ಗಂಗಾವತಿ: ಸನಾತನ ಧರ್ಮದ ಪ್ರವರ್ತಕರಾದ ಜಗದ್ಗುರು ಶ್ರೀ ಶಂಕರಾಚಾರ್ಯರಿಂದ ಸ್ಥಾಪಿಸಲ್ಪಟ್ಟ ಕರ್ನಾಟಕದ ಪ್ರಪ್ರಥಮ ಪೀಠವೆಂದಿನಿಸಿದ ಶೃಂಗೇರಿಯ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಕಿರಿಯ ಶ್ರೀಗಳಾದ ಪರಮಪೂಜ್ಯ ಶ್ರೀ ಮಿದುಶೇಖರ ಮಹಾಸ್ವಾಮಿಗಳು ಈಗಾಗಲೇ ವಿಜಯಯಾತ್ರೆಯನ್ನು ಆರಂಭಿಸಿದ್ದು, ಜನವರಿ-೨೧ ರಂದು ಗಂಗಾವತಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ಶೃಂಗೇರಿ ಶಂಕರಮಠದ ಧರ್ಮದರ್ಶಿ ನಾರಾಯಣ್ ರಾವ್ ವೈದ್ಯ ಹೇಳಿದರು.
ಅವರು ಶಂಕರಮಠದ ಕಾರ್ಯಾಲಯದಲ್ಲಿ ಪತ್ರಿಕಾ ವರದಿಗಾರರ ಹಾಗೂ ಮಾಧ್ಯಮದೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಇದಕ್ಕೂ ಪೂರ್ವದಲ್ಲಿ ಸುವರ್ಣ ಭಾರತಿ ಮಹೋತ್ಸವ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸನ್ನಿಧಾನಂಗಳವರ ವಿಜಯಯಾತ್ರೆಯ ಅಮಂತ್ರಣ ಪತ್ರಿಕೆಯನ್ನು ವೇದಿಕೆಯಲ್ಲಿನ ತಾಲೂಕ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರ ಮೇಗುರ್, ಸುದರ್ಶನ್ ಜೋಶಿ, ತಿರುಮಲ್‌ರಾವ್ ಆಲಂಪಲ್ಲಿ, ಮುರಳೀಧರ ಕುಲಕರ್ಣಿ ಇತರರು ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ನಾರಾಯಣರಾವ್ ವೈದ್ಯ ಅವರು ಜನವರಿ-೨೧ ಮಂಗಳವಾರದಂದು ಜುಲೈನಗರದಿಂದ ಮೋಟಾರ್ ಬೈಕ್ ರ‍್ಯಾಲಿ ಮೂಲಕ ಶ್ರೀಗಳನ್ನು ಸ್ವಾಗತಿಸಿ, ಶ್ರೀಗಳ ಪುರ ಪ್ರವೇಶ, ಪೂರ್ಣಕುಂಭ ಸ್ವಾಗತ, ವಾಲ್ಮೀಕಿ ವೃತ್ತದಿಂದ ಶುಭಾಯಾತ್ರೆಯ ಮೂಲಕ ಶಂಕರ ಮಠಕ್ಕೆ ಆಗಮನ, ನಂತರ ಧೂಳಿ ಪಾದಪೂಜೆ, ಜ್ಯೋತಿ ಬೆಳಗಿಸುವುದರ ಮೂಲಕ ನವೀಕೃತ ಸಭಾಂಗಣದ ಉದ್ಘಾಟನೆ ಮಾಡಲಿದ್ದು, ಶ್ರೀಗಳವರಿಗೆ ಫಲ ಸಮರ್ಪಣೆ ಹಾಗೂ ಶ್ರೀಗಳಿಂದ ಆಶೀರ್ವಚನ, ಶ್ರೀ ಚಂದ್ರಮೌಳೇಶ್ವರ ಪೂಜೆ ಪ್ರಸಾದ ವಿನಿಯೋಗ ಜರುಗಲಿದೆ.
ಜನವರಿ-೨೨ ಬುಧವಾರ ಶ್ರೀಮಠದ ರಕ್ಷಕರಿಂದ ಶ್ರೀ ಚಂದ್ರಮೌಳೇಶ್ವರಕ್ಕೆ ಪೂಜೆ, ಶ್ರೀಗಳ ದರ್ಶನ, ಭಕ್ತರಿಂದ ಪಾದಪೂಜೆ, ಭಿಕ್ಷಾ ವಂದನೆ, ಶ್ರೀಗಳಿಂದ ಅನುಗ್ರಹ ಸಂದೇಶ, ಆಶೀರ್ವಚನ, ತೀರ್ಥಪ್ರಸಾದ ವಿತರಣೆ ಹಾಗೂ ಫಲ ಮಂತ್ರಾಕ್ಷತೆಯೊಂದಿಗೆ ವಿಜಯಯಾತ್ರೆ ಸಂಪನ್ನಗೊಳ್ಳಲಿದೆ.
ಈ ಶುಭ ಸಂದರ್ಭದಲ್ಲಿ ಸರ್ವಸಮಾಜದ ಬಂಧುಗಳು, ಅಪಾರ ಸಂಖ್ಯೆಯ ಭಕ್ತಾದಿಗಳು ಈ ಎರಡೂ ದಿನದ ವಿಜಯ ಯಾತ್ರೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಗಳ ಹಾಗೂ ಶ್ರೀ ಶಾರದಾದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ತಿಳಿಸಿದರು.