ಗಂಗಾವತಿ: ನಗರದ ದುರ್ಗಮ್ಮ ದೇವಸ್ಥಾನದ ಹತ್ತಿರವಿರುವ ಶ್ರೀ ಅಂಬಿಗರ ಚೌಡಯ್ಯನವರ ವೃತ್ತದಲ್ಲಿ ಸಮಾಜ ಬಾಂಧವರೆಲ್ಲರೂ ಸೇರಿ ನಿಜಶರಣ ಚೌಡಯ್ಯ ಶರಣರ ಜಯಂತಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಿದರು.
ಡಂಬದವೈರಿ ವೀರಗಣಾಚಾರಿ, ನಿಜದನಗಾರಿ, ಸಮಾಜದಲ್ಲಿ ಮೌಡ್ಯತೆಯ ವಿರುದ್ದ, ಅನಿಷ್ಠ ಪದ್ದತಿಗಳ ವಿರುದ್ದ, ಮೂಡನಂಬಿಕೆಗಳ ವಿರುದ್ಧ ನೇರವಾಗಿ ತಮ್ಮ ವಚನಾಮೃತದ ಮೂಲಕ ಸಮಾಜದ ಅಂಕುಡೊಂಕುಗಳನ್ನು ಕಠೋರವಾಗಿ ನಿಷ್ಠುರವಾಗಿ ತನ್ನ ಹೆಸರಿನಲ್ಲಿಯೇ ವಚನಗಳನ್ನು ಬರೆದ ಏಕೈಕ ನಿಜಶರಣ ಅಂದರೆ ಅದು ಅಂಬಿಗರ ಚೌಡಯ್ಯನವರು ಎಂದು ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಯುವಕ ಸಂಘದ ತಾಲೂಕ ಅಧ್ಯಕ್ಷರಾದ ಹನುಮೇಶ ಭಟಾರಿ ಹೇಳಿದರು.
ಮುಂದುವರೆದು ಮಾತನಾಡಿದ ಅವರು, ೧೨ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಶರಣರಲ್ಲಿ ಇವರು ಕೂಡ ಒಬ್ಬರಾಗಿ ಸಮನ್ವಯತೆ, ಸಹಬಾಳ್ವೆ, ಸಮಾನತೆ ವಿಷಯವಾಗಿ ನೇರವಾಗಿ ಪ್ರತಿಪಾದಿಸುತ್ತಿದ್ದರು. ಇಂತಹ ಒಬ್ಬ ನಾಡಿನ ಶ್ರೇಷ್ಠ ದಾರ್ಶನಿಕನ ೯೦೫ನೇ ಜಯಂತಿಯನ್ನು ಈ ದಿನ ನಾವು ಆಚರಿಸುತ್ತಿದ್ದೇವೆ. ಈ ಶರಣರ ಸಂಸ್ಕೃತಿಯನ್ನು ಉಳಿಸಿ, ಬೆಳೆಸೋಣ ಎಂದು ತಿಳಿಸಿದರು.
ಹಾಗೆಯೇ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದವತಿಯಿಂದ ನೀಡುವ ರಾಜ್ಯಮಟ್ಟದ ಜೆ ನಾರಾಯಣಸ್ವಾಮಿ ಪ್ರಶಸ್ತಿಗೆ ಬಾಜನರಾದ ಗಂಗಾಮತ ಸಮಾಜದ ಪತ್ರಕರ್ತ ಚಂದ್ರಶೇಖರ್ ಮುಕ್ಕುಂದಿ ಇವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರಾದ ಹೆಚ್.ಆರ್.ಶ್ರೀನಾಥ, ನಗರಸಭೆಯ ಅಧ್ಯಕ್ಷ ಮೌಲಸಾಬ, ತಹಸಿಲ್ದಾರರಾದ ಯು. ನಾಗರಾಜ, ಮುಖಂಡರಾದ ನಾರಾಯಣಪ್ಪ ನಾಯಕ, ಸಮಾಜದ ಮುಖಂಡರಾದ ಮುಸ್ಟೂರು ರಾಜಶೇಖರಪ್ಪ, ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಪರಶುರಾಮ ಮಡ್ಡೇರ್, ಬಿ. ಅಶೋಕ, ಅಂಬಿಗರ ಅಂಜಿನಪ್ಪ, ಬಿ. ರಾಜು, ಎಚ್.ವೈ. ಮನಗೂಳಿ, ಮಲ್ಲಿಕಾರ್ಜುನ ಮುಕ್ಕುಂದಿ, ಆನೆಗುಂದಿ ಭೋಗೇಶ್, ಮರಳಿ ನಿರುಪಾದಿ, ಹೊಸಳ್ಳಿ ಮರಿಯಪ್ಪ, ಮರಳಿ ಹೊನ್ನಪ್ಪ, ಕೋಟಿ ಮಹಾದೇವಪ್ಪ, ಸಿದ್ದು ಹೊಸಳ್ಳಿ, ಮಲ್ಲಾಪುರ ಎರಿಸ್ವಾಮಿ, ಭೈರೇಶ, ಹನುಮೇಶ, ಗೋಪಿ, ಮೋಹನ್, ರಾಜೇಂದ್ರ ಬಟಾರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಹಾವೇರಿ ಜಿಲ್ಲೆಯಲ್ಲಿ ಹರಿಯುವ ತುಂಗಭದ್ರ ನದಿಯ ದಂಡೆಯಲ್ಲಿ ಚೌಡದಾನಪುರದಲ್ಲಿ ಅಂಬಿಗರ ಚೌಡಯ್ಯ ಪೀಠ ಇದ್ದು, ಈ ಹಿಂದೆ ೨೦೧೭ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಎಂ.ಬಿ. ಪಾಟೀಲ್ ಅವರು ೩೨ ಕೋಟಿಗಳಲ್ಲಿ ಕೂಡಲಸಂಗಮ ಮಾದರಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಇವರ ಸಮಾಧಿಯನ್ನು ಜೀರ್ಣೋದ್ಧಾರ ಮಾಡುವುದಾಗಿ ಭರವಸೆಯನ್ನು ನೀಡಿದ್ದರು. ಆದರೆ ಆ ಭರವಸೆ ಇನ್ನು ಈಡೇರಿಲ್ಲ, ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮತ್ತೊಮ್ಮೆ ರಾಜ್ಯಕ್ಕೆ ಮುಖ್ಯಮಂತ್ರಿ ಆಗಿರುವುದರಿಂದ ಬಡ ಸಮಾಜದ ಒಳಿತಿಗಾಗಿ ಸಮಾಜದ ಬೇಡಿಕೆಯನ್ನು ಈಡೇರಿಸಬೇಕೆಂದು ಅವರಲ್ಲಿ ವಿನಂತಿಸುತ್ತೇನೆ.