂದ ಸಂಗೀತ ಕ್ಷೇತ್ರ ಸಮೃದ್ಧಿಯಾಗಿದೆ ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಹೊಸಳ್ಳಿ ಶಂಕರಗೌಡ, ಮಲ್ಲಿಕಾರ್ಜುನಗೌಡ ಪಾಟೀಲ್, ಸುದರ್ಶನ್ ಜೋಶಿ, ಬಸವನಗೌಡ ಪಾಟೀಲ್, ದರೋಜಿ ನಾಗರಾಜ್ ಶೆಟ್ಟಿ ಉಪಸ್ಥಿತರಿದ್ದರು.

ಇದಕ್ಕೂ ಪೂರ್ವದಲ್ಲಿ ರುದ್ರಯ್ಯಸ್ವಾಮಿ ಅಯೋಧ್ಯ ಶ್ರೀ ಪುಟ್ಟರಾಜ ಗವಾಯಿಗಳವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದರು. ವೇದಿಕೆಯಲ್ಲಿನ ಗಣ್ಯರು ಪುಷ್ಪಾರ್ಚನೆ ನಡೆಸಿದರು. ಬಳಿಕ ಜರುಗಿದ ಸಂಗೀತ ಕಾರ್ಯಕ್ರಮದಲ್ಲಿ ಸಂಗೀತ ಕಲಾವಿದರಿಂದ ತಡರಾತ್ರಿ ೧ ಗಂಟೆಯವರೆಗೆ ಸಂಗೀತ ಕಾರ್ಯಕ್ರಮ ಜರುಗಿತು. ಶಿಕ್ಷಕ ಮೈಲಾರಪ್ಪ ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರೂಪಿಸಿದರು.

Leave a Reply