೨೦೨೫-೨೬ನೇ ಸಾಲಿನ ಕ್ರೀಡಾಕೂಟಗಳ ಪೂರ್ವಭಾವಿ ಸಭೆಯಲ್ಲಿ ಶಿವಕಾಂತ ತಳವಾರ ಇವರಿಂದ ದೈಹಿಕ ಶಿಕ್ಷಕರಿಗೆ ಟ್ರ್ಯಾಕ್‌ ಶೂಟ್ ವಿತರಣೆ
ಗಂಗಾವತಿ‌ : ಅಖಂಡ ಗಂಗಾವತಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದೈಹಿಕ ಶಿಕ್ಷಣದ ಶಿಕ್ಷಕರುಗಳಿಗೆ ಇಂದು ಗಂಗಾವತಿ ನಗರದ ಎಂ.ಎನ್.ಎ.ವಿದ್ಯಾಗಿರಿ ಪ್ರೌಢಶಾಲೆಯಲ್ಲಿ ಇಂದು ೨೦೨೫-೨೬ ನೇ ಸಾಲಿನ ಕ್ರೀಡಾಕೂಟಗಳ ಬಗ್ಗೆ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಶಿಕ್ಷಣಾಧಿಕಾರಿಗಳಾದ ನಟೇಶ್ ಹಾಗೂ ಹೊಸದಾಗಿ ದೈಹಿಕ ಶಿಕ್ಷಣ ಪರೀಕ್ಷಕರಾಗಿ ಆಗಮಿಸಿದ ಶ್ರೀಮತಿ ಸರಸ್ವತಿ ಜೂಡಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಕೊಪ್ಪಳ ಜಿಲ್ಲಾಧ್ಯಕ್ಷರಾದ ಶರಣೇಗೌಡ ಪೊಲೀಸ್ ಪಾಟೀಲ್ ಮತ್ತು ತಾಲೂಕ ಪ್ರಾಥಮಿಕ ಶಾಲೆಗಳ ಶಿಕ್ಷಕರ ಸಂಘದ ಅಧ್ಯಕ್ಷರಾದ ಹನುಮಂತಪ್ಪ, ಕಾರ್ಯದರ್ಶಿಗಳಾದ ಬಿ.ಆರ್. ಜೋಷಿ, ಎನ್.ಜಿ.ಒ ಕಾರ್ಯದರ್ಶಿಗಳಾದ ಶರಣಪ್ಪ ಹಕ್ಕಂಡಿ, ಅಧ್ಯಕ್ಷರಾದ ಗ್ರೇಡ್-೧ ಸಂಘದ ಅಧ್ಯಕ್ಷರಾದ ಬಸವರಾಜ್ ವೆಂಕಟಗಿರಿ, ಪ್ರಾಥಮಿಕ ಶಾಲೆಯ ಗ್ರೇಡ್-೨ ಸಂಘದ ಅಧ್ಯಕ್ಷರಾದ ಶಿವಕಾಂತ ತಳವಾರ ಮತ್ತು ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ತಾಲೂಕ ಘಟಕದ ಅಧ್ಯಕ್ಷರಾದ ಯಂಕಪ್ಪ ತಳವಾರ್, ಜಿಲ್ಲಾ ಕಾರ್ಯದರ್ಶಿ ಟಿ. ನಾಗರಾಜ್, ಕಾರಟಗಿ ತಾಲೂಕ ಪ್ರಾ.ಶಾ.ಶಿ ಸಂಘದ ಅಧ್ಯಕ್ಷರಾದ ವಿಠ್ಠಲ್ ಜಿರಗಾಳಿ, ನಾಗಪ್ಪ, ರವಿ ನಾಯಕ, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷರಾದ ಜಯಶ್ರೀ ಸೇರಿದಂತೆ ಸುಮಾರು ಪ್ರಾಥಮಿಕ, ಪ್ರೌಢಶಾಲೆಯ ೭೦ ಶಿಕ್ಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು.
ಸಭೆಯಲ್ಲಿ ೧೪ ವರ್ಷದೊಳಗಿನ ಬಾಲಕ ಬಾಲಕಿಯರಿಗೆ ೧೭ ವರ್ಷದೊಳಗಿನ ಪ್ರೌಢಶಾಲೆಯ ಬಾಲಕ ಬಾಲಕಿಯರಿಗೆ ಇರುವ ಆಟೋಟಗಳ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಹಾಗೂ ಸ.ಮಾ.ಹಿ.ಪ್ರಾ ಆನೆಗುಂದಿ ದೈಹಿಕ ಶಿಕ್ಷಕರಾದ ಶಿವಕಾಂತ್ ತಳವಾರ್ ಇವರು ದೈಹಿಕ ಶಿಕ್ಷಕರಿಗೆ ಟ್ರ್ಯಾಕ್‌ ಶೂಟ್ಸ್ ಸ್ವಂತ ಹಣದಿಂದ ನೀಡಿದರು. ಇವರಿಗೆ ಎಲ್ಲಾ ಸಂಘಗಳ ವತಿಯಿಂದ ಸನ್ಮಾನಿಸಿ ಸತ್ಕರಿಸಲಾಯಿತು.
ಮಾಹಿತಿಗಾಗಿ:
ಯಂಕಪ್ಪ ತಳವಾರ
ತಾಲೂಕ ಘಟಕದ ಅಧ್ಯಕ್ಷರು,
ದೈಹಿಕ ಶಿಕ್ಷಕರ ಸಂಘ
 ಮೊ.ನಂ: ೯೪೪೯೯೨೦೦೯೪
ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆಯ ಫಲಿತಾಂಶ

ಗಂಗಾವತಿ : ಇತ್ತೀಚೆಗೆ ಸಿಂಗಾಪುರದಲ್ಲಿ ಅಂತರಾಷ್ಟ್ರೀಯ ಮಟ್ಟದ ಅಬಾಕಸ್ ಮತ್ತು ಮೆಂಟಲ್ ಅರಿಥ್ಮೆಟಿಕ್ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಅದರಲ್ಲಿ, ಗಂಗಾವತಿ ನಗರದ ಜೀನಿಯಸ್ ಅಬಾಕಸ್ ಸೆಂಟರ್‌ನ ಕುಮಾರಿ ಸಹಸ್ರ.ಹೆಚ್, ಕುಮಾರಿ ರೋಜಾ ಮತ್ತು ಖುಷಿತ್ ಆರಾಧ್ಯ. ಈ ೦೩ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ, ಅತ್ಯುತ್ತಮ ಫಲಿತಾಂಶ ಪಡೆದು ಸಂಸ್ಥೆಗೆ ಹಾಗೂ ಗಂಗಾವತಿ ನಗರಕ್ಕೆ ಕೀರ್ತಿಯನ್ನು ತಂದಿರುತ್ತಾರೆ.

ಈ ಫಲಿತಾಂಶಕ್ಕಾಗಿ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಶೈಲಜಾ ಒಡೆಯರ್ ಮತ್ತು ಆಡಳಿತಾಧಿಕಾರಿ ಬಿ.ಎಸ್ ಪ್ರಕಾಶ ಅವರಿಗೆ ಅಮೇಜಿಂಗ್ ಕೋಚ್ ಮೆಡಲ್‌ನ್ನು ಪ್ರಧಾನ ಮಾಡಲಾಗಿದೆ.

ವಿದ್ಯಾರ್ಥಿಗಳ ಈ ಯಶಸ್ಸಿಗೆ ಕಾರಣೀಕರ್ತರಾದ ಪಾಲಕರಿಗೂ, ಶಿಕ್ಷಕ ವೃಂದದವರಿಗೂ ಸಂಸ್ಥೆಯ ವತಿಯಿಂದ ಅಭಿನಂದನೆಗಳನ್ನು ತಿಳಿಸಲಾಯಿತು.

ಮಾಹಿತಿಗಾಗಿ
(ಶ್ರೀಮತಿ ಶೈಲಜಾ ಒಡೆಯರ್)
ಸಂಸ್ಥೆಯ ಮುಖ್ಯಸ್ಥರು,
ಮೊ.ನಂ: ೯೮೪೫೩೬೨೫೬೭

ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಭರದ್ವಾಜ್

ಗಂಗಾವತಿ : ನಗರದ ಬಸ್ ನಿಲ್ದಾಣದ ಹತ್ತಿರ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಜೂನ್ ೨೫, ಬುಧವಾರದಂದು ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಜರುಗಿತು. ಸಭೆಯನ್ನು ಸಂಘದ ಕಾನೂನು ಸಲಹೆಗಾರ ಶೇಖರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಾಯಿತು.

ಸಭೆಯಲ್ಲಿ ಮಾತನಾಡಿದ ಶೇಖರಗೌಡ ಪಾಟೀಲ್ ಅವರು ಸಂಘದ ಮೂಲ ಧ್ಯೇಯ ಮತ್ತು ಉದ್ದೇಶಗಳ ಕುರಿತು ಸದಸ್ಯರಿಗೆ ವಿವರವಾಗಿ ತಿಳಿಸಿದರು. ಪ್ರಸ್ತುತ ಜಿಲ್ಲೆಯಾದ್ಯಂತ ಅಂತರರಾಜ್ಯ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ವಿಚಾರವನ್ನು ಹೇಳಿದರು.

ಮಹಿಳಾ ಕಾರ್ಮಿಕರಿಗೆ ನಿತ್ಯ ಎದುರಾಗುವ ತೊಂದರೆಗಳು ಮತ್ತು ಕಾರ್ಮಿಕರಿಗೆ ಅನ್ವಯಿಸುವ ಕಾಯ್ದೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕಾರ್ಮಿಕರ ಬೋಗಸ್ ಕಾರ್ಡ್‌ಗಳು ಕಂಡುಬಂದರೆ ತಕ್ಷಣವೇ ಸಂಘ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.

ಈ ಸಂದರ್ಭ ಮೃತ ಕಾರ್ಮಿಕ ಸೋಮಪ್ಪ ಬುನಾದಿ ಅವರ ಸ್ಮರಣಾರ್ಥವಾಗಿ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗೌರವಾಧ್ಯಕ್ಷ ಭಾರಧ್ವಾಜ್ ಅವರು ಮಾತನಾಡಿ, ಇದು ನೋಂದಣಿ ಪೂರ್ವ ಸಭೆಯಾಗಿದ್ದು, ಶೀಘ್ರದಲ್ಲಿಯೇ ಸಂಘದ ಅಧಿಕೃತ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.

ಅವರು ಮುಂದುವರಿದು, ಎಲ್ಲಾ ಸದಸ್ಯರು ಸಂಘದ ನೀತಿ-ನಿಯಮಗಳಿಗೆ ಬದ್ಧರಾಗಿ, ಸಂಘದ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.

 

(ಭರದ್ವಾಜ್)
ಗೌರವಾಧ್ಯಕ್ಷರು
ಮೊ: ೯೭೪೦೭೫೭೫೫೦

ಜಿಲ್ಲಾ ಕಾರಾಗೃಹದ ಬಂಧಿಗಳಿಗೆ ಧ್ಯಾನದ ಮೂಲಕ ಮನ ಪರಿವರ್ತನೆಗೊಳ್ಳಲು ಕರೆ: ಲಲಿತಾ ಕಂದಗಲ್

ಗಂಗಾವತಿ : ಧ್ಯಾನ, ಜ್ಞಾನ, ಸತ್ಸಂಗ, ಮತ್ತು ಸ್ವಾಧ್ಯಾಯಗಳು ಎಂತಹ ಕಠಿಣ ಮನಸುಗಳನ್ನು ಕೂಡ ಪರಿವರ್ತನೆ ಗೊಳಿಸಬಲ್ಲವು ಎಂದು ಧ್ಯಾನ ಶಿಕ್ಷಕಿ ಲಲಿತಾ ನಾರಾಯಣ ಕಂದಗಲ್ ರವರು ನುಡಿದರು.

ಅವರು ಜೂನ್-೨೨ ಭಾನುವಾರ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನಡೆದ ʼಚಿಂತನ ಮಂಥನʼ ಕಾರ್ಯಕ್ರಮದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಕಾರಾಗೃಹದ ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದರು.

“ಜೈಲುವಾಸ ಶಿಕ್ಷೆಯಲ್ಲ, ಅದು  ಒಂದು ಹೊಸ ಶಿಕ್ಷಣ,” ಎಂದು ಅವರು ಹೇಳಿದರು. ಅನೇಕ ಮಹನೀಯರಾದ ನೆಹರು, ಗಾಂಧಿ, ನೆಲ್ಸನ್ ಮಂಡೇಲಾರಂತಹ ಜೈಲುವಾಸದಲ್ಲಿದ್ದಾಗಲೇ ಆ ಸಂದರ್ಭವನ್ನು ಅಧ್ಯಯನಕ್ಕಾಗಿ, ಬರವಣಿಗೆಗಾಗಿ ಬಳಸಿಕೊಂಡು ಜೈಲುವಾಸವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.

ಅದೇ ರೀತಿ ನೀವು ಕೂಡ ಧ್ಯಾನ, ಅಧ್ಯಯನದಲ್ಲಿ ತೊಡಗಿ ಪರಿವರ್ತನೆಗೆ ಮುಂದಾಗಿ ಎಂದು ನುಡಿದರು. ಕಾರಾಗೃಹದಂತ ಸ್ಥಳಗಳಲ್ಲಿ ಚಿಂತನ ಮಂಥನದಂತಹ ಅತ್ಯುತ್ತಮ ಮನ ಪರಿವರ್ತನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರಾಗೃಹ ಅಧ್ಯಕ್ಷಕರನ್ನು ಮತ್ತು ಅಲ್ಲಿನ ಸಿಬ್ಬಂದಿಗಳನ್ನು ತುಂಬು ಹೃದಯದಿಂದ ಅಭಿನಂದಿಸಿದರು.

ವಿಶೇಷ ಆಹ್ವಾನಿತರಾದ ಡಾ. ನಾರಾಯಣ ಕಂದಗಲ್ ರವರು ಬಂಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪಶ್ಚಾತಾಪಕ್ಕಿಂತ ಮಿಗಿಲಾದ ಪರಿವರ್ತನೆ ಮತ್ತೊಂದಿಲ್ಲ. ನಿಮ್ಮೊಳಗಿನ ಅರಿವೇ ನಿಮಗೆ ಗುರು. ನೀವು ಈ ಕ್ಷಣದಲ್ಲಿಯೇ ಪರಿವರ್ತನೆಗೊಳ್ಳಲು ಸಾಧ್ಯವಿದೆ. ಅದಕ್ಕೆ ನೀವೆಲ್ಲ ಪ್ರಯತ್ನಿಸಿ ಎಂದು ನುಡಿದರು.

ಜೈಲಿನ ಬಂಧಿಯೊಬ್ಬರು ಇಂತಹ ಧ್ಯಾನ, ಸತ್ಸಂಗದಂತಹ ಸಂಗತಿ ನನಗೆ ಮೊದಲೇ ತಿಳಿದಿದ್ದರೆ ಬಹುಶಃ ನಾನು ಈ ಸ್ಥಳಕ್ಕೆ ಬರುತ್ತಿರಲಿಲ್ಲವೇನೊ ಎಂದು ಭಾವುಕರಾಗಿ ನುಡಿದರು.

ಕೊಪ್ಪಳ ಜಿಲ್ಲಾ ಕಾರಾಗೃಹದ ಅಧ್ಯಕ್ಷಕರಾದ ಅಂಬರೀಶ್ ಪೂಜಾರ್ ರವರು ಅಧ್ಯಕ್ಷತೆ ವಹಿಸಿ ಧ್ಯಾನ ಶಿಕ್ಷಕರ ಸಲಹೆಗಳನ್ನು ಗಂಭೀರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.

ಮಾನಸಿಕ ಆಪ್ತ ಸಮಾಲೋಚಕರಾದ ಏ. ಕೆ. ಹಾವೋಜಿ ಅವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಜೈಲಿನ ಸಿಬ್ಬಂದಿ ರಾಥೋಡ್ ರವರು ಪ್ರಾರ್ಥನೆ ಮಾಡಿದರು.

ಜೈಲರ್ ಶ್ರೀರಾಮುಲು, ಸಹಾಯಕ ಜೈಲರ್ ಎಲ್. ಎಸ್. ತಿಪ್ಪೇಸ್ವಾಮಿ ಹಾಗೂ ಜೈಲಿನ ಇತರ ಸಿಬ್ಬಂದಿ ಉಪಸ್ಥಿತರಿದ್ದರು.

 

ಮಾಹಿತಿಗಾಗಿ
ಶ್ರೀಮತಿ ಲಲಿತಾ ನಾರಾಯಣ ಕಂದಗಲ್
ಧ್ಯಾನ ಶಿಕ್ಷಕರು, ಗಂಗಾವತಿ.
ಮೊ ನಂ: ೯೪೮೦೭೭೨೩೩೨

ಮಕ್ಕಳ ಕವಿತೆಗಳ ಗುಬ್ಬಿ ಗೂಡು ಗೊರೂರು ಅನಂತರಾಜು, ಹಾಸನ.

ಹಾಸನದ ಕವಯಿತ್ರಿ ಶ್ರೀವಿಜಯ ಅವರ ಗುಬ್ಬಿಗೂಡು ಮಕ್ಕಳ ಕವನ ಸಂಕಲನದಲ್ಲಿ 57 ಕವಿತೆಗಳಿವೆ. ವೃತ್ತಿಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯಾದ ಬಳಿಕವೂ ಮಕ್ಕಳ ಒಡನಾಟದಲ್ಲಿದ್ದು ಪಾಠ ಮಾಡುವಾಗಿನ ಶಾಲಾ ಪಠ್ಯಗಳ ಪದ್ಯಗಳು ಇವರ ನೆನಪಿನಾಳದಲ್ಲಿ ಪ್ರಭಾವ ಬೀರಿ ಆ ದಿಶೆಯಲ್ಲಿ, ಕೆಲವು ಶಿಶುಗೀತೆಗಳು ರಚನೆಗೊಂಡಿವೆ.

“ಹಗಲಲ್ಲಿ ಸೂರ್ಯನ, ಇರುಳಲಿ ಚಂದ್ರನ ಇಟ್ಟವನಾರಮ್ಮ, ಕಪ್ಪನೆ ಮುಗಿಲಲಿ ಹನಿ ಹನಿ ಮಳೆಯೂ ಇಟ್ಟವನಾರಮ್ಮ….” ಎಂಬ ಸಾಲುಗಳ ಮೂಲಕ ತಾಯಿ-ಮಗು ಸಂಭಾಷಣೆಯ ಕಲ್ಪನೆ ಮೂಡಿಸಿ, ಕಲಾತ್ಮಕ ಭಾವವನ್ನೂ ತೋರಿಸಿದ್ದಾರೆ.

ಮಗುವಿನ ಮುಗ್ದ ಪ್ರಶ್ನೆಗಳಿಗೆ ತಾಯಿಯ ಜಾಣ್ಮಿಯ ಉತ್ತರ ಸರಳ ಸಾಲುಗಳಲ್ಲಿ ರಚಿಸುವುದು ಮೇಲ್ನೋಟಕ್ಕೆ ಸುಲಭವೆಂದುಕೊಂಡರೂ, ಪ್ರಾಸಬದ್ದತೆಯಲ್ಲಿನ ರಚನೆ ಅಷ್ಟೇ ಪ್ರಾಸವೂ ಹೌದು. ಶಿಶು ಕಾವ್ಯ ರಚನೆಗೆ ಪದಕೌಶಲ್ಯವೂ ಬೇಕು. ಮಗು ಕೇಳುವ ಜಗದ ಕೌತುಕದ ಪ್ರಶ್ನೆಗೆ ತಾಯಿ ಉತ್ತರಿಸಲಾಗದೆ ಮೌನಕ್ಕೆ ಶರಣಾಗಿದ್ದಾಳೆ.

“ಹೂವಿಂದ ಹೂವಿಗೆ ಹಾರುವ
ಚಿಟ್ಟೆಗೆ ಬಣ್ಣ ಬಳಿದವನಾರಮ್ಮ
ತಾಯಿಯ ಹೃದಯದಿ ಮಮತೆ
ಪ್ರೀತಿಯ ಇಟ್ಟವನಾರಮ್ಮ”

“ರಾತ್ರಿ ಆಕಾಶ ತೋರಿಸಿ ಮನೆಯ ಮಹಡಿಯಲ್ಲಿ ತುತ್ತು ತಿನಿಸುತ್ತಿರುವ ತಾಯಿ ಮಗುವಿನ ಪ್ರಶ್ನೆಗಳ ಸರಮಾಲೆಗೆ ತತ್ತರಿಸಿ ಉತ್ತರದ ಹುಡುಕಾಟದಲ್ಲಿ ಆಕಾಶ ನೋಡಿದ್ದಾಳೆ ಪಾಪ”. ಇನ್ನು, ನಮ್ಮ ಮನೆಯಲ್ಲೊಂದು ಪುಟ್ಟ ಪಾಪವಿರುವುದು ಎಂಬ ಶಿಶು ಕಾವ್ಯ ನೆನಪಿಸುತ್ತದೆ ಈ ಪದ್ಯದ ಸಾಲು

“ನಮ್ಮ ಮನೆಗೆ ಒಂದು ಪುಟ್ಟ ಪಾಪು ಬಂದಿತು.
ಎತ್ತಿಕೊಳ್ಳಲು ಹೋದರೆ ಅಮ್ಮ ಬಂದು ತಡೆದಳು
ಪ್ರೀತಿಯಿಂದ ಪಾಪು ಅಪ್ಪಿ
ಮುತ್ತು ಕೊಟ್ಟಳು”

ಇನ್ನೂ ನೀನ್ಯಾರಿಗಾದೆಯೋ ಎಲೆ ಮಾನವ.. ಎಂಬ ಗೋವಿನ ಹಾಡಿನ ಮಾದರಿಯ ಈ ಪದ್ಯದಲ್ಲಿ ಪರಿಸರ ಕಾಳಜಿಯಿದೆ.

ಮರ ನಾನು ಹೆಮ್ಮರ
ನಾನೆಂದೂ ಅಮರ
ನೀನಾರಿಗಾದೆಯೋ ಪಾಮರ..

ಈಗ ಬೇಸಿಗೆ ರಜೆ ಮುಗಿದು ಮಕ್ಕಳು ಶಾಲೆಗೆ ಹೊರಡಬೇಕಿದೆ. ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಮೇಡಂ ಬನ್ನಿ ಮಕ್ಕಳೇ ಶಾಲೆಗೆ
ಎಂದು ಕಿರು ಪದ್ಯದಲ್ಲಿ ಕರೆ ನೀಡುತ್ತಾರೆ

“ರಜೆಯು ಮುಗಿಯಿತು
ಶಾಲೆ ತೆರೆಯಿತು
ಬನ್ನಿ ಮಕ್ಕಳೆ ಶಾಲೆಗೆ
ಶಾಲೆ ನಮ್ಮ ದೇಗುಲ
ಗುರುಗಳು ನಮ್ಮ ದೇವರು..”

ನಾವು ಬಾಲ್ಯದಲ್ಲಿ ಕಂಡ ನಮ್ಮ ಹಂಚಿನ ಮನೆಯ ಸೂರಿನಲ್ಲಿ ಗೂಡು ಕಟ್ಟುತ್ತಿದ್ದ ಗುಬ್ಬಚ್ಚಿ ಗೂಡನ್ನು ಇಂದು ಕಾಣುವುದು ಅಪರೂಪ.

“ನಮ್ಮ ಮನೆಯ ಸೂರಿನಲ್ಲಿ
ಗುಬ್ಬಿ ಗೂಡು ಕಟ್ಟಿತು
ಪುಟ್ಟ ಪುಟ್ಟ ಮರಿಗಳೊಡನೆ
ಅಲ್ಲಿ ವಾಸ ಮಾಡಿತು”

ಗಾಳಕ್ಕೆ ಸಿಕ್ಕ ಮೀನೊಂದು ಬೇಟೆಗಾರನಲ್ಲಿ ತನ್ನ ಪ್ರಾಣ ಭಿಕ್ಷೆ ಬೇಡುವುದು ಮರುಕ ಹುಟ್ಟಿಸುತ್ತದೆ.

ಒಂದು ದಿನ ಸಂಜೆ ನಾನು
ಗಾಳ ಹಾಕಿ ಹಿಡಿದೆ ಮೀನು
ದೀನವಾಗಿ ನನ್ನ ನೋಡಿ
ಪ್ರಾಣ ಭಿಕ್ಷೆ ಬೇಡಿತು

ಇನ್ನೂ ಬೇಸಿಗೆ ರಜೆಯಲ್ಲಿ ಅಜ್ಜನ ಮನೆಗೆ ಹೋಗುವ ಮಜವೇ ಬೇರೆ. ಆ ಅಜ್ಜ ಸುಡುಗಾಡು ಹಳ್ಳಿಯಲ್ಲೇ ಇರಲಿ ಅಲ್ಲಿಗೆ ರಜೆಯಲ್ಲಿ ಓಡುವುದೇ ಮಜ. ಹಳ್ಳಿಯ ಗಿಡ, ಮರ, ಕೆರೆ, ಬಯಲು ಅಜ್ಜನ ತೋಟದ ಮನೆ ಮಧ್ಯೆ ಸ್ವಚ್ಛಂದ ವಿಹಾರ ಯಾವ ಮಗುವಿಗೆ ತಾನೇ ಖುಷಿ ನೀಡುವುದಿಲ್ಲ.

ತೋಟದ ನಡುವೆ ಕಟ್ಟಿದ ಮನೆಯಿದು
ಸುತ್ತಲೂ ಮೇಯುವ ಹಸುಕರು
ಕೇಳುವರಾರು ನಮಗಿಲ್ಲಿ

ಗೊರೂರು ಅನಂತರಾಜು
ಹಾಸನ
ಮೊ: 9449462879

ಡಾ. ಪ್ರವೀಣಕುಮಾರ ಬಿರಾದಾರ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟçಪ್ರಶಸ್ತಿ ಲಭಿಸಿದಿರುವುದು ಸ್ವಾಗತಾರ್ಹ: ಶರಣಬಸವ ದೇವರು
ಗಂಗಾವತಿ : ಜ್ಞಾನ ಶಾರದೆ ಅಕಾಡೆಮಿಯ ಸಂಸ್ಥಾಪಕರಾದ ಡಾ. ಪ್ರವೀಣಕುಮಾರ ಬಿರಾದಾರ ಕಲಬುರ್ಗಿ ಅವರಿಗೆ ಭಾರತೀಯ ಶಿಕ್ಷಣ ರತ್ನ ರಾಷ್ಟ್ರಪ್ರಶಸ್ತಿ ಲಭಿಸಿದುದು ಸ್ವಾಗತಾರ್ಹವಾಗಿದೆ ಎಂದು ಪ.ಪೂ ಶ್ರೀ ಶರಣಬಸವ ದೇವರು ಹರ್ಷ ವ್ಯಕ್ತಪಡಿಸಿದ್ದಾರೆ.
ಅವರು ಗಂಗಾವತಿಯ ಹಾನಗಲ್ಲ ಶ್ರೀ ಗುರು ಕುಮಾರೇಶ್ವರ ವೇದ ಮತ್ತು ಸಂಸ್ಕೃತ ಪಾಠ ಶಾಲೆಯು  ಹಾಗೂ ಅರಳಹಳ್ಳಿ ಬೃಹನ್ಮಠದ ಪರವಾಗಿ  ಈ ಶುಭ ಸುದ್ಧಿ ಹಂಚಿಕೊಂಡರು.
ಈ ಪ್ರಶಸ್ತಿ ಜೂನ್‌ 20 ರಂದು, ಶುಕ್ರವಾರ ಬೆಂಗಳೂರಿನ ನಯನ ಸಭಾಂಗಣದಲ್ಲಿ ಅನ್ವೇಷಣೆ ಸಾಂಸ್ಕೃತಿಕ ಅಕಾಡೆಮಿ (ರಿ) ಬೆಂಗಳೂರಿನವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಗೊಂಡಿತು.
ಡಾ. ಪ್ರವೀಣಕುಮಾರ ಬಿರಾದಾರ ಅವರು ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಗಳನ್ನು ಮುಂದುವರೆಸಿ ಇನ್ನೂ ಎತ್ತರಕ್ಕೆ ಬೆಳೆಯುವ ಆಶಯವನ್ನು ವ್ಯಕ್ತಪಡಿಸಿ ಆಶೀರ್ವಾದ ಸಂದೇಶ ನೀಡಿದ್ದಾರೆ.
ಮಾಹಿತಿಗಾಗಿ:
ಶ್ರೀ ಶರಣಬಸವ ದೇವರು
ಶ್ರೀ ರಾಜರಾಜೇಶ್ವರಿ ಬೃಹನ್ಮಠ, ಅರಳಹಳ್ಳಿ
ಮೊ.ನಂ: ೮೧೫೦೯೦೮೩೮೫
ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿಸಿರುವ “ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯೋಶೋಗಾಥೆ” ಎಂಬ ಕೃತಿಯನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ.

ಡಾ. ಮೋಹನ ಗೋಪಾಲರಾಜೇ ಅರಸ್ ಎಂಬ ಹೆಸರು ಕೇಳಿದರೆ ಕೆಲವರಿಗೆ ಅಪರಿಚಿತವಾಗಿರಬಹುದು, ಆದರೆ ಡಾ. ಎಂ.ಜಿ.ಆರ್.ಅರಸ್ ಎಂದರೇ ಸಾಹಿತ್ಯ ವಲಯದಲ್ಲಿ ಎಲ್ಲರಿಗೂ ಪರಿಚಿತರು.

ಚುಟುಕು ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಅದಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟವರು. ಚುಟುಕುಗಳು ಕೂಡ ಸಾಹಿತ್ಯದ ಒಂದು ಪ್ರಕಾರವೇ ಎಂದು ಮೂಗು ಮುರಿಯುವವರೇ ಇದ್ದ ಕಾಲದಲ್ಲಿ ಅದಕ್ಕೆ ಒಂದು ಸ್ಥಾನಮಾನ ಮಹತ್ವ ತಂದುಕೊಟ್ಟವರು ದಿನಕದ ದೇಸಾಯಿಯವರು.

ಚುಟುಕು ಸಾಹಿತ್ಯ ಇಂದು, ನಿನ್ನೆಯದಲ್ಲ. ಇದಕ್ಕೊಂದು ದೀರ್ಘವಾದ ಇತಿಹಾಸವಿದೆ. ಪಾಶ್ಚಿಮಾತ್ಯರಲ್ಲಿ ೧೯ನೇ ಶತಮಾನದ ಕವಿ ಎರ್ಡ್ವರ್ಡ್ ಲೀಯರ್ ನ್ನು ಚುಟುಕು ಸಾಹಿತ್ಯದ ಜನಕನೆಂದೇ ಕರೆಯುತ್ತಾರೆ.

ಖ್ಯಾತನಾಮರಾದ ಹೆಚ್.ಜಿ.ವೆಲ್ಸ್, ಕೆರೋಲ್, ರುಡ್‌ಯಾರ್ಡ್ ಕಿಲ್ಲಿಂಗ್, ಆಗ್ಹೆನ್ ನ್ಯಾಷ್, ಅಡೆನ್ ಜೇಮ್ಸ್ ಬೌಯ್ಸ್, ಟಿ.ಎಸ್.ಎಲಿಯಟ್, ಮಾರ್ಕ್ ಟ್ವೇನ್ ಮೊದಲಾದ ಖ್ಯಾತ ಕವಿಗಳು ಚುಟುಕು ಸಾಹಿತ್ಯದ ಲೋಕಕ್ಕೆ ಉತ್ಸಾಹ ತುಂಬಿದ್ದಾರೆ.

ಭಾರತೀಯ ಸಾಹಿತ್ಯದಲ್ಲಿ ಚುಟುಕು ಸಾಹಿತ್ಯದ ನಾನಾ ರೂಪಗಳ ಪ್ರಕಾರಗಳಿವೆ. ವಚನ ಸಾಹಿತ್ಯ, ಜನಪದ ಸಾಹಿತ್ಯ, ಉರ್ದು ಶಾಯರಿ ಮೊದಲಾದವು ಚುಟುಕು ರೂಪಗಳಾಗಿ ಅಭಿವೃದ್ಧಿಯಾಗಿವೆ. ಡಿ.ವಿ.ಗುಂಡಪ್ಪ ರ “ಮಂಕುತಿಮ್ಮನ ಕಗ್ಗ” ಕೃತಿಯು ಗಂಭೀರ ಚಿಂತನಶೀಲ ಚುಟುಕುಗಳ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧವಾಗಿದೆ.

ಅಷ್ಟೇ ಗಂಭೀರ ಸ್ವರೂಪದ ಬರಹಗಳನ್ನು ದಿನಕರ ದೇಸಾಯಿ, ಚನ್ನವೀರ ಕಣವಿ, ಡಾ. ಎಂ.ಅಕ್ಬರ್ ಅಲಿಯವರ ಚುಟುಕುಗಳಲ್ಲಿ ನಾವು ಕಾಣಬಹುದು. ಚುಟುಕುಗಳಲ್ಲಿ ಪದಲಾಲಿತ್ಯವನ್ನು ಮೆರೆದವರು ವಿ.ಗ.ನಾಯಕ, ಜಿ.ಟಿ.ನಾರಾಯಣರಾವ್, ಡಾ. ಸಿ.ಪಿ.ಕೆ.ರವರು.

ನಗು ಮನದಿ ಲೋಗರ ವಿಕಾರಂಗಳನು ನೋಡಿ
ಬಿಗಿ ತುಟಿಯ ದುಡಿವಂದು ನೋವಪಡುವಂದು
ಪೊಗದಂದ ವಿಶ್ವಜೀವನದ ಜೀವಾಂತರಂಗದಲಿ
ನಗು ನಗುತ ಬಾಳ್, ತೆರಳು ಮಂಕುತಿಮ್ಮ

ಎಂಬ ಡಿವಿಜಿಯವರ ಕಗ್ಗದಂತೆ ನಗು, ಅಳು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಅವುಗಳ ರಸಪಾಕವನ್ನು ಅನುಭವಿಸಿ ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ’ ಎಂಬುದನ್ನು ಧ್ಯೇಯವಾಕ್ಯವಾಗಿಸಿ ಚುಟುಕು ಸಾಹಿತ್ಯ ಪ್ರಕಾರಕ್ಕೆ ಒಂದು ನೆಲೆಯನ್ನು ತಂದುಕೊಡುವಲ್ಲಿ ಡಾ. ಎಂ.ಜಿ.ಆರ್.ಅರಸ್‌ರ ಪಾತ್ರ ಮರೆಯುವುದುಂಟೆ! ಚುಟುಕು ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ ನಾಡಿನಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ರಚಿಸಿ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಬೆಳಕಿಗೆ ತರುವಲ್ಲಿ ಇವರ ಯೋಜನೆ ಸಫಲವೇ! ಜನಸೇವೆಯೇ ಜೀವನ ಪುಸ್ತಕಗಳ ಮೂಲಕ ಜ್ಞಾನ ಪ್ರಸಾರವೇ ಜೀವನದ ಪರಮಪ್ರೇಮವೆಂದು ತಮ್ಮದೇ ವೈದ್ಯವಾರ್ತಾ ಪ್ರಕಾಶನ ಮೂಲಕ ೧೩೭ ಕೃತಿ ನಂತರದ ಚುಟುಕು ಯುಗಾಚಾರ್ಯ ೧೩೮ನೇ ಕೃತಿ.

ಸಿ.ಪಿ.ಕೆ ಚುಟುಕುಗಳು, ಎಚ್.ಎಸ್.ಕೆ ಚುಟುಕುಗಳು, ಚದುರಂಗ ಚುಟುಕುಗಳು, ಅಕಬರ ಅಲಿ ಚುಟುಕುಗಳು ಇವರ ಪ್ರಕಾಶನದ ಚುಟುಕು ಸಂಕಲನಗಳು. ಅರಸ್ ಅವರೇ ಬರೆದ ವೈಶಾಖದ ವೈವಿಧ್ಯ, ಚುಟುಕು ವೈಶಾಖ, ಚುಟುಕು ಮಲ್ಲಿಗೆ, ಚುಟುಕು ಚೈತ್ರ, ಚುಟುಕು ಬೆಳಕುಗಳಲ್ಲಿ ವೈವಿಧ್ಯಮಯ ಚುಟುಕುಗಳಿಂದ ಚುಟುಕು ಪ್ರಿಯರ ಮನಗೆದ್ದಿದ್ದಾರೆ.

ಸತ್ತವರ ಸಮಾಧಿಗಳ ಮೇಲೆ
ಕಾಗೆ ಗೂಬೆಗಳು ಹಿಂಡು
ಗೆದ್ದವರ ಮುಂದೆ ಬೋ
ಪರಾಕು ಧೂರ್ತರುಗಳ ದಂಡು

ಬೋ ಪರಾಕ್ ಸಂಸ್ಕೃತಿಯನ್ನು ವಿಡಂಬಿಸಿರುವ ಅರಸ್ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಮೈಸೂರಿನ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಆಯುರ್ವೇದ ಓದಿ ನಂತರ ಬಿ.ಎ.ಎಂ.ಎಸ್ ಪದವಿ ಪಡೆದರು. ಆಯುರ್ವೇದಿಕ್ ಕಾಲೇಜಿನಲ್ಲಿ ಇವರ ಪ್ರಾಧ್ಯಾಪಕರಾದ ಡಾ. ರಾಘವೇಂದ್ರರಾಯರು ತಮ್ಮ ಶಿಷ್ಯನ ಕುರಿತಂತೆ ಬರೆಯುತ್ತಾ ಅರಸು ಒಬ್ಬ ವಿದ್ಯಾರ್ಥಿ ಮುಖಂಡರಾಗಿ ಕಾಲೇಜಿನ ಏಳಿಗೆಗೆ ಶ್ರಮಿಸಿದ್ದಾರೆ.

ಆಯುರ್ವೇದ ವಿಭಾಗವು ಮೊದಲಿಗೆ ಆಧುನಿಕ ವೈದ್ಯಕೀಯ ಪದ್ದತಿಯ ವಿಭಾಗಕ್ಕೆ ಸೇರಿದ್ದು ಆಯುರ್ವೇದ ವಿಭಾಗದ ಬೇರ್ಪಡೆಗೆ ಶ್ರಮಿಸಿದ್ದಾರೆ. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತನಾಮರಾಗಿ ಆಯುರ್ವೇದ ಪ್ರಚಾರ ಪರಿಷತ್ ಮತ್ತು ಆಯುರ್ವೇದ ಮಂಡಲಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಆಯುರ್ವೇದ ಪದವೀಧರರನ್ನು ಸಂಘಟಿಸಿ ಅಕಾಡೆಮಿ ಆಫ್ ಆಯುರ್ವೇದವನ್ನು ಸ್ಥಾಪಿಸಿ ಏಳಿಗೆಗಾಗಿ ಶ್ರಮಿಸಿದ್ದಾರೆ.

ಇವರ ಸಂಪಾದಕತ್ವದಲ್ಲಿ ಬರುವ ವೈದ್ಯವಾರ್ತಾ ಮಾಸಿಕ ಬೆಳ್ಳಿಹಬ್ಬ ಆಚರಿಸಿದೆ. ಡಾ. ಎಂ.ಜಿ.ಆರ್.ಅರಸ್‌ರಂತಹ ಆಯುರ್ವೇದ ಅಭಿಮಾನಿಗಳು ತಮ್ಮ ನಿರಂತರ ದುಡಿಮೆಯಿಂದ ಆಯುರ್ವೇದಕ್ಕೆ ಇಂದು ಅಲೋಪಥಿಗೆ ಸಮನಾದ ಸ್ಥಾನವನ್ನು ದೊರಕಿದೆ ಎಂಬುದಾಗಿ ಡಾ. ಸಿ.ಕೆ.ಎನ್.ರಾಜರವರು ಬರೆದಿದ್ದಾರೆ.

ಅರಸು ಅವರ ಸತತ ಪರಿಶ್ರಮದ ಫಲವಾಗಿ ಸರ್ಕಾರವು ಮೂವರು ಆಯುರ್ವೇದ ವೈದ್ಯರಿಗೆ ಧನ್ವಂತರಿ ಪ್ರಶಸ್ತಿ, ಒಬ್ಬರು ಯುನಾನಿ ವೈದ್ಯ ಮತ್ತು ಒಬ್ಬರು ಹೋಮಿಯೊಪತಿ ವೈದ್ಯರಿಗೆ ಹಾನಿಮನ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದು ಮೈಸೂರಿನ ಪ್ರಸಿದ್ದ ಸಾಹಿತಿಗಳ ಒಡನಾಟದಲ್ಲಿ ಚುಟುಕು ಸಾಹಿತ್ಯದಲ್ಲಿ ಆಸಕ್ತಿ ತೆಳೆದು ಪರಿಷತ್ತು ಹುಟ್ಟುಹಾಕಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಜನಪ್ರಿಯಗೊಳಿಸಿದರು.

ಖ್ಯಾತನಾಮರಾದ ಎಚ್.ಎಸ್.ಕೆ, ಜಿ.ಟಿ.ನಾರಯಣರಾವ್, ನ್ಯಾಯಮೂರ್ತಿ ಜಿನದತ್ತ ದೇಸಾಯಿ, ಚನ್ನವೀರ ಕಣವಿ, ಪಂಚಾಕ್ಷರಿ ಹೊಸಮಠ, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಅಕಬರ ಅಲಿ, ಹಿರೇಮಗಳೂರು ಕಣ್ಣನ್ ಮೊದಲಾಗಿ ಕವಿ ಸಾಹಿತಿಗಳನ್ನು ಸಮಾರಂಭಕ್ಕೆ ಕರೆಸಿ ಚುಟುಕು ಸಮ್ಮೇಳನಕ್ಕೆ ಶೋಭೆ ತಂದರು.

ಪ್ರೀತಿ ಇದ್ದಲ್ಲಿ
ಅಂಗಳವೇ ಅರಮನೆ
ದ್ವೇಷ ಇದ್ದಲ್ಲಿ
ಅರಮನೆಯೇ ಸೆರೆಮನೆ

ದ್ವೇಷ ಪ್ರೀತಿ ಇವು ಒಂದೇ ನಾಣ್ಯದ ಎರಡು ಮುಖಗಳೆಂದು ಚುಟುಕಿನಲ್ಲಿ ಪ್ರತಿಪಾದಿಸಿರುವ ಅರಸ್ ಅವರ ಚುಟುಕುಗಳಲ್ಲಿ ಹಾಸ್ಯ, ವಿಡಂಬನೆ, ಕಟಕಿ ಎಲ್ಲವೂ ಇವೆ.

ಅಂಗಾಂಗ ಪ್ರದರ್ಶನ
ಗೃಹಿಣಿಯರಿಗೆ ಮುಜುಗರ
ಬಿನ್ನಾಣಗಿತ್ತಿಯರಿಗೆ
ಸೌಂದರ್ಯ ಪ್ರದರ್ಶನ

ಅರಸು ಅವರು ಸಂಘಟಿಸಿರುವ ಚುಟುಕು ಕವಿ ಸಮ್ಮೇಳನಗಳು ಬಹುಜನಪ್ರಿಯ. ೪೦೦ ರಿಂದ ೫೦೦ ಜನ ಚುಟುಕು ಕವಿಗಳು ಭಾಗವಹಿಸಿದ ಹೆಗ್ಗಳಿಕೆ ಇದೆ. ನಾನು ಕೂಡ ಮೈಸೂರಿನಲ್ಲಿ ಒಮ್ಮೆ ಭಾಗವಹಿಸಿ ಚುಟುಕು ವಾಚಿಸಿದ್ದೇನೆ.

ಮೊದಲ ಮಗಳು ಅಮೃತ
ಎರಡನೆಯ ಮಗಳು ಅಂಜನ
ಮೂರನೆಯ ಮಗಳು
ಅಮೃತಾಂಜನ

ಇವರ ಚುಟುಕಿನಲ್ಲೇ ಸ್ವಯಂ ಕಟಕಿಯಿದೆ. ಒಟ್ಟಾರೆ ಚುಟುಕು ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮನ್ನಣೆ ವೇದಿಕೆ ಒದಗಿಸಿದ ಉತ್ತಮ ಸಂಘಟಕರಾದ ಇವರಿಗೆ ವೈದ್ಯ ರತ್ನ, ವೈದ್ಯ ಭೂಷಣ ಪ್ರಶಸ್ತಿ ಲಭಿಸಿದೆ. ಈ ಅಜಾತ ಶತ್ರು ಬಗ್ಗೆ ನಾಗವರ್ಮನ ಕಾವ್ಯಾವಲೋಕನದ ಸೂಕ್ತಿಗೆ ಅರಸು ನಿದರ್ಶನವೆಂದಿದ್ದಾರೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಪ್ರಧಾನ್ ಗುರುದತ್ತ ಅವರು.

ಪಡೆಗುಂ ಮಹಿಮೋನ್ನತಿಯಂ
ಪಡೆಗುಂ ಸನ್ಮಾರ್ಗದೆಸಕಮಂ ಗುಣದೋಳ್ಪಂ
ಪಡೆಗುಂ ನಿರ್ಮಳಯಶಮಂ
ಪಡೆಗುಂ ಪಡೆಗುಂ ವಿಭುತ್ವಮಂ ಬುಧಸಂಗಂ

(ವಿದ್ವಂಸರ ಒಡನಾಟದಿಂದ ಉನ್ನತ ಮಹಿಮೆ ಲಭಿಸುತ್ತದೆ. ಸನ್ಮಾರ್ಗದಲ್ಲಿ ನಡೆಯುವ ಮನೋಧರ್ಮವನ್ನು ತಂದುಕೊಡುತ್ತದೆ. ಒಳ್ಳೆಯ ಗುಣವನ್ನು ಉಂಟುಮಾಡುತ್ತದೆ. ನಿರ್ಮಲವಾದ ಕೀರ್ತಿಯನ್ನು ಗಳಿಸುವಂತೆ ಮಾಡುತ್ತದೆ. ಒಡೆತನವನ್ನು ತಂದುಕೊಡುತ್ತದೆ.)

ತಾಯಿಯ ಗರ್ಭದಿಂದ
ಬಂದಾಗ ಉಸುರಿತ್ತು
ಕಾಯಕ ಮುಗಿಸಿ ಹೊರಟಾಗ
ಹೆಸರಿತ್ತು ಜಗದೆಲ್ಲೆಡೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಅಧ್ಯಯನದ ಮೂಲಕ ಸಾಹಿತ್ಯ ರಚನೆಯಾಗಬೇಕು: ರುದ್ರೇಶ ಭಂಡಾರಿ
ಗಂಗಾವತಿ : ಚುಟುಕು ಸಾಹಿತ್ಯಗಳು ಸಮಾಜದ ಬದಲಾವಣೆಗೆ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದು, ಸಾಹಿತ್ಯವು ವಾಸ್ತವ ಸಂಗತಿಗಳ ಕೈಗನ್ನಡಿಯಾಗಿ ಮಾರ್ಪಡಬೇಕು. ಚುಟುಕು ಕವಿಗಳು ಅಧ್ಯಯನದ ಮೂಲಕ ಗಂಭೀರವಾಗಿ ಸಾಹಿತ್ಯ ರಚಿಸಬೇಕು ಎಂದು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರೇಶ ಭಂಡಾರಿ ಹೇಳಿದರು.
ನಗರದ ಕಸಾಪ ಭವನದಲ್ಲಿ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕದಿಂದ ಜೂನ್ ೨೧ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕವಿಗೋಷ್ಠಿಗೆ ಅರಳಹಳ್ಳಿ ಬೃಹನ್ಮಠದ ಪೂಜ್ಯ ಶ್ರೀ ರೇವಣಸಿದ್ದಯ್ಯತಾತನವರು ದಿವ್ಯಸಾನಿಧ್ಯ ವಹಿಸಿದ್ದರು.
ಉದ್ಘಾಟನೆಯನ್ನು ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ ನೆರವೇರಿಸಿದರು. ಬಳ್ಳಾರಿ ವೀರಶೈವ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕರಾದ ಡಾ. ಭ್ರಮರಾಂಭ ಯಾಟೆ ಕವಿಗೋಷ್ಠಿಗೆ ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಅಧ್ಯಕ್ಷರಾದ ಅಶೋಕ ಗುಡಿಕೋಟಿ ಮಾತನಾಡಿ, ಜಿಲ್ಲೆಯಲ್ಲಿ ಚುಟುಕು ಸಾಹಿತ್ಯ ಪರಿಷತ್ತು ಪರಿಣಾಮಕಾರಿ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಚುಟುಕುಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವ ಯೋಜನೆ ಇದೆ ಎಂದರು. ಸಾಹಿತ್ಯಾಸಕ್ತರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಗಮನಾರ್ಹ ಬೆಳವಣಿಗೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ “ಗೌರಿ ಮಕ್ಕಳ ಸಾಂಸ್ಕೃತಿಕ ಸಂಕಥನ’ ಎಂಬ ಪ್ರಬಂಧ ಮಂಡನೆಗಾಗಿ ಹಂಪಿ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪಡೆದ ಡಾ. ಅಶೋಕ ಡಂಬರ್ ಅವರನ್ನು ಸನ್ಮಾನಿಸಲಾಯಿತು. ಇದೇ ರೀತಿ “ವಿಶೇಷ ಸಾಮರ್ಥ್ಯವುಳ್ಳವರು ಎದುರಿಸುತ್ತಿರುವ ಸವಾಲುಗಳು ಮತ್ತು ಸಾದ್ಯತೆಗಳು” ಎಂಬ ಪ್ರಬಂಧಕ್ಕಾಗಿ ಡಾ. ವಿಜಯಕುಮಾರ ಬಡಿಗೇರರಿಗೂ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಎಸ್.ವಿ ಪಾಟೀಲ್ ಗುಂಡೂರು, ನಾಗಭೂಷಣ ಅರಳಿ, ರಾಘವೇಂದ್ರ ದಂಡಿನ್, ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿಯ ಸದಸ್ಯ ಕೆ. ನಿಂಗಜ್ಜ ಉಪಸ್ಥಿತರಿದ್ದರು. ಜೊತೆಗೆ ತಾ.ಪಂ ಮಾಜಿ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ ಸುರೇಶ, ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಕೊಪ್ಪಳ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ ಅವರು ಭಾಗವಹಿಸಿದ್ದರು.
ಈ ಕವಿಗೋಷ್ಠಿಯಲ್ಲಿ ಯು.ಆರ್. ಶಿವರುದ್ರಪ್ಪ, ಚಿದಾನಂದ ಕೀರ್ತಿ, ಶಿವಪ್ರಸಾದ ಹಾದಿಮನಿ, ಮಾದೇವ ಮೋಟಿ, ಶರಣು, ಕರಿಸಿದ್ದನಗೌಡರು ಭಾಗವಹಿಸಿದ್ದರು, ಕವಿಗೋಷ್ಠಿಯಲ್ಲಿ ತಾರಾ ಸಂತೋಷ, ಶೋಭಾ ಗೌಡರ್ ಸೇರಿದಂತೆ ೩೫ಕ್ಕೂ ಹೆಚ್ಚು ಕವಿಗಳು ತಮ್ಮ ಚುಟುಕುಗಳು ಹಾಗೂ ಕವನಗಳೊಂದಿಗೆ ಪಾಲ್ಗೊಂಡು ಕಾರ್ಯಕ್ರಮದ ಶೋಭೆ ಹೆಚ್ಚಿಸಿದರು.
(ಅಶೋಕ ಗುಡಿಕೋಟಿ)
ತಾಲೂಕ ಅಧ್ಯಕ್ಷರು,
ಕರವೇ (ಪ್ರವೀಣಕುಮಾರ ಶೆಟ್ಟಿ ಬಣ)
ಅಂಗವಿಕಲರ ಘಟಕ.
ಮೋ:ನಂ: ೯೯೭೨೭೨೩೪೦೬
ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್ ಅವರಿಂದ ಇದೇ ಜೂನ್-೨೮ ಮತ್ತು ೨೯ ರಂದು ರಾಯಚೂರು ವಲಯದಲ್ಲಿ ಜಿಲ್ಲಾ ಮಟ್ಟಕ್ಕೆ ಕ್ರೀಡಾಟುಗಳ ಆಯ್ಕೆ.
ಗಂಗಾವತಿ: ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೊಸಿಯೇಷನ್‌ ವತಿಯಿಂದ ಜೂನ್ ೨೮ ಮತ್ತು ೨೯ ರಂದು ೧೬ ಹಾಗೂ ೧೯ ವರ್ಷದೊಳಗಿನ ಉತ್ತಮ ಆಟಗಾರರ ಜಿಲ್ಲಾ ಮಟ್ಟದ ಆಯ್ಕೆ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿದ ಗ್ರಾಮೀಣ ಭಾರತಿ ೯೦.೪ ಎಫ್.ಎಂ ರೇಡಿಯೋ ನಿಲಯದ ನಿರ್ದೇಶಕ ರಾಘವೇಂದ್ರ ತೂನ ಅವರು, ಆಸಕ್ತ ಕ್ರೀಡಾಪಟುಗಳು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದ್ದಾರೆ.
ಜೂನ್ ೨೮ ಶನಿವಾರ ೧೬ ವರ್ಷದೊಳಗಿನ ಆಟಗಾರರ ಆಯ್ಕೆ ಹಾಗೂ ಜೂನ್-೨೯ ಭಾನುವಾರ ೧೯ ವರ್ಷದೊಳಗಿನ ಉತ್ತಮ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಆಯ್ಕೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಆಸಕ್ತರಿಗೆ ರಾಯಚೂರಿನ ಮಂತ್ರಾಲಯ ರಸ್ತೆಯ ಕೆ.ಎಸ್.ಸಿ.ಎ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.

ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಯ ಆಸಕ್ತರು ಕಲಬುರ್ಗಿಯ ಎನ್.ವಿ ಮೈದಾನದಲ್ಲಿ ಭಾಗವಹಿಸಬಹುದು. ಬೀದರ ಜಿಲ್ಲೆಯವರು ಬೀದರ್ ನ ನೆಹರು ಸ್ಟೇಡಿಯಂ ಮೈದಾನದಲ್ಲಿ, ವಿಜಯಪುರದವರು ಬಿ.ಎಲ್.ಡಿ.ಎ ಮೈದಾನದಲ್ಲಿ, ಬಾಗಲಕೋಟೆಯವರು ಬಾಗಲಕೋಟೆಯ ಬಿ.ವಿ.ವಿ.ಎಸ್ ಇಂಜಿನೀಯರಿಂಗ್ ಕಾಲೇಜ್ ಕ್ಯಾಂಪಸ್‌ನಲ್ಲಿ ಪಾಲ್ಗೊಳ್ಳಬಹುದು.
ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಆಸಕ್ತರು ಜಿಲ್ಲಾವಾರು ಸಂಪರ್ಕ ಅಧಿಕಾರಿಗಳನ್ನು ಸಂಪರ್ಕಿಸಬಹುದು. ರಾಯಚೂರಿಗೆ ಶರಣ ರೆಡ್ಡಿ ಮೊ: (೭೮೯೨೦೬೩೪೭೦), ಕೊಪ್ಪಳಕ್ಕೆ ಚಂದ್ರಶೇಖರ ಎಂ. ಮೊ: (೯೪೪೮೬೩೩೭೪೮), ವಿಜಯಪುರಕ್ಕೆ ಎನ್.ಎಂ. ಹುತಗಿ ಮೊ: (೯೪೪೮೬೭೮೨೮೦), ಕಲಬುರ್ಗಿಗೆ ಕೆ. ವಿಶ್ವನಾಥ ಮೊ: (೯೮೮೦೨೧೨೭೬೯), ಬೀದರ್ ಗೆ ಕುಶಾಲ್ ಪಾಟೀಲ್ ಮೊ: (೯೪೪೮೪೭೬೮೮೯)‌ ಬಾಗಲಕೋಟೆಗೆ ರವಿ ಮಾಗ್ದಮ್ ಮೊ: (೯೮೪೫೩೩೨೮೬೮). ಇವರುಗಳನ್ನು ಸಂಪರ್ಕಿಸಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ತಿಳಿಸಿದರು.
ಮಾಹಿತಿಗಾಗಿ
ರಾಘವೇಂದ್ರ ತೂನ
ನಿಲಯ ನಿರ್ದೇಶಕರು,
ಗ್ರಾಮೀಣ ಭಾರತಿ ೯೦.೪ ಎಫ್.ಎಂ. ರೇಡಿಯೋ ಕೇಂದ್ರ ಗಂಗಾವತಿ.
ಅeಟಟ: ೯೧೬೪೬೩೫೬೫೫
ಭಾವಚಿತ್ರ ಪ್ರಕೃತಿ ಚಿತ್ರಗಳ ಏಕವ್ಯಕ್ತಿ ಕಲಾ ಪ್ರದರ್ಶನ – ಗೊರೂರು ಅನಂತರಾಜು, ಹಾಸನ

ಹಾಸನದ ಕಲಾಭವನದ ಹೊರ ಆವರಣದಲ್ಲಿ ಭಾನುವಾರ ಮತ್ತು ಸೋಮವಾರ ಎರಡು ದಿನ ಒಡನಾಡಿ ಚಿತ್ರಕಲಾ ಬಳಗ, ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್‌ ರವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜಿಸಿದ್ದರು.

ಈ ಪ್ರದರ್ಶನದಲ್ಲಿ ಕಲಾವಿದ ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನದಲ್ಲಿ 27 ಕಲಾ ಕೃತಿಗಳು ವೀಕ್ಷಕರ ಗಮನ ಸೆಳೆದವು.

ಪ್ರತಿ ವರ್ಷ ಜೂನ್‌ 5ರಂದು ವಿಶ್ವ ಪರಿಸರ ದಿನಾಚರಣೆಯಂದು ಅವರು ಶಾಲಾ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಣೆ ದಿನ ತಮ್ಮ ಹೊಸ ಚಿತ್ರಗಳ ಪ್ರದರ್ಶನ ಮಾಡುತ್ತಾರೆ.

ಈ ಬಾರಿ ವಿಶೇಷವಾಗಿ ವಸಂತಕುಮಾರ್‌ ಅವರು ತಮ್ಮ ಪೊಟ್ರೈಟ್ ವರ್ಕ್ಸ್‌ ನಲ್ಲಿ ಜಿಲ್ಲೆಯ ಸಾಧಕರ‌ ಭಾವಚಿತ್ರಗಳನ್ನು ತಮ್ಮ ಕುಂಚಿಕೆಯಲ್ಲಿ ಸೆರೆ ಹಿಡಿದಿದರು.

ಡ್ರಾಯಿಂಗ್‌ ಶೀಟ್ ಪೆನ್ಸಿಲ್‌ ವರ್ಕ್ಸ್ ನಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಶ್ರೀಮತಿ ಭಾನು ಮುಷ್ತಾಕ್‌ ಅವರ ಚಿತ್ರವನ್ನು ಚಿತ್ರಿಸಿದ್ದಾರೆ.

ಚಾರ್ಕೋಲ್‌ ಪೆನ್ಸಿಲ್‌ ವರ್ಕ್ಸ್‌ ನಲ್ಲಿ ಭಾರತದ ಮಾಜಿ ಪ್ರಧಾನಿ ಶ್ರೀ ಹೆಚ್. ಡಿ. ದೇವೇಗೌಡರ ಭಾವಚಿತ್ರವನ್ನು ಸೃಷ್ಟಿಸಿದ್ದಾರೆ.

 

ಅಂತರಾಷ್ಟ್ರೀಯ ಕಲಾವಿದ ಕೆ. ಟಿ. ಶಿವಪ್ರಸಾದ್‌ ಹಾಗೂ ಇಸ್ರೋ ಮಾಜಿ ಅಧ್ಯಕ್ಷ ಕಿರಣ್‌ ಕುಮಾರ್‌ ಅವರ ಭಾವಚಿತ್ರಗಳು ಗಮನ ಸೆಳೆಯುವಂತಿವೆ.

ಹ್ಯಾಂಡ್‌ ಲ್ಯಾಂಡ್ ಸ್ಕೇಪ್‌ ಚಿತ್ರಣಕ್ಕಾಗಿ ಈ ಬಾರಿ ಅವರು ರಸ್ತೆ ಬದಿಯ ಮರಗಳನ್ನು ಆರಿಸಿಕೊಂಡು ಕಲಾ ಕೃತಿಗಳನ್ನು ಸೃಷ್ಟಿಸಿದರು.

 

ಅರಸೀಕೆರೆ ಹುಳಿಯಾರು ರಸ್ತೆಯ ಮಳೆಯ ಗಾಳಿಗೆ ಉರುಳುವ ಮೊದಲು ಮೂವರು ಮರಗಳ ಚಿತ್ರಣ ತೈಲವರ್ಣದಲ್ಲಿ ಮೂಡಿಬಂದಿವೆ.

ಚಿಂಡೇನಹಳ್ಳಿ ಗ್ರಾಮದಲ್ಲಿ ಕಂಡ ಮರಗಳು ಹ್ಯಾಂಡ್ ಮೇಡ್ ಶೀಟ್‌ನಲ್ಲಿ ಜಲವರ್ಣ ಮಾಧ್ಯಮದಲ್ಲಿ ಕಲಾತ್ಮಕವಾಗಿ ಮೂಡಿಬಂದಿವೆ.

ಎಂಟು ಚಾರ್ಕೋಲ್ ಶೀಟ್‌ಗಳಲ್ಲಿ ಚಾರ್ಕೋಲ್ ಪೆನ್ಸಿಲ್ ವರ್ಕ್, ಏಳು ಡ್ರಾಯಿಂಗ್ ಶೀಟ್‌ಗಳಲ್ಲಿ ಪೆನ್ಸಿಲ್ ವರ್ಕ್ ಪ್ರದರ್ಶನಕ್ಕಿಟ್ಟಿದ್ದರು.

ಮೂವರು ಕ್ಯಾನವಾಸ್ ಕ್ಲಾತ್ ನಲ್ಲಿ ಅಕ್ರಿಲಿಕ್ ಮಾಧ್ಯಮದ ನವೀನ ಕಲಾಕೃತಿಗಳು ವೀಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಈ ಕಲಾ ಸಾಧನೆಗೆ ಜಿಲ್ಲಾಡಳಿತವು ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.

ಚಿತ್ರಕಲೆಯು ದುಬಾರಿ ಸಾಹಸವಾದ ಕಾರಣ ಅಕಾಡೆಮಿಯ ಸಹಕಾರ ಇಲ್ಲದಿದ್ದರೆ  ಪ್ರದರ್ಶನ ನಡೆಸುವುದು ಅಸಾಧ್ಯವಾಗಿದೆ.

ವಸಂತಕುಮಾರ್ ತಮ್ಮ ಬಿಜಿ ಬದುಕಿನ ಮಧ್ಯೆ ಕೂಡ ಸೃಜನಶೀಲ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದು ಸೋಜಿಗದ ಸೂಜಿ ಮಲ್ಲಿಗೆಯೇ ಸೈ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.