ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಚುಟುಕು ಯುಗಾಚಾರ್ಯ – ಡಾ. ಎಂ.ಜಿ.ಆರ್.ಅರಸ್ ಜೀವನದ ಯೋಶೋಗಾಥೆ -ಗೊರೂರು ಅನಂತರಾಜು, ಹಾಸನ.

ಡಾ. ಪಿ.ಬಿ.ಇಂದುಕಲಾ ಅರಸ್ ಸಂಪಾದಿಸಿರುವ “ಚುಟುಕು ಯುಗಾಚಾರ್ಯ ಡಾ. ಎಂ.ಜಿ.ಆರ್.ಅರಸ್ ಜೀವನದ ಚುಟುಕು ಯೋಶೋಗಾಥೆ” ಎಂಬ ಕೃತಿಯನ್ನು ವೈದ್ಯವಾರ್ತಾ ಪ್ರಕಾಶನ ಪ್ರಕಟಿಸಿರುವ ಕೃತಿ.

ಡಾ. ಮೋಹನ ಗೋಪಾಲರಾಜೇ ಅರಸ್ ಎಂಬ ಹೆಸರು ಕೇಳಿದರೆ ಕೆಲವರಿಗೆ ಅಪರಿಚಿತವಾಗಿರಬಹುದು, ಆದರೆ ಡಾ. ಎಂ.ಜಿ.ಆರ್.ಅರಸ್ ಎಂದರೇ ಸಾಹಿತ್ಯ ವಲಯದಲ್ಲಿ ಎಲ್ಲರಿಗೂ ಪರಿಚಿತರು.

ಚುಟುಕು ಸಾಹಿತ್ಯದ ಪ್ರಚಾರ ಮತ್ತು ಪ್ರಸಾರವನ್ನು ತಮ್ಮ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡು ಅದಕ್ಕೆ ವಿಶಿಷ್ಟ ಸ್ಥಾನಮಾನ ತಂದುಕೊಟ್ಟವರು. ಚುಟುಕುಗಳು ಕೂಡ ಸಾಹಿತ್ಯದ ಒಂದು ಪ್ರಕಾರವೇ ಎಂದು ಮೂಗು ಮುರಿಯುವವರೇ ಇದ್ದ ಕಾಲದಲ್ಲಿ ಅದಕ್ಕೆ ಒಂದು ಸ್ಥಾನಮಾನ ಮಹತ್ವ ತಂದುಕೊಟ್ಟವರು ದಿನಕದ ದೇಸಾಯಿಯವರು.

ಚುಟುಕು ಸಾಹಿತ್ಯ ಇಂದು, ನಿನ್ನೆಯದಲ್ಲ. ಇದಕ್ಕೊಂದು ದೀರ್ಘವಾದ ಇತಿಹಾಸವಿದೆ. ಪಾಶ್ಚಿಮಾತ್ಯರಲ್ಲಿ ೧೯ನೇ ಶತಮಾನದ ಕವಿ ಎರ್ಡ್ವರ್ಡ್ ಲೀಯರ್ ನ್ನು ಚುಟುಕು ಸಾಹಿತ್ಯದ ಜನಕನೆಂದೇ ಕರೆಯುತ್ತಾರೆ.

ಖ್ಯಾತನಾಮರಾದ ಹೆಚ್.ಜಿ.ವೆಲ್ಸ್, ಕೆರೋಲ್, ರುಡ್‌ಯಾರ್ಡ್ ಕಿಲ್ಲಿಂಗ್, ಆಗ್ಹೆನ್ ನ್ಯಾಷ್, ಅಡೆನ್ ಜೇಮ್ಸ್ ಬೌಯ್ಸ್, ಟಿ.ಎಸ್.ಎಲಿಯಟ್, ಮಾರ್ಕ್ ಟ್ವೇನ್ ಮೊದಲಾದ ಖ್ಯಾತ ಕವಿಗಳು ಚುಟುಕು ಸಾಹಿತ್ಯದ ಲೋಕಕ್ಕೆ ಉತ್ಸಾಹ ತುಂಬಿದ್ದಾರೆ.

ಭಾರತೀಯ ಸಾಹಿತ್ಯದಲ್ಲಿ ಚುಟುಕು ಸಾಹಿತ್ಯದ ನಾನಾ ರೂಪಗಳ ಪ್ರಕಾರಗಳಿವೆ. ವಚನ ಸಾಹಿತ್ಯ, ಜನಪದ ಸಾಹಿತ್ಯ, ಉರ್ದು ಶಾಯರಿ ಮೊದಲಾದವು ಚುಟುಕು ರೂಪಗಳಾಗಿ ಅಭಿವೃದ್ಧಿಯಾಗಿವೆ. ಡಿ.ವಿ.ಗುಂಡಪ್ಪ ರ “ಮಂಕುತಿಮ್ಮನ ಕಗ್ಗ” ಕೃತಿಯು ಗಂಭೀರ ಚಿಂತನಶೀಲ ಚುಟುಕುಗಳ ರೂಪದಲ್ಲಿ ಸಾಹಿತ್ಯ ಲೋಕದಲ್ಲಿ ಪ್ರಸಿದ್ಧವಾಗಿದೆ.

ಅಷ್ಟೇ ಗಂಭೀರ ಸ್ವರೂಪದ ಬರಹಗಳನ್ನು ದಿನಕರ ದೇಸಾಯಿ, ಚನ್ನವೀರ ಕಣವಿ, ಡಾ. ಎಂ.ಅಕ್ಬರ್ ಅಲಿಯವರ ಚುಟುಕುಗಳಲ್ಲಿ ನಾವು ಕಾಣಬಹುದು. ಚುಟುಕುಗಳಲ್ಲಿ ಪದಲಾಲಿತ್ಯವನ್ನು ಮೆರೆದವರು ವಿ.ಗ.ನಾಯಕ, ಜಿ.ಟಿ.ನಾರಾಯಣರಾವ್, ಡಾ. ಸಿ.ಪಿ.ಕೆ.ರವರು.

ನಗು ಮನದಿ ಲೋಗರ ವಿಕಾರಂಗಳನು ನೋಡಿ
ಬಿಗಿ ತುಟಿಯ ದುಡಿವಂದು ನೋವಪಡುವಂದು
ಪೊಗದಂದ ವಿಶ್ವಜೀವನದ ಜೀವಾಂತರಂಗದಲಿ
ನಗು ನಗುತ ಬಾಳ್, ತೆರಳು ಮಂಕುತಿಮ್ಮ

ಎಂಬ ಡಿವಿಜಿಯವರ ಕಗ್ಗದಂತೆ ನಗು, ಅಳು ಎರಡನ್ನು ಸಮಚಿತ್ತದಿಂದ ಸ್ವೀಕರಿಸಿ ಅವುಗಳ ರಸಪಾಕವನ್ನು ಅನುಭವಿಸಿ ‘ಚುಟುಕು ಸಾಹಿತ್ಯ ಬದುಕಿಗೆ ಲಾಲಿತ್ಯ ’ ಎಂಬುದನ್ನು ಧ್ಯೇಯವಾಕ್ಯವಾಗಿಸಿ ಚುಟುಕು ಸಾಹಿತ್ಯ ಪ್ರಕಾರಕ್ಕೆ ಒಂದು ನೆಲೆಯನ್ನು ತಂದುಕೊಡುವಲ್ಲಿ ಡಾ. ಎಂ.ಜಿ.ಆರ್.ಅರಸ್‌ರ ಪಾತ್ರ ಮರೆಯುವುದುಂಟೆ! ಚುಟುಕು ಸಾಹಿತ್ಯ ಪರಿಷತ್ತನ್ನು ಹುಟ್ಟುಹಾಕಿ ನಾಡಿನಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಘಟಕಗಳನ್ನು ರಚಿಸಿ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿ ಬೆಳಕಿಗೆ ತರುವಲ್ಲಿ ಇವರ ಯೋಜನೆ ಸಫಲವೇ! ಜನಸೇವೆಯೇ ಜೀವನ ಪುಸ್ತಕಗಳ ಮೂಲಕ ಜ್ಞಾನ ಪ್ರಸಾರವೇ ಜೀವನದ ಪರಮಪ್ರೇಮವೆಂದು ತಮ್ಮದೇ ವೈದ್ಯವಾರ್ತಾ ಪ್ರಕಾಶನ ಮೂಲಕ ೧೩೭ ಕೃತಿ ನಂತರದ ಚುಟುಕು ಯುಗಾಚಾರ್ಯ ೧೩೮ನೇ ಕೃತಿ.

ಸಿ.ಪಿ.ಕೆ ಚುಟುಕುಗಳು, ಎಚ್.ಎಸ್.ಕೆ ಚುಟುಕುಗಳು, ಚದುರಂಗ ಚುಟುಕುಗಳು, ಅಕಬರ ಅಲಿ ಚುಟುಕುಗಳು ಇವರ ಪ್ರಕಾಶನದ ಚುಟುಕು ಸಂಕಲನಗಳು. ಅರಸ್ ಅವರೇ ಬರೆದ ವೈಶಾಖದ ವೈವಿಧ್ಯ, ಚುಟುಕು ವೈಶಾಖ, ಚುಟುಕು ಮಲ್ಲಿಗೆ, ಚುಟುಕು ಚೈತ್ರ, ಚುಟುಕು ಬೆಳಕುಗಳಲ್ಲಿ ವೈವಿಧ್ಯಮಯ ಚುಟುಕುಗಳಿಂದ ಚುಟುಕು ಪ್ರಿಯರ ಮನಗೆದ್ದಿದ್ದಾರೆ.

ಸತ್ತವರ ಸಮಾಧಿಗಳ ಮೇಲೆ
ಕಾಗೆ ಗೂಬೆಗಳು ಹಿಂಡು
ಗೆದ್ದವರ ಮುಂದೆ ಬೋ
ಪರಾಕು ಧೂರ್ತರುಗಳ ದಂಡು

ಬೋ ಪರಾಕ್ ಸಂಸ್ಕೃತಿಯನ್ನು ವಿಡಂಬಿಸಿರುವ ಅರಸ್ ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಮೈಸೂರಿನ ಸರ್ಕಾರಿ ಆಯುರ್ವೇದಿಕ್ ಕಾಲೇಜಿನಲ್ಲಿ ಡಿಪ್ಲೋಮಾ ಇನ್ ಆಯುರ್ವೇದ ಓದಿ ನಂತರ ಬಿ.ಎ.ಎಂ.ಎಸ್ ಪದವಿ ಪಡೆದರು. ಆಯುರ್ವೇದಿಕ್ ಕಾಲೇಜಿನಲ್ಲಿ ಇವರ ಪ್ರಾಧ್ಯಾಪಕರಾದ ಡಾ. ರಾಘವೇಂದ್ರರಾಯರು ತಮ್ಮ ಶಿಷ್ಯನ ಕುರಿತಂತೆ ಬರೆಯುತ್ತಾ ಅರಸು ಒಬ್ಬ ವಿದ್ಯಾರ್ಥಿ ಮುಖಂಡರಾಗಿ ಕಾಲೇಜಿನ ಏಳಿಗೆಗೆ ಶ್ರಮಿಸಿದ್ದಾರೆ.

ಆಯುರ್ವೇದ ವಿಭಾಗವು ಮೊದಲಿಗೆ ಆಧುನಿಕ ವೈದ್ಯಕೀಯ ಪದ್ದತಿಯ ವಿಭಾಗಕ್ಕೆ ಸೇರಿದ್ದು ಆಯುರ್ವೇದ ವಿಭಾಗದ ಬೇರ್ಪಡೆಗೆ ಶ್ರಮಿಸಿದ್ದಾರೆ. ಆಯುರ್ವೇದ ವೈದ್ಯಕೀಯ ಕ್ಷೇತ್ರದಲ್ಲಿ ಖ್ಯಾತನಾಮರಾಗಿ ಆಯುರ್ವೇದ ಪ್ರಚಾರ ಪರಿಷತ್ ಮತ್ತು ಆಯುರ್ವೇದ ಮಂಡಲಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಆಯುರ್ವೇದ ಪದವೀಧರರನ್ನು ಸಂಘಟಿಸಿ ಅಕಾಡೆಮಿ ಆಫ್ ಆಯುರ್ವೇದವನ್ನು ಸ್ಥಾಪಿಸಿ ಏಳಿಗೆಗಾಗಿ ಶ್ರಮಿಸಿದ್ದಾರೆ.

ಇವರ ಸಂಪಾದಕತ್ವದಲ್ಲಿ ಬರುವ ವೈದ್ಯವಾರ್ತಾ ಮಾಸಿಕ ಬೆಳ್ಳಿಹಬ್ಬ ಆಚರಿಸಿದೆ. ಡಾ. ಎಂ.ಜಿ.ಆರ್.ಅರಸ್‌ರಂತಹ ಆಯುರ್ವೇದ ಅಭಿಮಾನಿಗಳು ತಮ್ಮ ನಿರಂತರ ದುಡಿಮೆಯಿಂದ ಆಯುರ್ವೇದಕ್ಕೆ ಇಂದು ಅಲೋಪಥಿಗೆ ಸಮನಾದ ಸ್ಥಾನವನ್ನು ದೊರಕಿದೆ ಎಂಬುದಾಗಿ ಡಾ. ಸಿ.ಕೆ.ಎನ್.ರಾಜರವರು ಬರೆದಿದ್ದಾರೆ.

ಅರಸು ಅವರ ಸತತ ಪರಿಶ್ರಮದ ಫಲವಾಗಿ ಸರ್ಕಾರವು ಮೂವರು ಆಯುರ್ವೇದ ವೈದ್ಯರಿಗೆ ಧನ್ವಂತರಿ ಪ್ರಶಸ್ತಿ, ಒಬ್ಬರು ಯುನಾನಿ ವೈದ್ಯ ಮತ್ತು ಒಬ್ಬರು ಹೋಮಿಯೊಪತಿ ವೈದ್ಯರಿಗೆ ಹಾನಿಮನ್ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಬಂದು ಮೈಸೂರಿನ ಪ್ರಸಿದ್ದ ಸಾಹಿತಿಗಳ ಒಡನಾಟದಲ್ಲಿ ಚುಟುಕು ಸಾಹಿತ್ಯದಲ್ಲಿ ಆಸಕ್ತಿ ತೆಳೆದು ಪರಿಷತ್ತು ಹುಟ್ಟುಹಾಕಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಿ ಜನಪ್ರಿಯಗೊಳಿಸಿದರು.

ಖ್ಯಾತನಾಮರಾದ ಎಚ್.ಎಸ್.ಕೆ, ಜಿ.ಟಿ.ನಾರಯಣರಾವ್, ನ್ಯಾಯಮೂರ್ತಿ ಜಿನದತ್ತ ದೇಸಾಯಿ, ಚನ್ನವೀರ ಕಣವಿ, ಪಂಚಾಕ್ಷರಿ ಹೊಸಮಠ, ವಿಶ್ರಾಂತ ಕುಲಪತಿ ಡಾ. ಚಿದಾನಂದಗೌಡ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಅಕಬರ ಅಲಿ, ಹಿರೇಮಗಳೂರು ಕಣ್ಣನ್ ಮೊದಲಾಗಿ ಕವಿ ಸಾಹಿತಿಗಳನ್ನು ಸಮಾರಂಭಕ್ಕೆ ಕರೆಸಿ ಚುಟುಕು ಸಮ್ಮೇಳನಕ್ಕೆ ಶೋಭೆ ತಂದರು.

ಪ್ರೀತಿ ಇದ್ದಲ್ಲಿ
ಅಂಗಳವೇ ಅರಮನೆ
ದ್ವೇಷ ಇದ್ದಲ್ಲಿ
ಅರಮನೆಯೇ ಸೆರೆಮನೆ

ದ್ವೇಷ ಪ್ರೀತಿ ಇವು ಒಂದೇ ನಾಣ್ಯದ ಎರಡು ಮುಖಗಳೆಂದು ಚುಟುಕಿನಲ್ಲಿ ಪ್ರತಿಪಾದಿಸಿರುವ ಅರಸ್ ಅವರ ಚುಟುಕುಗಳಲ್ಲಿ ಹಾಸ್ಯ, ವಿಡಂಬನೆ, ಕಟಕಿ ಎಲ್ಲವೂ ಇವೆ.

ಅಂಗಾಂಗ ಪ್ರದರ್ಶನ
ಗೃಹಿಣಿಯರಿಗೆ ಮುಜುಗರ
ಬಿನ್ನಾಣಗಿತ್ತಿಯರಿಗೆ
ಸೌಂದರ್ಯ ಪ್ರದರ್ಶನ

ಅರಸು ಅವರು ಸಂಘಟಿಸಿರುವ ಚುಟುಕು ಕವಿ ಸಮ್ಮೇಳನಗಳು ಬಹುಜನಪ್ರಿಯ. ೪೦೦ ರಿಂದ ೫೦೦ ಜನ ಚುಟುಕು ಕವಿಗಳು ಭಾಗವಹಿಸಿದ ಹೆಗ್ಗಳಿಕೆ ಇದೆ. ನಾನು ಕೂಡ ಮೈಸೂರಿನಲ್ಲಿ ಒಮ್ಮೆ ಭಾಗವಹಿಸಿ ಚುಟುಕು ವಾಚಿಸಿದ್ದೇನೆ.

ಮೊದಲ ಮಗಳು ಅಮೃತ
ಎರಡನೆಯ ಮಗಳು ಅಂಜನ
ಮೂರನೆಯ ಮಗಳು
ಅಮೃತಾಂಜನ

ಇವರ ಚುಟುಕಿನಲ್ಲೇ ಸ್ವಯಂ ಕಟಕಿಯಿದೆ. ಒಟ್ಟಾರೆ ಚುಟುಕು ಸಾಹಿತ್ಯಕ್ಕೆ, ಸಾಹಿತಿಗಳಿಗೆ ಮನ್ನಣೆ ವೇದಿಕೆ ಒದಗಿಸಿದ ಉತ್ತಮ ಸಂಘಟಕರಾದ ಇವರಿಗೆ ವೈದ್ಯ ರತ್ನ, ವೈದ್ಯ ಭೂಷಣ ಪ್ರಶಸ್ತಿ ಲಭಿಸಿದೆ. ಈ ಅಜಾತ ಶತ್ರು ಬಗ್ಗೆ ನಾಗವರ್ಮನ ಕಾವ್ಯಾವಲೋಕನದ ಸೂಕ್ತಿಗೆ ಅರಸು ನಿದರ್ಶನವೆಂದಿದ್ದಾರೆ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಪ್ರಧಾನ್ ಗುರುದತ್ತ ಅವರು.

ಪಡೆಗುಂ ಮಹಿಮೋನ್ನತಿಯಂ
ಪಡೆಗುಂ ಸನ್ಮಾರ್ಗದೆಸಕಮಂ ಗುಣದೋಳ್ಪಂ
ಪಡೆಗುಂ ನಿರ್ಮಳಯಶಮಂ
ಪಡೆಗುಂ ಪಡೆಗುಂ ವಿಭುತ್ವಮಂ ಬುಧಸಂಗಂ

(ವಿದ್ವಂಸರ ಒಡನಾಟದಿಂದ ಉನ್ನತ ಮಹಿಮೆ ಲಭಿಸುತ್ತದೆ. ಸನ್ಮಾರ್ಗದಲ್ಲಿ ನಡೆಯುವ ಮನೋಧರ್ಮವನ್ನು ತಂದುಕೊಡುತ್ತದೆ. ಒಳ್ಳೆಯ ಗುಣವನ್ನು ಉಂಟುಮಾಡುತ್ತದೆ. ನಿರ್ಮಲವಾದ ಕೀರ್ತಿಯನ್ನು ಗಳಿಸುವಂತೆ ಮಾಡುತ್ತದೆ. ಒಡೆತನವನ್ನು ತಂದುಕೊಡುತ್ತದೆ.)

ತಾಯಿಯ ಗರ್ಭದಿಂದ
ಬಂದಾಗ ಉಸುರಿತ್ತು
ಕಾಯಕ ಮುಗಿಸಿ ಹೊರಟಾಗ
ಹೆಸರಿತ್ತು ಜಗದೆಲ್ಲೆಡೆ.

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವನೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

Leave a Reply