ಗಂಗಾವತಿ : ಧ್ಯಾನ, ಜ್ಞಾನ, ಸತ್ಸಂಗ, ಮತ್ತು ಸ್ವಾಧ್ಯಾಯಗಳು ಎಂತಹ ಕಠಿಣ ಮನಸುಗಳನ್ನು ಕೂಡ ಪರಿವರ್ತನೆ ಗೊಳಿಸಬಲ್ಲವು ಎಂದು ಧ್ಯಾನ ಶಿಕ್ಷಕಿ ಲಲಿತಾ ನಾರಾಯಣ ಕಂದಗಲ್ ರವರು ನುಡಿದರು.
ಅವರು ಜೂನ್-೨೨ ಭಾನುವಾರ ಕೊಪ್ಪಳ ಜಿಲ್ಲಾ ಕಾರಾಗೃಹದಲ್ಲಿ ನಡೆದ ʼಚಿಂತನ ಮಂಥನʼ ಕಾರ್ಯಕ್ರಮದಲ್ಲಿ ಸುಮಾರು ೧೩೦ಕ್ಕೂ ಹೆಚ್ಚು ಕಾರಾಗೃಹದ ಬಂಧಿಗಳನ್ನು ಉದ್ದೇಶಿಸಿ ಮಾತನಾಡಿದರು.
“ಜೈಲುವಾಸ ಶಿಕ್ಷೆಯಲ್ಲ, ಅದು ಒಂದು ಹೊಸ ಶಿಕ್ಷಣ,” ಎಂದು ಅವರು ಹೇಳಿದರು. ಅನೇಕ ಮಹನೀಯರಾದ ನೆಹರು, ಗಾಂಧಿ, ನೆಲ್ಸನ್ ಮಂಡೇಲಾರಂತಹ ಜೈಲುವಾಸದಲ್ಲಿದ್ದಾಗಲೇ ಆ ಸಂದರ್ಭವನ್ನು ಅಧ್ಯಯನಕ್ಕಾಗಿ, ಬರವಣಿಗೆಗಾಗಿ ಬಳಸಿಕೊಂಡು ಜೈಲುವಾಸವನ್ನು ಸಾರ್ಥಕ ಪಡಿಸಿಕೊಂಡಿದ್ದಾರೆ.
ಅದೇ ರೀತಿ ನೀವು ಕೂಡ ಧ್ಯಾನ, ಅಧ್ಯಯನದಲ್ಲಿ ತೊಡಗಿ ಪರಿವರ್ತನೆಗೆ ಮುಂದಾಗಿ ಎಂದು ನುಡಿದರು. ಕಾರಾಗೃಹದಂತ ಸ್ಥಳಗಳಲ್ಲಿ ಚಿಂತನ ಮಂಥನದಂತಹ ಅತ್ಯುತ್ತಮ ಮನ ಪರಿವರ್ತನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಕಾರಾಗೃಹ ಅಧ್ಯಕ್ಷಕರನ್ನು ಮತ್ತು ಅಲ್ಲಿನ ಸಿಬ್ಬಂದಿಗಳನ್ನು ತುಂಬು ಹೃದಯದಿಂದ ಅಭಿನಂದಿಸಿದರು.
ವಿಶೇಷ ಆಹ್ವಾನಿತರಾದ ಡಾ. ನಾರಾಯಣ ಕಂದಗಲ್ ರವರು ಬಂಧಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಪಶ್ಚಾತಾಪಕ್ಕಿಂತ ಮಿಗಿಲಾದ ಪರಿವರ್ತನೆ ಮತ್ತೊಂದಿಲ್ಲ. ನಿಮ್ಮೊಳಗಿನ ಅರಿವೇ ನಿಮಗೆ ಗುರು. ನೀವು ಈ ಕ್ಷಣದಲ್ಲಿಯೇ ಪರಿವರ್ತನೆಗೊಳ್ಳಲು ಸಾಧ್ಯವಿದೆ. ಅದಕ್ಕೆ ನೀವೆಲ್ಲ ಪ್ರಯತ್ನಿಸಿ ಎಂದು ನುಡಿದರು.
ಜೈಲಿನ ಬಂಧಿಯೊಬ್ಬರು ಇಂತಹ ಧ್ಯಾನ, ಸತ್ಸಂಗದಂತಹ ಸಂಗತಿ ನನಗೆ ಮೊದಲೇ ತಿಳಿದಿದ್ದರೆ ಬಹುಶಃ ನಾನು ಈ ಸ್ಥಳಕ್ಕೆ ಬರುತ್ತಿರಲಿಲ್ಲವೇನೊ ಎಂದು ಭಾವುಕರಾಗಿ ನುಡಿದರು.
ಕೊಪ್ಪಳ ಜಿಲ್ಲಾ ಕಾರಾಗೃಹದ ಅಧ್ಯಕ್ಷಕರಾದ ಅಂಬರೀಶ್ ಪೂಜಾರ್ ರವರು ಅಧ್ಯಕ್ಷತೆ ವಹಿಸಿ ಧ್ಯಾನ ಶಿಕ್ಷಕರ ಸಲಹೆಗಳನ್ನು ಗಂಭೀರವಾಗಿ ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು.
ಮಾನಸಿಕ ಆಪ್ತ ಸಮಾಲೋಚಕರಾದ ಏ. ಕೆ. ಹಾವೋಜಿ ಅವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಜೈಲಿನ ಸಿಬ್ಬಂದಿ ರಾಥೋಡ್ ರವರು ಪ್ರಾರ್ಥನೆ ಮಾಡಿದರು.
ಜೈಲರ್ ಶ್ರೀರಾಮುಲು, ಸಹಾಯಕ ಜೈಲರ್ ಎಲ್. ಎಸ್. ತಿಪ್ಪೇಸ್ವಾಮಿ ಹಾಗೂ ಜೈಲಿನ ಇತರ ಸಿಬ್ಬಂದಿ ಉಪಸ್ಥಿತರಿದ್ದರು.
ಮಾಹಿತಿಗಾಗಿ
ಶ್ರೀಮತಿ ಲಲಿತಾ ನಾರಾಯಣ ಕಂದಗಲ್
ಧ್ಯಾನ ಶಿಕ್ಷಕರು, ಗಂಗಾವತಿ.
ಮೊ ನಂ: ೯೪೮೦೭೭೨೩೩೨