ಒಂದೇ ದಿನ ಒಂದೇ ವಾರ್ಡಿನಲ್ಲಿ ಎರಡು ಅಂಗನವಾಡಿ ಕೇಂದ್ರಗಳ ಉದ್ಘಾಟನೆ

ಗಂಗಾವತಿ: ನಗರದ ೩೨ನೇ ವಾರ್ಡಿನ “ಗಾಳೆಮ್ಮ ಕ್ಯಾಂಪ್” ಮತ್ತು “ಮುಡ್ಡಾಣೇಶ್ವರ ಕ್ಯಾಂಪ್” ಹಿರೇಜಂತಕಲ್ಲಿನ ಎರಡು ಅಂಗನವಾಡಿ ಕೇಂದ್ರಗಳು ಸುಮಾರು ೧೫ ವರ್ಷಗಳ ಕಾಲ ಬಾಡಿಗೆ ಕೇಂದ್ರಗಳಲ್ಲಿ ಇದ್ದವು. ಈ ಅಂಗನವಾಡಿ ಕೇಂದ್ರಗಳಿಗೆ ನೂತನ ಕಟ್ಟಡಗಳನ್ನು ನಿರ್ಮಿಸಿ ಶ್ರೀಮತಿ “ಹುಲಿಗೆಮ್ಮ ಕಿರಿಕಿರಿ” ನಗರಸಭೆ ಸದಸ್ಯರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಶ್ರೀಮತಿ ಜಯಶ್ರೀ ಆರ್ ರವರು ಉದ್ಘಾಟನೆ ಮಾಡಿದರು.

ಈ ಸಂದರ್ಭದಲ್ಲಿ ಹುಲಿಗೆಮ್ಮ ಕಿರಿಕಿರಿ ರವರು ಮಾತನಾಡಿ ಅಂಗನವಾಡಿ ಕೇಂದ್ರ ಬಹಳ ಅಚ್ಚುಕಟ್ಟಾಗಿ ನಿರ್ಮಾಣವಾಗಿವೆ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ವಾರ್ಡಿನ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕಳಿಸಬೇಕು. ಹಾಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನುಡಿಯಂತೆ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು, ಮೊದಲ ಶಿಕ್ಷಣವೇ ಅಂಗನವಾಡಿ, ಇಲ್ಲಿನ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸವನ್ನು ಹೇಳಿಕೊಡಬೇಕು ಅಂದಾಗ ಮಾತ್ರ ಅಂಗನವಾಡಿ ಸ್ಥಾಪಿಸಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಲೂಕ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಪರಶುರಾಮ ಕಿರಿಕಿರಿ ಮಾತನಾಡಿ ಮಾಜಿ ಸಚಿವ ಸನ್ಮಾನ್ಯ ಶ್ರೀ ಇಕ್ಬಾಲ್ ಅನ್ಸಾರಿ ಅವರು ನಮಗೆ ನಗರಸಭೆ ಸದಸ್ಯರು ಆದ ಮೇಲೆ ವಾರ್ಡಿನ ಜನರ ಮೂಲಭೂತ ಸೌಕರ್ಯಗಳನ್ನು ಈಡೇರಿಸಬೇಕು ಅಂದಾಗ ನಗರಸಭೆ ಸದಸ್ಯರು ಆಗಿರುವುದಕ್ಕೆ ಸಾರ್ಥಕವಾಗುತ್ತದೆ ಎಂದು ತಿಳಿ ಹೇಳಿದ್ದರು. ಇಂದು ಅವರ ಆಸೆಯಂತೆ ನಮ್ಮ ವಾರ್ಡಿನ ಮೂಲಭೂತ ಸೌಕರ್ಯಗಳನ್ನು ವಾರ್ಡಿನ ಜನರಿಗೆ ಕೊಡಲು ಯಶಸ್ವಿಯಾಗಿದ್ದೇವೆ ಎಂದರು.

ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಾದ ಪ್ರಸನ್ನ ಕಲ್ಮನಿ ಅವರು ಮಾತನಾಡಿ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಅವರು ಬಹಳ ಆಸಕ್ತಿವಹಿಸಿ ಶ್ರಮಪಟ್ಟು ಅಂಗನವಾಡಿ ಕೇಂದ್ರಕ್ಕೆ ಜಾಗವನ್ನು ಗುರುತಿಸಿ ನಗರಸಭೆ ಪೌರಯುಕ್ತರ ವತಿಯಿಂದ ಚೆಕ್‌ಬಂದಿ ಹಾಕಿಸಿ ನಮ್ಮ ಇಲಾಖೆಗೆ ತಂದು ಇಲಾಖೆಗೆ ಅಗಾಗೆ ಭೇಟಿ ನೀಡಿ ಅಂಗನವಾಡಿ ಕಟ್ಟಿಸಿಕೊಡಿ ಎಂದು ವಿನಂತಿಸಿಕೊಂಡರು. ಅದರಂತೆ ಸಿ.ಡಿ.ಪಿ.ಓ ರವರು ಅವರ ಪ್ರಸ್ತಾವನೆಯನ್ನು ಕಳುಹಿಸಿ ಒಂದೇ ವಾರ್ಡಿನಲ್ಲಿ ಎರಡು ಅಂಗನವಾಡಿ ಕೇಂದ್ರ ಆಗಿರುವುದಕ್ಕೆ ಪ್ರಶಂಸನೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸರಸ್ವತಿ ರವರು ಮಾತನಾಡಿ ಮುಡ್ಡಾಣೇಶ್ವರ ಕ್ಯಾಂಪ್‌ನಲ್ಲಿ ಅಂಗನವಾಡಿ ಕೇಂದ್ರ ಬಹಳ ದಿನದ ಕನಸು ಆಗಿತ್ತು. ಶ್ರೀಮತಿ ಹುಲಿಗಮ್ಮ ಕಿರಿಕಿರಿ ಅವರು ಅದನ್ನು ಇಂದು ನನಸು ಮಾಡಿದ್ದಾರೆ. ಅವರು ಬಂದಮೇಲೆ ನಮ್ಮ ವಾರ್ಡಿಗೆ ಅಂಗನವಾಡಿ ಮತ್ತು ಮಹಿಳೆಯರ ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕರಾದ ಶ್ರೀಮತಿ ವಿದ್ಯಾವತಿ ಹಾಗೂ ಶ್ರೀಮತಿ ಶರಣಮ್ಮ ನಾಲ್ವಡ್, ವಲಯದ ಮೇಲ್ವಿಚಾರಕಿಯಾದ ಶ್ರೀಮತಿ ಈರಮ್ಮ ಯಾಳಗಿ, ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರು ಹಾಗೂ ವಾರ್ಡಿನ ಮುಖಂಡರಾದ ಅಲಿಸಾಬ್, ದಡ್ಡೆದಾಳು ದುರಗಪ್ಪ, ರವಿ ನಾಯಕ್, ರಫೀ, ಹೊನ್ನೂರ್, ಜಾಫರ್, ಅಸೇನ್, ಸಿದ್ದಪ್ಪ, ಮೈಬು, ಕುಬಾಂರ್ ಸಂಗಪ್ಪ, ಬಸಪ್ಪ, ಶಾರದಮ್ಮ, ಶಾಂತಮ್ಮ. ಸರಸ್ವತಿ, ಜಯಮ್ಮ, ಮಾಲನಮ್ಮ, ಅನೀಪಮ್ಮ, ಹೇಮಾವತಿ, ಹುಸೇನಮ್ಮ, ಹುಲಿಗೆಮ್ಮ, ಫಾತಿಮಾ ಹಾಗೂ ವಾರ್ಡಿನ ಗುರುಹಿರಿಯರು ಉಪಸ್ಥಿತರಿದ್ದರು.

ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಣೆ.

ಗಂಗಾವತಿ: ಏಪ್ರಿಲ್-೫ ಶನಿವಾರ ನಗರದ ಬಸ್ ನಿಲ್ದಾಣ ಹತ್ತಿರದ ಟಿ.ಎ.ಪಿ.ಸಿ.ಎಂ.ಎಸ್ ಬಿಲ್ಡಿಂಗ್‌ನಲ್ಲಿರುವ ಕ್ರಾಂತಿಚಕ್ರ ಬಳಗದ ಕಾರ್ಯಾಲಯದಲ್ಲಿ ಹಸಿರುಕ್ರಾಂತಿ ಹರಿಕಾರ, ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ಜಯಂತಿ ಆಚರಣೆ ಮಾಡಲಾಯಿತು ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷ ಭಾರಧ್ವಾಜ್ ಪ್ರಕಟಣೆಯಲ್ಲಿ ತಿಳಿಸಿದರು.

ಈ ಪ್ರಯುಕ್ತ ಡಾ. ಬಾಬು ಜಗಜೀವನರಾಮ್‌ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡುವ ಮೂಲಕ, ಅವರ ಸಾಧನೆಯ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಇಬ್ರಾಹಿಂ ಮೇಸ್ತ್ರಿ, ಚಾಂದ್‌ಪಾಷಾ ಮುರಾಹರಿನಗರ, ಸೋಮು ಜಿ., ರಸೂಲ್, ಖಾದರಭಾಷಾ, ಇಬ್ರಾಹಿಂ ರಾಡ್‌ಬೆಂಡರ್, ಸದ್ದಾಂ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಯವರ ೭೫ನೆಯ ವರ್ಧಂತಿ ಮಹೋತ್ಸವ.. ಸನಾತನದ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ: ನಾರಾಯಣ ವೈದ್ಯ

ಗಂಗಾವತಿ: ಭಾರತದ ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.

ಅವರು ಏಪ್ರಿಲ್-೩ ಗುರುವಾರ ಶೃಂಗೇರಿಯ ಜಗದ್ಗುರುಗಳಾದ ಪರಮಪೂಜ್ಯ ಭಾರತೀ ತೀರ್ಥ ಮಹಾಸ್ವಾಮಿಗಳ ೫೦ನೇ ವರ್ಷದ ಸುವರ್ಣ ಸಂಭ್ರಮ ಹಾಗೂ ವಜ್ರೋತ್ಸವ ೭೫ನೇಯ ವರ್ಧಂತಿ ಮಹೋತ್ಸವ ಸಮಾರಂಭದ ನಿಮಿತ್ಯ ಶಂಕರ ಮಠದಲ್ಲಿ ಆಯೋಜಿಸಲಾದ ಧಾರ್ಮಿಕ ಸಮಾರಂಭದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವಸಾನದ ಅಂಚಿನಲ್ಲಿದ್ದ ಹಿಂದೂ ಧರ್ಮವನ್ನು ಸಂರಕ್ಷಿಸಿದ ಆದಿಗುರು ಶ್ರೀ ಶಂಕರಾಚಾರ್ಯರು ಪ್ರಥಮವಾಗಿ ಶೃಂಗೇರಿ ಸೇರಿದಂತೆ ದೇಶದ ಒಟ್ಟು ನಾಲ್ಕು ಮಠ ಸ್ಥಾಪಿಸುವುದರ ಮೂಲಕ ಧರ್ಮ ಜಾಗೃತಿಗಾಗಿ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಶೃಂಗೇರಿ ಶಾರದಾ ಪೀಠವು ಧಾರ್ಮಿಕ ಜಾಗೃತಿಯ ಜೊತೆಗೆ ದೇಶದ ರಕ್ಷಣಾ ವ್ಯವಸ್ಥೆಗೆ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಸಮಗ್ರ ಮಾಹಿತಿ ನೀಡಿದರು.

ಅನಿತಾ ಅಳವಂಡಿಕರ್, ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ವಿಜಯ ಯಾತ್ರೆ ಕುರಿತು ಮಾತನಾಡಿದರು.

ಇದಕ್ಕೂ ಪೂರ್ವದಲ್ಲಿ ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ವಿವಿಧ ಭಜನಾ ಮಂಡಳಿಗಳ ಮಹಿಳೆಯರಿಂದ ಶ್ರೀರಾಮ ದೇವರ ತಾರಕ ಮಂತ್ರ ಹಾಗೂ ಶಂಕರಾಚಾರ್ಯರು ರಚಿತ ಕಲ್ಯಾಣ ವೃಷ್ಟಿ ಭವ, ಇತರ ಶ್ಲೋಕಗಳ ಪಾರಾಯಣ ನಡೆಸಲಾಯಿತು.

ಈ ಸಂದರ್ಭದಲ್ಲಿ ರಾಘವೇಂದ್ರ. ಅಳವಂಡಿಕರ್, ದತ್ತಾತ್ರೇಯ ಹೊಸಳ್ಳಿ, ಬಾಲಕೃಷ್ಣ ದೇಸಾಯಿ, ಗಾಯತ್ರಿ ಅಳವಂಡಿಕರ್, ಶ್ರೀನಿವಾಸ್ ಕರಮುಡಿ, ವೇಣು, ಶೇಷಗಿರಿ ಗಡಾದ್, ಶಂಕರ ಹೊಸಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಬೆಳಿಗ್ಗೆ ದೇವಸ್ಥಾನದ ಅರ್ಚಕ ಕುಮಾರ್ ಭಟ್ಟ ಅವರಿಂದ ಶ್ರೀ ಶಾರದಾ ದೇವಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.

ಜಗದ್ಗುರು ವಾಣಿ

ನಮ್ಮ ಜೀವನದಲ್ಲಿ ಹಠ, ಆಸೆ, ಅಹಂಕಾರ ಈ ಮೂರು ಇರಬಾರದು,

ಯಾವುದಕ್ಕೂ ಹಠ ಇರಬಾರದು. ಯಾವುದರ ಮೇಲು ಆತಿ ಆಸೆ ಇರಬಾರದು ಮತ್ತು ಅದು ನನ್ನದು, ನನ್ನದು ಅಷ್ಟೇ ಎಂಬ ಅಹಂಕಾರ ಇರಬಾರದು. ಇದರಿಂದ ಮನಃಶಾಂತಿ ಸಿಗುವುದಿಲ್ಲ.

ನಾನು ಹೇಳಿದ್ದೆ ನಡೀಬೇಕು ಅಂತ ಇಲ್ಲ, ಎಲ್ಲವು “ಈಶ್ವರನ ಇಚ್ಛೆ” ಹೇಗೆ ಇದೆಯೋ ಹಾಗೆ ನಡೆಯುವುದು. ನಾವು ನೀವು ಹೇಳಿದ ಹಾಗೆ ಏನು ನಡೆಯೋಲ್ಲ ಎಲ್ಲವು “ಈಶ್ವರನ ಸಂಕಲ್ಪ”ಹೇಗಿದೆಯೋ ಹಾಗೆ ನಡೆಯುತ್ತದೆ. ಅದಕ್ಕೆ ನಾವು ತಲೆ ಭಾಗಬೇಕೆ ವಿನಃ ನಾವು ಅದನ್ನೆಲ್ಲಾ ಕೇಳೋದಿಲ್ಲ ಅಂತ ಹೋದ್ರೆ ನಿಮಗೆ ಮನಃ ಶಾಂತಿ ಯಾವತ್ತೂ ಸಿಕ್ಕೊದಿಲ್ಲ.

ನಮ್ಮ ಜೀವನದಲ್ಲಿ ಪ್ರತಿಯೊಂದು ಘಳಿಗೆಗೂ ನಾವು ದೈವಿ ಸಂಪತ್ತನ್ನು ಹೆಚ್ಚಿಸಿಕೊಂಡರೆ, ಅಸುರಿ ಸಂಪತ್ತಿನಿಂದ ದೂರವಾಗಿದ್ದರೆ ಆಗ ಮಾತ್ರ ಮನಃ ಶಾಂತಿ ತಾನಾಗಿ ಸಿಕ್ಕುತ್ತದೆ ಮತ್ತು ಲೌಕಿಕ ವಿಷಯಗಳಲ್ಲಿ ಜಾಸ್ತಿ ಆಸೆಯನ್ನು ಇಟ್ಟುಕೊಳ್ಳಬಾರದು.
– ಜಗದ್ಗುರು ಶಂಕರಾಚಾರ್ಯ ಅನಂತ ಶ್ರೀ ವಿಭೂಷಿತ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳು*

 

ಇಸ್ಲಾಂಪುರದ ಅಲಿ ಟ್ರಾವೆಲ್ಸ್‌ ವತಿಯಿಂದ ಸಾರ್ವಜನಿಕರಿಗೆ ಮಜ್ಜಿಗೆ ವಿತರಣೆ

ಗಂಗಾವತಿ: ಗಂಗಾವತಿಯ ಇಸ್ಲಾಂಪುರದಲ್ಲಿ ಅಲಿ ಟ್ರಾವೆಲ್ಸ್ ಇಸ್ಲಾಂಪುರ ಇವರ ವತಿಯಿಂದ ಯುಗಾದಿ ಹಬ್ಬದ ಅಂಗವಾಗಿ ಸಾರ್ವಜನಿಕರಿಗೆ ಮಜ್ಜಿಗೆಯನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದೇ ರೀತಿ ನಿರಂತರವಾಗಿ ನಡೆಯುವ ಕುಡಿಯುವ ನೀರಿನ ಅರವಟ್ಟಿಗೆಯನ್ನು ನಗರಸಭೆಯ ಮಾಜಿ ಸದಸ್ಯರಾದ ದಿವಂಗತ ಮೆಹಬೂಬುಸಾಬ್ ಅವರ ಪುತ್ರರಾದ ಬೇವಿನಗಿಡದ ಮುನ್ನ ಅವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಅವರ ಸ್ನೇಹಿತರು, ಬಂಧುಬಳಗದವರು, ಹಿತೈಷಿಗಳು ಉಪಸ್ಥಿತರಿದ್ದರು.

ಅಂಜನಾದ್ರಿ ಶ್ರೀ ಆಂಜನೇಯಸ್ವಾಮಿ ಪ್ರಧಾನ ಅರ್ಚಕ ವಿದ್ಯಾದಾಸ್ ಬಾಬಾ ಅವರ ನೇತೃತ್ವದಲ್ಲಿ ಪ.ಪೂ ಶ್ರೀ ಲಕ್ಕಡದಾಸ್ ಬಾಬಾ ಅವರ ೨೭ನೇ ಪುಣ್ಯಸ್ಮರಣೆ ಕಾರ್ಯಕ್ರಮ

ಗಂಗಾವತಿ: ಮಾರ್ಚ್-೩೦ ಭಾನುವಾರ ತಾಲೂಕಿನ ಕಿಷ್ಕಿಂದೆಯ ಅಂಜನಾದ್ರಿ ಪರ್ವತದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಪರಮಪೂಜ್ಯ ಶ್ರೀ ಲಕ್ಕಡದಾಸ್ ಬಾಬಾ ಅವರ ೨೭ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವು ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ವಿದ್ಯಾದಾಸ್ ಬಾಬಾ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಮತ್ತು ವೈಭವದಿಂದ ನಡೆಯಿತು.

ಬೆಳಗ್ಗೆಯಿಂದಲೇ ಶ್ರೀ ಲಕ್ಕಡ ದಾಸ್ ಅವರ ಮೂರ್ತಿಗೆ ವಿಶೇಷ ಪೂಜೆ ಅಭಿಷೇಕ ಕಾರ್ಯಕ್ರಮಗಳು ಹೈದರಾಬಾದಿನ ಪ್ರಮುಖ ಪಕ್ಷದ ಜಗದೀಶ್ ಸಾಂಕಲಾ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆದವು.

ಭಕ್ತಾದಿಗಳಾದ ದೇವ ನಾರಾಯಣ ಸಾಂಕ್ಲಾ, ಶಿವಪ್ರಸಾದ್, ಜಿ ನರೇಶ್ ಪಚ್ಚೆವ, ಸುರೇಶ್ ಕುಮಾರ್, ಲೋಹಿಯಾ ಪರಿವಾರ ಶ್ರೀ ದೇವನಾರಾಯಣ ಸಾಂಕ್ಲಾ, ಧನ ಧನ್ಯಶ್ರೀ ಸಂಕ್ಲಾ, ಅರ್ಜುನ್ ಸಾಂಕ್ಲಾ, ರಾಮಕಿಶೋರಿ ತಿವಾರಿ ಹಾಗೂ ಹೈದರಾಬಾದಿನ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಶ್ರೀ ಲಕ್ಕಡದಾಸ್ ಬಾಬಾ ಅವರ ೨೭ನೇ ಪುಣ್ಯಸ್ಮರಣೆಗೆ ಅಂಗವಾಗಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆಗೆ ವ್ಯವಸ್ಥೆ ಮಾಡಲಾಗಿತ್ತು.

ಉಮೇಶ್ ನಾಯ್ಕ್ ಗೆ ವಾರ್ಷಿಕ ರಾಜ್ಯ ಪ್ರಶಸ್ತಿ ಪ್ರಧಾನ

ಬೆಂಗಳೂರು: ಬಂಜಾರ ಸಂಸ್ಕೃತಿ ಮತ್ತು ಭಾಷಾ ಅಕಾಡೆಮಿ ಕರ್ನಾಟಕ ಸರ್ಕಾರ ಬೆಂಗಳೂರು ವತಿಯಿಂದ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನುಮಾರ್ಚ್‌ 27 ಗುರುವಾರದಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಧಾನ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರು ಶ್ರೀ ಎ. ಆರ್. ಗೋವಿಂದಸ್ವಾಮಿರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪನವರು ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ಸುಮಾರು 25 ವರ್ಷಗಳಿಂದ ಜಾನಪದ ಕ್ಷೇತ್ರ ಮತ್ತು ಬಂಜಾರ ಗಾಯನ ಕ್ಷೇತ್ರದಲ್ಲಿ ಹೆಸರು ಗಳಿಸಿರುವ ದಾವಣಗೆರೆ ತಾಲೂಕು ಚಿನ್ನಸಮುದ್ರ ಗ್ರಾಮದ ಹೆಮ್ಲ ನಾಯ್ಕ್ ಮತ್ತು ಲಕ್ಷ್ಮಿ ಬಾಯಿ ದಂಪತಿಗಳ ಸುಪುತ್ರರು ಸಿ.ಹೆಚ್.ಉಮೇಶ ನಾಯ್ಕ್ ಇವರಿಗೆ ವಾರ್ಷಿಕ ರಾಜ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಇವರ ಜಾನಪದ ಕ್ಷೇತ್ರದ ಸಾಧನೆಗೆ ಸಂದ ರಾಜ್ಯ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯಾಧ್ಯಕ್ಷರಾದ ಮಧು ನಾಯ್ಕ್ ಲಂಬಾಣಿ, ಗೌರವ ಅಧ್ಯಕ್ಷರು ಸಾಹಿತಿ ಗೊರೂರು ಅನಂತರಾಜು ಅಭಿನ೦ದಿಸಿ ಇವರಿಂದ ಇನ್ನೂ ಹೆಚ್ಚಿನ ಜಾನಪದ ಗಾಯನ ಸಾಧನೆ ಹೊರ ಹೊಮ್ಮಲಿ ಎಂದು ಶುಭ ಹಾರೈಸಿದ್ದಾರೆ.

ಬೆಂಗಳೂರು ಗೆಜ್ಜೆ ಹೆಜ್ಜೆ ತಂಡದಿಂದ ರಂಗೋತ್ಸವ

ಬೆಂಗಳೂರು: ರಂಗ ಕಾಯಕದಲ್ಲಿ 46 ವರ್ಷಗಳ ಅನುಭವ ಇರುವ ಬೆಂಗಳೂರಿನ ಗೆಜ್ಜೆ ಹೆಜ್ಜೆ ರಂಗ ತಂಡ ಮೂರು ದಿನ ಯುಗಾದಿ ನಾಟಕೋತ್ಸವವಾಗಿ ಅಪ್ಪ-ಮಗ ಹ್ಯಾಗ್ ಸತ್ತಾ – ನಿಂತ್ಕೋಳಿ ಅಲ್ಲಲ್ಲ ಕುಂತ್ಕೊಳಿ – ಎಂಡ್ ಇಲ್ಲದ ಬಂಡ ಅವತಾರ – ಕುಡಿತಾಯಣ ನಾಟಕಗಳೊಂದಿಗೆ ರಂಗಗೀತೆಗಳು, ರಂಗ ಉಪನ್ಯಾಸ. ಏಕಪಾತ್ರ ಅಭಿನಯವು ಕೇಶವ ಕಲ್ಪ ಲಿಂಕ್ ರೋಡ್ 2ನೇ ಕ್ರಾಸ್ ನ ಮಲ್ಲೇಶ್ವರಂ ಬಡಾವಣೆಯ ಆಪ್ತ ರಂಗಮಂದಿರದಲ್ಲಿ ನಡೆಯಿತು.

ರಂಗ ಉಪನ್ಯಾಸದಲ್ಲಿ ಪ್ರಸ್ತುತ ಕನ್ನಡ ರಂಗಭೂಮಿ ಕುರಿತು ನಾಟಕಕಾರ ಚಿತ್ರ ನಟ ಮೈಸೂರು ರಮಾನಂದ್ ಮಾತನಾಡಿದರು. 

ಶುದ್ಧ ಗುಣಮಟ್ಟದ -ಸದಭಿರುಚಿಯ ಹಾಸ್ಯವನ್ನು ಅಪ್ಪ-ಮಗ ಹ್ಯಾಗ್ ಸತ್ತಾ ಎಂಬ -ಹಾಸ್ಯ ನಾಟಕದ ಸಾಪಲ್ಯ ಸ್ವಪ್ರತಿಷ್ಠೆಯ ಅಪ್ಪನನ್ನು ಗೋಳುಯ್ದು ಅಪ್ಪನನ್ನೇ ಪೆದ್ದುನನ್ನಾಗಿ ಮಾಡುವ ಮಗನ ಪಾತ್ರ ಉತ್ತಮವಾಗಿ ಮೂಡಿ ಬಂತು. ಗೆಳೆಯನ ಮೇಲೆ ಸೋಲನ್ನು ಒಪ್ಪಿಕೊಳ್ಳದೆ ಹವಣಿಸದೆ ಅದೇ ಅಪ್ಪ ನಂತರದ ಕುತೂಹಲದ ಘಟನೆ ಸನ್ನಿವೇಶಗಳನ್ನು ಸೂರ್ಯನಾರಾಯಣರಾವ್ ಉತ್ತಮವಾಗಿ ಅಭಿನಯಿಸಿದರು. ಮೈಸೂರು ರಮಾನಂದರವರು ಅಪ್ಪನ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದರು.

ಎರಡನೆಯ ನಾಟಕ ನಿಂತ್ಕೊಳ್ಳಿ ಅಲ್ಲಲ್ಲ ಕುಂತ್ಕೊಳ್ಳಿ, ಉಂಡಾಡಿ ಗುಂಡ ಅಳಿಯ ಸೋಮಾರಿ ಆತನಿಗೆ ಬುದ್ಧಿಯನ್ನು ಕಲಿಸುವ -ವಧುವಿನ ಪಾತ್ರದಲ್ಲಿ ಗೀತಾ ಉತ್ತಮವಾಗಿ ಅಭಿನಯಿಸಿದರು. ಮಾವನಾಗಿ ರಮಾನಂದರ ಅಭಿನಯ ಮನೋಜ್ಞವಾಗಿತ್ತು. ಅಳಿಯ ಯೋಧನಾಗಿ ಹಿಂತಿರುಗಿ ಬಂದು ಆಕೆಯನ್ನೇ ಮದುವೆ ಮಾಡಿಕೊಳ್ಳುತ್ತಾನೆ. ಇಲ್ಲೂ ಹಾಸ್ಯವೇ ಪ್ರಧಾನ. ನಗಿಸುವ ಕೆಲಸ ಸುಲಭವಾದದ್ದಲ್ಲ. ದಿನನಿತ್ಯ ನಮ್ಮ ಸುತ್ತಲೂ ಸಂಭವಿಸುವ ಪ್ರಸಂಗಗಳನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಹಾಸ್ಯವನ್ನು ಬೆರೆಸಿ ಹಾಸ್ಯದ ರಸದೌತಣವನ್ನು ನೀಡಿ ಈ ನಾಟಕಗಳೆರಡು ಪ್ರೇಕ್ಷಕರ ಮೆಚ್ಚುಗೆ -ಪಡೆಯುವಲ್ಲಿ ಯಶಸ್ಸು ಕಂಡಿತು. ಹಾಸ್ಯರಸ ಭೋಜನದೊಂದಿಗೆ ಅಶ್ಲೀಲದ ಸೋಂಕಿಲ್ಲದೆ ನಗಿಸುವ ಈ ಹಾಸ್ಯ ನಾಟಕಗಳು ಶಾಲಾ ಕಾಲೇಜುಗಳಲ್ಲಿ ಯಶಸ್ವಿಯಾಗಿ ಪ್ರದರ್ಶಿಸಬಹುದು.

2ನೇ ದಿನ ಎಂಡ್ ಇಲ್ಲದ ಬಂಡಾವತಾರ ಈ ರಂಗಕೃತಿ ಪ್ರಸ್ತುತ ರಾಜಕೀಯ ವಿದ್ಯಾಮಾನಗಳನ್ನು ವಿಡಂಬನೆ ಮಾಡುತ್ತಾ ಪ್ರೇಕ್ಷಕರಿಗೆ ಕಚಗುಳಿ -ಇಡುತ್ತವೆ. 3ನೇ ದಿನ ವಿಶ್ವ ರಂಗಭೂಮಿ ದಿನಾಚರಣೆ ಸಂದೇಶವನ್ನು ಗಣೇಶಯ್ಯ ವಾಚನ ಮಾಡಿದರು. ನಂತರ ತಂಡದ ಟ್ರಂಪ್ ಕಾರ್ಡ್ ನಾಟಕ ಕುಡಿತಾಯಣ ಪ್ರದರ್ಶನವಾಯಿತು. ಕುಡಿತದಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂದೇಶ ನೀಡುವ ನಾಟಕ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಕೃಷಿ ಅಧಿಕಾರಿ ನಾಗರಾಜ್-ಮಧುಸೂದನ್ -ಚಂದ್ರಶೇಖರ್ ಭೋವಿ, ಹಿರಿಯ ರಂಗಕರ್ಮಿ ಶೇಖರ್ -ಸರಸ್ವತಮ್ಮ-ಗೀತಾ, ಸಂಜನಾ -ಗಾಯಕರಾಗಿ ಚಂದ್ರು ಮೈಸೂರ್ -ಗಣೇಶ ಚಿತ್ರದುರ್ಗ ಬೈಲಹೊಂಗಲದ ದಾನೇಶ ರಮಾನಂದ್ ರಂಗಗೀತೆಗಳನ್ನು ಹಾಡಿದರು.

ಇದೆ ಸಂದರ್ಭ ರಂಗ ಮಾಸಪತ್ರಿಕೆ -ರಂಗ ವಿನೋದ -ಲೋಕಾರ್ಪಣೆಯಾಯಿತು.

೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ವೇದಿಕೆಗೆ ಶ್ರೀರಂಗದೇವರಾಯಲು ವೇದಿಕೆ ಎಂದು ಕರೆದಿರುವುದು ಸ್ವಾಗತಾರ್ಹ: ಶ್ರೀಮತಿ ಲಲಿತಾರಾಣಿ

ಗಂಗಾವತಿ: ಗಂಗಾವತಿಯಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಗೆ ದಿವಂಗತ ರಾಜಾ ಶ್ರೀರಂಗದೇವರಾಯಲು ರವರ ಹೆಸರನ್ನು ಇಟ್ಟಿದ್ದಕ್ಕಾಗಿ ಸಮ್ಮೇಳನದ ಸರ್ವಾಧ್ಯಕ್ಷರಾದ ಲಿಂಗಾರೆಡ್ಡಿ ಆಲೂರು ಮತ್ತು ಗಂಗಾವತಿಯ ಜನಪ್ರಿಯ ಶಾಸಕರಾದ ಜನಾರ್ಧನ್‌ರೆಡ್ಡಿ ಅವರಿಗೆ ಸಂಗಾಪುರ ಗ್ರಾಮದ ಶ್ರೀರಂಗದೇವರಾಯ ಕಾಲೋನಿಯ ನಾಗರಿಕರು, ರೈತರು ಹಾಗೂ ಶ್ರೀರಂಗದೇವರಾಯಲುರವರ ಅಭಿಮಾನಿಗಳು ಗೌರವಪೂರ್ವಕವಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿಯವರು ಈ ಜಿಲ್ಲಾ ಸಾಹಿತ್ಯ ಸಮ್ಮೇಳನದ ವೇದಿಕೆಗೆ ದಿವಂಗತ ಶ್ರೀರಂಗದೇವರಾಯಲು ಅವರ ಹೆಸರನ್ನು ಇಟ್ಟಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ಅಜಾತಶತೃ ದಿವಂಗತ ಶ್ರೀರಂಗದೇವರಾಯಲುರವರು ಕನಕಗಿರಿ, ಗಂಗಾವತಿ ವಿಧಾನಸಭಾ ಕ್ಷೇತ್ರಗಳಲ್ಲಿ ಮಾಡಿದ ಕೆಲಸಗಳು ಇವತ್ತಿಗೂ ಚಿರಸ್ಮರಣೀಯವಾಗಿದ್ದು, ಅವರ ಹೆಸರನ್ನು ಇವತ್ತು ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಸ್ಮರಣೆ ಮಾಡಿಕೊಂಡು ವೇದಿಕೆಗೆ ಹೆಸರಿಟ್ಟಿರೋದು ಬಹಳ ತುಂಬಾ ಶ್ಲಾಘನೀಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್.ಎಂ. ಸಿದ್ದರಾಮಸ್ವಾಮಿ, ಮಾಜಿ ಕಾಡಾ ಅಧ್ಯಕ್ಷರಾದ ತಿಪ್ಪೇರುದ್ರಸ್ವಾಮಿ, ಮುಖಂಡರಾದ ಹೆಚ್.ಎಂ. ವಿರುಪಾಕ್ಷಯ್ಯ ಸ್ವಾಮಿ ಹಾಗೂ ಸಂಗಾಪುರ ಗ್ರಾ.ಪಂ ಉಪಾಧ್ಯಕ್ಷರಾದ ಈ ರಾಘು, ಅಗಸರ ಯಮನೂರು, ರವಿ ನಾಯಕ್, ಉಪ್ಪಾರ್ ಕೃಷ್ಣ, ಅಡವಿ ಕೃಷ್ಣ, ಗೋವಿಂದ, ಶ್ರೀನಿವಾಸಬಾಬು, ಮಲ್ಲಾಪುರ ಶರಣಪ್ಪ, ಪರಶುರಾಮ ಹಾಗೂ ಇನ್ನಿತರ ಗ್ರಾಮದ ಮುಖಸ್ಥರು ಉಪಸ್ಥಿತರಿದ್ದರು.

13ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಶಾಂತ ಶಿಲ್ಪಿ ಸೇರಿದಂತೆ ವಿವಿಧ ಸಾಧಕರಿಗೆ ಸನ್ಮಾನ

ಗಂಗಾವತಿ: ಮಾರ್ಚ್ 27 ಮತ್ತು 28 ಎರಡು ದಿನಗಳ ಕಾಲ ಗಂಗಾವತಿಯಲ್ಲಿ ನಡೆದ ಕೊಪ್ಪಳ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಮಾರ್ಚ್ 28ರಂದು ಗಂಗಾವತಿಯ ಶಿಲ್ಪಿಗಳಾದ ಪ್ರಶಾಂತ್ ಸೋನಾರ್ ಅವರಿಗೆ ಸಮ್ಮೇಳನದ ರಾಜಾ ದಿ. ಶ್ರೀರಂಗದವರಾಯಲು ವೇದಿಕೆಯಲ್ಲಿ ಸನ್ಮಾನಿಸಲಾಯಿತು

ಇದೇ ರೀತಿ ಈ ಸನ್ಮಾನ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಹತ್ತಾರು ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸನ್ಮಾನ ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷರಾದ ಲಿಂಗಾರೆಡ್ಡಿ ಆಲೂರು, ಜನಪ್ರಿಯ ಶಾಸಕರಾದ ಜನಾರ್ಧನ್ ರೆಡ್ಡಿ, ರಾಜವಂಶಸ್ಥೆ ಶ್ರೀಮತಿ ಲಲಿತಾರಾಣಿ, ಬಿಜೆಪಿ ಮುಖಂಡರಾದ ಕೆಲೋಜಿ ಸಂತೋಷ ಸೇರಿದಂತೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.