ಗಂಗಾವತಿ: ಭಾರತದ ಸನಾತನ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದ ಕೀರ್ತಿ ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥ ಮಹಾಸ್ವಾಮಿಗಳವರಿಗೆ ಸಲ್ಲುತ್ತದೆ ಎಂದು ಶಂಕರ ಮಠದ ಧರ್ಮದರ್ಶಿ ನಾರಾಯಣರಾವ್ ವೈದ್ಯ ಹೇಳಿದರು.
ಅವರು ಏಪ್ರಿಲ್-೩ ಗುರುವಾರ ಶೃಂಗೇರಿಯ ಜಗದ್ಗುರುಗಳಾದ ಪರಮಪೂಜ್ಯ ಭಾರತೀ ತೀರ್ಥ ಮಹಾಸ್ವಾಮಿಗಳ ೫೦ನೇ ವರ್ಷದ ಸುವರ್ಣ ಸಂಭ್ರಮ ಹಾಗೂ ವಜ್ರೋತ್ಸವ ೭೫ನೇಯ ವರ್ಧಂತಿ ಮಹೋತ್ಸವ ಸಮಾರಂಭದ ನಿಮಿತ್ಯ ಶಂಕರ ಮಠದಲ್ಲಿ ಆಯೋಜಿಸಲಾದ ಧಾರ್ಮಿಕ ಸಮಾರಂಭದ ಧರ್ಮಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಅವಸಾನದ ಅಂಚಿನಲ್ಲಿದ್ದ ಹಿಂದೂ ಧರ್ಮವನ್ನು ಸಂರಕ್ಷಿಸಿದ ಆದಿಗುರು ಶ್ರೀ ಶಂಕರಾಚಾರ್ಯರು ಪ್ರಥಮವಾಗಿ ಶೃಂಗೇರಿ ಸೇರಿದಂತೆ ದೇಶದ ಒಟ್ಟು ನಾಲ್ಕು ಮಠ ಸ್ಥಾಪಿಸುವುದರ ಮೂಲಕ ಧರ್ಮ ಜಾಗೃತಿಗಾಗಿ ಶ್ರಮಿಸುತ್ತಿದ್ದಾರೆ. ವಿಶೇಷವಾಗಿ ಶೃಂಗೇರಿ ಶಾರದಾ ಪೀಠವು ಧಾರ್ಮಿಕ ಜಾಗೃತಿಯ ಜೊತೆಗೆ ದೇಶದ ರಕ್ಷಣಾ ವ್ಯವಸ್ಥೆಗೆ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗೆ ತನ್ನದೇ ಆದ ಮಹತ್ವದ ಕೊಡುಗೆಯನ್ನು ನೀಡಿದ್ದಾರೆ ಎಂದು ಸಮಗ್ರ ಮಾಹಿತಿ ನೀಡಿದರು.
ಅನಿತಾ ಅಳವಂಡಿಕರ್, ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ಹಾಗೂ ಶ್ರೀ ವಿದುಶೇಖರ ಮಹಾಸ್ವಾಮಿಗಳವರ ವಿಜಯ ಯಾತ್ರೆ ಕುರಿತು ಮಾತನಾಡಿದರು.
ಇದಕ್ಕೂ ಪೂರ್ವದಲ್ಲಿ ಶಾರದಾ ಶಂಕರ ಭಕ್ತ ಮಂಡಳಿ ಹಾಗೂ ವಿವಿಧ ಭಜನಾ ಮಂಡಳಿಗಳ ಮಹಿಳೆಯರಿಂದ ಶ್ರೀರಾಮ ದೇವರ ತಾರಕ ಮಂತ್ರ ಹಾಗೂ ಶಂಕರಾಚಾರ್ಯರು ರಚಿತ ಕಲ್ಯಾಣ ವೃಷ್ಟಿ ಭವ, ಇತರ ಶ್ಲೋಕಗಳ ಪಾರಾಯಣ ನಡೆಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ. ಅಳವಂಡಿಕರ್, ದತ್ತಾತ್ರೇಯ ಹೊಸಳ್ಳಿ, ಬಾಲಕೃಷ್ಣ ದೇಸಾಯಿ, ಗಾಯತ್ರಿ ಅಳವಂಡಿಕರ್, ಶ್ರೀನಿವಾಸ್ ಕರಮುಡಿ, ವೇಣು, ಶೇಷಗಿರಿ ಗಡಾದ್, ಶಂಕರ ಹೊಸಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಬೆಳಿಗ್ಗೆ ದೇವಸ್ಥಾನದ ಅರ್ಚಕ ಕುಮಾರ್ ಭಟ್ಟ ಅವರಿಂದ ಶ್ರೀ ಶಾರದಾ ದೇವಿ ಹಾಗೂ ಪರಿವಾರ ದೇವರುಗಳಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.