ನಮ್ಮ ಊರು ಹಾಸನ ಶಿಲ್ಪಕಲೆಯ ಶಾಸನ ಗಾಯಕ ಆರ್. ರಾಮಶಂಕರಬಾಬು

ಮಾತನಾಡುವಾಗ ಉಗ್ಗುವಿಕೆಯ ತೊಂದರೆಯಿಂದ ತೊದಲುವ ವ್ಯಕ್ತಿ ಹಾಡುವಾಗ ಸುಲಲಿತವಾಗಿ ಹಾಡುತ್ತಾರೆ ಎಂದರೆ ಈ ಸಾಧನೆಯ ಹಿಂದೆ ದೃಢ ಸಂಕಲ್ಪ ಮೇಳೈಸಿದೆ ಎನ್ನಬಹುದು. ತನ್ನ ಉಗ್ಗುವಿಕೆಯ ತೊಂದರೆಗೆ ಹಾಡುಗಾರಿಕೆಯಿಂದ ಪರಿಹಾರ ಕಂಡುಕೊಂಡ ಹಾಸನದ ಆರ್. ರಾಮಶಂಕರಬಾಬು ಜಿಲ್ಲೆಯ ಪ್ರತಿಭಾನ್ವಿತ ಗಾಯಕರು. ಉಗ್ಗು ಇದ್ದರೂ ಹಾಡಿ ಹಿಗ್ಗುವ ಮುಖೇನ ತಮ್ಮ ಬಾಳಿನ ನೋವು ಮರೆಯುತ್ತಿದ್ದರು. ಚಿಕ್ಕ ವಯಸ್ಸಿನಲ್ಲಿ ಉಗ್ಗುವಿಕೆ ತೊಂದರೆಯಿಂದ ಮಾತನಾಡಲು ಕಷ್ಟಪಡುತ್ತಿದ್ದ ಬಾಬು ಛಲ ಮತ್ತು ದೃಢಚಿತ್ತದಿಂದ ಹಾಡುವುದನ್ನು ಅಭ್ಯಾಸ ಮಾಡಿಕೊಂಡವರಾಗಿದ್ದರು. ಜಾನಪದ ಹಾಡುಗಳನ್ನು ಹಾಡುವುದರ ಜೊತೆಗೆ ಕಂಜರ ಬಾರಿಸುವುದನ್ನು ರೂಢಿಸಿಕೊಂಡಿದ್ದರು. ಹೆಚ್ಚು ಹೆಚ್ಚು ಆತ್ಮವಿಶ್ವಾಸದಿಂದ ಹಾಡುಗಾರಿಕೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದವರು. ಗಾನ ಸೌರಭ, ಸಂಗೀತ ಗಂಗಾ ಎಂಬ ಹೆಸರಿನಲ್ಲಿ ಆರ್ಕೆಸ್ಟ್ರಾ ತಂಡ ಕಟ್ಟಿಕೊಂಡು ಗಣೇಶೋತ್ಸವ, ರಾಜ್ಯೋತ್ಸವ, ಮದುವೆ ಸಮಾರಂಭಗಳಲ್ಲಿ ಹಾಡುತ್ತಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಾಯೋಜನೆಯಲ್ಲಿ ಸುಗಮ ಸಂಗೀತ ಕಾರ್ಯಕ್ರಮ ನೀಡಿದ್ದರು. ಹಾಸನ ಆಕಾಶವಾಣಿಯಲ್ಲಿ ತತ್ವಪದ ಗಾಯಕರಾಗಿ ಹಾಡಿದ್ದರು. ಸಾಮಾಜಿಕ ಜನಜಾಗೃತಿಯ ಕಾರ್ಯಕ್ರಮಗಳಲ್ಲಿ ಅವಕಾಶ ಸಿಕ್ಕಾಗ ತಮ್ಮೆಲ್ಲಾ ಕಾರ್ಯಗಳನ್ನು ಬದಿಗೊತ್ತಿ ಭಾಗವಹಿಸುತ್ತಿದ್ದರು. ಸರ್ಕಾರಿ ಪ್ರಾಯೋಜಿತ ಜನಜಾಗೃತಿ ಕಾರ್ಯಕ್ರಮ ಅದು ಆರೋಗ್ಯ ನೈರ್ಮಲ್ಯ ವಿಚಾರವಿರಲಿ, ಕುಡಿತದ ವ್ಯಸನ, ರಸ್ತೆ ಸುರಕ್ಷತೆ ಕೌಟುಂಬಿಕ ಸಾಮರಸ್ಯ ಹೀಗೆ ಎಂತಹದೇ ವಿಷಯದ ವಿಚಾರ ಇರಲಿ ಅದಕ್ಕೆ ಸ್ಥಳದಲ್ಲೇ ರಾಗ ತಾಳ ಮೇಳೈಸಿ ಹಾಡುವ ಸಾಮರ್ಥ್ಯ ಅವರಲ್ಲಿತ್ತು.

ಅಂದಿನ ದಿನಗಳಲ್ಲಿ ನಾನು ಗೊರೂರಿನಲ್ಲಿ ಕಟ್ಟಿ ಬೆಳೆಸಿದ್ದ ಕನ್ನಡ ಕಲಾ ಸಾಹಿತ್ಯ ವೇದಿಕೆ ವೃಂದ ಜಿಲ್ಲೆಯ ನಾಟಕ ಸ್ಫರ್ಧೆಗಳಲ್ಲಿ ಹಾಸನ ಜಾತ್ರೆ, ಹೊಳೆನರಸೀಪುರ ಸಕಲೇಶಪುರ ಜಾತ್ರೆ, ಗಣೇಶೋತ್ಸವಗಳಲ್ಲಿ ನಮ್ಮ ನಾಟಕ ತಂಡದ ಹಿನ್ನೆಲೆ ಗಾಯಕರಾಗಿ ಬರುತ್ತಿದ್ದರು, ಹಾಡುತ್ತಿದ್ದರು. ನಾಟಕಕ್ಕೆ ಜನ ಸೇರಿಸಲು ಮೊದಲಿಗೆ ಬಾಬು ಅವರಿಗೆ ಹಾಡಲು ಅವಕಾಶ ನೀಡುತ್ತಿದ್ದೆ. ಅವರು ನನ್ನ ಊರು ಹಾಸನ ಶಿಲ್ಪಕಲೆಯ ಶಾಸನ ತಾವೇ ರಚಿಸಿದ್ದ ಈ ಹಾಡನ್ನು ಸಾವಿರಾರು ವೇದಿಕೆಗಳಲ್ಲಿ ಹಾಡಿದ್ದಾರೆ. ಈ ಗೀತೆ ನಮ್ಮ ನಾಟಕಕ್ಕೂ ಮೊದಲು ನಾವು ಮೇಕಪ್ ಮಾಡಿಕೊಳ್ಳಲು ಸಮಯ ಸಿಗಲು ಅನುಕೂಲವಾಗುತ್ತಿತ್ತು ಮತ್ತು ನಾಟಕ ಆರಂಭಗೊಂಡಿರಬೇಕು ಎಂದು ಭಾವಿಸಿ ಜನ ಧಾವಿಸಿ ಬರುತ್ತಿದ್ದರು.

ಇನ್ನು ನಮ್ಮ ಹುಡುಗರು ಬಸ್ಸಿನಿಂದ ಇಳಿದ ಕೂಡಲೇ ಅಲ್ಲಿ ಇಲ್ಲಿ ಚೆಲ್ಲಾಪಿಲ್ಲಿಯಾಗಿ ಜಾತ್ರೆ ಮಾಳ ಸುತ್ತುವ ಕೆಟ್ಟ ಚಾಳಿ ಬೆಳೆಸಿಕೊಂಡಿದ್ದರು. ಆಗ ಬಾಬು ಅವರ ಕಂಚಿನ ಕಂಠದಿoದ ಬಾಬು ಮೈಕಿನಲ್ಲಿ ಹಾಡುತ್ತಿದ್ದನ್ನು ಕೇಳಿಸಿಕೊಂಡು ಆಗ ಕಲಾವಿದರು ನಿಧಾನವಾಗಿ ಬಂದು ಸಾರಿ ಸಾರ್,. ಎಂದು ಪರದೆ ಹಿಂದೆ ಸರಿಯುತ್ತಿದ್ದರು. ಈ ಅನುಭವ ಹಿನ್ನಲೆಯಲ್ಲೇ ನಾನು ತೋಳ ಬಂತು ತೋಳ ಬರೆದು ನಾಟಕವಾಡಿಸಿ ಅದೀಗ ಪುಸ್ತಕವಾಗಿ ಓದುಗರ ಕ್ಕೆ ಸೇರಿದೆ. ಇಂದು ಕಾಮಿಡಿ ಕಿಲಾಡಿಗಳು ವಿನ್ನರ್ ಆಗಿರುವ ಕೆ.ಆರ್.ಪೇಟೆ ಶಿವರಾಜ್ ಅಂದು ನಮ್ಮ ತಂಡದ ನಟನಾಗಿ ರಂಗದ ಮೇಲೆ ಬಂದಾಗ ಆಗಿನ್ನು ಕಾಲೇಜು ವಿದ್ಯಾರ್ಥಿ. ಬಾಬು ಅವರು ನನ್ನ ಕವನಗಳಿಗೆ ರಾಗ ಕಟ್ಟಿ ವೇದಿಕೆಗಳಲ್ಲಿ ಹಾಡಿದ್ದಾರೆ. ಇವರು ವೇದಿಕೆಯಲ್ಲಿ ಏಕಪಾತ್ರಾಭಿನಯವನ್ನು ಮಾಡಿ ಜನರನ್ನು ರಂಜಿಸಿದ್ದಾರೆ. ಅನೇಕ ನಾಟಕಗಳಿಗೆ ಹಿನ್ನೆಲೆ ಗಾಯಕರಾಗಿ ಹಾಡಿರುವ ಇವರಿಗೆ ಕುಂಟುನಾಯಿ, ವ್ಯವಸ್ಥೆ, ಆತ್ಮ ಯಾವ ಕುಲ ಜೀವ ಕುಲ ನಾಟಕಗಳು ಹೆಸರು ತಂದಿದ್ದವು.

ವಾರ್ತಾ ಇಲಾಖೆ ಆರೋಗ್ಯ ಇಲಾಖೆಗಳು ಹಮ್ಮಿಕೊಂಡ ಜನಜಾಗೃತಿ ಕಾರ್ಯಕ್ರಮಗಳಲ್ಲಿ ಸಾಕ್ಷರತಾ ಆಂದೋಲನದ ಕಲಾಜಾಥದಲ್ಲಿ ಪಾಲ್ಗೊಂಡು ಬಾಬು ದಮಡಿ ಬಾರಿಸಿಕೊಂಡು ಹಾಡಿದ್ದಾರೆ. ಇವರ ಕಲಾ ಪ್ರತಿಭೆ ಗುರುತಿಸಿ ಜಿಲ್ಲೆಯ ಸಂಘ ಸಂಸ್ಥೆಗಳು ಸನ್ಮಾನಿಸಿ ಗೌರವಿಸಿವೆ. ಆದರೆ ಇಂತಹ ಮಹಾನ್ ಕಲಾವಿದನಿಗೆ ಹಾಸನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕಡೆಗೂ ಸಿಗದೇ ಇದ್ದಿದ್ದು ವಿಷಾದನೀಯ. ಈ ಬಗ್ಗೆ ಅಷ್ಟಾಗಿ ಆಸಕ್ತಿ ತೋರದ ಬಾಬು ಮುಂದಿನ ವರ್ಷ ನೋಡೋಣ ಬಿಡಿ ಅನಂತರಾಜು ಎಂದು ನಿರಾಸೆಯಿಂದಲೇ ಹೇಳುತ್ತಿದ್ದರು. ಎರಡು ವರ್ಷದ ಹಿಂದೆ ಅರ್ಜಿ ಹಾಕಿದ್ದರು. ಪ್ರಶಸ್ತಿ ಸಿಗದೆ ನಿರಾಶರಾಗಿದ್ದರು. ಕಲಾವಿದರ ಮಾಶಸನಕ್ಕೂ ಅರ್ಜಿ ಹಾಕಲಾಗಲಿಲ್ಲ. ಜನ್ಮ ದಿನಾಂಕ ಪ್ರಮಾಣ ಪತ್ರ (ಡೇಟ್ ಆಫ್ ಬರ್ತ್ ಫಿಕೇಟ್ ) ಬೇಕಾಗಿತ್ತು ಎ೦ದು ಕಾಣುತ್ತದೆ. ಅದು ಅವರಲ್ಲಿ ಇರಲಿಲ್ಲವೇನೋ. ಅದಕ್ಕಾಗಿ ಅವರು ಅನಂತರಾಜು, ನೀವು ನನ್ನ ಪರಿಚಯ ಲೇಖನ ಪ್ರಜಾವಾಣಿ ದಿನಪತ್ರಿಕೆಯಲ್ಲಿ ಬರೆದಿದ್ದಿರಲ್ಲಾ ಅದರ ಕಟಿಂಗ್ಸ್ ನಿಮ್ಮ ಫೈಲ್ ನಲ್ಲಿ ಇದ್ದರೆ ಹುಡುಕಿಕೊಡಿ ಎಂದರು. ನಾನು ಸಾಮಾನ್ಯವಾಗಿ ಕಲಾವಿದರ ಪರಿಚಯ ಲೇಖನ ಬರೆಯುವಾಗ ಅವರ ಜನ್ಮ ದಿನಾಂಕ ಕೇಳಿ ದಾಖಲಿಸುತ್ತಿದ್ದೆ. ಕೆಲವರಿಗೆ ಅವರ ಹುಟ್ಟಿದ ದಿನಾಂಕವೇ ಗೊತ್ತಿರುವುದಿಲ್ಲ. ಈಗಿನಂತೆ ಶಾಲೆಗೆ ಮಕ್ಕಳನ್ನು ಸೇರಿಸುವಾಗ ಆಸ್ಪತ್ರೆ, ನಗರಸಭೆಯಿಂದ ಪಡೆದ ಜನನ ಪ್ರಮಾಣ ಕೂಡಲೇಬೇಕೆಂಬ ಕಡ್ಡಾಯವಿರಲಿಲ್ಲ. ಇದಕ್ಕೆ ಉದಾಹರಣೆ ಹೇಳಬೇಕೆಂದರೆ ಸಾಹಿತಿಗಳು ನಮ್ಮ ಚಿಕ್ಕಪ್ಪನವರು ಆದ ಗೊರೂರು ಸೋಮಶೇಖರ್ ತಮ್ಮ ಆತ್ಮಕಥೆ ಪುಸ್ತಕ ಗೊರೂರು ನೆನಪುಗಳಲ್ಲಿ ಬರೆದಿದ್ದಾರೆ.

ಮಹಾಲಯ ಅಮಾವಾಸೆಯ ದಿನ ಹಬ್ಬ ಮುಗಿಸಿ ನಾನು ನನ್ನ ಸಹೋದರ ಲೇಖಕ ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಸಂಜೆ ಎಲೆ ಅಡಿಕೆ ತಿನ್ನುತ್ತಾ ಸಾಹಿತ್ಯ ಪರಿಷತ್ತು ಚುನಾವಣೆ, ನಾಟಕ ವಿಚಾರವಾಗಿ ಮಾತನಾಡುತ್ತಾ ಬಾಬು ವಿಷಯ ಮಧ್ಯೆ ಬಂತು. ಆಗಲೇ ನಾನು ಬಾಬು ಅವರಿಗೆ ಈ ಬಾರಿ ಅರ್ಜಿ ಹಾಕಿ ಬಾಬು ಎಂದು ಮೆಸೇಜ್ ಮಾಡಿದ್ದೆ. ಮಾರನೇ ದಿನ ಬೆಳಿಗ್ಗೆ ಕಾದಂಬರಿಗಾರ್ತಿ ಶ್ರೀಮತಿ ಶೈಲಜಾ ಸುರೇಶ್ ಮೇಡಂ ಬಾಬು ನಿಧನ ಸುದ್ಧಿ ವ್ಯಾಟ್ಸಪ್ ಮಾಡಿದ್ದರು. ಇದು ಆ ಕ್ಷಣಕ್ಕೆ ನನಗೆ ಶಾಕಿಂಗ್ ನ್ಯೂಸ್. ಆಗ ನಮ್ಮ ವಾರ್ಡಿನ ಕಸದ ಗಾಡಿ ನಮ್ಮ ಮನೆ ಕಡೆ ಬರುತ್ತಿರಲು ಆ ಗಾಡಿಯ ಮೈಕಿನಿಂದ ಬಾಬು ಅವರ ಜನಪ್ರಿಯ ಹಾಡು ನನ್ನ ಊರು ಹಾಸನ ಶಿಲ್ಪ ಕಲೆಯ ಶಾಸನ ಕೇಳಿ ಬರುತ್ತಿತ್ತು. ಈ ಹಾಡು ಮಲಗಿದ್ದ ನಮ್ಮನ್ನು ಹಿಂದೆಲ್ಲಾ ಬಡಿದೆಬ್ಬಿಸುತ್ತಿತ್ತು. ಬಾಬು ಈ ಆಡಿಯೋ ಎಲ್ಲಿ ಮಾಡಿಸಿದ್ದೀರಿ ಎಂದು ಹಿಂದೊಮ್ಮೆ ಕೇಳಿದ್ದೆ. ಅನಂತರಾಜು, ನಿಜವಾಗಿಯೂ ಈ ಹಾಡು ನಾನು ಹಾಡಿದ್ದಲ್ಲ ಗಾಯಕ ಭಾನುಮೋಶ್ರೀಯವರು ಹಾಡಿದ್ದು ಎಂದಿದ್ದರು. ಬಾಬು ಅವರದೇ ಸ್ವರ ಸಾಮಾರ್ಥ್ಯದಲ್ಲಿ ಈ ಹಾಡನ್ನು ಮ್ಯೂಸಿಕ್ ಸಂಗಾತ್ಯದಲ್ಲಿ ರೆಕಾರ್ಡ್ ಮಾಡಿ ಭಾನುಮೋಶ್ರಿ ಯೂ ಟ್ಯೂಬ್ ನಲ್ಲಿ ಹಾಕಿದ್ದರು ಎಂದು ಕಾಣುತ್ತದೆ.ಅದನ್ನು ಗೊರೂರು ಶಿವೇಶ್ ಯೂ ಟ್ಯೂಬ್‌ನಿಂದ ತೆಗೆದು ಗ್ರೂಪ್ ಗೆ ಕಳಿಸಿದರು. ಹಾಡು ಕೇಳುತ್ತಾ ಹಾಗೆಯೇ ಕಣ್ಣಂಚಿನಲ್ಲಿ ನೀರು ಧುಮುಕದೆ ಹಾಗೆ ನಿಂತಿತ್ತು.

ಗೊರೂರು ಅನಂತರಾಜು, ಹಾಸನ.
ಮೊ:೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ,
೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

ಶ್ರೀ ಶಾರದಾ ಶರನ್‌ ನವರಾತ್ರಿ ಮಹೋತ್ಸವ.. ಸಂಕಲ್ಪದಂತೆ ಹರಕೆ ಸಮರ್ಪಿಸಿದ ಮಹಿಳೆ.

ಗಂಗಾವತಿ: ನಗರದ ಶಂಕರ ಮಠದಲ್ಲಿ ಶ್ರೀ ಶಾರದಾದೇವಿ 8ನೆಯ ವರ್ಷದ ಶರನ್ ನವರಾತ್ರಿ ಪ್ರಯುಕ್ತ ಹಾಗೂ ಶೃಂಗೇರಿ ಜಗದ್ಗುರು ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳ ವಜ್ರೋತ್ಸವದ ಭಾರತಿ ಸಮಾರಂಭದ ಅಡಿಯಲ್ಲಿ ಶುಕ್ರವಾರದಂದು ಸಮಾಜಮುಖಿ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಜೊತೆಗೆ ವಿಶೇಷವಾಗಿ ನಗರದ ಮಹಿಳೆ ಒಬ್ಬಳು ಕಳೆದ ವರ್ಷ ತನ್ನ ಮಗಳ ಮದುವೆಗಾಗಿ ಹರಕೆ ಹೊತ್ತು ಹುಲಿಗೆಮ್ಮ ಎಂಬ ಮಗಳನ್ನು ಮದುವೆ ಮಾಡಿದ ಪ್ರಯುಕ್ತ ತಾಯಿ ಮತ್ತು ಮಗಳು 400 ಅಧಿಕ ಮಹಿಳೆಯರಿಗೆ ಅರಿಶಿಣ ಕುಂಕುಮ ಜೊತೆಗೆ ಹೂವು ಹಸಿರು ಬಳೆಗಳನ್ನು ಸಮರ್ಪಿಸಿದ್ದು ಅವರಲ್ಲಿನ ಶ್ರೀ ಶಾರದಾಂಬೆಯ ಬಗ್ಗೆ ಇರುವ ನಂಬಿಕೆ ಅನುಗ್ರಹ ಭಕ್ತಾದಿಗಳಿಗೆ ಸಾಕ್ಷಿ ಯಾಗಿ ಕಂಡುಬಂದಿತು

ಇದೇ ಸಂದರ್ಭದಲ್ಲಿ ಆಚಾರ ನರಸಾಪುರ ಗ್ರಾಮದ ನಾಟಿ ವೈದ್ಯ ಮಲ್ಲೇಶಪ್ಪ ಹಾಗೂ ಕುಟುಂಬಸ್ಥರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ಧರ್ಮದರ್ಶಿ ನಾರಾಯಣರಾವ್ ವೈದ್ಯ ಸನ್ಮಾನಿಸಿ ಆಶೀರ್ವದಿಸಿದರು. ಸನ್ಮಾನ ಸ್ವೀಕರಿಸಿದ ಡಾ|| ಪ್ರವೀಣ್ ಮಾತನಾಡಿ, ಧರ್ಮದರ್ಶಿ ನಾರಾಯಣರಾವ್ ವೈದ್ಯ ಅವರ ವ್ಯಕ್ತಿತ್ವ ಅಪಾರವಾಗಿದ್ದು. ಅವರು ಬ್ಯಾಂಕಿನಲ್ಲಿನ ಸೇವೆ ಗ್ರಾಹಕರು ಅವರ ಮೇಲೆ ಇಟ್ಟ ಪ್ರೀತಿ ವಿಶ್ವಾಸ ಸ್ಮರಿಸಿ ಪ್ರಸ್ತುತ ಈಗ ಶ್ರೀ ಶಾರದಾ ಪೀಠದ ಧರ್ಮದರ್ಶಿಗಳಾಗಿ ಸಮಾಜದ ಎಲ್ಲಾ ವರ್ಗದ ಜನರನ್ನು ಆಹ್ವಾನಿಸಿ ಧಾರ್ಮಿಕತೆ ಜೊತೆಗೆ ಅವರ ಸಂಘಟನಾ ಮನೋಭಾವನೆಯನ್ನು ಮುಕ್ತ ಕಂಡದಿಂದ ಪ್ರಶಂಸಿಸಿದರು.

ಈ ಸಂದರ್ಭದಲ್ಲಿ ನಾರಾಯಣರಾವ್ ಮಾತನಾಡಿ ಶ್ರೀದೇವಿಯ ಅನುಗ್ರಹ, ಗುರುಗಳ ಅನುಗ್ರಹದ ಮೇರೆಗೆ ಶಂಕರ ಮಠ 8ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಹಿರಿಯ ಸ್ವಾಮಿಗಳ 75 ವಜ್ರ ಮಹೋತ್ಸವ ಪ್ರಯುಕ್ತ ಧಾರ್ಮಿಕ ಆಚರಣೆ ಜೊತೆಗೆ ಸಮಾಜ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.

ಪ್ರವಾಸೋದ್ಯಮ ದಿನಾಚರಣೆ: ಗಂಗಾವತಿ ಬಸ್ ನಿಲ್ದಾಣದ ಮಹಿಳಾ ವಿಶ್ರಾಂತಿ ಕೊಠಡಿಯನ್ನು ಐತಿಹಾಸಿಕ ಸ್ಮಾರಕ ಛಾಯಾಚಿತ್ರಗಳೊಂದಿಗೆ ಸಿಂಗಾರ.

ಗಂಗಾವತಿ: ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಗಂಗಾವತಿ ಚಾರಣ ಬಳಗವು, ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕೊಪ್ಪಳ ಸಹಯೋಗದಲ್ಲಿ ನಮ್ಮ ಜಿಲ್ಲೆಯಲ್ಲಿರುವ ಐತಿಹಾಸಿಕ ಸ್ಮಾರಕಗಳ ರಕ್ಷಣೆ, ಜಾಗೃತಿ ಮತ್ತು ಪ್ರಚಾರಕ್ಕೆ ಒಂದು ನೂತನ ಹೆಜ್ಜೆ ಇಟ್ಟಿದೆ. ನಗರದ ಬಸ್ ನಿಲ್ದಾಣದಲ್ಲಿರುವ ಮಹಿಳಾ ವಿಶ್ರಾಂತಿ ಕೊಠಡಿಯನ್ನು ವಿವಿಧ ಪ್ರವಾಸಿ ತಾಣಗಳ ಛಾಯಾಚಿತ್ರಗಳಿಂದ ಅಲಂಕರಿಸಿ, ಅದನ್ನು ‘ಪ್ರವಾಸೋದ್ಯಮ ಪೂರಕ ಮಾದರಿ ಕೊಠಡಿ’ಯಾಗಿ ಪರಿವರ್ತಿಸಲಾಯಿತು. ಪ್ರವಾಸಿಗರು ವಿಶ್ರಾಂತಿ ಪಡೆಯುವ ಸ್ಥಳವನ್ನು ಸುಂದರ ಹಾಗೂ ಮಾಹಿತಿ ಪ್ರಧಾನವಾಗಿಸಲು ಈ ವಿಶೇಷ ಕಾರ್ಯಕ್ರಮ ಕೈಗೊಳ್ಳಲಾಯಿತು ಎಂದು ಗಂಗಾವತಿ ಚಾರಣ ಬಳಗದ ಪ್ರಮುಖರಾದ ಡಾ|| ಶಿವಕುಮಾರ ಮಾಲಿಪಾಟೀಲ್ ತಿಳಿಸಿದರು.

ಕಾರ್ಯಕ್ರಮವನ್ನು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಡಿ. ನಾಗರಾಜ ಉದ್ಘಾಟಿಸಿ ಮಾತನಾಡಿ, ಪ್ರವಾಸೋದ್ಯಮವು ಕೇವಲ ಆರ್ಥಿಕ ಬೆಳವಣಿಗೆಯ ಸಾಧನವಾಗಿರದೇ, ಸಂಸ್ಕೃತಿ, ಇತಿಹಾಸ ಮತ್ತು ಪ್ರಕೃತಿಯ ವೈಭವವನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಸೇತುವೆಯಾಗಿದೆ ಎಂದರು. ಗಂಗಾವತಿಯಂತಹ ಐತಿಹಾಸಿಕ ಪಟ್ಟಣವು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಬೇಕೆಂದು ಬಯಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ಗಂಗಾವತಿ ಘಟಕದ ವ್ಯವಸ್ಥಾಪಕರಾದ ರಾಜಶೇಖರ ಅಣ್ಣಿಗೇರಿ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳ ಸೌಂದರೀಕರಣ ಮತ್ತು ಪ್ರವಾಸೋದ್ಯಮ ಬೆಂಬಲವು ಸಾರಿಗೆ ಇಲಾಖೆಯ ಸಹಕಾರದೊಂದಿಗೆ ಇನ್ನಷ್ಟು ವಿಸ್ತಾರವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇತಿಹಾಸ ತಜ್ಞರು ಹಾಗೂ ಕರ್ನಾಟಕ ಪುಸ್ತಕ ಪ್ರಾಧಿಕಾರದ ಸದಸ್ಯರಾದ ಡಾ. ಶರಣಬಸಪ್ಪ ಕೋಲ್ಕಾರ್ ಮಾತನಾಡಿ, ನಗರಗಳು ಬೆಳೆಯಬೇಕೆಂದರೆ ಸರ್ಕಾರ ಪ್ರವಾಸೋದ್ಯಮಕ್ಕೆ ಒತ್ತುಕೊಟ್ಟು, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಪ್ರಚಾರಪಡಿಸಬೇಕೆಂದು ಕರೆ ನೀಡಿದರು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಚಾರಿ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀಮತಿ ಶಾರದಾ, ಪ್ರೊ.ಎಫ್.ಹೆಚ್. ಚಿತ್ರಗಾರ ಅವರು ಮಾತನಾಡಿ, ಪ್ರವಾಸಿಗರಿಗೆ ಪ್ರೇರಣೆ ನೀಡುವ ಈ ರೀತಿಯ ಕಾರ್ಯಕ್ರಮಗಳು ಸ್ಥಳೀಯರ ಸಹಭಾಗಿತ್ವದಿಂದ ಯಶಸ್ವಿಯಾಗುತ್ತವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ತಹಶೀಲ್ದಾರರಾದ ಯು. ನಾಗರಾಜ ಹಾಗೂ ಉಪತಹಶಿಲ್ದಾರ ಪ್ರಕಾಶ ಅವರ ಸಹಕಾರದೊಂದಿಗೆ ಅವರ ಸಮ್ಮುಖದಲ್ಲಿಯೇ ತಹಶಿಲ್ದಾರರ ಕಚೇರಿ ಮತ್ತು ಉಪ ನೋಂದಣಿ ಕಚೇರಿಗಳ ಗೋಡೆಗಳ ಮೇಲೆ ಪ್ರವಾಸಿ ತಾಣಗಳ ಸ್ಮಾರಕಗಳ ಪೋಸ್ಟರ್‌ಗಳನ್ನು ಅಳವಡಿಸಲಾಯಿತು. ಇದರಿಂದ ಸಾರ್ವಜನಿಕರಿಗೆ ಪ್ರವಾಸೋದ್ಯಮ ತಾಣಗಳ ಪರಿಚಯ ಹಾಗೂ ಜಾಗೃತಿ ಮೂಡಿಸುವ ಉದ್ದೇಶ ಸಾಧಿಸಲಾಯಿತು.

ಈ ಕಾರ್ಯಕ್ರಮದ ಗಂಗಾವತಿ ಚಾರಣ ಬಳಗದ ಪ್ರಮುಖರಾದ ಪ್ರಹ್ಲಾದ್ ಕುಲಕರ್ಣಿ, ಲಯನ್ಸ್ ಕ್ಲಬ್ ಖಜಾಂಚಿ ಶಿವಪ್ಪ ಗಾಳಿ, ಪ್ರೊ. ಕರಿಗೂಳಿ, ಮಹಮ್ಮದ್ ರಫಿ, ಉಲ್ಲಾಸ್, ರಮೇಶ್ ಗಬ್ಬೂರ್, ಮಹಾಲಕ್ಷ್ಮೀ ಕೇಸರಹಟ್ಟಿ, ಶಾಹೀನ್ ಕೌಸರ್, ಜಗದೀಶ ಪಾಟೀಲ್, ಚನ್ನಬಸವ ಜೇಕಿನ್, ಟಿ. ಆಂಜನೇಯ, ಮಂಜುನಾಥ ಗುಡ್ಲಾನೂರ್, ರಾಜೇಶ ನಾಯಕ, ಚನ್ನಬಸವ ಕೊಟಗಿ, ಅಲೆಮಾರಿ ಬುಡ್ಗಜಂಗಮ ಸಮಾಜದ ಮುಖಂಡ ಕೃಷ್ಣ, ಹರನಾಯಕ, ಚಿದಾನಂದ ಕೀರ್ತಿ, ಸರ್ವೇಶ ವಸ್ತ್ರದ, ಮಂಜುನಾಥ ಸೋನಾರ್ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರವಾಸೋದ್ಯಮ ದಿನಾಚರಣೆಯನ್ನು ಸಾರ್ಥಕಗೊಳಿಸಿದರು.

ಎಸ್.ಎಲ್ ಭೈರಪ್ಪನವರಿಗೆ ಅ.ಭಾ.ಸಾ.ಪ ವತಿಯಿಂದ ನುಡಿನಮನ

ಗಂಗಾವತಿ: ಸೆಪ್ಟೆಂಬರ್-೨೪ ಮಧ್ಯಾಹ್ನ ೨:೩೦ ಗಂಟೆಗೆ ಬೆಂಗಳೂರಲ್ಲಿ ದೈವಾಧೀನರಾದ ಕರುನಾಡಿನ ಹಿರಿಯ ಖ್ಯಾತ ಸಾಹಿತಿ, ಕಾದಂಬರಿಕಾರ, ಪದ್ಮಭೂಷಣ ಶ್ರೀಯುತ ಎಸ್.ಎಲ್ ಭೈರಪ್ಪನವರಿಗೆ ಇಂದು ಸೆಪ್ಟೆಂಬರ್-೨೫ ರಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ವತಿಯಿಂದ ಶ್ರದ್ದಾಂಜಲಿ ಹಾಗೂ ನುಡಿ ನಮನವನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಅಶೋಕ್ ಕುಮಾರ್ ರಾಯ್ಕರ್ ಮಾತನಾಡುತ್ತಾ ಒಬ್ಬ ಯುಗ ಪ್ರವರ್ತಕರಂತೆ ಹೊಸ ವೈಚಾರಿಕ ಜಗತ್ತಿನ ಸೃಷ್ಟಿಸಿ ಯುವ ಸಾಹಿತಿಗಳಿಗೆ ಭೈರಪ್ಪನವರು ಪ್ರೇರಣೆಯೆಂದು ಕೊಂಡಾಡಿದರು. ಯುವ ಸಾಹಿತಿಗಳು ಅವರ ಕಾದಂಬರಿ ವಿಮರ್ಶೆ ಹಾಗೂ ಜೀವನಕ್ರಮದಿಂದ ಪ್ರೇರಣೆ ಪಡೆದು ಹೊಸ ಸೃಷ್ಟಿಯ ವೈಚಾರಿಕ ವಲಯವನ್ನು ನಿರ್ಮಿಸಲಿ ಎಂದು ಕರೆ ನೀಡಿದರು.

ಕಾದಂಬರಿಗಳಲ್ಲದೆ ಸಾಹಿತ್ಯ ಮತ್ತು ಪ್ರತೀಕ, ನಾನೇಕೆ ಬರೆಯುತ್ತೇನೆ ಎಂಬ ಕೃತಿಗಳನ್ನು ಭೈರಪ್ಪ ರಚಿಸಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳ್ಳಿ ಅಭಿಪ್ರಾಯಪಟ್ಟರು. ಹಿರಿಯ ಉಪನ್ಯಾಸಕರಾದ ಶ್ರೀಯುತ ನಾರಾಯಣ ಕಂದಗಲ್ ಭೈರಪ್ಪನವರು ಓದುಗರ ಹಾಗೂ ವಿಮರ್ಶಕರ ಮನವನ್ನು ಗೆದ್ದವರೆಂದು ಹೇಳಿದರು.

ಬೈರಪ್ಪ ಅವರ ಸಾಧನೆ ನಡೆ-ನುಡಿ ಓದು ಬರಹ ಅನುಕರಣಿಯವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಬಳ್ಳಾರಿ ವಿಭಾಗದ ಸಂಯೋಜಕರಾದ ಟಿ. ಶ್ರೀಧರ್ ಹೇಳಿದರು.

ಬಡತನದಿಂದ ಬೆಳೆದು ಬಂದು ಜೀವನ ಅನುಭವದಿಂದ ಬರವಣಿಗೆಗೆ ಮೊದಲು ಅವರು ಆಳವಾಗಿ ಅಧ್ಯಯನ ಕೈಗೊಂಡು ಇದಕ್ಕೆ ಅವರ ಕಾದಂಬರಿಗಳು ಉತ್ಕೃಷ್ಟತೆಗೆ ಕಾರಣವೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಗಂಗಾವತಿ ನಗರದ ಉಪಾಧ್ಯಕ್ಷರಾದ ಹಾಗೂ ನಿವೃತ್ತ ಶಿಕ್ಷಕರಾದ ಶ್ರೀ ಪ್ರಕಾಶ್ ಪಾಟೀಲ್ ಅಭಿಪ್ರಾಯಪಟ್ಟರು.

ದೇಶದ ಅತ್ಯಂತ ಉನ್ನತವಾದ ಗೌರವದ ಪದ್ಮಭೂಷಣರ ಗೌರವಕ್ಕೆ ಪಾತ್ರರಾದವರು ಎಂದು ಇತರ ಪ್ರಶಸ್ತಿಗಳ ಗೋಜಿಗೆ ಹೋಗಲಿಲ್ಲ. ಸಾಹಿತ್ಯವನ್ನು ಅವರಂತೆ ಸಮಗ್ರವಾಗಿ ವಿಮರ್ಶೆ ಮಾಡಿದ ಕನ್ನಡ ನಾಡಿನಲ್ಲಿ ಅತಿ ವಿರಳವೆಂದು ಅಖಿಲ ಭಾರತ ಸಾಹಿತ್ಯ ಪರಿಷತ್ತಿನ ಗಂಗಾವತಿ ನಗರದ ಅಧ್ಯಕ್ಷರಾದ ಜಡಿಯಪ್ಪ ಮೆಟ್ರಿ ಹಿರಿಯ ಸಾಹಿತಿ ಭೈರಪ್ಪನವರನ್ನು ಸ್ಮರಿಸಿದರು.

ಗಂಗವತಿ ನಗರ ಉಪಾಧ್ಯಕ್ಷರಾದ ಮಹಾದೇವ್ ಮೋತಿ ಇವರಿಂದ ಶಾಂತಿ ಮಂತ್ರ ಹಾಗೂ ಗಂಗಾವತಿ ನಗರ ಕಾರ್ಯದರ್ಶಿಗಳಾದ ಯಲ್ಲಪ್ಪ ಕಲಾಲ್ ಇವರಿಂದ ವಂದನಾರ್ಪಣೆ ನಡೆಯಿತು.

ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ್ ಅವರಿಗೆ ಗಂಗಾವತಿ ವಕೀಲರ ಸಂಘದಿಂದ ಅಭಿನಂದನಾ ಪ್ರಶಸ್ತಿ ಪತ್ರ.

ಗಂಗಾವತಿ: ಹಗಲುವೇಷ ಕಲಾವಿದ ಕಲ್ಯಾಣಂ ನಾಗರಾಜ ಅವರಿಗೆ ಗಂಗಾವತಿ ವಕೀಲರ ಸಂಘದಿಂದ ಸೆಪ್ಟೆಂಬರ್-೨೫ ರಂದು ನ್ಯಾಯಾಲಯದ ಆವರಣದಲ್ಲಿ ಅಬಿನಂದನಾ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು ಎಂದು ವಕೀಲರ ಸಂಘದ ಅಧ್ಯಕ್ಷರಾದ ಶರಣಬಸಪ್ಪ ನರಸಪ್ಪ ನಾಯಕ ಪ್ರಕಟಣೆಯಲ್ಲಿ ತಿಳಿಸಿದರು.ಕಲ್ಯಾಣಂ ನಾಗರಾಜ ಅವರು ಜಾನಪದ ಸಂಗೀತ, ಕಲೆ ಹಾಗೂ ಜಾನಪದ ಸಾಹಿತ್ಯದ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟು, ಅತ್ಯಮೂಲ್ಯ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಅವರ ಸೇವೆ ಕರ್ನಾಟಕ ಮತ್ತು ಕನ್ನಡ ನಾಡಿನ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿದೆ. ಅವರ ಸೇವೆಯು ಗತವೈಭವದ ಕನ್ನಡ ನಾಡು ನುಡಿಗಳ ಹೆಮ್ಮೆಯ ಕನ್ನಡ ಮಣ್ಣಿನ ಜನತೆಗೆ ಮಾದರಿಯಾಗಿದೆ. ಕಳೆದ ಜುಲೈ ತಿಂಗಳಲ್ಲಿ ಇವರಿಗೆ ಕರ್ನಾಟಕ ಮೀಡಿಯಾ ಕ್ಲಬ್ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕರ್ನಾಟಕ ಭೂಷಣ ಪ್ರಶಸ್ತಿ ಪ್ರಧಾನ ಮಾಡಿ ಬಿರುದು ನೀಡಿ ಸನ್ಮಾನಿಸಿದೆ. ಪ್ರಯುಕ್ತ ಗಂಗಾವತಿ ವಕೀಲರ ಸಂಘ ಕಲ್ಯಾಣಂ ನಾಗರಾಜ ಅವರ ಸೇವೆಗೆ ಪ್ರೋತ್ಸಾಹಿಸಿ, ಪ್ರಶಂಶಿಸಿ ಈ ಅಭಿನಂದನಾ ಪ್ರಶಸ್ತಿ ಪತ್ರ ನೀಡಲಾಗಿದೆ. ಕಲ್ಯಾಣಂ ನಾಗರಾಜ ಅವರ ಕಲೆ ಹಾಗೂ ಸೇವೆಯನ್ನು ಸರ್ಕಾರ ಗುರುತಿಸಿ ಉನ್ನತ ಪ್ರಶಸ್ತಿ ಹಾಗೂ ಗೌರವ ಸನ್ಮಾನಗಳನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಶರದಕುಮಾರ ದಂಡಿನ್, ಕೆಂಚಪ್ಪ ವಕೀಲರು ಸೇರಿದಂತೆ ವಕೀಲರ ಸಂಘದ ಪದಾಧಿಕಾರಿಗಳು, ಮಹಿಳಾ ವಕೀಲರಾದ ಸೈಯ್ಯದಾಬಾನು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮೈಸೂರು ದಸರಾ ಕ್ರೀಡಾಕೂಟ-೨೦೨೫ ರಲ್ಲಿ ಗಂಗಾವತಿಯ ವಿದ್ಯಾರ್ಥಿಗಳ ಸಾಧನೆ.

ಗಂಗಾವತಿ: ಮೈಸೂರು ದಸರಾ ಕ್ರೀಡಾಕೂಟ ೨೦೨೫ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ಗಂಗಾವತಿಯ ಬ್ಲ್ಯೂ ಡ್ರ‍್ಯಾಗನ್ ಸ್ಪೋರ್ಟ್ಸ್ ಮಾರ್ಷಲ್ ಆರ್ಟ್ಸ್ ಸಂಸ್ಥೆ ಹಾಗೂ ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿಯ ೩ ವಿದ್ಯಾರ್ಥಿಗಳು ವಿವಿಧ ಫೈಟ್ ವಿಭಾಗದಲ್ಲಿ ೩ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಈ ಸ್ಪರ್ಧೆಯು ಸೆಪ್ಟೆಂಬರ್-೨೨ ರಿಂದ ೨೪ರ ವರೆಗೆ ಮೈಸೂರಿನ ಯುವರಾಜ ಒಳ ಕ್ರೀಡಾಂಗಣದಲ್ಲಿ ನಡೆದಿರುತ್ತದೆ.

ಈ ಕ್ರೀಡಾಕೂಟದಲ್ಲಿ ರಾಜ್ಯಮಟ್ಟದ ಟೇಕ್ವಂಡೋ ಸ್ಪರ್ಧೆಯಲ್ಲಿ ನಂದಿತಾ ಮಂಜುನಾಥ್-೫೫ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ, ಮಹಾಲಕ್ಷ್ಮಿ ಬಸವರಾಜ್-೭೦ ಕೆ.ಜಿ ಮೇಲ್ಭಾಗದ ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಹಾಗೂ ಸಿ.ಎಂ. ಮಣಿಕಂಠ ಸಿ.ಎಂ. ರಾಘವೇಂದ್ರ-೮೨ ಕೆ.ಜಿ. ಫೈಟ್ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದುಕೊಂಡು ಸಂಸ್ಥೆಗೆ ಕೀರ್ತಿ ತಂದಿದ್ದಾರೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯ ತರಬೇತುದಾರ ಷಣ್ಮುಖಪ್ಪನವರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಸಹ ಶಿಕ್ಷಕರಾದ ಮೋಹನ್ ಕುಮಾರ್, ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾದ ರಂಗಮ್ಮ, ಷಣ್ಮುಖಪ್ಪ, ಸಮೃದ್ಧಿ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಚಳಮರದ್, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಹ ವಿದ್ಯಾರ್ಥಿಗಳು ಶುಭ ಕೋರಿದ್ದಾರೆ.