ಗಂಗಾವತಿ : ನಗರದ ಬಸ್ ನಿಲ್ದಾಣದ ಹತ್ತಿರ ಟಿ.ಎ.ಪಿ.ಸಿ.ಎಂ.ಎಸ್. ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಜೂನ್ ೨೫, ಬುಧವಾರದಂದು ಕೊಪ್ಪಳ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೋಂದಣಿ ಪೂರ್ವ ಸಭೆ ಜರುಗಿತು. ಸಭೆಯನ್ನು ಸಂಘದ ಕಾನೂನು ಸಲಹೆಗಾರ ಶೇಖರಗೌಡ ಪಾಟೀಲ್ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಸಭೆಯಲ್ಲಿ ಮಾತನಾಡಿದ ಶೇಖರಗೌಡ ಪಾಟೀಲ್ ಅವರು ಸಂಘದ ಮೂಲ ಧ್ಯೇಯ ಮತ್ತು ಉದ್ದೇಶಗಳ ಕುರಿತು ಸದಸ್ಯರಿಗೆ ವಿವರವಾಗಿ ತಿಳಿಸಿದರು. ಪ್ರಸ್ತುತ ಜಿಲ್ಲೆಯಾದ್ಯಂತ ಅಂತರರಾಜ್ಯ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವ ಕಾರಣ ಸ್ಥಳೀಯ ಕಾರ್ಮಿಕರಿಗೆ ಉದ್ಯೋಗದ ಅವಕಾಶಗಳು ಕಡಿಮೆಯಾಗುತ್ತಿವೆ ಎಂಬ ವಿಚಾರವನ್ನು ಹೇಳಿದರು.
ಮಹಿಳಾ ಕಾರ್ಮಿಕರಿಗೆ ನಿತ್ಯ ಎದುರಾಗುವ ತೊಂದರೆಗಳು ಮತ್ತು ಕಾರ್ಮಿಕರಿಗೆ ಅನ್ವಯಿಸುವ ಕಾಯ್ದೆಗಳ ಕುರಿತು ಸಮಗ್ರ ಚರ್ಚೆ ನಡೆಯಿತು. ಕಾರ್ಮಿಕರ ಬೋಗಸ್ ಕಾರ್ಡ್‌ಗಳು ಕಂಡುಬಂದರೆ ತಕ್ಷಣವೇ ಸಂಘ ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಮಾಹಿತಿ ನೀಡಬೇಕು ಎಂದು ಅವರು ಸೂಚಿಸಿದರು.
ಈ ಸಂದರ್ಭ ಮೃತ ಕಾರ್ಮಿಕ ಸೋಮಪ್ಪ ಬುನಾದಿ ಅವರ ಸ್ಮರಣಾರ್ಥವಾಗಿ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗೌರವಾಧ್ಯಕ್ಷ ಭಾರಧ್ವಾಜ್ ಅವರು ಮಾತನಾಡಿ, ಇದು ನೋಂದಣಿ ಪೂರ್ವ ಸಭೆಯಾಗಿದ್ದು, ಶೀಘ್ರದಲ್ಲಿಯೇ ಸಂಘದ ಅಧಿಕೃತ ನೋಂದಣಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಅವರು ಮುಂದುವರಿದು, ಎಲ್ಲಾ ಸದಸ್ಯರು ಸಂಘದ ನೀತಿ-ನಿಯಮಗಳಿಗೆ ಬದ್ಧರಾಗಿ, ಸಂಘದ ಸಭೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬ ಆಶಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಸಂಘದ ಅಧ್ಯಕ್ಷ ಇಬ್ರಾಹಿಂ ಮೇಸ್ತ್ರಿ, ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಜಂಟಿ ಕಾರ್ಯದರ್ಶಿಗಳು ಮತ್ತು ಅನೇಕ ಸದಸ್ಯರು ಭಾಗವಹಿಸಿದ್ದರು.
(ಭರದ್ವಾಜ್)
ಗೌರವಾಧ್ಯಕ್ಷರು
ಮೊ: ೯೭೪೦೭೫೭೫೫೦